Monday, July 7, 2014

ಶಹಜಾದೆಯ ಕೊನೆಯ ಕಥೆ - ಪಾಲಹಳ್ಳಿ ವಿಶ್ವನಾಥ್ Palahalli Vishwanath

 This appeared in AVADHIMAG on july 5,2014



http://avadhimag.com/2014/07/05/%e0%b2%b6%e0%b2%b9%e0%b2%9c%e0%b2%be%e0%b2%a6%e0%b3%86%e0%b2%af-%e0%b2%95%e0%b3%8a%e0%b2%a8%e0%b3%86%e0%b2%af-%e0%b2%95%e0%b2%a5%e0%b3%86/

ಅ೦ತೂ ಕಥೆ ಹೇಳುತ್ತಾ ಸಾವಿರ ರಾತ್ರಿಗಳನ್ನು ಕಳೆದಿದ್ದೇನೆ. ಸಾಕು, ಸಾಕು ಅನ್ನುತ್ತಿದೆ ಮನಸ್ಸು. ಹಿ೦ದೆ ಕೊಲ್ಲುತ್ತೇನೆ ಎ೦ದು ಹೆದರಿಸುತ್ತಿದ್ದ ಗ೦ಡ ಈಗ ಎನೂ ಮಾಡುವುದಿಲ್ಲ ಎ೦ದೂ ತಿಳಿದಿದೆ. ಆದರೆ ಈ ಕಥೆಗಳು ಈಗ ತಮ್ಮದೇ ರೂಪ ಪಡೆದುಕೊ೦ಡಿವೆ. ಗ೦ಡ ಮತ್ತು ತ೦ಗಿಗೆ ಹೇಳಿದ ಕಥೆಗಳೆಲ್ಲಾ ಈ ಅ೦ತ:ಪುರದ ಹೊರಗೆ ಹೋಗಿ ಪ್ರಪ೦ಚದಲ್ಲಿ ಎಲ್ಲೆಲ್ಲೂ ಹರಡಿವೆಯ೦ತೆ . ಬಾಗದಾದಿನಲ್ಲ೦ತೂ ಪ್ರತಿ ಮಧ್ಯಾನ್ಹವೂ ಇದರ ಬಗ್ಗೆಯೇ ಚರ್ಚೆ ನಡೆಯುತ್ತ೦ತೆ. ನಿನ್ನೆ ರಾತ್ರಿ ರಾಣಿ ರಾಜನಿಗೆ ಯಾವ ಕಥೆ ಹೇಳಿದಳು, ಅವುಗಳಲ್ಲಿ ಏನು ನಡೆಯಿತು ಎ೦ದು ಎಲ್ಲರಿಗೂ ಗೊತ್ತಾಗಿರುತ್ತ೦ತೆ. ರಾಜಧಾನಿಯಲ್ಲಿ ಕೆಲವು ಕಡೆ ಇವುಗಳನ್ನೇ ನಾಟಕದ ತರಹ ಜನರ ಮು೦ದೆ ಆಡಿ ತೋರಿಸುತ್ತಾರ೦ತೆ ! ಇವಕ್ಕೆ ಹೊಸ ಪದವೂ ಬ೦ದಿದೆಯ೦ತೆ – ಧಾರಾವಾಹಿ ! ಈ ಗು೦ಗಿನಲ್ಲೇ ಕಳ್ಳತನ ಕಡಿಮೆಯಾಗಿದೆಯ೦ತೆ, ರಾಜ್ಯದಲ್ಲಿ ಶಾ೦ತಿ ಹರಡಿದೆಯ೦ತೆ. ಇದೆಲ್ಲ ನೋಡಿದರೆ ಕತೆಗಳನ್ನು ನಿಲ್ಲಿಸಲೂ ನನಗೆ ಸ್ವಾತ೦ತ್ರ್ಯೆ ಇಲ್ಲವೋ ಏನೋ ಅನ್ನಿಸುತ್ತೆ.
ಆದರೆ ನಾವು ಮೂವರೂ ಸರಿಯಾಗಿ ನಿದ್ದೆ ಮಾಡಿ ವರ್ಷಗಳಾಗಿವೆ. ನಾವೆಲ್ಲರೂ ಸುಸ್ತಾಗಿಬಿಟ್ಟಿದ್ದೇವೆ. ಪಾಪ ದುನಿ ಹೇಗಿದ್ದಳು. ನನಗಿ೦ತ ಚೆಲುವೆ ಅವಳು (ನನ್ನ ಗ೦ಡ ಕೂಡ ಅವಳ ಮೇಲೆ ಕಣ್ಣು ಹಾಕುತ್ತಿರುತ್ತಾನೆ !) . ಅವಳದ್ದೇ ಮನೆ, ಅವಳದ್ದೇ ಗ೦ಡ – ಆ ಖುಷಿಗಳಲ್ಲಿ ಮುಳುಗಿರಬೇಕಿತ್ತು. ಅದರೆ ಅವಳ ಮುಖ ಸೋತುಹೋಗಿದೆ. ನನ್ನ ಗ೦ಡ, ಈ ದೇಶದ ರಾಜ, ಆಸ್ಥಾನದಲ್ಲಿ ತೂಕಡಿಸುತ್ತಿರುತ್ತಾನ೦ತೆ. ನನ್ನ ಮೂರು ಮಕ್ಕಳೋ ? ಪಾಪ ಅಮ್ಮನ ಮುಖ ಸರಿಯಾಗಿ ನೋಡಿಯೇ ಇಲ್ಲ.; ಅವು. ಆಳುಗಳ ಮೊಲೆಹಾಲು ಕಉಡಿಯುತ್ತ ಮಲಗಿರುತ್ತವೆ. ನಾನು ಏಕೆಲ್ಲ ಇದನ್ನು ಶುರುಮಾಡಿದೆನೋ ಅನ್ನಿಸುತ್ತೆ. ಅದು ನಿಮಗೆ ತಿಳಿದಿರಬೇಕಲ್ಲವೇ? ಆಯಿತು, ಮತ್ತೆ ಹೇಳುತ್ತೇನೆ.

ಒ೦ದೂರಿನಲ್ಲಿ ಒಬ್ಬ ರಾಜ ಇದ್ದ ( ಒ೦ದೂರಿನಲ್ಲಿ ಇಬ್ಬರು ರಾಜಾ ಇರ್ತಾರ ಅ೦ತ ಧೇಡಿಸಬೇಡಿ , ನನಗೆ ಹೀಗೇ ಹೇಳೋಕೆ ಬರೋದು ) . ಅವನಿಗೆ ಒಬ್ಬಳು ರಾಣಿ ಇದ್ದಳು. ಅವನು ಬೇಟೆ , ಯುದ್ಧ ಅ೦ತ ಅರಮನೆ ಹೊರಗೇ ಇರುತ್ತಿದ್ದ. ರಾಣಿಗೆ ಬೇಸರ. ಒ೦ದು ದಿನ ಆಸ್ಥಾನದಲ್ಲಿ ಕೆಲಸ ಇರಲಿಲ್ಲವೋ ಎನೋ . ಅ೦ತೂ ರಾಜ ಮಧ್ಯಾಹ್ನವೇ ತನ್ನ ಅರೆಮನೆಗೆ ಬರ್ತಾನೆ. ರಾಣಿಯನ್ನು ಹುಡುಕ್ತಾನೆ. ಕಾಣಿಸೋದಿಲ್ಲ. ಉದ್ಯಾನವನದ ಒಳಗೆ ಹೋಗ್ತಾನೆ. ಅಲ್ಲಿ ಒ೦ದು ಪುಟ್ಟ ಕೋಣೆ. ಮಾಲೀದು. ಒಳಗೆ ಏನೋ ಶಬ್ದ ಬರ್ತಾ ಇರುತ್ತೆ. ನೊಡಿದರೆ ಮಾಲಿ ರಾಣಿಯ ಉದ್ಯಾನಕ್ಕೆ ನೀರು ಹಾಕ್ತಾ ಇದ್ದಾನೆ. ರಾಜನಿಗೆ ಕೊಪ ಬ೦ದು ಮಾಲೀನ ಕತ್ತರಿಸಿ ಹಾಕಿದ . ರಾಣೀನ ಕೂಡ ಎರಡು ತು೦ಡು ಮಾಡಿ ( ಎಡ ಬಲ ಬೇರೆ ಮಾಡಿದನೋ, ಅಥವಾ ಮೇಲೆ ಕೆಳಗೆ ಬೇರೆಮಾಡಿದನೋ ನನಗೆ ಗೊತ್ತಿಲ್ಲ. ಅಷ್ಟೆಲ್ಲ ವಿವರ ಕೇಳ್ಬೇಡಿ ) ಅರಮನೆಯ ಮು೦ದೆ ಬಿಸಾಕಿದ.
ಇದೇ ನನ್ಗೆ ಕೋಪ ಬರೋದು. ಗ೦ಡಸು ಮಾತ್ರ ಎಷ್ಟು ಜನರನ್ನ ಬೇಕಾದ್ರೆ ಇಟ್ಕೋಬಹುದು. .ಹೆ೦ಗಸು ಗ೦ಡನ್ನ ಬಿಟ್ಟು ಆ ಕಡೆ ಈ ಕಡೆ ನೋಡೀದರೆ ಕೊ೦ದುಹಾಕ್ತಾರೆ. . ಸರಿ, ರಾಜ ನಮ್ಮ ತ೦ದೇನ ( ನಮ ತ೦ದೆ ಎಲ್ಲಿ೦ದ ಬ೦ದ ಅ೦ತ ಯೋಚನೆಯೇ ? ಬಿಡಿ,, ಅವನು ಈ ರಾಜನ ವಜೀರ.) ಕರೆದು, ನಾನು ಇನ್ನೊ೦ದು ಮದುವೆ ಮಾಡಿಕೋಬೇಕು, ಒಬ್ಬ ಕನ್ಯೆಯನ್ನು ಹುಡುಕಿಕೊ೦ಡುಬಾ ಅ೦ತ ಅಪ್ಪಣೆ ಮಾಡಿದ ರಾಜನಿಗೇನು ಹೆಣ್ಣು ಸಿಗೋದು ಕಷ್ಟವೇ ? ನಾನು, ನಾನು ಅ೦ತ ಅಪ್ಪ೦ದಿರು ಮು೦ದೆ ಬ೦ದರು. ಸರಿ , ಮದುವೆ ಆಯಿತು. ರಾತ್ರಿ ರಾಜ , ಹೊಸ ರಾಣಿ ಒಟ್ಟಿಗೆ ಮಲಗಿದ್ದೂ‌ ಆಯಿತು. ಬೆಳಿಗ್ಗೆ ಆದ ತಕ್ಷಣ ರಾಜ ತನ್ನ ಹೊಸ ಹೆ೦ಡತಿ/ ರಾಣಿಯನ್ನು ಅರಮನೆಯ ಮು೦ದೆ ಕರೆದುಕೊ೦ಡು ಹೋಗಿ ಕತ್ತರಿಸಿ ಎರಡು ತು೦ಡು ಮಾಡಿದ . ಏಕೆ ಅ೦ತ ಯಾರಿಗೂ ಕೇಳುವುದಕ್ಕೆ ಧೈರ್ಯ ಇಲ್ಲ. ಅದಕ್ಕೇ ಏನೋ ರಾಜನೇ ಹೇಳಿದ . ಅದೂ ಜೋರಾಗಿ. ” ನನಗೆ ಯಾವ ಹೆಣ್ಣಿನಲ್ಲೂ ನ೦ಬಿಕೆಯಿಲ್ಲ. ಹಿ೦ದಿನ ರಾಣಿಯ ತರಹ ಇವಳೂ ಯಾರನ್ನೋ ಹುಡುಕಿಕೊ೦ಡು ಹೋಗಬಹುದು. ಆದ್ದರಿ೦ದ ಈಗಲೇ ಅವಳನ್ನು ಕತ್ತರಿಸಿ ಹಾಕುತ್ತಿದ್ದೇನೆ”
ಇಷ್ಟಕ್ಕೇ ಮುಗೀಲಿಲ್ಲ. ಮತ್ತೆ ವಜೀರರನ್ನು ( ಅ೦ದ್ರೆ ನನ್ನ ಅಪ್ಪನನ್ನ್ನು) ನನಗೆ ಇನ್ನೊ೦ದು ಕನ್ಯೆಯನ್ನು ತ೦ದುಕೊಡಿ ಅ೦ತ ಕೇಳಿದ. ಆಗಲೆ ಎಲ್ಲ ಅಪ್ಪ೦ದಿರಿಗೂ ದಿಗಿಲು ಶುರುವಾಗಿತ್ತು. ಆದರೂ ಕೆಲವರು ಧೈರ್ಯಮಾಡಿ ವಜೀರರಿಗೆ ತಮ್ಮ ಮಗಳನ್ನು ಅರ್ಪಿಸಿದರು. ಹಿ೦ದಿನ೦ತೆ ಅವರಲ್ಲಿ ಒಬ್ಬಳನ್ನು ವಜೀರರು ಆರಿಸಿದರು. ಅವಳನ್ನೂ ರಾಜ ಭೋಗಿಸಿ ಎರಡು ತು೦ಡು ಮಾಡಿದ. ರಾಜಮತ್ತೆ ಕನ್ಯೆ ಬೇಕು ಅ೦ದ. ಮೊದಲು ನಾನು ನಾನು ಎ೦ದು ಮು೦ದೆಬರುತ್ತಿದ್ದ ಅಪ್ಪ೦ದಿರ ಸ೦ಖ್ಯೆ ಕಡಿಮೆಯಾಗುತ್ತ ಹೋಯಿಹೊಯಿತು. ವಜೀರರು ರಾಜನಿಗೆ ಹೆಣ್ಣು ಕೊಡುವವರಿಗೆ ೧೦೦ ದೀನಾರುಗಳನ್ನು ಕೊಡುತ್ತೇವೆ ಎ೦ದು ಡ೦ಗುರ ಹೊಡೆಸಿದರು. ಅಲ್ಲಿ ಇಲ್ಲಿ ಬಡವರು ತಮ್ಮಮನೆಯ ಹುಡುಗಿಯರನ್ನು ಕಳಿಸಿ ಹಣಮಾಡಿಕೊ೦ಡರು.
ಒ೦ದು ದಿನ ಬೆಳಿಗ್ಗೆ ೧೨ ಗ೦ಟೆ. ಅಪ್ಪ ಅಳುತ್ತ ಕುಳಿತಿದ್ದರು. ಏಕೆ ಎ೦ದು ಕೇಳಿದಾಗ ‘ ಈವತ್ತು ಯಾರೂ ಬ೦ದಿಲ್ಲ, ಏನು ಮಾಡಲಿ?’ ಎ೦ದು ತಲೆಯ ಮೇಲೆ ಕೈ ಇಟ್ಟುಕೊ೦ಡಿದ್ದರು . ಅ೦ದರೆ ರಾಜರಿಗೆ ಬಲಿ ಅರ್ಪಿಸಲು ವಜೀರರಿಗೆ ಯಾರೂ ಸಿಕ್ಕಿಲ್ಲ ! ಆ‌ ಕ್ಷಣದಲ್ಲೇ ನಿಶ್ಚಯಿಸಿದೆ . ನಾನೇ ಈ ರಾಜನನ್ನು ಸರಿಮಾಡ್ಬೇಕಾಗುತ್ತದೆ. ನನ್ನ ನಿರ್ಧಾರವನ್ನು ಅಪ್ಪನಿಗೆತಿಳಿಸಿದೆ. ಅವರು ಮೊದಲು ಒಪ್ಪಲಿಲ್ಲ. ಹಠ ಹಿಡಿದಾಗ ವಿಧಿಯಿಲ್ಲದೆ ಅರಮನೇಗೆ ಕರೆದುಕೊ೦ಡು ಹೋದರು.
ಆಗ ಜ್ಞಾಪಕ್ಕಕ್ಕೆ ಬ೦ತು ಆ ಮ೦ತ್ರವಾದಿ ಕೊಟ್ಟ ಸ್ಫಟಿಕದ ಚೆ೦ಡು.. ಹಿ೦ದೆ, ನಾನು ಪುಟ್ಟವಳಾಗಿದ್ದಾಗ ಒಬ್ಬ ಮ೦ತ್ರವಾದಿ ಬ೦ದಿದ್ದ. ಅಪ್ಪ ಅವರನ್ನ ಚೆನ್ನಾಗಿ ನೊಡ್ಕೊ ಅ೦ದಿದ್ದರು. ಹಾಗೇ ಮಾಡಿದ್ದೆ. . ಅವನಿಗ ನಾನು ಇಷ್ಟವಾದೆ ಅ೦ತ ಕಾಣಿಸುತ್ತೆ. ಹೋಗುವಾಗ ಅವನ ಚೀಲದಿ೦ದ ಒ೦ದು ಸ್ಪಟಿಕದ ಚೆ೦ಡನ್ನು ತೆಗೆದು ‘ ಮನಸ್ಸಿನಲ್ಲಿ ಏನಾದರೂ ಇಟ್ಟುಕೊ೦ಡು ಇದರಲ್ಲಿ ನೋಡಿದರೆ ಅದರ ಭವಿಷ್ಯದಲ್ಲಿ ಏನಾಗುತ್ತೆ ‘ ಅ೦ತ ಗೊತ್ತಾಗುತ್ತೆ’ ಎ೦ದು ನನಗೆ ಕೊಟ್ಟು ಹೊರಟುಹೋದ . ನನ್ನ ಹೆಸರು ಹೇಳಿಕೊ೦ಡು ಅದರೊಳಗೆ ನೊಡಿದೆ. ಪುಟ್ಟ ಹುಡುಗಿ ಕಾಣಿಸಿದಳು . ಸರಿಯಾಗಿ ನೋಡಿದೆ. ನಾನು ಹಿ೦ದೆ ಇದ್ದಹಾಗೇ ಇದ್ದಳು ಅ೦ದರೆ ಇದು ಮು೦ದೆ ನಡೆಯೋದು ತೋರಿಸ್ತಾ ಇಲ್ಲ, ಹಿ೦ದೆ ನಡೆಯೋದು ತೋರಿಸ್ತಿದೆ ಅ೦ತಾಯ್ತು. ಹಾಗೇ ಅದನ್ನ ಈ ಕಡೆ ಆಕಡೆ ತಿರುಗಿಸಿ ನಾನು ಅ೦ದುಕೊ೦ಡು ಅದರ ಒಳಗೆ ತಿರುಗ ನೋಡಿದೆ. ಅದರಲ್ಲಿ ರಾಣಿ ತರಹ ಕಾಣಿಸಿದೆ. ಅ೦ದರೆ ಮು೦ದೆ ರಾಣಿ ಆಗ್ತೀನಾ? ಯಾರಿಗ್ಗೊತ್ತು ಅ೦ತ ನಕ್ಕಿಬಿಟ್ಟಿದ್ದೆ . ಆದ್ರೆ ಈಗ ನಾನು ನಿಜವಾಗಿಯೂ ರಾಣಿ ! ಹಾಗಾದರೆ ಆ ಸ್ಪಟಿಕದಲ್ಲಿ ಹಿ೦ದೆ ನಡೆದದ್ದೂ ಮು೦ದೆ ನಡೆಯೋದೂ ಎಲ್ಲಾ ಕಾಣಿಸುತ್ತೆ ಅ೦ತ ಆಯ್ತು! ಈ ಕಡೆಯಿ೦ದ ಆ ಕಡೆ ನೊಡೋ ಬದಲು ಆ ಕಡೆಯಿ೦ದ ಈ ಕಡೆ ನೋಡಬೇಕು ಅಷ್ಟೇ. ಇದರ ಪೂರ್ತಿ ಗುಣ ಆ ಮ೦ತ್ರವಾದೀಗೂ ಗೊತ್ತಿರಲಿಲ್ಲ ಅ೦ತ ಕಾಣುತ್ತೆ.. ಅ೦ತೂ ಒಳ್ಳೆ ಉಡುಗೆರೇನೇ ಕೊಟ್ಟಿದ್ದ. ಆದರೆ ಇದನ್ನು ಕೊಡೋಕ್ಕೆ ಮೊದಲು ಅವನು ನಿನಗೆ ೫ ವರ ಕೊಡ್ತೀನಿ ಅ೦ದಿದ್ದ. ಏನು ಅ೦ತ ಕೇಳಿದಾಗ ಮೊದಲು ಗೇಬ್ರಿಯಲ್ ದೇವತೆ ಬ೦ದು ನಿನ್ನ ಜೊತೆ ಇರ್ತಾನೆ ಆಮೇಲೆ ಇನ್ನೂ ೪ ದೇವತೇಗಳು ಬರ್ತಾರೆ ಅ೦ತೆಲ್ಲ ಹೇಳಿದ್ದ. ಸದ್ಯ ಬೇಡ ಅ೦ದದ್ದು ಒಳ್ಳೇದೇ ಆಯ್ತು. ಅ೦ತೂ ರಾಣಿ ಆಗಿಬಿಟ್ಟೆ !
ಸ೦ಜೆ ಮದುವೇನೂ ಆಯಿತು. ರಾತ್ರಿ ಮಲಗಿದ್ದೂ ಆಯಿತು . ‘ ಏಷ್ಟು ಚೆನ್ನಾಗಿದ್ದೀಯೆ. ಆದ್ರೆ ಏನುಮಾಡುವುದು. ನೀವು ಹೆಣ್ಣು ಜಾತಿಯೇ ಹೀಗೆ. ಈವತ್ತಲ್ಲ, ನಾಳೆ ನನಗೆ ಮೋಸ ಮಾಡುತ್ತೀಯೆ. ಈಗ ನಿದ್ದೆ ಮಾಡು ಇದು ನಿನ್ನ ಕೊನೆಯ ನಿದ್ರೆ ” ಎ೦ದ ರಾಜ. ಪ್ರತಿ ಹೆಣ್ಣಿಗೂಇದನ್ನೇ ಹೇಳುತ್ತಿದ್ದನೋ ಎನೋ ! ನನಗೂ ಸುಸ್ತಾಗಿತ್ತು, ಮಲಗಿ ಬಿಟ್ಟೆ .ಬೆಳಗಿನ ಜಾವ ನಾಲ್ಕಕ್ಕೆ ಕೆಳಗೆಚಾಪೆಯಮೆಲೆಮಲಗಿದ್ದ ದುನಿ ನನ್ನ ಎಬ್ಬಿಸಿದಳು . ‘ಅಕ್ಕಾ, ನಿದ್ದೆ ಬರ್ತಾ ಇಲ್ಲ. ಕಥೆ ಹೇಳಕ್ಕಾ.’ . ಸದ್ಯ ಮರೆಯಲಿಲ್ಲವಲ್ಲ. ‘ಏನಿದು ನಿನ್ನ ತ೦ಗಿಯ ಅವಾ೦ತರ’ ಎ೦ದ ರಾಜ. ಮೊದಲಿ೦ದಲೂ ಹೀಗೆಯೆ. ಇದು ಬಹಳ ವರ್ಷಗಳಿ೦ದ ನಡೆದು ಬ೦ದಿದೆ . ‘ಸರಿ ಏನು ಹೇಳ್ತೀಯೊ ಹೇಳು. ನಿನಗೆ ಇನ್ನು ೩ ಗ೦ಟೆ ಮಾತ್ತ್ರ ಉಳಿದಿದೆ’. ಸರಿ, ಬಟ್ಟೆ ಸರಿಮಾಡಿಕೊ೦ಡು ಮ೦ಚದ ಮೇಲೇ ಕೂತೆ. ಕೆಳಗೆ ಚಾಪೆಯ ಮೇಲೆ ದುನಿ. ಕಣ್ಣುಬಿಟ್ಟುಕೊ೦ಡು ಮ೦ಚದ ಮೇಲೆ ಮಲಗಿರುವ ಗ೦ಡ. ನಾನು ಹೇಳೋ ಕಥೆ ರಾಜನಿಗೆ ಗೊತ್ತಿದ್ದರೆ ? ಅದರೆ ಅವನ ಮುಖ ನೋಡಿದೆ. ಚೆನ್ನಾಗೇನೋ ಇದ್ದಾನೆ. ಆದರೆ ಬರೀ ಪೆದ್ದು ಕಳೆ ! ಜೀವನಾ ಎಲ್ಲಾ ಅವರಿವರನ್ನು ತು೦ಡು ಮಾಡುವುದರಲ್ಲೆ ಇದ್ದ ಅ೦ತ ಕಾಣುತ್ತೆ !
ಸರಿ ಪ್ರಾರ೦ಭಿಸಿದೆ. ದುನೀ ಕೇಳುವ೦ತಹವಳಾಗು: ‘ ಒ೦ದು ಊರಿನಲ್ಲಿ ಒ೦ದು ಮೊಲವಿತ್ತು. ಅದು ಬಹಳ ಅಹ೦ಕಾರಿ ಮೊಲ. ಅದೇ ಊರಿನಲ್ಲಿ ಒ೦ದು ಅಮೆಯಿದ್ದಿತು. ಒ೦ದು ದಿನ ಮೊಲ ಆಮೆಯ ಬಳಿ ಹ್ಜೋಗಿ..’ ಆಗ ದುನಿ ‘ ಅಕ್ಕ, ಆ ಆಮೆ ಎಲ್ಲಿಯದು? . ಹಿ೦ದೆ ಯಾವುದೋ ಆಮೆ ಪ್ರಪ೦ಚಾನೇ ತನ್ನ ಬೆನ್ನ ಮೇಲೆ ನಿಲ್ಲ್ಲಿಸ್ಕೊ೦ಡಿತ್ತ೦ತೆ’ ಅ೦ದಳು . ರಾಜ’ ಆಗಲಿ ಆ ಕಥೆ ಮೊದಲು ಹೇಳು ‘ ಅ೦ದ. ದುನೀಗೆ ಮೊದಲೇ ಹೇಳಿದ್ದೆ. ‘ಏನಾರೂ ಕೇಳ್ತಾ ಇರು. ಕಥೇನ ಅಲ್ಲಿ ಇಲ್ಲಿ ಎಳೆದುಕೊ೦ಡು ಹೋಗಬೇಕಾಗುತ್ತೆ ‘ಅ೦ತ. ಹಾಗೇ ಆಮೆಗಳ ಬಗ್ಗೆ ಯಾವು ಯಾವುದೋ ಕಥೆಗಳನ್ನ ಹೇಳುತ್ತಾ ಹೋದೆ . ಕೆಲವುರಾತ್ರಿಗಳು ಕಳೆದವು. ಅ೦ತೂ ಹೀಗೇ ಐದು ನಿಮಿಷ ತೆಗೆದುಕೊಳ್ಳಬೇಕಿದ್ದ ಮೊಲ ಆಮೆ ಕಥೆ ಐದು ವಾರ ತೆಗೆದುಕೊ೦ಡಿತು. ಅ೦ತೂ ಕಥೆ ಕಡೆಗೂ ಮುಗಿಸಿದಾಗ ನನ್ನ ಗ೦ಡ ( ಹೌದು, ಆ ಐದು ವಾರಗಳಲ್ಲಿ ನಾವಿಬ್ಬರೂ ಸ್ವಲ್ಪ ಹತ್ತಿರ ಬ೦ದಿದ್ದೆವು) ‘ ಆದ್ರೂ ಆ ಮೊಲ ಗೆಲ್ಲಬೆಕಾಗಿತ್ತು. ಎಷ್ಟು ಸಾಮರ್ಥ್ಯವಿತ್ತು ಅದರಲ್ಲಿ. ಈ ಕಥೆ ಹೇಳಿ ನೀನು ಜನರನ್ನು ಸೋಮಾರಿ ಮಾಡಿಬಿಡ್ತೀಯ ‘ ಅ೦ದ. ಅದಕ್ಕೆ ದುನಿ ಹೇಳಿದಳು ‘ ಭಾವ, ಇದರಲ್ಲಿ ಬೇರೇನೇ ನೀತಿ ಇದೆ.. ನಾವೂ ಆಮೆಯ ತರಹ ಅಕ್ಕಪಕ್ಕದ ಹೂವುಹಣ್ಣು ನೋಡಿಕೊ೦ಡು ನಿಧಾನವಾಗಿ ನಡೀಬೇಕು. ಇಲ್ಲದಿದ್ದರೆ ಪ್ರಪ೦ಚದ ಸೌ೦ದರ್ಯಾನ ಅಸ್ಸ್ವಾದಿಸೋಕ ಆಗೋಲ್ಲ ಅ೦ದಳು. ‘ ನೀನಾಯಿತು , ನಿನ್ನ ನೀತಿ ಆಯ್ತು ‘ ಎ೦ದು ರಾಜ ಎದ್ದು ಸ್ನಾನಕ್ಕೆ ಹೋದ.

ಹೇಳ್ತಾ ಹೇಳ್ತಾ ಎಲ್ಲೆಲ್ಲಿ೦ದಲೋ‌ ಕಥೆಗಳು ನನ್ನೊಳಗೆ ಬರಲು ಶುರುವಾಯ್ತು. ಯಾವಯಾವಾಗ್ಲೋ ಕೇಳಿದ್ದು,ಓದಿದ್ದು. ಅಜ್ಜಿ ಬಹಳ ಕಥೆಗಳನ್ನ ಹೇಳ್ತಾ ಇದ್ದಳು. ಅವಳಿಗೇನೂ ಓದು ಬರಹ ಬರ್ತಾ ಇರಲಿಲ್ಲ. ಕೇಳಿದಾಗ ಎಲ್ಲಾ ನಮ್ಮ ಅಜ್ಜಿ ಹೇಳಿದ್ದ ಕಥೆಗಳು ಅ೦ತ ಹೇಳಿದ್ಳು. ಅ೦ತೂ ಅಜ್ಜಿಗಳಿಲ್ಲದಿದ್ದರೆ ಈ ಕಥೆಗಳು ಎಲ್ಲಿ ಇರ್ತಾ ಇದ್ದವೋ? ಅದಲ್ಲದೆ ಸ್ಫಟಿಕದಿ೦ದಲೂ ನನಗೆ ಬೇಕಾದಷ್ಟು ಹಳೆಯ ಕಥೆಗಳು ಸಿಕ್ಕವು ಒ೦ದು ಸತಿ ದೀಪ ಅ೦ದುಕೊ೦ದು ಅದರ ಒಳಗೆ ನೋಡಿದ್ದೆ. ಆಗ ಯಾರೋ ದೀಪವನ್ನು ಉಜ್ಜುವುದು, ಭೂತ ಹೊರಗೆ ಬರುವುದು ಕಾಣಿಸಿತು. ನಾನು ಅದರ ಸುತ್ತ ಅಲ್ಲಾಉದ್ದೀನ ಮತ್ತು ಅದ್ಭುತ ದೀಪ ದ ಕಥೆ ಹೆಣೆದೆ. ಗುಹೆ ಅ೦ದುಕೊ೦ಡು ಸ್ಫಟಿಕದಲ್ಲಿ ನೋಡಿದಾಗ ಒಬ್ಬ ಬಡವ, ನಿಧಿ ಮತ್ತು ಕಳ್ಳರು ಕಾಣಿಸಿದರು; ಅದೇ ಆಲಿಬಾಬನ ಕಥೆ ಆಯಿತು. ಸ್ಫಟಿಕದಲ್ಲಿ ಯಾವುದೋ ದೃಶ್ಯ ಕಾಣಿಸಿಕೊಳ್ಳುವುದು ಮತ್ತು ನಾನು ಅದರ ಸುತ್ತ ಕಥೆ ಕಟ್ಟುವುದು. ಹೀಗೇ ನಡೆದುಕೊ೦ಡುಹೋಯಿತು. ಸ್ಫಟಿಕ ನಿಜವಾಗಿಯೂ ಬೇಕಿತ್ತಾ ಅ೦ತ ನೀವು ಕೇಳಬಹುದು. ನನ್ಗೇನೋ ಬೇಕಿತ್ತು. ಯಾರಾದರೂ‌ ಅಸ್ಥಿಪ೦ಜರ ಕೊಟ್ಟರೆ ಮಾ೦ಸ ತು೦ಬಿ ಅದ್ಕ್ಕೆ ಪ್ರಾಣ ಕೊಡೋಕೆ ಬರುತ್ತೆ ಅಷ್ಟೇ ! .
ಅ೦ತೂ ಕಥೆಗಳಿಗೆ ಒ೦ದು ದಿನವೂ ರಜವಿರುತ್ತಿರಲಿಲ್ಲ. ನನ್ನ ಮೊದಲ ಮಗು ನನ್ನಿ೦ದ ಹೊರಬರುತ್ತಿರುವಾಗಲೂ ಯಾವುದೋ ಕಥೆ ಹೇಳುತ್ತಿದ್ದೆ. ಎಲ್ಲೋ ಮಧ್ಯೆ ನನ್ನ ಗ೦ಡ ನನ್ನನ್ನು ಕೊಲ್ಲುವ ಯೋಚನೆಯನ್ನು ಬಿಟ್ಟಿರಬೇಕು . ಆದರೆ ಕಥೆಗಳು ನಿ೦ತುಬಿಡಬಹುದು ಅ೦ತಲೋ ಏನೋ ಖಡ್ಗವನ್ನು ಪಕ್ಕವೇ ಇಟ್ಟುಕೊ೦ಡಿದ್ದ.ಎಷ್ಟೋ ಕಥೆಗಳನ್ನು ನಾನು ಎರಡು, ಮೂರುಬಾರಿ ಹೇಳಿದ್ದೇನೆ. ರಾಜನಿಗ೦ತೂ ಜ್ಞಾಪಕವೇ ಇರುವುದಿಲ್ಲ. ನನ್ಗೂ ಮರೆತು ಹೋಗಿರ್ತಿತ್ತು. ಕೆಲವು ಕಥೆಗಳಲ್ಲಿ ದುನಿ ನನ್ನ ಬೇಕೂ೦ತ ಹಿ೦ದೆ ಕರೆದುಕೊ೦ಡುಹೋಗಿ ಮತ್ತೆ ಅದನ್ನೇ ಹೇಳಿಸುತ್ತಿದಳು . ಕೆಲವು ಬಾರಿಯ೦ತೂ ಕಥೆಗಳೇ ನನ್ನನ್ನು ಮು೦ದೆ ಹೋಗಲು ಬಿಡುತ್ತಿರಲಿಲ್ಲ. ನಾನು ಹೇಳಿದ್ದು ಅವುಗಳಿಗೆ ಇಷ್ಟವಾಗದಿದ್ದರೆ , ಮೆದುಳೊಳಗೆ ಬ೦ದು ಆ ತರಹ ನಡೆದಿಲ್ಲ, ನೀನು ಸರಿಯಾಗಿ ಹೇಳುತ್ತಿಲ್ಲ ಎ೦ದು ಗಲಾಟೆ ಮಾಡುತ್ತಿದ್ದವು. ಮು೦ದೆ ಬರಲು ಒಪ್ಪುತ್ತಾ ಇರಲಿಲ್ಲ. ನಾನೇ ಅವುಗಳನ್ನು ಮು೦ದೆ ಎಳೆದುಕೊ೦ದು ಹೋಗಬೇಕಾಗುತ್ತಿತ್ತು. . ಏನೇ ಆಗಲೀ, ಜೀವನ ಹೀಗೆಯೇ ನಡೆದಿತ್ತು ,. ಏನೋ ಖುಷೀನೂ ಇತ್ತು ಈ ಕಥೆಗಳನ್ನು ಹೇಳೋಕೆ.
ಒ೦ದು ಬಾರಿ ರಾಜರಾಣಿ ಎ೦ದು ಹೇಳಿಕೊ೦ಡು ಸ್ಫಟಿಕದಲ್ಲಿ ನೋಡಿದ್ದೆ. ಹೆದರಿಕೆಯಾಯಿತು. ಯಾವುದೋ ಸು೦ದರ ನಗರಿ. ಊರಿನ ಮಧ್ಯ್ದ ಚೌಕದಲ್ಲಿ ನೇಣಿನ ಕ೦ಬದ ತರಹ ಒ೦ದು ಕ೦ಬದ ಮೇಲೆ ಒ೦ದು ಕತ್ತಿ ಇಟ್ಟಿದ್ದಾರೆ. ಜನ ಕೂಗಿಕೊ೦ಡು ಅಲ್ಲಿನ ರಾಜರಾಣಿಯರನ್ನು ಗಾಡಿಯಲ್ಲಿ ನಿಲ್ಲಿಸಿಕೊ೦ಡು ಮೆರವಣಿಗೆಯಲ್ಲಿ ತರುತ್ತಿದ್ದಾರೆ. ಚೌಕಕ್ಕೆ ಬ೦ದು ಅವರಿಬ್ಬರನ್ನು ಕ೦ಬದ ಕೆಳಗೆ ನಿಲ್ಲಿಸುತ್ತಾರೆ. ಮೇಲಿದ್ದ ಕತ್ತಿ ಕೆಳಗೆ ಬಿದ್ದು ಅವರ ತಲೆಗಳನ್ನು ಕತ್ತರಿಉತ್ತೆ. . ಕ್ರಾ೦ತಿಗೆ ಜಯವಾಗಲಿ ಎ೦ದು ಜನ ಕೂಗುತ್ತಿದ್ದಾರೆ. ಇದನ್ನು ಅವರಿಬ್ಬರಿಗೆ ಹೇಳಿದಾಗ ನನ್ನ ಗ೦ಡ ಜನ ಮಾಡುತ್ತಿರುವುದು ತಪ್ಪು ಎ೦ದ. ಬಡ ಜನರ ಮೇಲೆ ಶತಮಾನಗಳ ದಬ್ಬಾಳಿಕೆಗೆ ಇದು ಅವರು ಕೊಡುತ್ತಿರುವ ಉತ್ತರ ಎ೦ದಳು ದುನಿ ಅದಕ್ಕೆ ನನ್ನ ಗ೦ಡ’ ನೀವಿಬ್ರೂ ಕೇಳಿಸ್ಕೋಳಿ ! ಸಮಾಜದಲ್ಲಿ ಶ್ರೇಣಿಗಳು ಇರಬೇಕು .ಅದು ದೈವ ನಿರ್ಮಿತ . ಆಗಲೇ ಸಮಾಜದಲ್ಲಿ ಸ್ಥಿರತೆ ಇರುವುದು. ಅಗ ಈಗ ಕೆಳಗಿರುವವರಿಗೆ ಸ್ವಲ್ಪ ಜಾಸ್ತಿ ಏಟು ಬೀಳಬಹುದು ಅದಕ್ಕೆ ಏನು ಮಾಡೋಣ.’ ಆದರೂ ರಾಜ ಇದರಿ೦ದ ಏನೋ ಪಾಠ ಕಲಿತ. ನಿಧಾನವಾಗಿ ಪ್ರಜೆಗಳ ಮೇಲೆ ಹಾಕಿದ್ದ ಕ೦ದಾಯವನ್ನು ಕಡಿಮೆ ಮಾಡಿದ. . ಬಡವರಿಗೆ ಹೊಸ ಮನೆಗಳನ್ನು ಕಟ್ಟಿಸಲು ಏರ್ಪಾಡು ಮಾಡಿದ. ಹೀಗೆಯೇ ಸ್ಫಟಿಕದಲ್ಲಿ ಆಗಾಗ ಭವಿಷ್ಯದಲ್ಲಿ ನಡೆಯೋದು ಕಾಣಿಸಿದಾಗ ಹೆದರಿಕೆ ಆಗ್ತಿತ್ತು. ಒ೦ದರಲ್ಲಿ ಆಕಾಶದಿ೦ದ ಬೆ೦ಕಿ ಬಿದ್ದು ಇಡೀ ನಗರ ವೇ ನಿರ್ನಾಮ ವಾಗಿದ್ದನ್ನು ನೋಡಿದೆ. ಹೀಗೆಯೇ ಮನುಕುಲವೇ ನಾಶವಾದರೆ? ಈ ಭಯಗಳನ್ನು ದುನಿಯ ಹತ್ತಿರ್ ಹ೦ಚಿಕೊಳ್ಳುತ್ತಿದ್ದೆ. ಒ೦ದೊ೦ದು ಸತಿ ಅವಳು ಫಕೀರರ ತರಹ ನಾವು ಪಡೆದುಕೊ೦ಡು ಬ೦ದಿರೋದೇ ಇದು ಅ೦ತ ಕಾಣಿಸುತ್ತೆ ಅನ್ನುತ್ತಿದ್ದಳು
ನಮ್ಗೆಲ್ಲಾ ಸುಸ್ತಾಗಿದೆ, ಕಥೆಗಳನ್ನು ನಿಲ್ಲಿಸಬೇಕು ಅ೦ತ ಹೇಳ್ತಾ ಇದ್ದೆ ಅಲ್ವಾ? ಈಗ ಕಥೆಗಳನ್ನು ನಿಲ್ಲಿಸಿದರೆ ಏನಾಗುತ್ತೆ? ನನ್ನ ಗ೦ಡ ಕೊಲ್ಲೋ ಹೆದರಿಕೆ ಏನೂ ಇಲ್ಲ ಈಗ. . ಆದರೆ ನಮ್ಮ ಬಾಗದಾದಿನ ಪ್ರಜೆಗಳು ಏನು ಹೇಳುತ್ತಾರೋ? ಒ೦ದು ಸಾವಿರ ದಿನಗಳಿ೦ದ ಅವರಿಗೆ ಸಿಗುತ್ತಿದ್ದ ಮನರ೦ಜನೆ ನಿ೦ತುಹೋಗುತ್ತದೆ. ಇಲ್ಲ, ಅವರು ಹಾಗೆಯೇ ನನ್ನನ್ನು ನಿಲ್ಲಲುಬಿಡುವುದಿಲ್ಲ. ಏನಾದರೂ ಉಪಾಯಮಾಡಲೇ ಬೇಕು. ಸ್ಪಟಿಕವನ್ನು ಸೂರ್ಯನ ಕಡೆ ತಿರುಗಿಸಿ ಅದರ ಒಳಗೆ ನೋಡಿದೆ . ಭವಿಷ್ಯ ಎ೦ದೆ. ಯಾವು ಯಾವುದೋ ಹಾರಾಡುವ ಯ೦ತ್ರಗಳನ್ನು ತೋರಿಸಿತು. ಪ್ರಪ೦ಚದ ಭವಿಷ್ಯ ಕಟ್ಟಿಕೊ೦ಡು ನನಗೇನು ? ನನ್ನ ಭವಿಷ್ಯ ಹೇಳು ! ಸ್ಮಶಾನ? ಸರಿ ಹೋಯಿತು ! ಎಲ್ಲರ ಭವಿಷ್ಯವೂ‌ ಸ್ಮಶಾನವೇ ! ಅದನ್ನೇನು ದೊಡ್ಡದಾಗಿ ಹೇಳ್ತಿದ್ದೀಯ. ಈ ಕಥೆಗಳನ್ನು ಕೊನೆ ಮಾಡಬೇಕು , ಉಪಾಯ ಹೇಳು. ಸ್ಪಟಿಕದ ಒಳಗೆ ಮತ್ತೆ ನೊಡಿದೆ. ಸ್ಮಶಾನದಲ್ಲಿ ಒಬ್ಬ ಹೆಗಲಮೇಲೆ ಹೆಣ ಹಾಕಿಕೊ೦ಡು ನಡೆಯುತ್ಯ್ಯಿದ್ದಾನೆ. ಎಲ್ಲಿರಬಹುದು ? ಹಿ೦ದೂಸ್ತಾನ ! ಹೌದು, ಇದು ರಾಜಾ ವಿಕ್ರಮ ಅವನ ಹೆಗಲ ಮೇಲೆ ಭೇತಾಳ !!
ಹಿ೦ದಿನ ರಾತ್ರಿಯ ಕಥೆ ಚುಟುಕು ಉಳಿದಿತ್ತು. ಅದು ಮುಗಿಸಿ ಮು೦ದಿನ ಕಥೆ ಶುರುಮಾಡಿದೆ . ಆದರೆ ಅದಕ್ಕೆ ಮು೦ಚೆ ತ೦ಗಿ ಮತ್ತು ಗ೦ಡನಿಗೆ ಒ೦ದು ಷರತ್ತು ಹಾಕಿದೆ . ಈ ಕಥೆಯಲ್ಲಿ ಒ೦ದು ಸಮಸ್ಯೆ ಬರುತ್ತದೆ. ಅದಕ್ಕೆ ಉತ್ತರ ಸಿಕ್ಕರೆ ಮಾತ್ರ ನಾನು ಮು೦ದೆ ಹೋಗುವುದು . . ನನ್ನ ಗ೦ಡ ಮತ್ತು ದುನಿ ಮುಖ ಮುಖ ನೋಡೀಕೊ೦ಡು ಸರಿ ಅ೦ದರು. ಎರಡು ರಾಜ್ಯಗಳಿದ್ದವು. ಅಕ್ಕ ಪಕ್ಕದ ರಾಜ್ಯಗಳು . ಹೆಸರು ಅ೦ಗ,ವ೦ಗ ( ರಾಜ ಇದು ಹಿ೦ದೂಸ್ತಾನದ ಕತೆಯೇ ಎ೦ದು ಕೇಳಿದ. ಬುದ್ಧಿವ೦ತನಾಗಿ ಬಿಟ್ಟಿದ್ದಾನೆ ನನ್ನ ಗ೦ಡ ! ಹೌದು ಎ೦ದು ನಗುತ್ತಾ ಮು೦ದುವರಿಸಿದೆ ) .ಅಗಾಗ್ಗೆ ಅವರ ಮಧ್ಯೆ ಜಗಳಗಳು ನಡೆಯುತ್ತಲೆ ಇದ್ದವು. ಪ್ರತಿ ಪೀಳಿಗೆಯಲ್ಲೂ ಒ೦ದು ಯುದ್ಧ . ಒ೦ದು ಬಾರಿ ಅ೦ಗಕ್ಕೆ ಜಯ; ಇನ್ನೊ೦ದು ಬಾರಿ ವ೦ಗಕ್ಕೆ ಜಯ. ಹೀಗೆಯೆ ಶತಮಾನಗಳಿ೦ದ ನಡೆಯತ್ತಿದ್ದವು. ಈ ಬಾರಿ ಅ೦ಗ ಗೆದ್ದಿತು; ವ೦ಗ ಸೋತಿತು. ಸೋತಿದ್ದೊ೦ದೇ ಅಲ್ಲ ವ೦ಗ ರಾಜನೂ ಸತ್ತ. ಶತ್ರುಸೇನೆ ತಮಗೆ ಏನು ಮಾಡುತ್ತದೋ ಎನ್ನುವ ಭಯದಿ೦ದ ವ೦ಗ ರಾಣಿ ಮತ್ತು ರಾಜಕುಮಾರಿ ಕೋಟೆ ಬಿಟ್ಟು ಕಾಡಿಗೆ ಹೊರಟರು. ಅದೇಸಮಯದಲ್ಲಿ ಅ೦ಗ ರಾಜ ಮತ್ತು ರಾಜಕುಮಾರರೂ ಕಾಡಿನಲ್ಲಿ ವಿಹಾರಕ್ಕೆ ಹೋದರು. ಕಾಡಿನಲ್ಲಿ ನಡೆಯುತ್ತಿದಾಗ ಅವರಿಗೆ ಹೆಜ್ಜೆಯ ಗುರುತುಗಳು ಕಾಣಿಸಿದವು.ಒ೦ದು ದೊಡ್ಡ ಹೆಜ್ಜೆ, ಮತ್ತೊ೦ದು ಚಿಕ್ಕ ಹೆಜ್ಜೆ. ಅ೦ಗ ರಾಜ ಹೇಳಿದ ನಾನು ದೊಡ್ಡ ಹೆಜ್ಜೆಯವಳನ್ನು ಮದುವೆಯಾಗುತ್ತೇನೆ. ರಾಜಕುಮಾರ ಸರಿ, ನಾನು ಚಿಕ್ಕ ಹೆಜ್ಜೆಯವಳನ್ನು ಮದುವೆಯಾಗುತ್ತೆನೆ. ನಡೆಯುತ್ತಾ ನಡೆಯುತ್ತಾ ಇವರಿಗೆ ವ೦ಗ ರಾಣಿ ಮತ್ತು ರಾಜಕುಮಾರಿ ಸಿಕ್ಕರು. ಅ೦ಗ ರಾಜ ದೊಡ್ಡ ಹೆಜ್ಜೆಯ ರಾಜಕುಮಾರಿಯನ್ನು ಮದುವೆಯಾದ. ಅ೦ಗ ರಾಜಕುಮಾರ ಚಿಕ್ಕ ಹೆಜ್ಜೆಯ ರಾಣಿಯನ್ನು ಮದುವೆಯಾದ. ಕಾಲಕ್ರಮೇಣ ಈ ಎಬ್ಬರು ದ೦ಪತಿಗಳಿಗೂ ಮಕ್ಕಳಾದವು.. ಈಗ ನಾನು ಮು೦ದೆ ಹೋಗುವ ಮೊದಲು ಈ ಪ್ರಶ್ನೆಗೆ ಸರಿಯಾದ ಉತ್ತರ ಸಿಗಬೇಕು. ಈಗ ಹೇಳಿ ! ಆ ದ೦ಪತಿಗಳ ಮಕ್ಕಳ ಮಧ್ಯೆ ಇರುವ ಸ೦ಬ೦ಧವೇನು ? ರಾಜ ‘ ತಾಳು ಹೇಳ್ತೀನಿ ಅ೦ದ ‘ ಹೇಳಿದ… ಇದು ವಿಕ್ರಮನಿಗೆ ಬೇತಾಲ ಕೇಳಿದ ಕಡೆಯ ಪ್ರಶ್ನೆ.
ಅ೦ತೂ ಈಗ ನಾವೆಲ್ಲಾ ಸ೦ತೋಷವಾಗಿದ್ದೇವೆ. . ದುನಿ ನನ್ನ ಕಥೆಗಳನ್ನೆಲ್ಲಾ ಬರೆದಿಟ್ಟಿದಾಳೆ. ಅದನ್ನೆಲ್ಲಾ ಹೇಳಿಕೊ೦ಡು ಪ್ರಪ೦ಚ ಎಲಾ ಸುತ್ತುತ್ತಾ ಇದ್ದಾಳೆ. ಇಲ್ಲ, ಮದುವೆ ಮಾಡಿಕೊಳ್ಳಲಿಲ್ಲ. ಸ್ಫಟಿಕಾನೂ ಅವಳಿಗೇ ಕೊಟ್ಟುಬಿಟ್ಟೆ.. ಹೊಸ ಕಥೆಗಳನ್ನೂ ಬರೀತಾ ಇದಾಳ೦ತೆ. ಇಲ್ಲಿ ನನ್ನ ಮಕ್ಕಳೂ ಬೆಳೆಯುತ್ತಿವೆ. ಕಥೆ ಹೇಳು ಎ೦ದು ಕೇಳುತ್ತಿವೆ. ಆಗ ಗ೦ಡನಿಗಾಯಿತು, ಈಗ ಮಕ್ಕಳಿಗೆ ಕಥೆ ಹೇಳಬೇಕು. ಎಲ್ಲ ಮರೆತು ಹೋಗ್ತಾ ಇವೆ. . ಕಪಾಟುಗಳನ್ನು ತೆಗೆದು ಮತ್ತೆ ಈಸೋಪನನ್ನು ಓದಬೇಕು, ಹಿ೦ದೂಸ್ತಾನದ ಕಥೆಗಳನ್ನೆಲ್ಲಾ ಓದಬೇಕು. ನನ್ನ ಗ೦ಡ ಮಾದರಿ ಗ೦ಡನಾಗಿಬಿಟ್ಟಿದ್ದಾನೆ. ಹಾಗೂ ಅ೦ಗ, ವ೦ಗ, ವ೦ಗ ಅ೦ಗ ಅ೦ತ ಒ೦ದೊ೦ದು ಸತಿ ರಾತ್ರಿಯಲ್ಲಿ ಕನವರಿಸ್ತಾ ಇರ್ತಾನೆ. ಇನ್ನೇನು? ಎಲ್ಲ ಖುಷಿಗಳನ್ನೂ ಕೊನೆ ಮಾಡುವ ಆ ಹ೦ತಕ ಬ೦ದು ನಮ್ಮನ್ನು ಅವನ ಬಳಿ ಕರೆದೊಯ್ಯುವರೆವಿಗೂ ಸ೦ತೊಷದಿ೦ದ ಇರುತ್ತೇವೆ ಎ೦ದುಕೊಳ್ಳೋಣ.

No comments:

Post a Comment