Tuesday, January 29, 2019

ಕಡೆಗೂ ಸಿಹಿ ಬಿಟ್ಟ ಮಹಾತ್ಮ - ಪಾಲಹಳ್ಳಿ ವಿಶ್ವನಾಥ್ Palahalli Vishwanath




ಸಿಹಿ ಬಿಟ್ಟ ಮಹಾತ್ಮರು
ಪಾಲಹಳ್ಳಿ ವಿಶ್ವನಾಥ್
(೨೦೦೩, ಫೆಬ್ರವರಿ ಕರ್ಮವೀರ)

ಗಾಂಧೀಜಿಯವರಿಗೆ ಯಾವ ಮನುಷ್ಯನೂ ಸಣ್ಣವನಲ್ಲ; ಆತ ಕೇಳುವ ಪ್ರಶ್ನೆಯೂ ಸಣ್ಣದಲ್ಲ. ಸಮಯ ಮಾಡಿಕೊಂಡು ಎಲ್ಲರನ್ನೂ ಮಾತನಾಡಿಸುತ್ತಿದ್ದರು. ಮತ್ತು ಎಲ್ಲ ತರಹದ ಪ್ರಶ್ನೆಗಳಿಗೂ ಉತ್ತರ ಕೊಡಲು ಪ್ರಯತ್ನಿಸುತ್ತಿದ್ದರು. ಎಲ್ಲರಿಗೂ ದಿನದಲ್ಲಿ ೨೪ಗಂಟೆಗಳಿದ್ದರೆ, ಗಾಂಧಿಯವರಿಗೆ ೨೮ ಗಂಟೆಗಳು !

ಗಾಂಧಿಯವರನ್ನು ನೋಡಲು ಯಾರೋ ಮಹಾಶಯರು ತಮ್ಮ ೧೦ ವರ್ಷ ವಯಸ್ಸಿನ ಮಗನನ್ನು ಕರೆದುಕೊಂಡು ಹೋದರು. ಯಾವಾಗ ಎಂದು ಸರಿಯಾಗಿ ಗೊತ್ತಿಲ್ಲ. ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ ಎಂದುಕೊಳ್ಳೋಣ. ಉಪ್ಪಿನಲ್ಲಿ ಮುಳುಗಿದ್ದ ಮಹಾತ್ಮರ ಮುಂದೆ ಸಿಹಿಗಳ ಬಗ್ಗೆ ತೊಂದರೆಗಳನ್ನು ಹೇಳಿಕೊಳ್ಳಲು ಬಂದಿದ್ದರು. : " ಬಾಪು ! ನನ್ನ ಮಗ ಬಹಳ ಸಿಹಿ ತಿಂಡಿಗಳನ್ನು ತಿನ್ನುತಾನೆ. ನೀವು ಅವನಿಗೆ ಬುದ್ಧಿವಾದ ಹೇಳಬೇಕು. " ಎಂದು ಕೆಳಿಕೊಂಡರು. ಪಕ್ಕದಲ್ಲಿದ್ದ ನೇತಾಜನ ಲೇವಡಿ ಮಾಡುತ್ತಾ " ದೇಶದಲ್ಲಿ ಎಷ್ಟು ತೊಂದರೆಗಳಿವೆ. ಏನೋ ದೊಡ್ಡ ಪ್ರಶ್ನೆಯನ್ನು ಇಟ್ಟುಕೊಂಡು ಮಹಾತ್ಮರ ಹತ್ತಿರ ಬಂದಿದ್ದಾನೆ. ಹೋಗಿ, ಹೋಗಿ " ಎಂದು ಆ ಮಹಾಶಯನನ್ನು ಕಳಿಸಲು ನೋಡಿದರು. ಅದರೆ ಮಹಾತ್ಮರು "ಪರವಾಯಿಲ್ಲ, ಇಲ್ಲಿ ಬನ್ನಿ' ಎಂದು ಅವರನ್ನು ಕರೆದು ನಗುತ್ತಾ " ಮುಂದಿನ ತಿಂಗಳು ಇದೇ ತಾರೀಖು ಬಂದು ನೋಡಿ" ಎಂದರು. ಅದಕ್ಕೆ ಮಹಾಶಯ"ನಾಳೆಯೇ ಬರಲೆ? " ಎಂದಿದ್ದಕ್ಕೆ " ಇಲ್ಲ, ಮುಂದಿನ ತಿಂಗಳು , ಇದೇ ತಾರೀಖು" ಎಂದು ಒತ್ತಿ ಹೇಳುತ್ತಾ ಸಾಲಿನಲ್ಲಿ ಆನಂತರ ಇದ್ದ ವ್ಯಕ್ತಿಯನ್ನು ಮಾತನಾಡಿಸಲು ಶುರುಮಾಡಿದರು.

ಮಹಾಶಯರು ಸ್ವಲ್ಪ ನಿರಾಶೆಯಿಂದಲೇ ಮಹಾತ್ಮರ ಸನ್ನಿಧಿಯಿಂದ ಹೊರಬಂದರು. ಮನೆಗೆ ಹೋಗುತ್ತಾ ಆವರ ಮಗ ದಾರಿಯಲ್ಲಿದ್ದ ಸಿಹಿ ತಿಂಡಿ ಅಂಗಡಿಯ ಕಡೆ ಕೈ ತೋರಿಸಿದ. ಮಹಾಶಯರು ಮನಸ್ಸಿನಲ್ಲೆ ಸಿಹಿತಿಂಡಿ ಮಾಡುವವನನ್ನು ಬೈದು ಕೊಂಡರು. ಅವನೇನು ತಪ್ಪು ಮಾಡಿದ್ದ ಎಂದುಕೊಂಡು ಅದಕ್ಕೆ ಬೇಕಾದ ಸಕ್ಕರೆಯನ್ನು, ನಂತರ ಸಕ್ಕರೆಯ ಕಾರ್ಖಾನೆಯನ್ನು, ಸಕ್ಕರೆ ಕೊಡುವ ಕಬ್ಬನ್ನು, ಕಬ್ಬನ್ನು ಬೆಳೆಯುವ ರೈತರನ್ನು, ಆ ಬೆಳೆಗೆ ಸಹಾಯಮಾಡಿದ ನೀರಾವರಿ ಯೋಜನೆಯನ್ನು, , ಆ ಯೋಜನೆಯನ್ನು ಪ್ರಾರಂಭಿಸಿದ ಆ ಸಂಸ್ಥಾನದ ದಿವಾನರನ್ನು, ಆ ದಿವಾನರನ್ನು ನೇಮಿಸಿಕೊಂಡ ಮಹಾರಾಜರನ್ನು .. ಅಂತೂ ಎಲ್ಲರಿಗೂ ಛೀಮಾರಿಯಾಯಿತು. ಪ್ರತಿ ದಿನ ೫ ಪೇಡಾ ತಿನ್ನುತ್ತಿದ್ದ ಹುಡುಗ ಈವತ್ತು ೭ ಪೇಡಾ ತಿಂದ; ಮುಂದಿನ ದಿನ ೯ ಪೇಡಾ ತಿಂದ. ಏನೋ ಹೆದದರಿಕೆ ಹುಟ್ಟಿ ಇನ್ನೊಂದು ತಿಂಗಳಲ್ಲಿ ಆದಷ್ಟು ತಿಂದುಬಿಡೋಣ ಎನ್ನುವ ಆತುರವಿತ್ತೋ ಏನೋ ! ಗಾಂಧಿಯವರನ್ನು ನೋಡಿಯೇ ಅವನು ಸಿಹಿ ಬಿಟ್ಟುಬಿಡುತ್ತಾನೆ ಎಂದು ನೆರೆಯಾವರೆಲ್ಲಾ ಮೊದಲು ಹೇಳಿದ್ದರು. ಆದರೆ ಹುಡುಗನ ಪೇಡಾ ಸೇವನೆ ಹೆಚ್ಚೇ ಆಗಿತ್ತು. ದಿನಗಳು ಕಳೆಯುತ್ತ ಬೀದಿಯವರಿಗೆಲ್ಲ ಗಾಂಧಿಯವರ ಮೆಲೆ ಅಸಮಾಧಾವೂ ಹುಟ್ಟಿತು. " ಅವರೇನು ಋಷಿಗಳೇ ? ಅವರ ಕೈಲಿ ಇದೆಲ್ಲಾ ಅಗೋದಿಲ್ಲ " ಎ೦ದರು ಕೆಲವರು . " ಹೌದು, ಪಕ್ಕದ ಊರಿನ ಬೆಟ್ಟದ ಮೇಲೆ ಒಬ್ಬ ಸಾಧು ಇದ್ದಾನೆ. ಅವನ ಹತ್ತಿರ ಹೋಗಿ . ನಿಮ್ಮ ಹುಡುಗ ಸಿಹಿ ಮುಟ್ಟದಂತೆ ಮಾಡಿಬಿಡುತ್ತಾನೆ " ಎ೦ದರು ಇನ್ನು ಕೆಲವರು. "ಮಾರ್ಕೆಟ್ಟಿನ ಬಳಿ ದರ್ಗಾಗೆ ಹೋಗಿ ತಾಯಿತ ಕ ಕಟ್ಟಿಸಿ" ಎ೦ದೂ ಸಲಹೆ ಬ೦ದಿತ್ತು. ಗಾಂಧಿಯವರು ಇಂತಹ ಕೆಲಸಕ್ಕೆ ಪ್ರಯೋಜನವಿಲ್ಲ ಎ೦ದು ಎಲರೂ ನಿರ್ಧರಿಸಿಬಿಟ್ಟರು.
ಅಂತೂ ತಿಂಗಳು ಮುಗಿಯಿತು. ಹೋಗಲೆ ಬೇಡವೆ ಎಂದು ಯೋಚಿಸುತ್ತಿದ್ದ ಮಹಾಶಯರನ್ನು ಅವರ ಪತ್ನಿ ಬಲಾತ್ಕಾರದಿಂದ ಗಾಂಧಿಯವರ ಬಳಿ ಕಳಿಸಿದರು. ಪ್ರತಿಭಟಿಸುತ್ತಿದ್ದ ಮಗನನ್ನೂ ಎಳೆದುಕೊಂಡು ಹೋಗಿ ಗಾಂಧಿಯವರನ್ನು ನೋಡಲು ಸಾಲಿನಲ್ಲಿ ನಿಂತರು. ಸಾಲೇನೋ ಉದ್ದವಿತ್ತು. ಆದರೆ ಹೆಚ್ಚು ಹೊತ್ತು ನಿಲ್ಲಬೇಕಾಗಲಿಲ್ಲ. ಮಹಾತ್ಮರು ದೂರದಿಂದಲೇ ಅವರನ್ನು ಗುರುತಿಸಿ ಹತ್ತಿರ ಕರೆದರು . " ಬಾ, ಮಗು " ಎಂದು ಹುಡುಗನನ್ನು ಹತ್ತಿರ ಕೂರಿಸಿಕೊಂಡು ತಲೆ ನೇವರಿಸಿ " ಸಿಹಿ ತಿಂಡಿ ಬಹಳ ತಿನ್ನುತ್ತೀಯಂತೆ. ಬೇಡಪ್ಪ. ಕಡಿಮೆ ಮಾಡು " ಎಂದು ಹೇಳಿ ಸಾಲಿನಲ್ಲಿ ಮುಂದಿದ್ದವರನ್ನು ಕರೆದರು. ಆದರೆ ಮಹಾಶಯರಿಗೆ ಬಹಳ ಕುತೂಹಲ " ಬಾಪು, ಇದನ್ನು ಆವತ್ತೆ ಹೇಳಬಹುದಿತ್ತಲ್ಲವೇ?" ಎಂದರು. ಅದಕ್ಕೆ ಗಾಂಧೀಜಿ ನಗುತ್ತಾ " ನೋಡಿ, ನನಗೂ ಸಿಹಿ ತಿಂಡಿ ಇಷ್ಟ. ನಾನೆ ಸಿಹಿ ತಿನ್ನುವಾಗ ಆ ಪುಟ್ಟ ಹುಡುಗನಿಗೆ ಹೇಗೆ ಬೇಡ ಎಂದು ಹೇಳಲಿ?" " ಆದರೆ ಒಂದು ತಿಂಗಳು.." ಎಂದು ಮಹಾಶಯರು ರಾಗ ಎಳೆದಿದ್ದಕ್ಕೆ ಅವರು " ನಾನು ಗುಜರಾತಿ, ಸಿಹಿ ಎಂದರೆ ಮಹಾ ಪ್ರಾಣ. ಪ್ರತಿ ದಿನ ಕಡಿಮೆ ಮಾಡಿಕೊಳ್ಳುತ್ತಾ ಹೋದೆ. ಅಂತೂ ಮೂರು ದಿನಗಳಿಂದ ಒಂದು ಪೇಡಾ ಕೂಡ ಮುಟ್ಟಿಲ್ಲ . ಈಗ ಮಾತ್ರ ನಾನು ಅವನಿಗೆ ಸಿಹಿ ತಿನ್ನಬೇಡ ಎಂದು ಹೇಳುವ ಸ್ಥಿತಿಗೆ ಬಂದಿದ್ದೇನೆ" ಹೌದಲ್ಲ, ನಾವೇ ಬದಲಾಗದಿದ್ದರೆ ಬೇರೆಯವರನ್ನು ಬದಲಾಗು ಎಂದು ಹೇಳಲು ನಮಗೆ ಹೇಗೆ ನೈತಿಕ ಅಧಿಕಾರವಿರುತ್ತದೆ? ( ಈ ಕತೆಯನ್ನು ಪ್ರವಾದಿ ಮಹಮದ್ ರ ಬಗ್ಗೆ, ರಾಮಕೃಷ್ಣ ಪರಮಹಂಸರ ಬಗ್ಗೆ ಕೂಡ ಹೇಳುತ್ತಾರೆ )


Saturday, January 26, 2019

ಜೆರೋಮ್ ಕೆ ಜೆರೋಮ್ - ಪಾಲಹಳ್ಳಿ ವಿಶ್ವನಾಥ್ - Palahalli Vishwanath


2018 ರ ಅಪರಂಜಿಯಲ್ಲಿ

ಜೆರೋಮ್ ಕೆ ಜೆರೋಮ್ (೧೮೫೯-೧೯೨೭)
ಇಂಗ್ಲೆಂಡಿನಲ್ಲಿ ೧೯ನೆಯ ಶತಮಾನದಲ್ಲಿ ಹುಟ್ಟಿದ ಜೆರೋಮ್ ಬಹಳ ಬಡತನದಲ್ಲಿ ಬೆಳೆದು ವಿವಿಧ ಕೆಲಸಗಳನ್ನು ಮಾಡುತ್ತ ಜೀವ ತಳ್ಳುತ್ತಿದ್ದರು. ತಮ್ಮ ೨೯ ನೆಯ ವಯಸ್ಸಿನಲ್ಲಿ ' ಐಡಲ್ ಥಾಟ್ಸ್ ಅಫ್ ಐಡಲ್ ಫೆಲೊ ' ಎಂಬ ಪುಸ್ತಕ ಬರೆದು ಸ್ವಲ್ಪ ಖ್ಯಾತಿಯನ್ನು ಗಳಿಸಿದರು. ಆನಂತರ ಮದುವೆಯಾಗಿ ಮಧುಚಂದ್ರವನ್ನು ಥೇಮ್ಸ್ ನದಿಯ ಮೇಲೆ ದೋಣಿಯೊಂದರಲ್ಲಿ ಕಳೆದರು. ಅದರಿದ ಸ್ಫೂರ್ತಿ ಬಂದು ' ತ್ರೀ ಮೆನ್ ಇನ್ ಎ ಬೋಟ್ ' ' ಎಂಬ ಪುಸ್ತಕವನ್ನು ರಚಿಸಿದ್ದು ಮೂವರುಸ್ನೇಹಿತರು ದೋಣಿಯಲ್ಲಿ ಪ್ರಯಾಣ ಮಾಡುವುದು ಮುಖ್ಯ ಕಥಾವಸ್ತುವಾಗಿದ್ದಿತು. ಅನೇಕ ಉಪಕಥೆಗಳ ಜೊತೆ ಹಲವಾರು ತಮಾಷೆಯ ಸಂಗತಿಗಳೂ ಇದ್ದು ತಿಳಿಹಾಸ್ಯದ ಭಾಷೆಯನ್ನು ಬಳಸಿದ್ದ ಈ ಪುಸ್ತಕ ತಕ್ಷಣವೆ ಪ್ರಸಿದ್ಧಿಯಾಯಿತು. . ಇದರಿಂದಾಗಿ ಥೇಮ್ಸ್ ನದಿಯಲ್ಲಿ ವಿಹಾರ ಮಾಡುವವರ ಸಂಖ್ಯೆಯೂ ಬಹಳ ಹೆಚ್ಚಾಯಿತಂತೆ. ಇದರಲ್ಲಿ ಕೆಲವು ಭಾಗಗಳು ಪಠ್ಯಪುಸ್ತಕಗಳನ್ನೂ ಸೇರಿದವು. ಅಂದಿನಿಂದ (೧೮೮೯) ಇಂದಿನವರೆವಿಗೂ ಈ ಪುಸ್ತಕದ ಜನಪ್ರಿಯತೆ ಕಡಿಮೆಯಾಗಿಲ್ಲ್ಲ. . ಇವರಿಂದ ಪ್ರಭಾವಿತರಾದವರಲ್ಲಿ ಪಿ.ಜಿ.ವುಡ್ ಹೌಸ್ ಬಹಳ ಮುಖ್ಯ.

() (ಸು ?)ವಾಸನೆಯ ಚೀಸಿನ ಕಥೆ

ನನ್ನ ಗೆಳೆಯನೊಬ್ಬ ಲಿವರ್ಪೂಲಿನಲ್ಲಿ ಒಳ್ಳೆಯ ಚೀಸ್ ಎಂದುಕೊಂಡು ಐದು ಪೌಂಡ್ ಚೀಸ್ ಖರೀದಿಸಿದ. ಆಗ ನಾನು ಅಲ್ಲಿಯೇ ಇದ್ದೆ. ದೂರದಿಂದಲೇ ಸುಮಾರು ವಾಸನೆ ಬರುತ್ತಿತ್ತು. ಆಗ ಅವನು " ನನಗೆ ಈಗ ಲಂಡನ್ನಿಗೆ ಬರೋಕೆ ಆಗೋಲ್ಲ. ಇದನ್ನು ತೆಗೆದುಕೊಂದು ಹೋಗಿ ಮನೆಗೆ ಕೊಡ್ತೀಯ " ಎಂದು ಕೇಳಿದ. 'ಸರಿ , ಏನೂ ತೊಂದರೆಯಿಲ್ಲ ' ಎಂದು ಅವನ ಮನೆಗೆ ಹೋಗಿ ಚೀಸನ್ನು ತೆಗೆದು ಕೊಂಡು ರೈಲ್ವೆ ಸ್ಟೇಷನ್ನಿಗೆ ಹೋಗಲು ಒಂದು ಗಾಡಿಯಲ್ಲಿ ಕುಳಿತೆ. ಆ ಗಾಡಿಯನ್ನು ಎಳೆಯುತ್ತಿದ್ದದ್ದು ನಿದ್ದೆ ಮಾಡುತ್ತಿದ್ದ ಒಂದು ಪ್ರಾಣಿ. ಅದರ ಮಾಲೀಕ ಮಾತ್ರ ಉತ್ಸಾಹದಿಂದ ಅದನ್ನು ಕುದುರೆ ಎಂದು ಕರೆಯುತ್ತಿದ್ದ. . ಹೀಗೆ ನಾವು ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದ ಆ ಪ್ರಾಣಿಗೆ ಸ್ವಲ್ಪ ಗಾಳಿ ಬಂದು ಆ ಚೀಸಿನ ವಾಸನೆ ತಲುಪಿತು. ತಕ್ಷಣವೇ ಆ ಪ್ರಾಣಿ ಗೆ ನಿದ್ದೆಯಿಂದ ಎದ್ದಂತಾಗಿ ಜೋರಾಗಿ ಓಡಲಾರಂಭಿಸಿತು. ಕ್ರಮೇಣ ವೇಗ ಗಂಟೆಗೆ ೪ ಮೈಲಿಗೆ ಏರಿತು. ದಾರಿಯಲ್ಲಿದ್ದ ಮುದುಕರೆಲ್ಲಾ ಓಡಲೂ ಆಗದೆ ನಿಂತಲ್ಲೆ ನಡುಗಲಾರಂಭಿಸಿದ್ದರು. ರೈಲ್ವೆ ನಿಲ್ ದಾಣ ತಲಪಿದಾಗ ಇಬ್ಬರು ಕೂಲಿಗಳು ಕುದುರೆಯನ್ನು ಹಿಡಿದು ನಿಲ್ಲಿಸಲು ಇಬ್ಬರು ಕೂಲಿಗಳು ಬೇಕಾಯಿತು. ಅದೂ ಒಬ್ಬ ಕೂಲಿ ತನ್ನ ಮುಖದ ಮೇಲೆ ಕರ್ಚೀಫ್ ಹಾಕಿಕೊಂಡಿದ್ದ.
ಟಿಕೀಟು ಖರೀಮಾಡಿ ಒಂದು ಕೈನಲ್ಲಿ ಚೀಸಿದ್ದ ಚೀಲವನ್ನು ಹಿಡಿದುಕೊಂಡು ಪ್ಲಾಟ್ ಫಾರಮ್ಮಿಗೆ ಹೋದೆ. ನಾನು ನಡೆಯುತ್ತಿದ್ದ ಹಾಗೆ ದಾರಿಯಲ್ಲಿ ಎರಡೂ ಕಡೆ ದಾರಿಬಿಡುತ್ತಿದ್ದರು; ಅವರ ಚಹರೆಯಲ್ಲಿ ಏನೋ ಗೌರವ ವಿದ್ದ ಹಾಗೆ ಕಾಣುತ್ತಿತ್ತು. ಆಗಲೆ ರೈಲು ತುಂಬಿದಂತಿತ್ತು. ಹಾಗೂ ಏಳುಜನರಿದ್ದ ಒಂದು ಡಬ್ಬಿಯೊಳಗೆ ಹೋದೆ. ಒಳಗಿದ್ದ ಒಬ್ಬ ತಡೆಯಲು ಬಂದನು. . ಹಾಗೂ ನಾನು ಅವನನ್ನು ತಳ್ಳಿಕೊಂಡು ಒಳಗೆ ಹೋದೆ. ಹೋಗಿ ಚೀಸಿನ ಚೀಲವನ್ನು ಮೆಲೆ ಸಾಮಾನು ಇಡುವ ಕಡೆ ಇಟ್ಟು ಕುಳಿತುಕೊಂಡು ಎಲ್ಲರ ಕಡೆಗೂ ಒಂದು ಪುಟ್ಟ ನಗೆ ಬೀರಿದೆ. ಒಂದೆರಡು ನಿಮಿಷದ ನಂತರ ಅಲ್ಲಿ ಕುಳಿತವರಲ್ಲಿ ಇಬ್ಬರು ಮೂಸಿನೋಡಲಾರಂಭಿಸಿದರು. ಹಾಗೇ ಮೂಸಿನೋಡುತ್ತಲೆ ಅವರಿಬ್ಬರೂ ಇಳಿದುಹೋದರು. ಅನಂತರ ಅಲ್ಲಿದ್ದ ಪ್ರೌಢೆಯೊಬ್ಬರು " ಏನಿದು ಅಸಹ್ಯ. ಒಬ್ಬ ಹೆಂಗಸಿಗೆ ಪ್ರಯಾಣಮಾಡಲುಎಷ್ಟು ಕಷ್ಟ' ಎಂದು ಹೇಳುತ್ತ ಇಳಿದುಹೋದರು. ಉಳಿದವರಲ್ಲಿ ಮೂವರು ಒಂದು

ಕ್ಷಣ ಹಾಗೆಯೇ ಕುಳಿತಿದ್ದು ಮುಂದಿನಕ್ಷಣದಲ್ಲಿ ಒಟ್ಟಿಗೆ ಇಳಿಯುವುದಕ್ಕೆ ಹೋಗಿ ಮಾಡಿ ಪೆಟ್ಟು ಮಾಡಿಕೊಂಡರು. ಕಡೆ ನಾನು ಮತ್ತು ಇನ್ನೊಬ್ಬ ಪಯಾಣಿಕ ಉಳಿದುಕೊಂಡೆವು. ಏನೋ ಸತ್ತ್ತ ವಾಸನೆ ಬರುತ್ತಿದೆಯಲ್ಲಾ ಎಂದು ಹೇಳುತ್ತಾ ಅದು ಮಾಮೂಲೆನ್ನುವಂತೆ ಸುಮ್ಮನಿದ್ದನು
ಸದ್ಯ ಇಡೀ ಡಬ್ಬ ನಮಗೇ ಎಂದು ಹೇಳಿದಾಗ ಅವನು ಸಂತೋಷಂದ " ಪುಟ್ಟ ವಿಷಯಕ್ಕೆಲ್ಲಾ ಎಷ್ಟು ಫಜೀತಿ ಮಾಡಿಕೊಳ್ಳುತ್ತಾರೆ " ಎಂದು ಉತ್ತರ ಕೊಟ್ಟ. ಸ್ವಲ್ಪ ಸಮಯದ ನಂತರ ' ವಿಸ್ಕಿ ಕೊಡಿಯೋಣ' ಎಂದು ಅವನನ್ನು ಕರೆದು ಕೊಂಡುಹೋಗಿ ಒಂದು ವಿಸ್ಕಿ ಕೊಡಿಸಿದೆ. ಅದನ್ನು ಮುಗಿಸಿದ ನಂತರ ನನ್ನ ಕಡೆಯೂ ನೋಡದೆ ಅವನು ಬೇರೆ ಡಬ್ಬವನ್ನು ಹತ್ತಿದ. ನನಗೆ ಅದು ಇಷ್ಟವಾಗಲಿಲ್ಲ . ರೈಲು ತುಂಬಿದ್ದರೂ ನನ್ನ ಡಬ್ಬದಲ್ಲಿ ನಾನು ಒಬ್ಬನೇ ಇದ್ದೆ. ಪ್ರತಿ ಸ್ತೇಶನ್ ಬಂದಾಗಲೂ ಜನ " ' ಓ ಇಲ್ಲಿ ಹೋಗೋಣ. ಖಾಲಿ ಇದೆ ; ಎಂದು ಕೂಗಿಕೊಂಡು ಭಾರದ ಪೆಟ್ಟಿಗೆಗಳನ್ನು ಎತ್ತುಕೊಂಡು ಓಡುತ್ತಾ ಡಬ್ಬಿಯ ಬಳಿಬಂದು ' ನಾನು ಮೊದಲು ! ನಾನು ಮೊದಲು ' ಎಂದು ಕಿರುಚುತ್ತಾ ಒಳಗೆ ಬರುತ್ತಿದ್ದರು. ಹಾಗೇ ಒಂದೆರಡು ಕ್ಷಣದಲ್ಲಿಯೇ ಇಳಿದು ಹೋಗುತ್ತಿದ್ದರು ಕೂಕಡ. ಅಂತೂ ಇಡೀ ಪ್ರಯಾಣದಲ್ಲಿ ರೈಲ್ವೆ ಡಬ್ಬದೊಳಗೆ ನಾನೊಬ್ಬನೇ ಇದ್ದೆ!
ಲಂಡನ್ನಿನಲ್ಲಿ ರೈಲಿನಿಂದ ಇಳಿದು ನೆಟ್ಟಗೆ ನನ್ನ ಗೆಳೆಯನ ಮನೆಗ ಹೋದೆ. ಒಳ ಹೋಗುತ್ತಲೆ ಅವನ ಹೆಂಡತಿ " ಏನಿದು ,ಏನಾಯ್ತು ' ಎಂದು ಉದ್ವಿಗ್ನಳಾಗಿ ಕೇಳಿದರು.
" ಏನಿಲ್ಲ, ಇದು ಚೀಸು. ಟಾಮ್ ಲಿವರ್ ಪೂಲಿನಲ್ಲಿ ಇದನ್ನು ಖರೀದಿಸಿದ . ನಿಮಗ್ ಅಂದು ಕೊಡಲು ಹೇಳೀದ' ಎಂದೆ.
.ಮೂರು ದಿನಗಳ ನಂತರ ಆಕೆ ಫೋನ್ ಮಾಡಿ
" ಈ ಚೀಸಿನ ಬಗ್ಗೆ ನಿಮ್ಮ ಗೆಳೆಯ ಏನುಹೇಳಿದ?" ಎಂದು ಕೇಳಿದರು.
" ಯಾರೂ ಮುಟ್ಟದ ಕಡೆ ಇಡಲು ಹೇಳು" ಎಂದಿದ್ದ
" ಸದ್ಯ ! ಅದನ್ನು ಯಾರು ಮುಟ್ಟಲು ಹೋಗುತ್ತಾರೆ? ... . ವಾಸನೆಯ ಬಗ್ಗೆ ಏನಾದರು ಹೇಳಿದ್ದರೆ" ಎಂದು ಕೇಳಿದಾಗ
" ಅವನಿಗೆ ಬಹಳ ಇಷ್ಟವಾದಂತಿತ್ತು ' ಎಂದೆ.
' ಯಾರಿಗಾದರು ಸ್ವಲ್ಪ ದುಡ್ಡು ಕೊಟ್ಟು ಅದನ್ನು ತೆಗೆದುಕೊಂಡು ಹೋಗಲು ಹೇಳಿದರೆ ಅವರಿಗೆ ಬೇಜಾರಾಗುತ್ತದೆಯೇ?"
" ಹೌದು, ಅವನು ಮುಂದೆ ಮಾತೇ ಆಡದೆ ಇರಬಹುದು " ಎಂದೆ "
" ನೀವೇ ಅದನ್ನು ಇಟ್ಟುಕೊಳ್ಳುತ್ತಿರಾ? ನಿಮ್ಮ ಮನೆಗೆ ಕಳಿಸಿಕೊಡುತ್ತೇನೆ. " ಎಂದರು.
ಅದಕ್ಕೆ ನಾನು " " ನೋಡೀಮ್ಮ ನನಗೆ ಚೀಸ್ ಏನೋ ಇಷ್ಟ. ಆಂದಿನ ರೈಲ್ವೆ ಪ್ರಯಾಣವನ್ನು ನಾನು ನನ್ನ ಜನ್ಮದಲ್ಲಿ ಎಂದೂ ಮರೆಯುವುದಿಲ್ಲ. ಬಹಳ ಸುಖಕರ ಪ್ರಯಾಣ. ಆದರೆ ಈ ಪ್ರಪಂಚದಲ್ಲಿ ನಾವು ಇತರರ ಬಗ್ಗೆಯೂ ಯೋಚಿಸಬೇಕಲ್ಲವೆ? ನನ್ನ ಲ್ಯಾಂಡ್ ಲೇಡಿ ವಿಧವೆ, ಅವರಿಗೆ ಜೀವನದಲ್ಲಿ ಯಾರೂ ಇಲ್ಲ . ಅಂಥವರಿಗೆ ನಿಮ್ಮ ಗಂಡನ ಚೀಸಿನಿಂದ ಉಂಟಾಗುವ ಕಷ್ಟಗಳನ್ನು ನಾನು ಊಹಿಸಿಕೊಳ್ಳಲಾರೆ" ಎಂದೆ
.' ಸರಿ, ಹಾಗಾದರೆ ನಾನು ಮಕ್ಕಳನ್ನು ಕರೆದುಕೊಂಡು ಒಂದು ಹೊಟೇಲಿನಲ್ಲಿ ಹೋಗಿರುತ್ತೀನಿ. ಆ ಚೀಸು ಖರ್ಚಾಗುವ ತನಕ ನಾನು ಬರುವುದಿಲ್ಲ. ಆ ಚೀಸಿನ ಜೊತೆ ನಾನು ಬಾಳಲಾರೆ" ಎಂದರು
ಹೆಂಡತಿ ಮತ್ತು ಮಕ್ಕಳು ಹೊಟೆಲಿನಲ್ಲಿ ಅನೇಕ ದಿನಗಳನ್ನು ಕಳೆದು ಖರ್ಚು ಹೆಚ್ಚಾಗಲು ಶುರುವಾದಾಗ ನನ್ನ ಗೆಳೆಯ ' ನನಗೆ ಚೀಸ್ ಏನೋ ಇಷ್ಟ. ಅದರೆ ಇದು ದುಬಾರಿಯಾಗುತ್ತಿದೆ ' ಎಂದು ಅದನ್ನು ತೆಗೆದುಕೊಂಡು ಹೋಗಿ ಥೇಮ್ಸ್ ನದಿಯಲ್ಲಿ ಬಿಸಾಕಿದನು. . ಆದರೆ ಅದನ್ನು ನೊಡಿದ ಕಾವಲುಗಾರರು ಅವನನ್ನು ವಾಪಸ್ಸು ತೆಗೆದುಕೊಂಡುಹೋಗಲು ಹೇಳಿದರು. ಆ ಚೀಸಿಗೋಸ್ಕರ ಅವನು ಬೆಸ್ತರ ತರಹ ನೀರಿನಲ್ಲಿ ಹುಡುಕಾಡಬೇಕಾಯಿತು. ಕಡೆಗೂ ಸಮುದ್ರ ತೀರದ ಒಂದು ಚಿಕ್ಕ ಪಟ್ಟಣಕ್ಕೆ ಹೋಗಿ ಅದನ್ನು ಮರಳಿನ ಕೆಳಗೆ ಹೂತು ಬಂದನು. ಆನಂತರ ಅ ಪುಟ್ಟ ಪಟ್ಟಣಕ್ಕೆ ಬಂದವರೆಲ್ಲಾ ' ಏನೋ ವಾಸನೆಯಿದೆಯಲ್ಲಾ ' ಎನ್ನುತ್ತಿದ್ದರು.
ಕಡೆಗೆ ' ಖಾಯಿಲೆ ಇರುವವರಿಗೆ ಒಳ್ಳೆಯ ವಾಸನೆಯ ಊರು' ಎಂದು ಆ ಪಟ್ಟಣ ಹೆಸರು ಪಡೆಯಿತು

() ಹೀಗೆ ಹೋಗಿ ಹಾಗೆ ಬಂದು ಬಿಡೋಣ'

( ಹ್ಯಾಂಪ್ಟನ್ ಮೇಸ್ ಇಂಗ್ಲೆಂಡಿನ ಹಳೆಯ (೧೭ನೆಯ ಶತಮಾನದ) ಕಾಲದ ಖ್ಯಾತ ತೋಟ. ಒಳಗೆ ಹೋದರೆ ಹೊರಗೆ ಬರುವುದು ಕಷ್ಟ. ದಿಗ್ಭ್ರಮೆ ಹಿಡಿಸುವಂತಹ ಜಾಲ)
ಒಂದು ಬಾರಿ ಹ್ಯಾರಿಸ್ ಹ್ಯಾಂಪ್ಟನ್ ಜಾಲದ ಬಳಿ ಹೋದಾಗ ' ತನ್ನ ಕಸಿನ್ ಗೆ ' ಇದೇನು ಮಹಾ ! ಏನು ಹೊಗಳಿಕೊಳ್ತಾರೋ ಇದನ್ನ ! ಬರೀ ಬಲಕ್ಕೆ ತಿರುಗುತ್ತಿದ್ದರೆ ಅಯ್ತು . ಅಷ್ಟೇ ಬಾ ! ಹೀಗೆ ಹೋಗಿ ಹಾಗೆ ಬಂದು ಬಿಡೋಣ' ಎಂದು ಅವನನ್ನು ಕರೆದುಕೊಂಡು ಒಳಗೆ ಹೋದ ಕೆಲವು ನಿಮಿಷಗಳ ನಂತರ ಕೆಲವು ಜನ ಕಾಣಿಸಿದರು. " ನಾವು ಮುಕಾಲು ಗಂಟೆಯಿಂದ ಇಲ್ಲೇ ಇದ್ದೀವಿ, ಸಾಕಾಗ್ತಿದೆ " ಎಂದರು. ಹ್ಯಾರಿಸ್ " ನಿಮಗೆ ಬೇಕಾದರೆ ನನ್ನ ಜೊತೆ ಬರಬಹುದು. ಹೀಗೇ ಹೋಗಿ ಬಂದುಬಿಡೋಣ " ಎಂದ. ಅವರು ಧನ್ಯವಾದಗಳನ್ನು ಅರ್ಪಿಸುತ್ತಾ ಅವನ ಹಿಂದೆ ನಡೆಯಲು ಶುರುಮಾಡಿದರು. ಹಾಗೇ ಇನ್ನೂ ಕೆಲವು ಜನ ಅವರನ್ನು ಸೇರಿಕೊಂಡರು. ಒಟ್ಟಿನಲಿ ಒಳಗೆ ಹೋಗಿದ್ದವರೆಲ್ಲಾ ಈಗ ಹ್ಯಾರಿಸ್ ಮುಖಂಡತ್ವದಲ್ಲಿ ನಡೆಯುತ್ತಿದ್ದರು. ಮನೆ ಮಠ ಸೇರಿ ಹತ್ತಿರದವರನ್ನು ನೋಡುವ ಆಸೆಯನ್ನೆಲ್ಲಾ ಬಿಟ್ಟಿದ್ದ ಆ ಜನ ಹ್ಯಾರಿಸ್ ನನ್ನು ಹೊಗಳಿದರು. ಹ್ಯಾರಿಸ್ ಪ್ರಕಾರ ಅವನ ಜೊತೆ ಸುಮಾರು ಇಪ್ಪತು ಜನರಿದ್ದರು. ಮಗುವನ್ನು ಇಟ್ಟುಕೊಂಡಿದ್ದ ಒಬ್ಬ ಚಿಕ್ಕ ವಯಸ್ಸಿನ ಮಹಿಳೆ ಕೂಡ ಇದ್ದು ಅವನನ್ನು ಆಪದ್ಬಾಂಧವನ ತರಹ ನೋಡಿದಳು .
ಹ್ಯಾರಿಸ್ ಬಲಕ್ಕೆ ದಾರಿ ಸಿಕ್ಕಲ್ಲೆಲ್ಲ ತಿರುಗುತ್ತಲೆ ಇದ್ದ. ಅವನ ಕಸಿನ್ " ಈ ಜಾಗ ದೊಡ್ಡದಿರಬೆಕು' ' ಎಂದಾಗ ಹ್ಯಾರಿಸ್ ' ಹೌದು, ಯುರೋಪಿನ ದೊಡ್ಡ ಜಾಲಗಳಲ್ಲಿ ಇದೂ ಒಂದು' ಎಂದ. ' ಇರಬೇಕು. ಆಗಲೆ ನಾವು ಎರಡು ಮೈಲಿ ನಡೆದ್ದ್ದೇವೆ ' ಎಂದ ಅವನ ಕಸಿನ್ . ಹಿಂದೆ ನೋಡಿದ ಸ್ಥಳಕ್ಕೇ ಮೂರನೆಯ ಬಾರಿ ವಾಪಸ್ಸು ಬಂದಾಗ ಮಗುವಿದ್ದ ಮಹಿಳೆ ಹ್ಯಾರಿಸ್ ನನ್ನು ' ನೀನುಮೋಸಗಾರ' ಎಂದು ನಿಂದಿಸಿದಳು.. ಹ್ಯಾರಿಸ್ ಗೆ ಕೋಪ ಬಂದು " ನೊಡಿ ಇಲ್ಲಿ ! ನಕ್ಷೆ ಇದೆ' . ಎಂದು ತೋರಿಸಿದ " ಅದೆಲ್ಲ ಸರಿ, ಆದರೆ ನಕ್ಷೆಯಲ್ಲಿ ಎಲ್ಲಿದ್ದೀರ ಎಂದು ನಿಮಗೆ ಗೊತ್ತಾ"? ಎಂದು ಒಬ್ಬ ಕೇಳಿದ್ದಕ್ಕೆ . ಹ್ಯಾರಿಸ್ ಬಳಿ ಉತ್ತರವಿರಲಿಲ್ಲ.
ಕೆಲವು ನಿಮಿಷಗಳ ನಂತರ " ಒಳಗೆ ಬಂದ ಜಾಗಕ್ಕೇ ಹೋಗಿ ಮತ್ತೆ ಶುರುಮಾಡುವುದು ಒಳ್ಳೆಯದು " ಎಂದು ಹ್ಯಾರಿಸ್ ಹೇಳಿದ. ಎಲ್ಲರೂ ಒಪ್ಪಿ ಹ್ಯಾರಿಸ್ನ ಹಿಂದೆ ಮತ್ತೆ ಹೊರಟರು. ಹಲವಾರು ನಿಮಿಷಗಳ ನಂತರ ಮಧ್ಯ ಭಾಗಕ್ಕೆ ಬಂದು ಸೇರಿದರು. " ಇಲ್ಲೇ ಬರಬೇಕು ಅಂತಿದ್ದೆ " ಎಂದು ಹೇಳೋಣ ಎಂದುಕೊಂಡ ಹ್ಯಾರಿಸ್ ಗುಂಪಿನ ಚಹರೆಯನ್ನೋಡಿ "ಇದುಆಕಸ್ಮಿಕ " ಎಂದ. ಸರಿ, ಮತ್ತೆ ಶುರುಮಡೊಣ ಎಂದು ಎಲ್ಲರೂ ಹೊರಟರು. ಅದರೆ ಹಲವಾರು ನಿಮಿಷಗಳ ನಂತರ ಎಲ್ಲರೂ ಮತ್ತೆ ಮಧ್ಯಕ್ಕೆ ಬಂದರು. ಅನಂತರ ಅವರಿಗೆ ಬೇರೆ ಎಲ್ಲೂ ಹೋಗಲು ಆಗಲಿಲ್ಲ. ಯಾವ ಕಡೆ ಹೊರಟರೂ‌ ಮಧ್ಯಕ್ಕೇ ಬರುತ್ತಿದ್ದರು. ಇದು ಬಹಳ ಬಾರಿ ನಡೆದನಂತರ ಕೆಲವರು ಅಲ್ಲೇ ಇದ್ದು ಹೋದ ಜನ ವಾಪಸ್ಸು ಬರಲಿ ಎಂದು ಕಾದು ನಿಂತರು ! ಮತ್ತ್ ಹ್ಯಾರಿಸ್ ತನ್ನ ನಕ್ಷೆಯನ್ನು ಹೊರ ತೆಗೆದಾಗ ಗುಂಪಿಗೆ ಬಹಳ ಕೋಪ ಬಂದು " ನೀನೋ ನಿನ್ನ ನಕ್ಷೆಯೋ " ಎಂದು ಬಯ್ದರು. . ಅಂತೂ ತಾನು ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಲುತ್ತಿದ್ದೇನೆ ಎಂದು ಹ್ಯಾರಿಸ್ ಗೆ ಅನಿಸಿತು.
ಕಡೆಗೆ ಎಲ್ಲರೂ ಹುಚ್ಚರಂತಾಗಿದ್ದು ಜೋರಾಗಿ ಅಲ್ಲಿಯ ಕಾವಲುಗಾರನಿಗೆ ಕೂಗಿದರು. ಅದನ್ನು ಕೇಳಿಸಿಕೊಂಡು ಅವನು ಒಂದು ಏಣಿಯನ್ನು ಹತ್ತಿ ಹೊರಗೆ ಬರಲು ಅವರಿಗೆ ದಾರಿಯನ್ನು ಹೇಳಿಕೊಟ್ಟ. ಆದರೆ ಬರೀ ಗೊಂದಲದಲ್ಲೆ ಇದ್ದ ಆ ಜನ ಅವನ ಮಾತುಗಳನ್ನು ಅರ್ಥಮಾಡಿಕೊಳ್ಳುವ್ ಸ್ಥಿತಿಯಲ್ಲಿ ಇರಲಿಲ್ಲ. ಆದಕ್ಕೆ ಅವನು ' ಅಲ್ಲೆ ಇರಿ, ನಾನೇ ಬರುತ್ತೇನೆ' ಎಂದು ಹೇಳಿದ. ಆದರೆ ಅವನೂ ಹೊಸಬನಾಗಿದ್ದು ಸ್ವಲ್ಪ ಹೊತ್ತಿನ ನಂತರ ಅವನು ಕೂಡ ದಾರಿತಪ್ಪಿದ. ಒಮ್ಮೊಮ್ಮೆ ಅವರು ಇವನನ್ನು ನೋಡುವುದು ಅಥವಾ ಅವನು ಇವರನ್ನು ನೋ ಡುವುದು . ಆದರೆ ಅವರನ್ನು ಅವನು ಸಂಧಿಸಲೆ ಇಲ್ಲ. ಕಡೆಗೂ ಹಳೆಯ ಕಾವಲುಗಾರ ಬರುವವರೆವಿಗೂ ಅವರೆಲ್ಲ ಕಾಯಬೇಕಾಯಿತು.

ಅಂಬಾನಿಯ ಆಹ್ವಾನ ಪತ್ರಿಕೆ - ಪಾಲಹಳ್ಳಿ ವಿಶ್ವನಾಥ್ Palahalli Vishwanath


2018 ಡಿಸೆ೦ಬರ್ ಅಪರಂಜಿ ಯಲ್ಲಿ 
ಅಂಬಾನಿಯ ಆಹ್ವಾನ ಪತ್ರಿಕೆ
ಮನೆಗೆ ಹೋಗಿ ಹೆಂಡತಿಯನ್ನು ಕೇಳಿದ
" ಇವತ್ತು ನನಗೆ ಏನಾದರೂ ಕೊರಿಯರ್ ಬಂದಿತ್ತೆ?"
" ನಿಮಗೆ ಯಾವ ಕೊರಿಯರ್ ಬರ್ತಾನೆ?"
" ಸರಿ, ಏನಾದರೂ ಪೋಸ್ಟ್ ಬಂದಿತ್ತೆ ?"
" ಇಲ್ಲ, ಏಕೆ?"
" ಒಂದು ಅಹ್ವಾನ ಪತ್ರಿಕೆ ಬರಬೇಕಿತ್ತು"
" ಯಾವುದಕ್ಕೆ ಆಹ್ವಾನ?"
" ಒಂದು ಮದುವೆಯದ್ದು ?"
" ಯಾರದು ? ನಮ್ಮ ಸಂಬಂಧೀಕರದ್ದು ಯಾವುದೂ ಇಲ್ಲವಲ್ಲ . ನಿಮ್ಮ ಆಫೀಸಿನವರದ್ದಾ?"
" ಇಲ್ಲ ಇಲ್ಲ ! ನಿನಗೆ ಅವರು ಗೊತ್ತಿಲ್ಲ ! ..ಅಂದರೆ ನನಗೆ ಅವರು ಗೊತ್ತು ಅಂತ ನಿನಗೆ ಗೊತ್ತಿಲ್ಲ "
" ಆಂಥವರು ಯಾರು?"
" ಅಂಬಾನಿಯವರು !"
" ಯಾವ ಅಂಬಾರಿ? ಯಾವ ಆನೆ?"
" ಇದು ಅಂಬಾನಿ ! ಅಂಬಾರಿ ಅಲ್ಲ ಅಮ್ ... ಬಾ.. ನಿ ! ರಿ ನಿ ಇದೆಯಲ್ಲ ಅದರಲ್ಲಿ ರಿ ಅಲ್ಲ ನಿ "
" ಆಯ್ತು ! ಗೊತ್ತಾಯಿತು ಅಂಬಾ ನಿ ! ಯಾವ ಆಂಬಾನಿ ಅಂತ ಕೇಳಬಹುದೇ? ನಿಮ್ಮ ಆಫೀಸಿನವರಲ್ಲ ಅಂದಿರಿ.. ಅಲ್ಲ ಏನೋ ಗುಮಾನಿ ! ಆಗರ್ಭ ಶ್ರೀಮಂತ ಅಂಬಾನಿಯವರೋ?"
"ಹೌದು, ಹೌದು !ಅಬ್ಬ! ಕಡೆಗೂ ಗೊತ್ತಾಯಿತು ! ನೀನು ಟ್ಯೂಬು ಲೈಟೇ!"
" ಮುಖೇಶ್ ಅವರೋ ? ಅನಿಲ್ ಅವರೋ? ಸರಿ, ಮುಖೇಶ್ ! ಪೆಡ್ದರ್ ರೋಡಿನಲ್ಲಿ ಎಷ್ಟೋ ಅಂತಸ್ತಿನ ಮನೆ ಉಳ್ಳವರಲ್ಲವೆ . .. ಇರಬೇಕು . ಅವರ ಮನೆಯಲ್ಲಿ ಮದುವೆ ಎಂದು ಓದಿದೆ "
" ಅದೇ ಮದುವೆಯ ಅಹ್ವಾನಪತ್ರಿಕೆಯನ್ನು ನಾನು ನಿರೀಕ್ಷಿಸುತ್ತಿದ್ದೇನೆ!"!
" ಆಯಿತು . ಈಗ ಒಂದು ಪ್ರಶ್ನೆ ಕೇಳಬಹುದೆ?"
" ಏಕೋ ಬಹಳ ಕ್ರಾಸ್ ಎಕ್ಸಾಮಿನೇಷನ್ ಆಗ್ತಾ ಇದೆ ! ಕೇಳು "
" ಶ್ರೀಮಂತ ಅಂಬಾನಿಯವರಿಗೆ ಸರಕಾರಿ ಕಛೇರಿಯ ಮಧ್ಯ ದರ್ಜೆಯ ಕಾರಕೂನ ಹೇಗೆ ಪರಿಚಯವಾದರು ? "
" ಹಾಸ್ಯ ಮಾಡ್ತಾ ಇರು ! ಮಧ್ಯ ದರ್ಜೆ ಈವತ್ತು ! ನಾಳೆ ಮೇಲು ದರ್ಜೆ ಅಗ್ತೀನಿ. "

" ಅದು ಸರಿ. ಆಗುತ್ತೆ ಆಗುತ್ತೆ ನಿಮ್ಮ ನಿವೃತ್ತಿಯ ಸಮಯದಲ್ಲೇ ಅಗಬಹುದು ! ಆದರೆ ನನ್ನ ಪ್ರಶ್ನೆ ಗೆ ಉತ್ತರ ಸಿಗಲಿಲ್ಲ. ಶ್ರೀ ಮಂತರಿಗೆ ನೀವು ಹೇಗೆ ಗೊತ್ತು ?
" ಅವರು ನನ್ನ ಸ್ನೇಹಿತರು"
" ಅದೇ ಕೇಳ್ತಾ ಇರೋದು ! ಅದು ಹೇಗೆ ಆಯಿತು ?"
" ನನಗೆ ಆವರು ವೇವ್ ಮಾಡಿದರು"
" ನಿಮಗೆ ಅವರು ವೇವ್ ಮಾಡಿದರು?"
" ಏನು ನೀನು ಗಿಣೀನಾ? .. ಹೇಳ್ತೀನಿ . ನಾನು ಚೌಪಾತಿಯಲ್ಲಿ ರಸ್ತೆ ದಾಟಲು ಹಿಂತಿದ್ದೆ . ಅಗ ಅವರ ಕಾರು ಆಲ್ಲಿ ಬಂದು ನಿಂತಿತು. ಅದರಲ್ಲಿ ಮುಖೇಶ್ ಕುಳಿತಿದ್ದರು. ನಾನು ಅವರಿಗೆ ವೇವ್ ಮಾಡಿದೆ ಅವರು ಮುಗಳ್ನಕ್ಕು
ವಾಪಸ್ಸು ವೇವ್ ಮಾಡಿದರು ."
" ಅಂದರೆ ಇದು ವೇವ್ ವೇವ್ ಸಂಬಂಧ.. ಹೀಗಾ.? ನೋಡಿ,ನನ್ನ ಕೈ"
" ಹೌದು ! ಆದರೆ ಅವರಿಗೆಲ್ಲ ಇದು ಅಭ್ಯಾಸ ಅಲ್ವಾ ! ನಿನಗಿಂತ ಚೆನ್ನಾ ಗಿಯೇ ವೇವ್ ಮಾಡಿದರು ! ಬರೀ ವೇವ್ ಆಲ್ಲ. ನಕ್ಕರು ಕೂಡ ! ಆಳವಾದ ಸಂಬಂಧಗಳೆಲ್ಲಾ ಹೀಗೆಯೇ ಶುರುವಾಗುತ್ತವೆ ಗೊತ್ತಾ?"
"ಅದು ಮುಖೇಶ್ ಅಂಬಾನಿ ಎಂದು ನಿಮಗೆ ಚೆನ್ನಾಗಿ ಗೊತ್ತೋ?..ಕಾರಿನ ಗಾಜು ಕಪ್ಪಗಿದ್ದಿರಬೇಕಲ್ಲವೆ ?
" ನಾನು ಬಹಳ ಹತ್ತಿರ ಇದ್ದೆ . ಅದಕ್ಕೆ .. ಇಷ್ಟೇ ದೂರ .."
" ನೀವೊಬ್ಬರೇನಾ ಅಲ್ಲಿದ್ದದ್ದು ?"
" ಏನು ಪ್ರಶ್ನೆ ಇದು ! ಚೌಪಾತಿಯಲ್ಲಿ ಜನ ರಸ್ತೆ ದಾಟ್ತಾನೆ ಇರೋಲ್ಲ ?
" ಅಂದರೆ ನಿಮ್ಮ ಜೊತೆ ಬಹಳ ಜನ ಇದ್ದರೂ ..ಅಂಬಾನಿಯವರು ನಿಮಗೆ ಮಾತ್ರ ವೇವ್ ಮಾಡಿದರು. ಅಲ್ಲ್ವೆ?"
" ಹೌದು, ನಕ್ಕರು ಕೂಡ .ಏನಿದು ಕ್ರಾಸ್ ಎಕ್ಸ್ಸಮಿನೇಷನ್ ಮುಗಿಯೋಹಾಗೇ ಕಾಣಲಿಲ್ಲವಲ್ಲ. .. ಸರಿ ಇರಬಹುದು"
" ಅಂಬಾನಿಯವರು ನಿಮಗೆ ಮಾತ್ರ ಅಲ್ಲ, ಅಲ್ಲಿ ನಿಂತಿದ್ದ ಎಲ್ಲರಿಗೂ ವೇವ್ ಮಾಡಿರಬಹುದು ಅಲ್ಲವೇ"
ಅಂದರೆ ನಿಮ್ಮನ್ನು ನೋಡಿರದ ಸಾಧ್ಯತೆಯೂ ಇದೆ ಅಲ್ಲವೇ ಯುವರ್ ಹಾನರ್"
" ಟೀವಿ ನೋಡೋದು ಜಾಸ್ಸ್ಸ್ತಿ ಯಾಗಿದೆ "
" ಬಿಡಿ. ನಿಮಗೇ ವೇವ್ ಮಾಡಿದರು ಅಂದುಕೊಳ್ಳೋಣ.. ನಿಮ್ಮ ಹೆಸರು , ವಿಳಾಸ ಎಲ್ಲ ಅವರಿಗೆ ಹೇಗೆ ತಿಳಿಯುತ್ತೆ?"
"ಅಯ್ಯೋ ಹುಚ್ಚಿ ! ಲೀಲಾಜಾಲ !"
" ನನಗೂ ಬರುತ್ತೆ ಪದಗಳು. ಅಂತರ್ಜಾಲ! ನಾನು ಕೇಳಿದ್ದಕ್ಕೆ ಉತ್ತರ ಕೊಡಿ "
" ಅವರಿಗೆ ಇರುವ ಹಣ ಎಷ್ಟು ? ದೇಶದ ದೊಡ್ಡವರು ಕೂಡ ಅವರ ಮುಂದೆ ಕೈ ಕಟ್ಟಿಕೊಂಡು ನಿಲ್ತಾರಂತೆ ಗೊತ್ತಾ?... ಅವರ ಪ್ರಭಾವ ಎಷ್ಟು ! . ಏನು ಬೇಕಾದಾರೂ ತಿಳಿದುಕೋತಾರೆ. ದಿನ, ಸಮಯದಲ್ಲಿ , ಚೌಪಾತಿಯ ಟ್ರಾಫಿಕ್ ಸ್ಸ್ಸ್ಸಿಗ್ನಲ್ ನಲ್ಲಿದ್ದಾಗ ಅವರು ಡ್ರೈವರ್ ಮಹಾಶಯನಿಗೆ ಹೇಳಿರುತ್ತಾರೆ:: " ವಾಹನ ಚಾಲಕನೇ ! ನೋಡು ಅಲ್ಲಿ ಹಲ್ಲು ಕಿರಿಯುತ್ತಾ ವೇವ್ ಮಾಡುತ್ತಿರುವ ವ್ಯಕ್ತಿಯನ್ನು ನೋಡು . ಅವನ ಮುಖವನ್ನು ಕಾರಿನ ಕ್ಯಾಮೆರಾದಲ್ಲಿ ಸೆರೆ ಹಿಡಿ. ಆವನು ಯಾರು, ಹೆಸರೇನು, ವಿಳಾಸವೇನು ಎಂಬುದು ನನಗೆ ತಿಳಿಯಬೇಕು. ನನಗೆ ಮಾಹಿತಿ ೨೪ ಗಂಟೆಯೊಳಗೆ ಬೇಕು. .. ೨೪ ಏನು ೧೨ ಗಂಟೆಯ ಒಳಗೇ ಅವರಿಗೆ ಮಾಹಿತಿ ಸಿಕ್ಕಿರುತ್ತೆ !"
" ಅಂತೂ ನಿಮ್ಮ ವಿಷಯ ಎಲ್ಲಾ ಅಂಬಾನೀಯವರಿಗೆ ತಿಳಿದಿದೆ !"
" ಅವತ್ತು ನಮ್ಮಿಬ್ಬರ ಮಧ್ಯೆ ಇನ್ನೊಂದು ಸಂಬಧವೂ ಹುಟ್ಟಿತು. ನಮ್ಮಿಬ್ಬರ ಮಧ್ಯೆ ಒಂದು ತರಹ ವಿದ್ಯುತ್ ಶಕ್ತಿಯ ವಿನಿಮಯ ವಾಯಿತು. "
"ಬ್ಯಾಟರಿ, ಜನರೇಟರ್ ಇಲ್ಲದೆಯೇ ? "
". ನನ್ನ ಹೆಸರಿನ ಕಡೆಯ ಅಕ್ಷರವೂ ಅವರ ಹೆಸರಿನ ಕಡೆಯ ಅಕ್ಷರವೂ ಒಂದೇ !"
" ! ಇದು ವೇವ್ ವೇವ್ ಅಲ್ಲದೆ ಶ್ ಶ್ ಸಂಬಂಧ !"
" ಹಾಸ್ಯ ಮಾಡ್ತಿರು. ಎಲ್ಲ ದೊಡ್ಡವರು ನಮ್ಮಂತಹ ಅಭಿಮಾನಿಗಳಿಗೆ % ಆಹ್ವಾನಪತ್ರಿಕೆಗಳನ್ನು ಮೀಸಲಾಗಿಟ್ಟುಕೊಂಡಿರುತ್ತಾರೆ. ಅಂದರೆ ಒಟ್ಟು ಹತ್ತು ಸಾವಿರ ಜನರನ್ನು ಕರೆದರೆ ನಮ್ಮಂತಹವರು ನೂರಾದರೂ ಇರ್ತಾರೆ. .. ನೋಡ್ತಾ ಇರು ! . ಅವರೆ ಬಂದು ನಮ್ಮಿಬ್ಬರನ್ನೂ ಆಹ್ವಾನಿಸಬಹುದು "
" ಹೌದು ಬರಬಹುದು. ಬರಬಹುದು ಕಾಯೋಣ "
.......................................................
ಒಂದು ವಾರದ ಆನಂತರ
" ಏನು, ನಿಮ್ಮ್ಮ್ಮ ಅಂಬಾನಿ ಕಡೆಯವರು ಯಾರೂ ಬರಲೇ ಇಲ್ಲ"
" ಪಾಪ ! ನಾವೂ ಅಂತಹ ದೊಡ್ಡವರ ತೊಂದರೆಗಳನ್ನು ಅರ್ಥಮಾಡಿಕೊಳ್ಳಬೇಕು . ಮುಖೇಶ್ ನಮ್ಮ ಪರ ಮಾತಾಡಿರ್ತಾರೆ. ಅದರೆ ನೀತಾಜಿ ತಮ್ಮ .ಪಿ.ಎಲ್ ಕ್ರಿಕೆಟ್ ಟೀಮನ್ನು ನೆನಸಿಕೊಂಡು ಹರಭಜನ್ ಮರೆತು ಹೋಯ್ತಲ್ಲ ಅಂತಾರೆ. ಆಗ ನನಗೆ ಬರಬೇಕಾದ ಆಹ್ವಾನ ಅವರಿಗೆ ಹೋಗಿರುತ್ತೆ . ಏನು ಮಾಡೋದು ?"
" ನನ್ಗೇನನ್ನಿಸ್ಸುತ್ತೆ ಗೊತ್ತಾ. ಆಗ ನೀತಾಜಿ ಹೇಳಿರ್ತಾರೆ " ಸತಿ ಇಲ್ಲದಿದ್ದರೂ ನಮಗೆ ಮೊಮ್ಮಗು ಹುಟ್ಟುತ್ತಲ್ಲ, ಅದರ ನಾಮಕರಣಕ್ಕೆ ನಿಮ್ಮ ಚೌಪಾತಿಯ ಅಭಿಮಾನಿಯನ್ನು ಕರೆದೇ ಕರೆಯೋಣ.. ಅದಿರಲಿ ಯಾವತ್ತಾ ದರೂ ಚೌಪಾತೀಲಿ ನಿಮಗೆ ದೀಪಿಕಾ ಪದುಕೋಣೆ ಸಿಕ್ಕಿದ್ದರಾ? "
--------------- ಪಾಲಹಳ್ಳಿ ವಿಶ್ವನಾಥ್