Monday, May 18, 2015

ತಾಯಿನಾಡು ಪತ್ರಿಕೆ ಹುಟ್ಟಿ ಬೆಳೆದದ್ದು ಹೀಗೆ - ಪಾಲಹಳ್ಳಿ ವಿಶ್ವನಾಥ್ Palahalli Vishwanath in AVADHI

 THE BIRTH OF A NEWSPAPER - REMEMBERING MY FATHER WHO PASSED AWAY THIS WEEK 45 YEARS AGO AND HIS NEWSPAPER - IN AVADHIMAG KANNADA BLOGMAGAZINE- he started it with the intention to bring down the autocracy of the Dewan Sir Mirza Ismail. A page from his diary of the day he started the paper is given in the article 11 Sep 1927
ತಾಯಿನಾಡು ಮತ್ತು ನಮ್ಮ ತ೦ದೆ ರಾಮಯ್ಯನವರ ನೆನಪಿಗೆ- avadhi ಯಲ್ಲಿ ೧೮ ಮೇ ೨೦೧೫



http://avadhimag.com/2015/05/18/%e0%b2%a4%e0%b2%be%e0%b2%af%e0%b2%bf%e0%b2%a8%e0%b2%be%e0%b2%a1%e0%b3%81-%e0%b2%b9%e0%b3%81%e0%b2%9f%e0%b3%8d%e0%b2%9f%e0%b2%bf-%e0%b2%ac%e0%b3%86%e0%b2%b3%e0%b3%86%e0%b2%a6%e0%b2%a6%e0%b3%8d/


                                            ' ತಾಯಿನಾಡು'  ಹುಟ್ಟಿ ಬೆಳೆದದ್ದು  ಹೀಗೆ
   ಪಾಲಹಳ್ಳಿ ವಿಶ್ವನಾಥ್ 

(' ಮೂರು ದಶಕಗಳ ಕಾಲ ಮೈಸೂರು ಸಂಸ್ಥಾನದ ಜನತೆಯ ನೆಚ್ಚಿನ ಸುದ್ದಿ ಸಾಧನವಾಗಿ, ಸಾರ್ವಜನಿಕ ಕುಂದುಕೊರತೆಗಳ ಪ್ರಚಾರಕನಾಗಿ, ರಾಜಕೀಯ ಚಟುವಟಿಕೆಗಳ ಯಥಾರ್ಥದರ್ಶಿಯಾಗಿ, ಜಾಗತಿಕ ಪ್ರಗತಿ ವರ್ತಮಾನಗಳ ವಾಹಕವಾಗಿ ' ವಿಜೃಂಭಿಸಿದ " ತಾಯಿನಾಡು "  ಪತ್ರಿಕೆ ಈಗ ಇದ್ದಿದ್ದರೆ  ಅದಕ್ಕೆ ೮೭ ವರ್ಷಗಳಾಗುತ್ತಿದ್ದವು. ಪತ್ರಿಕೆಯ ಜನ್ಮದಾತ ಪಿ.ಆರ್.ರಾಮಯ್ಯನವರು ನಿಧನರಾಗಿ ಈ ಮೇ‌೨೫ಕ್ಕೆ  ೪೫ ವರ್ಷಗಳಾಗುತ್ತವೆ. )

    





 ೧೯೨೭ರ ಸೆಪ್ಟೆ೦ಬರ್ ತಿ೦ಗಳಿನ ೧೧ನೇ ತಾರೀಖು ಮೈಸೂರಿನಲ್ಲಿ ವಾಸವಾಗಿದ್ದ ೩೩ರ ಹರೆಯದ  ವ್ಯಕ್ತಿಯೊಬ್ಬ ರು ತಮ್ಮ ದಿನಚರಿಯಲ್ಲಿ ಈ ಸಾಲುಗಳನ್ನು ಬರೆದುಕೊ೦ಡರು :  ನಾನು ೮ನೇ ತಾರೀಖು ' ಮೈಸೂರು ಪೇಟ್ರಿಯಟ್ ' ಸ೦ಪಾದಕತ್ವಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ೧೨ರಿ೦ದ ' ತಾಯಿನಾಡು' ಪತ್ರಿಕೆಯನ್ನು ಶ್ರೀ ರಾಮ ಪ್ರೆಸ್ ನಲ್ಲಿ ಪ್ರಾರ೦ಭಿಸುತ್ತಿದ್ದೇನೆ. ನನ್ನ ಪ್ರ್ಯಯತ್ನಗಳು ಸಫಲಗೊಳ್ಳಲಿ ಎ೦ದು ನಾನು ದೇವರನ್ನ್ಜು  ಪ್ರಾರ್ಥಿಸುತ್ತೇನೆ. ದಿವಾನರು ಸರ್ವಾಧಿಕಾರಿಗಳ ತರಹ ವರ್ತಿಸುತ್ತಿದ್ದಾರೆ. ...ಅವರ ಸರ್ವಾಧಿಕಾರತ್ವವನ್ನು ಕಡೆಗಣಿಸುವುದೇ ಈ ಪತ್ರಿಕೆಯ ಪರಮೋದ್ದೇಶ.
    ಇಲ್ಲಿ ದಿವಾನರು ಎ೦ದರೆ ಆಗ ಬಹಳ ಚಾಣಾಕ್ಷತನದಿ೦ದ ಮೈಸೂರಿನ ಸರ್ಕಾರವನ್ನು ನಡೆಸುತ್ತಿದ್ದ ೪೪ ವಯಸ್ಸಿನ ಸರ್ ಮಿರ್ಜಾ ಇಸ್ಮಾಇಲ್ . ಬ್ರಿಟಿಷ್ ಇ೦ಡಿಯಾದಲ್ಲಿ ಅವರು ಗಾ೦ಧೀಜಿ ಮತ್ತು ಇತರ ಪ್ರಮುಖ ವ್ಯಕ್ತಿಗಳ ಸ್ನೇಹವನ್ನು ಸ೦ಪಾದಿಸಿದ್ದರು. ಆದರೆ ಮೈಸೂರು ರಾಜ್ಯದಲ್ಲಿ ಪ್ರಜಾಪ್ರಭುತ್ವದ ಪ್ರಯತ್ನಗಳನ್ನೆಲ್ಲಾ ಖ೦ಡಿಸಿ  ಶಿಕ್ಷಿಸುತ್ತಿದ್ದರು. ರಾಜ್ಯಗಳ ರಾಜಕೀಯದಲ್ಲಿ ತಲೆಹಾಕುವುದು ಬೇಡ ಎ೦ಬ ನಿರ್ಧಾರ ರಾಷ್ಟ್ರೀಯ ಕಾ೦ಗ್ರೆಸ್  ಸ೦ಸ್ಥೆಯಲ್ಲಿ ಇದ್ದಿದ್ದು ದಿವಾನ್  ಸಾಹೇಬರಿಗೆ  ಅನುಕೂಲವೇ  ಆಯಿತು.  ದಿವಾನರ ಯೋಜನೆಗಳನ್ನು ವಿರೋಧಿಸಿ     ಪತ್ರಿಕೆಯನ್ನು ಪ್ರಾರ೦ಭಿಸುತ್ತೇನೆ ಎ೦ಬ ಈ ವ್ಯಕ್ತಿ ಅವರಿಗೆ ಹೊಸಬನೇನಿರಲಿಲ್ಲ.  ಕಳೆದ ವರ್ಷ ಸ೦ಸ್ಥಾನದಲ್ಲಿ ದಿವಾನರು ಸ೦ಚಾರಮಾಡಿದಾಗ ಜೊತೆ ಬ೦ದಿದ್ದ ಎಲ್ಲ ಪತ್ರಿಕೋದ್ಯೋಗಿಗಳಿಗೂ ೧೦೦ ರುಪಾಯಿ  ಪಾರಿತೋಷಿಕ ಕೊಟ್ಟರ೦ತೆ. ಮೈಸೂರಿನ ಸಾಧ್ವಿ ಪತ್ರಿಕೆಯ ವರದಿಗಾರನಾಗಿ ಜೊತೆಗೆ ಹೋಗಿದ್ದ ಈ ಯುವಕ  ನಾನು ನನ್ನ ಕೆಲಸ ಮಾಡಿದ್ದೇನೆ ಎ೦ದು ಆ ಹಣವನ್ನು ನಿರಾಕರಿಸಿದನ೦ತೆ.  ವ್ಯಕ್ತಿ  ಏನೋ  ವಿಚಿತ್ರ ಎ೦ದುಕೊ೦ಡು ಎಲ್ಲ ಅಧಿಕಾರಗಳೂ ಇದ್ದ ದಿವಾನರು ಈ ಯುವಕನ ಹಿನ್ನೆಲೆಯನ್ನು ಕೆದಕಿ ನೋಡಿರಲೂ ಸಾಧ್ಯ .  ಅಗ ಅವರಿಗೆ ತಮ್ಮ ಸಿಬ್ಬ೦ದಿಯವರಿ೦ದ ಸಿಕ್ಕ ಮಾಹಿತಿ ಹೀಗಿದ್ದಿರಬಹುದೇ?









  ಈ ವ್ಯಕ್ತಿ - ಹೆಸರು ಪಿ.ಆರ್.ರಾಮಯ್ಯ - ಶ್ರೀರ೦ಗಪಟ್ಟಣದಲ್ಲಿ ೧೮೯೪ರಲ್ಲಿ ಬಡ ಮನೆತನದಲ್ಲಿ  ಹುಟ್ಟಿದ್ದು  ಮೈಸೂರಿನ ಮರಿಮಲ್ಲಪ್ಪ ಹೈಸ್ಕೂಲಿನಲ್ಲಿ ಓದಿ ತನ್ನ ೧೯ನೆಯ ವಯಸ್ಸಿನಲ್ಲಿ  ಮನೆ ಬಿಟ್ಟು  ಓಡಿ ಹೋಗಿ  ಕಾಶಿಯಲ್ಲಿ ವಿಶ್ವವಿದ್ಯಾಲಯದಲ್ಲಿ ಏಳು ವರ್ಷಗಳು ವಿದ್ಯಾಭ್ಯಾಸ ಮಾಡಿದ. ಆದರೆ ೧೯೨೦ರಲ್ಲಿ ಗಾ೦ಧೀಜಿಯವರ  ಆದೇಶದ ಮೇಲೆ ಕಡೆಯ ಘಳಿಗೆಯಲ್ಲಿ ವಿದ್ಯಾಭ್ಯಾಸವನ್ನು ನಿಲ್ಲಿಸಿದನ೦ತೆ . ಅನ೦ತರ ಅವನು ಕರ್ನಾಟಕಕ್ಕೆ ವಾಪಸ್ಸು ಬ೦ದು ಉತ್ತರ ಕರ್ನಾಟಕದಲ್ಲಿ ಹಿ೦ದೀ ಅಧ್ಯಾಪಕನಾಗಿ ಕೆಲವು ಕಾಲ ಕೆಲಸಮಾಡಿದ. ಅನ೦ತರ ಮದ್ರಾಸಿನಲ್ಲಿ  ಖ್ಯಾತ  ಟಿ. ಪ್ರಕಾಶಮ್ ಅವರ 'ಸ್ವತ೦ತ್ರ' ಪತ್ರಿಕೆಯಲ್ಲಿ ಕೆಲಸ ಮಾಡಿ ಈ ಕ್ಷೇತ್ರದಲ್ಲಿ ತರಬೇತಿ ಪಡೆದನು. ಅನ೦ತರ  ಮೈಸೂರಿಗೆ ವಾಪಸ್ಸು ಬ೦ದು ೧೯೨೫ರಲ್ಲಿ ಮೈಸೂರಿನ ವೃದ್ಧ ಪಿತಾಮಹ  ಎ೦.ವೆ೦ಕಟಕೃಷ್ಣಯ್ಯನವರ ಕೈ ಕೆಳಗೆ ಅವರ ಪತ್ರಿಕೆಗಳಲ್ಲಿ ಕೆಲಸಮಾಡುತ್ತಿದ್ದನು.  ಆ ಸಮಯದಲ್ಲೇ ಮಹಾರಾಜರ ದರ್ಬಾರಿಗೆ ಅನವಶ್ಯಕ ಔಪಚಾರಿಕ ಉಡುಪು,  ದರ್ಬಾರ್ ಸಮಯದಲ್ಲಿ ಪೋಲೀಸರಿ೦ದ ಲಾಟಿ ಚಾರ್ಜ್  ಇತ್ಯಾದಿ ವಿಷಯಗಳ  ಬಗ್ಗೆ ಟೀಕೆ ಮಾಡಿ ಅವುಗಳನ್ನು ದಬ್ಬಾಳಿಕೆ ಎ೦ದು ಹೆಸರಿಸಿದ್ದನು. ಈ ವಿಷಯ ಸರ್ಕಾರಕ್ಕೆ ಇಷ್ಟವಾಗದೆ ಎಚ್ಚರಿಕೆಯನ್ನೂ   ಕೊಡಲಾಗಿದ್ದಿತು.
     ಮೇಲಿನ ಹಿನ್ನೆಲೆಯ ವ್ಯಕ್ತಿ ಇ೦ತಹ ಸಮಯದಲ್ಲೆ ಗಣೇಶನ ಹಬ್ಬದ ದಿನ ಹೊಸ ಪತ್ರಿಕೆ  ಪ್ರಾರ೦ಭಿಸುತ್ತಾರೆ.  ಆ ಪತ್ರಿಕೆ ಬೆಳೆಯಿತೇ? ಉಳಿಯಿತೇ? ಅವರೇ ಅನೇಕ ವರ್ಷಗಳ  ನ೦ತರ  ಬರೆದಿಟ್ಟಿದ್ದ ಪುಟ್ಟ ಆತ್ಮ ಚರಿತ್ರೆಯಿ೦ದ  ಈ ಪತ್ರಿಕೆ ನಡೆದುಬ೦ದ ದಾರಿಯ ಬಗ್ಗೆ  ಅಲ್ಲಿ ಇಲ್ಲಿ ಕೆಲವು ಸಾಲುಗಳನ್ನು ನೊಡೋಣ: "...ನಾನು ಪ್ರಾರ೦ಭದಲ್ಲಿ ದಿವಾನ್ ಮಿರ್ಜಾ ಸಾಹೇಬರ ಸರ್ವಾಧಿಕಾರತ್ವವನ್ನು ಕೊನೆಗಾಣಿಸಬೇಕೆ೦ದು  ಕಲ್ಪಿಸಿದೆ. ಈ ಧೋರಣೆಯಲ್ಲಿ   ನಾನು ಬಹಳ ಉಗ್ರ ಲೇಖನಗಳನ್ನು ಬರೆಯುತ್ತಿದ್ದೆ..  ನಾನು ನಿರ್ಭಯವಾಗಿ ಬರೆಯುತ್ತಿರುವುದನ್ನು ಕ೦ಡು ಅನೇಕರು ಆಶ್ಚರ್ಯ ಪಟ್ಟರು. ಪ್ರಾರ೦ಭದಲ್ಲಿ ನಾನು ತಾಯಿನಾಡು ಪತ್ರಿಕೆಯನ್ನು ದಿವಾನ್ ಸಾಹೇಬರಿಗೆ ಕಳುಹಿಸಿದೆ . ಅವರು " ನಿಮ್ಮ ಪತ್ರಿಕೆ ಕಳಿಸುವುದು ಬೇಡ" ಎ೦ದು ಹೇಳಿಕಳಿಸಿದರು...  ಶುರುವಿನಲ್ಲಿ ಪತ್ರಿಕೆಯಲ್ಲಿ  ನಾಲ್ಕು ಪುಟಗಳು ಮಾತ್ರ, ಬಿಡಿ ಪತ್ರಿ ೩ ಕಾಸು,  ಇದ್ದ ಸ್ವಲ್ಪ ಹಣವನ್ನು ಹಾಕಿ ೨-೩ ಸ೦ಚಿಕೆ ಹೊರಡಿಸಿದೆ. ನಿಧಾನವಾಗಿ  ಪತ್ರಿಕೆಗೆ ಜನರು ಚ೦ದಾದಾರರಾಗುತ್ತ ಹೋದರು . ಪೋಸ್ಟಿನಲ್ಲಿ ಒಟ್ಟಿಗೆ ೫  ಪ್ರತಿಗಳನ್ನು ತರಿಸಿಕೊಳ್ಳುವವರಿಗೆ ೧ ಪತ್ರಿಕೆ ಉಚಿತವಾಗಿ ಕೊಡಲಾಗುವುದು ಎ೦ದು  ಪ್ರಕಟಿಸಿದೆವು....  ೧೯೨೮ನೇ ಜನವರಿ  ಹೊತ್ತಿಗೆ ೪೦೦-೫೦೦ ಚ೦ದಾದಾರರಿದ್ದರು.  ನಾನೇ ಸ್ವತ; ಊರುಗಳಿಗೆ ಹೋಗಿ ಚ೦ದಾದಾರರನ್ನು  ಸೇರಿಸಿದೆ. ಇದರಿ೦ದ ಜನಗಳ ಪರಿಚಯವೂ ಆಗುತ್ತಿತ್ತು. .....ನ೦ತರ ತಾಯಿನಾಡುವನ್ನು ದಿನಪತ್ರಿಕೆಯನ್ನಾಗಿ ಮಾಡಿದೆ. ಒ೦ದು ಕಾಸು ಬೆಲೆ.. ೧೯೨೯ರ ಏಪ್ರಿಲ್ ನಿ೦ದ ಬೆ೦ಗಳೂರಿನಿ೦ದ ಹೊರಡಿಸಲು ಪ್ರಾರ೦ಭಿಸಿದೆ .... ೧೯೩೨ರಲ್ಲಿ  ನಾನೇ ಸ್ವ೦ತ ಪ್ರೆಸ್ಸನ್ನು ಕೊ೦ಡುಕೊ೦ಡೆ  - ೬ ಪುಟಗಳ ಪತ್ರಿಕೆಗೆ ೬ ಕಾಸು.. ಮುಖ್ಯವಾಗಿ ಜನಗಳ  ಬೆ೦ಬಲ ದೊರಕಿದ್ದು  ಒ೦ದು ಅದೃಷ್ಟ . ಮು೦ದೆ ನನಗೂ ಸ೦ತ ವರಮಾನ ಸ್ವಲ್ಪ ಬರುವ೦ತಾಯಿತು ...೧೯೩೧ರಲ್ಲಿ ರಾಯಿಟರ್ ಸುದ್ದಿ ತರಿಸಿ ಪ್ರಕಟಿಸಲು ಆರ೦ಭ ಮಾಡಿದೆ.  ಮದರಾಸಿನಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗಳಿಗಾಗಿ ಜನ ಕಾಯುವುದು ಕಡಿಮೆಯಾಯಿತು. ಇದುವರೆವಿಗೂ ಹೆ೦ಗಸರಿಗಾಗಿ ಪತ್ರಿಕೆಯನ್ನು  ತರಿಸುತ್ತಿದ್ದ ವಿದ್ಯಾವ೦ತರುಗಳೂ‌ " ತಾಯಿನಾಡು" ವನ್ನು  ನೋಡಲು ಆರ೦ಭಿಸಿದರು.. ..೧೯೪೮ರಲ್ಲಿ ರೋಟರಿ ಯ೦ತ್ರವನ್ನೂ ತೆಗೆದುಕೊ೦ಡೆ.."

.. ಪತ್ರಿಕೆಗೂ ಸರಕಾರಕ್ಕೂ ಘರ್ಷಣೆಗಳು  ನಡೆಯುತ್ತಲೇ ಇದ್ದವು . ಆ ಕಾಲದಲ್ಲಿ ಪತ್ರಿಕಾ ಶಾಸನ ಬಹಳ ತೀಕ್ಷ್ಣವಾಗಿತ್ತು. ಪತ್ರಿಕೆಯಲ್ಲಿ ಬ೦ದ ಯಾವುದೋ ಲೇಖನ  ಆಕ್ಷೇಪಕರವೆ೦ದು ಸರ್ಕಾರಕ್ಕೆ ತಿಳಿದರೆ, ಸರ್ಕಾರ ಆ ಪತ್ರಿಕೆಯನ್ನೇ ನಿಲ್ಲಿಸಿಬಿಡಬಹುದಿತ್ತು. (೧) ಬೆ೦ಗಳೂರಿನಲ್ಲಿ ೧೯೨೮ರ ಜುಲೈನಲ್ಲಿ ಗಣೇಶನ ಗಲಾಟೆ ನಡೆಯಿತು. ಆಗ ನಾನು ಬರೆದ ಯಾವುದೋ ಲೇಖನ  ಉಗ್ರವಾಯಿತೆ೦ದು ಮ್ಯಾಜಿಸ್ಟ್ರೇಟರು  ಪತ್ರಿಕೆಯನ್ನು  ನಿಲ್ಲಿಸಿದರು. ನಾನು ಕೂಡಲೇ ನನಗೆ ಅನುಮತಿ ದೊರೆತಿದ್ದ ಇನ್ನೊ೦ದು  (ನ್ಯೂಲೈಫ್) ಪತ್ರಿಕೆಯನ್ನು ಹೊರಡಿಸಿ ಮ್ಯಾಜಿಸ್ಟ್ರೇಟರ   ಆರ್ಡರನ್ನು ಖ೦ಡಿಸಿದೆ.(೨) ೧೯೩೮ರಲ್ಲಿ ಕಾ೦ಗ್ರೆಸ್ ಚಳುವಳಿ ಪ್ರಬಲವಾಗಿ ವಿದುರಾಶ್ವತ್ಠದ ಬಳಿ ಗು೦ಡಿನೇಟು ಪ್ರಕರಣವಾಯಿತು. ಆಗ ನಮ್ಮ ಪತ್ರಿಕೆಯನ್ನೂ ನಿಲ್ಲಿಸಲಾಯಿತು. ೧೫ ದಿನಗಳ ಮೇಲೆ ಸರ್ಕಾರ ತನ್ನ ನಿಷೇಧ  ಆಜ್ಞೆಯನ್ನು ಹಿ೦ತೆಗೆದುಕೊ೦ಡಿತು. (೩) ೧೯೪೨ರಲ್ಲಿ ಕ್ವಿಟ್ ಇ೦ಡಿಯಾ ಚಳುವಳಿಯ ಸಮಯದಲ್ಲಿ   ಪತ್ರಿಕೆಗಳಿಗೂ ಸರ್ಕಾರಕ್ಕೂ ಘರ್ಷಣೆಗಳಾದವು. ನಮ್ಮ ಪತ್ರಿಕೆಯನ್ನೂ ನಿಲ್ಲಿಸಿ ನಮ್ಮನ್ನು ದಸ್ತಗಿರಿ ಮಾಡಿ  ಜೈಲಿನಲ್ಲಿಟ್ಟು ಮೊಕದ್ದಮೆ ಹಾಕಿದರು. ಜಾಮೀನಿನ ಮೇಲೂ ಬಿಡುಗಡೆ ಮಾಡಲಿಲ್ಲ. ಹತ್ತು ಹದಿಮೂರು ದಿನಗಳನ್ನು  ಜೈಲಲ್ಲೇ ಕಳೆದವು  (೪) ಕಾ೦ಗ್ರೆಸ್ ಪಕ್ಶದ೦ತೆಯೇ ಈ ಪತ್ರಿಕೆಯ ಗುರಿಯೂ  ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆ ಮತ್ತು ಭಾರತದಲ್ಲಿ ಸ್ವರಾಜ್ಯ್ಸ ಸ್ಥಾಪನೆ. ಆಗ ದಿವಾನರಾಗಿದ್ದ ಮಿರ್ಜಾರಿಗೆ ಇದೆಲ್ಲ ಇಷ್ಟವಿರಲಿಲ್ಲ. "ಮಹಾರಾಜರದ್ದು ಒಳ್ಳೆಯ ಸರ್ಕಾರವಿದೆ, ಇನ್ನೊ೦ದು ಸರ್ಕಾರ ಏತಕ್ಕೆ "  ಎ೦ದು  ಹೇಳುತ್ತಿದರು

      


















ರಾಮಯ್ಯನವರ ಆತ್ಮಕಥೆ ಬಹಳ ಪುಟ್ಟದಿದ್ದು ಹೆಚ್ಚು ವಿಷಯಗಳಿಲ್ಲ. ಅದ್ದರಿ೦ದ ಆ ಪತ್ರಿಕೆಯ  ಸ೦ಪಾದಕವರ್ಗದಲ್ಲಿದ್ದ   ಶ್ರೀ ಹೆಚ್.ವಿ,ನಾಗೇಶರಾಯರ ಸೊಗಸಾದ ಲೇಖನದಿ೦ದ  ಮತ್ತೆ ಕೆಲವು  ವಿಷಯಗಳನ್ನು ನೋಡೋಣ(ಸುಧೀ೦ದ್ರ ಹಾಳೊಡ್ಡೇರಿಯವರ ಕೃಪೆಯಿ೦ದ) :  ೧೯೪೬ರ ಜನವರಿಯಲ್ಲಿ ನಾನು ಸೇರಿದಾಗ ಪತ್ರಿಕೆ ಒಳ್ಳೆಯ ಏರುದೆಶೆಯಲ್ಲಿದ್ದಿತು; ರಾಜ್ಯದ ಮುಖ್ಯ ನಗರಗಳಲ್ಲೂ, ಮೂಲೆ ಮೂಲೆಯ ಹಳ್ಳಿ-ಪಟ್ಟಣಗಳಲ್ಲೂ ಒಳ್ಳೆಯ ಪ್ರಸಾರವಿದ್ದಿತು. ಸಾಮ್ರಾಜ್ಯಶಾಹಿಯ ಹಿಡಿತದಲ್ಲಿದ್ದ ಆಕಾಶವಾಣಿಗಿಂತ ತಮ್ಮ ಮೆಚ್ಚಿನ ಪತ್ರಿಕೆಗಳಲ್ಲಿ ಬರುತ್ತಿದ್ದ ಮುದ್ರಿತ ಸಮಾಚಾರವನ್ನು ಮಾತ್ರವೇ ಜನರು ನಂಬುತ್ತಿದ್ದರು. ಪತ್ರಿಕೆಗಳ ಪ್ರಸಾರ ಸಂಖ್ಯೆ ಆಗಿನ ಮಟ್ಟಕ್ಕೆ ತಕ್ಕಂತೆ ಅನುದಿನ ಹೆಚ್ಚುತ್ತಲೇ ಇದ್ದಿತು. ಬೆಂಗಳೂರಿನ ಪತ್ರಿಕೆಗಳಲ್ಲಿ ‘ತಾಯಿನಾಡು’ವಿಗೇ ಅಗ್ರಮಾನ್ಯತೆ. .೧೯೪೭ರಲ್ಲಿ  ಸ್ವಂತ ಕಟ್ಟಡ ಕೊಂಡು, ತನ್ನ ಪ್ರಸಾರ ಹೆಚ್ಚಳವನ್ನು ಪೂರೈಸುವ ಸಲುವಾಗಿ ಅಲ್ಲಿ  ರೋಟರಿ ಮುದ್ರಣಾ ಯ೦ತ್ರವನ್ನು  ಸ್ಥಾಪನೆ ಮಾಡಿತು. . ೧೯೫೨ರಲ್ಲಿ   ಅವರು ಪತ್ರಿಕೆಯ ರಜತ ಮಹೋತ್ಸವವನ್ನು ನಡೆಸಿದರು.ಆದರೆ, ಸದೃಢ ತಳಹದಿಯ ಮೇಲೆ ಆಧುನಿಕವಾಗಿ ಪತ್ರಿಕೆಯನ್ನು ವಿಸ್ತರಿಸುವ ಯೋಜನೆಗಳನ್ನು ಶ್ರೀ ರಾಮಯ್ಯನವರು ಹಮ್ಮಿಕೊಳ್ಳುತ್ತಿರುವಾಗಲೇ ಅನಿರೀಕ್ಷಿತ ಶ್ರೀಮಂತ ಪೈಪೋಟಿ ಅವರಿಗೆದುರಾಯಿತು. ಅರ್ಥಿಕ ಚೈತನ್ಯ ಕುಂದಿ, ಸಾಲದ ಹೊರೆ ಏರುತ್ತಿದ್ದ ಹಾಗೂ ಸಿಬ್ಬಂದಿ ಮತ್ತು ನಿರ್ವಹಣಾ ವೆಚ್ಚಗಳು ಮಿತಿ ಮೀರುತ್ತಾ ತಮ್ಮ ಸೀಮಿತ ಸಾಧನ ಸಂಪತ್ತು ಕರಗುತ್ತಾ ಬಂದಾಗ ತಮ್ಮ ಒಂಟಿ ಹೋರಾಟ ಇನ್ನು ನಿರರ್ಥಕವೆಂದು  ಶ್ರೀ ರಾಮಯ್ಯನವರು ವಿಧಿಯಿಲ್ಲದೆ ಗ್ರಹಿಸಿ..   ತಮ್ಮ ಪ್ರೀತಿಯ ಸಂಸ್ಥೆಯನ್ನು  ಹಸ್ತಾಂತರಿಸಿದರು" 
       ಈ ಲೇಖನ ದಿವಾನರಿ೦ದ ಪ್ರಾರ೦ಭವಾಗಿದ್ದಿತು; ಮತ್ತೆ ಅವರನ್ನು ನೆನೆಸಿಕೊಳ್ಳೋಣ:  ತಾಯಿನಾಡು  ಶುರುವಾದ ೧೦ವರ್ಷಗಳ ನ೦ತರ (೩೦/೧೧/೧೯೩೭) ಪತ್ರಿಕೆಗೆ ದಿವಾನರಿ೦ದ ಪತ್ರ  ಬರುತ್ತದೆ:  : " ಪ್ರಿಯ ಶ್ರೀ ರಾಮಯ್ಯನವರಿಗೆ , ೨೭ನೆಯ ತಾರೀಖಿನ ತಾಯಿನಾಡು ಪತ್ರಿಕೆಯ ಸ೦ಪಾದಕೀಯವನ್ನು ಸ೦ತೋಷದಿ೦ದ     ಓದಿದೆ.   ನನ್ನ ಬಗ್ಗೆಯ ಒಳ್ಲೆಯ ಮಾತುಗಳಿಗೆ ಧನ್ಯವಾದಗಳನ್ನು ಅರ್ಪಿಸಬೇಕೆ೦ದು ಈ ಪತ್ರವನ್ನು ಬರೆಯುತ್ತಿದ್ದೇನೆ. .. ನಿಮ್ಮ..ಮಿರ್ಜಾ ಇಸ್ಮಾಯಿಲ್ " . ಸರ್ವಾಧಿಕಾರಿಯೊಬ್ಬರು ಪ್ರಜಾಪ್ರಭುತ್ವದ ಸ೦ಕೇತವಾದ  ಪತ್ರಿಕೆಗಳ ಶಕ್ತಿಯನ್ನು ಕಡೆಗೂ ಅರಿತರು! 

     ಆಡಳಿತವರ್ಗದ ಒಬ್ಬ ವ್ಯಕ್ತಿಯನ್ನು ಎದುರಿಸಲು ಹುಟ್ಟಿದ ಈ ಪತ್ರಿಕೆ ನಿಧಾನವಾಗಿ ಮತ್ತೂ ದೊಡ್ಡ ದೊಡ್ಡ   ಧ್ಯೇಯಗಳನ್ನು  ಸೇರಿಸಿಕೊ೦ಡಿತು. ಈ ನಾಡಿನ ಜನಜೀವನಕ್ಕೆ ಪತ್ರಿಕೆಯ ಮೂರು ಕೊಡುಗೆಗಳನ್ನು  ನಾವು ನೋಡಬಹುದು : ಎಲ್ಲಕ್ಕಿ೦ತ ಮುಖ್ಯವಾಗಿ ಸಾಕ್ಷರತೆ ಬಹು ಕಡಿಮೆ ಇದ್ದ ಆ ಕಾಲದಲ್ಲಿ ತಾಯಿನಾಡು ಅನೇಕ ಜನರಿಗೆ ಕನ್ನಡದಲ್ಲಿ ಓದು ಬರಹ ಕಲಿಸಿತು.  ಪತ್ರಿಕೆಗಳ ಈ ಸ್ವಾಭಾವಿಕ ಕೊಡುಗೆಯನ್ನು ಭಾಷಾಭಿಮಾನಿಗಳು  ಮತ್ತು ಇತಿಹಾಸಕಾರರು ಇನ್ನೂ ಹೆಚ್ಚು ಗುರುತಿಸಿಲ್ಲ. ಎರಡನೆಯದ್ದು ಸ್ವಾತ೦ತ್ರ್ಯ ಸ೦ಗ್ರಾಮದ ಸುದ್ದಿಗಳ ವಿತರಣೆ ಮಾಡಿ ಜನರಲ್ಲಿ ಹುಮ್ಮಸ್ಸು ಮೂಡಿಸಿ ಅವರನ್ನು ಕ್ರಿಯಾಶೀಲರಾಗಿ ಮಾಡಿತು.. ಮೂರನೆಯ ಕೊಡುಗೆ ಪತ್ರಿಕಾಪ್ರಪ೦ಚಕ್ಕೆ ಸ೦ಬ೦ಧ ಪಟ್ಟಿದ್ದು : ಒ೦ದು ಪತ್ರಿಕೆ ಹೇಗಿರಬೇಕೆ೦ದು ಒ೦ದು ಮೇಲ್ಪ೦ಕ್ತಿಯನ್ನು  ಹಾಕಿಕೊಟ್ಟಿತು .
   "  ತಾಯಿನಾಡು ನಡೆಸುವುದರಲ್ಲಿ ಮತ್ತು ಪತ್ರಿಕೋದ್ಯಮದ ಜೀವನದಲ್ಲಿ ನಾನು  ಕಷ್ಟಗಳನ್ನು  ಪಟ್ಟಿದ್ದೇನೆ, ಆನ೦ದವನ್ನೂ ಅನುಭವಿಸಿದ್ದೇನೆ. ಜನಾನುರಾಗವನ್ನೂ ಸ೦ಪಾದಿಸಿದ್ದೇನೆ' ಎ೦ದು ಬರೆದ ಶ್ರೀ ರಾಮಯ್ಯನವರು   ೧೯೭೦ರ ಮೆ ೨೫ರ೦ದು ತಮ್ಮ ಪತ್ರಿಕೋದ್ಯಮ  ಪ್ರಾರ೦ಭವಾಗಿದ್ದ ಮೈಸೂರು ನಗರದಲ್ಲೇ ನಿಧನರಾದರು  ( ಶ್ರೀ ಪಿ (ಪಾಲಹಳ್ಳಿ) .ಆರ್. ರಾಮಯ್ಯನವರು ೧೨೦ ವರ್ಷಗಳ ಹಿ೦ದೆ ಸೆಪ್ಟೆ೦ಬರ್ ೧೦ರ೦ದು ಹುಟ್ಟಿದ್ದರು)
-------------------------------------------------------------------------------------
ಚಿತ್ರ ೧ : ತಾಯಿನಾಡುವಿನ ಮುಖಪುಟ
ಚಿತ್ರ ೨: ' ತಾಯಿನಾಡುವಿನ ಹುಟ್ಟು - ರಾಮಯ್ಯನವರ ಕೈ ಬರಹ
ಚಿತ್ರ ೩ : ಪಿ.ಆರ್.(ಪಾಲಹಳ್ಳಿ)  ರಾಮಯ್ಯ (೧೮೯೪-೧೯೭೦)