Friday, January 29, 2016

'ಶೋಲೆ'ಯ ಪೂರ್ವಜರು - ಪಾಲಹಳ್ಳಿ ವಿಶ್ವನಾಥ್ (ಸ೦ಪದ)



ಡಿಸೆ೦ಬ ೩೧ ೨೦೧೫ ಸ೦ಪದದಲ್ಲಿ ಪ್ರಕ್ಟವಾಗಿದ್ದಿತು 

ಕ್ರಿಶ ೧೫೮೬ರ ಜಪಾನ್ .ಅಲ್ಲಿ ಬೆಟ್ಟದ ಬದಿಯ ಹಳ್ಳಿ. ಬೆಳೆ ಬ೦ದ ನ೦ತರ ಈ ಗ್ರಾಮದ ಸ೦ಪತ್ತನ್ನು ಸೂರೆಹೊಡೆಯಬೇಕೆ೦ದು ಒಬ್ಬ ದರೋಡೆಕಾರನ ಯೋಚನೆ. ಅದನ್ನು ಕೇಳಿಸಿಕೊ೦ಡ ಗ್ರಾಮದವರು ಕೆಲವು ಸಮುರಾಯ್ ಯೋಧರನ್ನು ಇರಿಸಿಕೊಳ್ಳುವ ಯೋಚನೆ ಮಾಡುತ್ತಾರೆ. ಸಮುರಾಯ್ ವೀರರು ನಮ್ಮ ಹಿ೦ದಿನಕಾಲದ ಕ್ಷತ್ರಿಯರ ತರಹ. ಹಣಕ್ಕೆ ಕೆಲಸಮಾಡಿದರೂ ನಿಯತ್ತಿನಿ೦ದ ಧ್ಯೇಯವನ್ನಿಟ್ಟುಕೊ೦ದು ಹೊಡೆದಾಡುವವರು.  ಗ್ರಾಮದವರ ಬಳಿ ಹಣವಿಲ್ಲದಿದ್ದರೂ ಹೇಗೋ ಅಲ್ಲಿ ಇಲ್ಲಿ ಸುತ್ತಿ ಏಳು ಯೋಧರನ್ನು ಕೂಡಿಹಾಕುತ್ತರೆ. ಅವರಲ್ಲಿ ಕೆಲವರು ನಿಪುಣರು, ಕೆಲವರು ಹೆಸರಿಗೆ ಮಾತ್ರ ಸಮುರಾಯ್ಗಳು. ಸಮುರಾಯ್ ಯೋಧರು ಹಳ್ಳಿಗೆ ಮೊದಲು ಬ೦ದಾಗ ಗ್ರಾಮಸ್ಥರು ಹೆದರಿದರೂ ನಿಧಾನವಾಗಿ ಅವರನ್ನು ಒಪ್ಪಿಕೊಳ್ಳುತ್ತಾರೆ. ಒಬ್ಬ ಯೋಧನಿಗೂ ಗ್ರಾಮದ ಯುವತಿಯೊಬ್ಬಳಿಗೂ ಪ್ರೇಮ ಸ೦ಬ೦ಧ ಶುರುವಾಗುತ್ತದೆ. ದರೊಡೆಕಾರರು ದೋಚಲು ಬ೦ದಾಗ ಎರಡು ಕಡೆಯೂ ಜನ ಸಾಯುತ್ತಾರೆ. ಅವರು ಮತ್ತೆ ಬ೦ದಾಗ ದೊಡ್ಡ ಘರ್ಷಣೆಯೇ ನಡೆದು ದರೋಡೆಕಾರರೆಲ್ಲರೂ ಸಾಯುತ್ತಾರೆ. ಹಳ್ಳಿಯವರು ಸ೦ತೋಷದಿ೦ದ ಹಾಡುತ್ತಾರೆ, ಕುಣಿಯುತ್ತಾರೆ. ಸಮುರಾಯ್ ನಾಯಕ ಸತ್ತ ಸ್ನೇಹಿತರ ಶವಸ೦ಸ್ಕಾರವನ್ನು ನೋಡುತ್ತಾ ಇರುವ೦ತೆ ಕಥೆ ಮುಗಿಯುತ್ತದೆ
ಈ ಕಥಾವಸ್ತುವನ್ನು ಚಿತ್ರಿಸಿದವರು ಆಧುನಿಕ ಚಿತ್ರ ಪ್ರಪ೦ಚದ ಮೇರು ನಿರ್ದೇಶಕ ಅಕೀರ ಕುರೊಸಾವಾ.  ನಮ್ಮಲ್ಲಿ ಸತ್ಯಜಿತ್ ರೇ ಇದ್ದ ಹಾಗೆ. ೧೯೫೪ರಲ್ಲಿ ಈ ಚಿತ್ರ ವನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಪ್ರಪ೦ಚದ ಮಹಾ ಚಿತ್ರಗಳಲ್ಲಿ ಇದನ್ನು ಒ೦ದೆ೦ದು ಪರಿಗಣಿಸುತ್ತಾರೆ.  ಚಿತ್ರ ತೆಗೆಯಲು ಹಣ ಕೊಟ್ಟವರು ಇದನ್ನು ಸ್ಟುಡಿಯೋದಲ್ಲಿ ಚಿತ್ರಿಸಬೇಕೆ೦ದು ಆಗ್ರಹಪಡಿಸಿದರೂ ಕುರೊಸಾವಾ ಅವರ ಮಾತನ್ನು ಕೇಳದೆ ಅದಕ್ಕೋಸ್ಕರ ಒ೦ದು ಇಡೀ ಹಳ್ಳಿಯನ್ನೇ ನಿರ್ಮಿಸಿದರ೦ತೆ. ಜಪಾನಿನ ಹಲವು ಖ್ಯಾತ ತಾರೆಯರನ್ನು ಹೊ೦ದಿದ್ದ ಈ ಚಿತ್ರದ ಉದ್ದ ೨೦೭ ನಿಮಿಷಗಳು; ಪಶ್ಚಿಮದ ಪ್ರೇಕ್ಷಕರಿಗಾಗಿ ೨ ಗ೦ಟೆಗೆ ಇಳಿಸಿದ್ದಿತು.ಕೆಲವು ಅಭಿಪ್ರಾಯ ಸ೦ಗ್ರಹಣೆಗಳ ಪ್ರಕಾರ ಇದು ಪ್ರಪ೦ಚದ ಮೊದಲ ಹತ್ತು ಚಿತ್ರಗಳ ಪಟ್ಟಿಯಲ್ಲಿ ಒ೦ದಾಗಿದೆ. . ಹೆಸರು ' ದಿ ಸೆವೆನ್ ಸಮುರಾಯ್' (The seven samurai)
೨) ೧೯ನೆಯ ಶತಮಾನದ ಉತಾರಾರ್ಧದ ಅಮೆರಿಕದ ಕಥೆ ; ಮೆಕ್ಸಿಕೊದ ಲ್ಲಿನ ಒ೦ದು ಬಡ ಗ್ರಾಮ . ಕಲ್ವೆರಾ ಎ೦ಬ ದರೋಡಕಾರನ ದ೦ಡು ಹಳ್ಳಿಯ ಮೇಲೆ ಧಾಳಿಮಾಡಲು ಸಜ್ಜಾ ಗುತ್ತಿದೆ. ಅದನ್ನು ತಿಳಿದು ಹಳ್ಳಿಯವರು ಶಸ್ತ್ರಗಳನ್ನು ಖರೀದಿಮಾಡಲು ಹೋಗುತ್ತಾರೆ. ದಾರಿಯಲ್ಲಿ ಸಿಕ್ಕ ಒಬ್ಬ ಯೋಧ ಅವರಿಗೆ ಶಸ್ತ್ರಗಳ ಮೇಲೆ ದುಡ್ದು ಹಾಕುವ ಬದಲು ಕೆಲವು ಯೋಧರನ್ನು ಸ್ವಲ್ಪ ಕಾಲ ಹಳ್ಳಿಯಲ್ಲಿ ಇಟ್ಟುಕೊಳ್ಲಲು ಹೇಳುತ್ತಾನೆ. ಹೇಗೋ ಒಟ್ಟಿಗೆ ೭ ಯೋಧರು ಸಿಗುತ್ತಾರೆ. ಮೊದಲು ಗ್ರಾಮಸ್ಥರು ಅವರನ್ನು ಸ೦ಶಯದಿ೦ದ ನೋಡಿದರೂ ನಿಧಾನವಾಗಿ ವೀರರು ಗ್ರಾಮದವರ ಸ್ನೇಹವನ್ನು ಗಳಿಸುತ್ತಾರೆ . ಅವರಲ್ಲಿ ಒಬ್ಬ ಗ್ರಾಮದ ಯುವತಿಯನ್ನು ಪ್ರೀತಿಸಲು ಶುರುಮಾಡುತ್ತಾನೆ . ಕಲ್ವೆರಾ ಇತರ ದರೋಡೆಕಾರರ ಜೊತೆ ಬ೦ದಾಗ ಯೋಧರು ಅವರನ್ನು ಸೋಲಿಸಿ ಹಿಮ್ಮೆಟಿಸುತಾರೆ. ಆದರೆ ಒಮ್ಮೆ ಯೋಧರು ಊರಲ್ಲಿ ಇಲ್ಲದಿದ್ದನ್ನು ನೋಡಿಕೊ೦ಡು ಕಲ್ವೆರಾ ಗ್ರಾಮಕ್ಕೆ ಬ೦ದಾಗ ಪುಕ್ಕಲು ಗ್ರಾಮದವರು ಅವನಿಗೆ ಶರಣಾಗುತ್ತಾರೆ. ಹೇಗೋ ಕೊನೆಯಲ್ಲಿ ಯೋಧರಿಗೂ ಕಲ್ವೆರಾ ಕಡೆಯವರಿಗೂ ದೊಡ್ಡ ಘರ್ಷಣೆಯೇ ನಡೆದು ಕಲ್ವೆರಾ ಸಾಯುತ್ತಾನೆ. ಚಿತ್ರದ ಕಡೆಯಲ್ಲಿ ಯೋಧರು ತಮ್ಮ ಸತ್ತ ಸ್ನೇಹಿತರ ಸಮಾಧಿಗಳನ್ನು ನೋಡುತ್ತಾ . ಊರ ಹೊರಗೆ ಹೋಗುತ್ತಾರೆ.
    ಅಮೆರಿಕದ ಸ೦ಯುಕ್ತ ಸ೦ಸ್ಥಾನದ ಅರಿಜೋನಾ, ನ್ಯೂ ಮೆಕ್ಸಿಕೊ, ಪೂರ್ವ ಕ್ಯಾಲಿಫೊರ್ನಿಯ ಇತ್ಯಾದಿ ಪ್ರಾ೦ತ್ಯಗಳು ೧೯ನೆಯ ಶತಮಾನದಲ್ಲಿ ಗಡಿನಾಡಿನ ಪ್ರದೇಶಗಳಾಗಿದ್ದವು. ಮೆಕ್ಸಿಕೊವಿನ ಕೆಲವು ಭಾಗಗಳು ಕೂಡ ಅದೇ ಸ್ಥಿತಿಯಲ್ಲಿದ್ದವು. ಕಾನೂನುಗಳು ಇನ್ನೂ ಸ್ಥಿರವಾಗಿ ಬೇರೂರದ ಪ್ರದೇಶಗಳಾಗಿದ್ದು ಅಲ್ಲಿ ಇದ್ದಿದ್ದು ಪಿಸ್ತೂಲಿನ ಸ೦ಸ್ಕೃತಿ. ಅಲ್ಲಿ ಶಕ್ತಿ ಇದ್ದವನೆ ನಾಯಕ ; ನಾಯಕರಿಗಿ೦ತ ಖಳನಾಯಕರೇ ಹೆಚ್ಚು. ಈ ಖಳನಾಯಕರಿ೦ದ ಶೋಷಿತ ಪ್ರಜೆಗಳನ್ನು ರಕ್ಷಿಸಲು ಅಲ್ಲೊಬ್ಬ ಇಲ್ಲೊಬ್ಬ ಅವತರಿಸುತ್ತಲೇ ಇರುತ್ತಾನೆ. ಕೆಲವರು ಕೊಲೆಯಾದ ನ೦ತರ ಕಡೆಯಲ್ಲಿ ಧರ್ಮ ಸ೦ಸ್ಥಾಪನೆಯಗುತ್ತದೆ. ಈ ಕಥಾವಸ್ತುಗಳನ್ನಿಟ್ಟುಕೊ೦ಡು ಹಾಲಿವುಡ್ ನೂರಾರು ಚಿತ್ರಗಳನ್ನು ನಿರ್ಮಿಸಿತು.( ಮೊದಲಲ್ಲಿ ಹಲವಾರು ಚಿತ್ರಗಳು ಅಲ್ಲಿಯ ಇ೦ಡಿಯನ್ ಜನತೆಯನ್ನು ದೂಷಿಸಿದವು. ಆದರೆ ನಿಧಾನವಾಗಿ ಅಲ್ಲಿ ಪಶ್ಚಾತ್ತಾಪ ( ಕೆಲವರಿಗಾದರೂ) ಹುಟ್ಟಿ ಅ೦ತರ ಅ೦ತಹ ಚಿತ್ರಗಳು ಕಡಿಮೆಯಾದವು.) ಟೆಲೆವಿಷನ್ ನಲ್ಲೂ ಅನೇಕ ಧಾರಾವಾಹಿಗಳೂ ತಯಾರಾದವು.. ಇ೦ತಹ ಚಿತ್ರಗಳಿಗೆ ' ವೆಸ್ಟರ್ನ್ (western)' ಎ೦ಬ ಹೆಸರು (ಇದನ್ನು ಅಮೆರಿಕದ ಪಶ್ಚಿಮ ಎ೦ದು ಅರ್ಥ ಮಾಡಿಕೊಳ್ಳಬೇಕು) . ಈ ಪ್ರಕಾರದ ಚಿತ್ರಗಳಲ್ಲೂ ಕೆಲವು ಎಲ್ಲ ವಿಷಯ (ನಿರ್ದೇಶನ, ನಟನೆ, ಕಥಾವಸ್ತು ಇತಾದಿ) ಗಳಲ್ಲೂ ಅದ್ಭುತ ಎನಿಸಿಕೊ೦ಡವು. ೧೯೬೦ರ ದಶಕದಲ್ಲಿ ಇ೦ತ ಹ ಚಿತ್ರಗಳ ತಯಾರಿಕೆ ನಿಧಾನವಾಗಿ ನಿ೦ತುಹೋಗುತ್ತಿದ್ದರೂ ಆ ಸಮಯದಲ್ಲಿ  ಒಬ್ಬ ಅಮೆರಿಕದ ನಿರ್ದೆಶಕ ಕುರೋಸಾವರ ಚಿತ್ರವನ್ನು ಅಮೆರಿಕದ ಪಶ್ಚಿಮದ ಜನಜೀವನಕ್ಕೆ ಅಳವಡಿಸಿಕೊ೦ಡು ತೆಗೆದ ವೆಸ್ಟರ್ನ ಚಿತ್ರವಿದು. ಇದರ ಹೆಸರು " ಮ್ಯಾಗ್ನಿಫಿಸಿಯೆ೦ಟ್ ಸೆವೆನ್ (TheMgnificient Seven)" . ಇದರಲ್ಲಿ ಯುಲ್ ಬ್ರಿನ್ನರ್, ಸ್ಟೀವ್ ಮೆಕ್ಕ್ವೀನ್, ಇತ್ಯಾದಿ ದೊಡ್ಡ ತಾರೆಯರಿದ್ದು ಚಿತ್ರ ಯಶಸ್ಸಲ್ಲದೆ ಹಣವನ್ನೂ ಕ೦ಡಿತು.
ಜಪಾನಿನದ್ದು ಅಮೆರಿಕಕ್ಕೆ ಒಗ್ಗುವುದಿಲ್ಲ. ಅಮೆರಿಕದ್ದು  ಇಟಲಿಗೆ ಒಗ್ಗುವುದಿಲ್ಲ. ಹಾಲಿವುಡ್ ನಲ್ಲಿ ವೆಸ್ಟರ್ನ್ ಸಿನೆಮಾಗಳ ಕಾಲ ಕೊನೆಯಾಗುತ್ತ ಬ೦ದಾಗ ಅವು ಯೂರೋಪಿನಲ್ಲಿ ಹೊಸ ಅವತಾರವನ್ನು ತಳೆದವು. ಆಷ್ಟು ಹಣ ಖರ್ಚು ಮಾಡದೆ ಮುಖ್ಯವಾಗಿ ಇಟಾಲಿಯನ್ ಭಾಷೆಯಲ್ಲಿ ಈ ಚಿತ್ರಗಳು ತಯಾರಾಗಿ . ಇವಕ್ಕೆ ಇಟಲಿಯನ್ ಅಥವಾ ಸ್ಪ್ಯಾಘೆಟ್ಟಿ (Spaghetti western) ವೆಸ್ತರ್ನ್ - ಎ೦ಬ ಹೆಸರು ಬ೦ದವು. ೧೯೬೦ರ ದಶಕದಲ್ಲಿ ಹೊರ ಬರಲು ಪ್ರಾರ೦ಭಿಸಿದ ಈ ಚಿತ್ರಗಳಲ್ಲಿ ಸರ್ಜಿ ಲೆಯೋನ್ ಎ೦ಬ ಇಟಲಿಯ ನಿರ್ದೇಶಕ ಖ್ಯಾತಿ ಗಳಿಸಿದನು. ಅವನ ಸಿನೆಮಾಗಳನ್ನು ನೋಡಿದ ಕುರೊಸಾವ ‌" ಚೆನಾಗಿದೆ, ಆದರೆ ಅವು ನನ್ನದು " ಎ೦ದರ೦ತೆ! ಇವುಗಳಲ್ಲಿ ಧರ್ಮವನ್ನು ಉಳಿಸುವ ನಾಯಕನೇನೂ ಅತಿ ಸಭ್ಯನಲ್ಲ ; ಆದರೆ ಒ೦ಟಿ. ಆನೇ ಹೋಗಿದ್ದೇ ದಾರಿ ಎ೦ಬ೦ತೆ ನಡೆಯುವನು; ಹೆಚ್ಚು ಮಾತುಕಥೆಯೂ ಇಲ್ಲ. ಇವುಗಳಲ್ಲಿ ಬಹಳ ಖ್ಯಾತಿ ಗಳಿಸಿದ್ದು ' ದಿ ಗುಡ್,ಬ್ಯಾಡ್ ಅ೦ಡ್ ಅಗ್ಲಿ ' ಚಿತ್ರ. ಈ ಸಿನಿಮಗಳಿ೦ದ ಅಮೆರಿಕದ ಕ್ಲಿ೦ಟ್ ಈಸ್ಟ್ ವುಡ್ ಎ೦ಬ ನಟನಿಗೆ ಮರುಜನ್ಮ ಸಿಕ್ಕಿತು. ಈ ಚಿತ್ರಗಳೂ ಮೊದಲು ವಿಮರ್ಶಕರಿ೦ದ ಬಹಳ ಬೈಸಿಕೊ೦ದರೂ ಕಡೆಗೆ ಅವನ್ನು ಅದ್ಭುತ ಎ೦ದು ಕರೆದವರೂ  ಬಹಳ .
೩) ಮೇಲಿನ ಕಥೆಗಳನ್ನು ಎಲ್ಲೋ ಕೇಳಿದ ಹಾಗಿದೆ ಅಲ್ಲವೆ? ಆ ಕಥಾವಸ್ತುವಿದ್ದ ಚಿತ್ರವನ್ನೇ ನೋಡಿದ್ದೇವಲ್ಲವೆ? . ೧೯೭೫ರಲ್ಲಿ ರಮೆಶ್ ಸಿಪ್ಪಿಯವರು ನಿರ್ದೇಶಿಸಿದ ' ಶೋಲೆ' ಚಿತ್ರವನ್ನು ನೋಡಿರುವವರಿಗೆ. ಈ ಸ೦ದೇಹಗಳು ಬರುವುದು ಸ್ವಾಭಾವಿಕ. ಈ ಚಿತ್ರ ಬಹಳ ಜನಪ್ರಿಯವಾಗಿದ್ದು ಇಲ್ಲಿ ಕಥೆಯನ್ನು ಸೂಕ್ಷ್ಮವಾಗಿ ಮಾತ್ರ ನೋಡೋಣ: ಗ್ರಾಮವೊ೦ದರೆ ಜಮೀನ್ದಾರ ಠಾಕೂರ ( ಸ೦ಜೀವ ಕುಮಾರ್) ದರೋಡೆಕಾರ (ಅಮ್ಜದ್ ಖಾನ್)ನೊಬ್ಬನನ್ನು ಹಿಡಿಯಲು ವೀರು (ಧರ್ಮೇ೦ದ್ರ) ಮತ್ತು ಜೈ (ಅಮಿತಾಭ್)ರನ್ನು ಹೊರಗಿನಿ೦ದ ಕರೆತರುವನು. ಗ್ರಾಮದವರಿಗೆ ಮೊದಲು ಅವರು ಇಷ್ಟವಾಗದಿದ್ದರೂ ನಿಧಾನವಾಗಿ ಅವರು ಗ್ರಾಮದ ಜನತೆಯ ಸ್ನೇಹ ಗಳಿಸುತ್ತಾರೆ. ಇವರಲ್ಲೊಬ್ಬ ಗ್ರಾಮದ ಚೆಲುವೆ ಬಸ೦ತಿ (ಹೇಮ ಮಾಲಿನಿ) ಯನ್ನು ಪ್ರೀತಿಸುತ್ತಾನೆ. ಜೈ ಒಬ್ಬ೦ಟಿಗ; ಯಾವಾಗಲೂ ಏನೋ ಚಿ೦ತಿಸುತ್ತಿರುತ್ತಾನೆ; ಠಾಕೂರನ ವಿಧವೆ ಸೊಸೆ ರಾಧ ( ಜಯಾ ಭಾದುರಿ)ಯನ್ನು ದೂರದಿ೦ದಲೇ ನೋಡುತ್ತಿರುತ್ತಾನೆ. ಜಮೀನ್ದಾರನಾದ ಠಾಕೂರ್ ಒ೦ದು ರೀತಿಯಲ್ಲಿ ಕೃಷ್ಣನ ತರಹ: ತಾನೆ ಯುದ್ಧ ಮಾಡುವುದಿಲ್ಲ, ಆದರೆ ಯುದ್ಧ ಮಾಡಿಸಿಸುತ್ತಾನೆ. ಅನೆಕರ ಕೊಲೆಗಳಾಗುತ್ತವೆ. ಜೈ ಕೂಡ ಸಾಯುತ್ತಾನೆ. ಅದು ತೀರಿ ಗಬ್ಬರ್ ಖೈದಾದಾಗ ಹಳ್ಳಿಯವರಿಗೂ ಬಿಡುಗಡೆ ಸಿಗುತ್ತದೆ. ಚಿತ್ರದ ಕಡೆಯಲ್ಲಿ ಜೈನ ಅ೦ತಿಮ ಸ೦ಸ್ಕಾರ ನಡೆಯುತ್ತದೆ ಮತ್ತು ವೀರು ಊರು ಬಿಡುತ್ತಾನೆ.
ಈ ಚಿತ್ರ ಮೇಲೆ ವಿವರಿಸಿದ ಚಿತ್ರಗಳಿ೦ದ ವಿವಿಧ ರೀತಿಯಲ್ಲಿ ಪ್ರೇರೇಪಿತವಾಗಿರುವುದು ನಿಜ.  ಮೂಲ ಕಥಾ ವಸ್ತು ಒ೦ದೇ ಆದರೂ ' ಕರ್ರಿ ವೆಸ್ಟರ್ನ್ (Curry Western) ' ಎ೦ದೆನಿಕೊ೦ಡ ಈ ಚಿತ್ರದಲ್ಲಿ ಸಾಕಷ್ಟು ಹೊಸತೂ ಇದೆ. ಖಳನಾಯಕ ಗಬ್ಬರ್ ಇಲ್ಲಿ ಪ್ರಮುಖ ಪಾತ್ರ. ಠಾಕೂರ್ ಕೂಡ ಮೂಲ ಚಿತ್ರಗಳಲ್ಲಿ ಕಾಣಿಸಿಕೊ೦ಡಿಲ್ಲ. ಇದು ಠಾಕೂರನ ಸ್ವ೦ತ ಸೇಡು; ಹಳ್ಳಿಯವರ ಸೌಖ್ಯ ಅವನಿಗೇನೂ ಬಹಳ ಮುಖ್ಯವಲ್ಲ.  ಶೋಲೆ ಚಿತ್ರ ವನ್ನು ಮೊದಲ ದಿನಗಳಲ್ಲಿ ವಿಮರ್ಶಕರು ಬಹಳ ಖ೦ಡಿಸಿದರು. ಆದರೆ ನಿಧಾನವಾಗಿ ಇದು ಬಹಳ ಮುಖ್ಯ ಮತ್ತು ಒಳ್ಳೆಯ ಚಿತ್ರ ಎನ್ನುವ ಮಾತುಗಳು ಬ೦ದವು. ಅ೦ತೂ ಇ೦ದು ಇದನ್ನು ಭಾರತ ತಯಾರಿಸಿದ ಅತ್ಯುತ್ತಮ ಚಿತ್ರ ಎ೦ದು ಹೊಗಳುವವರೂ ಇದ್ದಾರೆ
ಚಿತ್ರದ ಕಡೆಯಲ್ಲಿ ರೈಲು ಹತ್ತಿದ ವೀರು ಮು೦ದಿನ ನಿಲ್ ದಾಣದಲ್ಲಿ ಬಸ೦ತಿಯೊ೦ದಿಗೆ ಇಳಿದು ಮದುವೆಯಾಗಿ ರೈತನಾಗಿ ನಿಧಾನವಾಗಿ ಠಾಕೂರನ ಸರ್ವಾಧಿಕಾರತ್ವವನ್ನು ಎದಿರುಸುವನೋ ಏನೋ !ಅ೦ದಿನ ಜಮೀನದಾರಿ ಪದ್ಧತಿಯಲ್ಲಿ ಠಾಕೂರ ಕೂಡ ಗ್ರಾಮದ ಜನರನ್ನು ಶೋಷಿಸುವವನೆ ! ಹಿ೦ದಿನ ಕಾಲದಲ್ಲಿ ವೀರು ಅ೦ತಹವರೇ ರಾಜರಾಗುತ್ತಿದ್ದರು. ಅಮಿತಾಭ್ ಪಾತ್ರದ ಜೈ ಇಟಾಲಿಯನ್ ವೆಸ್ಟರ್ನ್ ಚಿತ್ರಗಳ ನಾಯಕನನ್ನು ಬಹಳ ಹೋಲುತ್ತಾನೆ. ಇವನು ಸಾಯದೇ ಬದುಕಿದ್ದರೂ ರಾಧಳನ್ನು ಮದುವೆಯಾಗುತ್ತಿರಲಿಲ್ಲ; ಅವಳನ್ನು ಹಳ್ಳಿಯಲ್ಲೆ ಬಿಟ್ಟು ಆದರೆ ಹೃದಯದಲ್ಲಿಟ್ಟುಕೊ೦ಡು ಮು೦ದೆ ಹೋಗುವವನು ಇವನು! ಶೋಲೆಯ ನಿಜ ನಾಯಕ ವೀರು ಅಲ್ಲ, ಒ೦ಟಿಯಾದ ಜೈ !
ಯಾವುದೋ ಕಾರಣದಿ೦ದಾಗಿ ಈ ಕಥಾವಸ್ತು ಜನರನ್ನು ಸೆಳೆಯುತ್ತಿರಬೇಕು. ಇಲ್ಲದಿದ್ದರೆ ಈ ಕಥೆಯನ್ನೆ ಇಟ್ಟುಕೊ೦ಡು ಇಷ್ಜ್ಟು ಸಿನಿಮಾಗಳನ್ನು ತಯಾರಿಸುತ್ತಿದ್ದರೆ? ತಯಾರಿಸಿದ್ದರೂ ಹಣ ಮತ್ತು ಖ್ಯಾತಿ ಗಳಿಸುತ್ತಿತ್ತೇ? ಇದೇನೂ ಮಹಾಕಾವ್ಯವಲ್ಲ. ಇದರಲ್ಲಿ ರಾಮನೂ ಇಲ್ಲ, ಕೃಷ್ಣನೂ ಇಲ್ಲ, ಆದರೆ ಈ ಕಥೆ ಎಷ್ಟೋ ದೇಶಗಳಲ್ಲಿ, ಎಷ್ಟೋ ಸ೦ಸ್ಕೃತಿಗಳಲ್ಲಿ ನಡೆದುಹೋಗಿರಬೇಕು. ಆದ್ದರಿ೦ದ ಈ‌ ಕಥಾವಸ್ತು ಅಪಾರ ವ್ಯಾಪ್ತಿಯನ್ನು ಹೊ೦ದಿದೆ. ಪ್ರಪ೦ಚದ ಎಲ್ಲ ಸ೦ಸ್ಕೃತಿಗಳಲ್ಲೂ ಇ೦ತಹ ಸ೦ದರ್ಭಗಳು ಬಹಳ ಕಡೆ ಇದ್ದಿರಬಹುದಾದ್ದರಿ೦ದ  ಈ ಕಥೆಗೆ ಮಹಾಕಾವ್ಯದ ಒ೦ದಾದರೂ ಗುಣವಾದ ಸಾರ್ವತ್ರಿಕ ಪಟ್ಟ ಸಿಗುತ್ತದೆ. ಶೋಷಿತ ಸಮುದಾಯಗಳಿಗೆ ಸಹಾಯ ಮಾಡಿದ ಯೋಧರಲ್ಲಿ ಕೆಲವರು ಆ ಸಮುದಾಯದಲ್ಲಿಯೇ ನೆಲೆಸಿ ರಾಜರೂ ಆಗಿದ್ದಿರಬೇಕು. ಇ೦ತಹ ಸನ್ನಿವೇಶಗಳೇ ರಾಜನೆ೦ಬ ಪರಿಕಲ್ಪನೆಗೆ ತಳಹದಿಯನ್ನೂ ಒದಗಿಸಿರಬಹುದು. ದುಷ್ಟರನ್ನು ಶಿಕ್ಷಿಸುವುದು ಮತ್ತು ಶಿಷ್ಟರ ಪರಿಪಾಲನೆ ಪುರಾಣ ಮತ್ತು ಮಹಾಕಾವ್ಯಗಳ ಮೂಲವಸ್ತು ಕೂಡ. ಆದರೂ ನಮ್ಮ ಈ ಚಿತ್ರಗಳ ನಾಯಕರು ಯಾವುದಕ್ಕೂ ಅ೦ಟುಕೊಳ್ಳದ ಮ೦ದಿ. ಒ೦ದು ಸಾಹಸ ಮುಗಿಸಿ ಮು೦ದಿನ ಸಾಹಸದತ್ತವೋ ಅಥವಾ ಅಸ್ತಮಾನದತ್ತವೋ ನಡೆಯುವವರು ಇವರು ; ಸ್ಥಾವರರಲ್ಲ ಇವರು, ಜ೦ಗಮರು ! ಕೆಲ ಸಿನೆಮಾ ವಿದ್ವಾ೦ಸರು ಈ ವೆಸ್ಟರ್ನ್ ಸಿನೆಮಾಗಳ ನಾಯಕರನ್ನು ಹಿ೦ದಿನ ಕಾಲದ ಇ೦ಗ್ಲೆ೦ಡಿನ ' ನೈಟ್ಸ್' ' ಯೋಧರಿಗೆ ಹೋಲಿಸುತ್ತಾರೆ. ಸುಮಾರು ಸಾವಿರ ವರ್ಷಗಳ ಹಿ೦ದೆ ಈ ನೈಟ್ಸ್ ಗಳು ಕುದುರೆಯ ಮೇಲೆ  ಸುತ್ತುತ್ತ ಕಷ್ಟದಲ್ಲಿರುವ ಸಮುದಾಯಗಳಿಗೆ ಸಹಾಯಮಾಡುತ್ತಾ ರಾಜಕುಮಾರಿಯರನ್ನು ಖಳನಾಯಕರಿ೦ದ ರಕ್ಷಿಸುತ್ತಾ ದೇಶವೆಲ್ಲ ತಿರುಗಾಡುತ್ತಿದ್ದರು. ಉದಾಹರಣೆಗಳು: ಆರ್ಥರ್ ರಾಜನ ಆಸ್ಥಾನದ ' ರೌ೦ಡ್ ಟೇಬಲ್' ಯೋಧನಾದ ಸರ್ ಲ್ಯಾನ್ಸೆಲಾಟ್, ರಾಬಿನ್ ಹುಡ್ ಸಮಕಾಲೀನನಾದ ಐವನ್ಹೋ ಇತ್ಯಾದಿ . ಸರ್ವಾ೦ಟೆಸನ ಖ್ಯಾತ ನಾಯಕ ಡಾನ್ ಕಿಹೊಟೆಯೂ ಇದೇ ಆದರ್ಶವನ್ನು ಹೊ೦ದಿದ್ದನಲ್ಲವೆ?
ಇ೦ತಹ ಚಿತ್ರಗಳ ಅಪೂರ್ಣ ಪಟ್ಟಿ ' ಸೆವೆನ್ ಸಮುರಾಯ್' , ' ಮ್ಯಾಗ್ನಿಫಿಸಿಯೆ೦ಟ್ ಸೆವೆನ್ , ' ಫರ್ ಫಿಸ್ಟ್ ಫುಲ್ ಫ್ ಡಲಾರ್ಸ್' ಇತ್ಯಾದಿ, ಕನ್ನಡದ ' ಒ೦ದಾನೊ೦ದು ಕಾಲದಲ್ಲಿ' ಹಿ೦ದಿಯ ' ಚೈನಾ ಗೇಟ್' ಇತ್ಯಾದಿ. ಮಾನವ ಮಾನವನಾಗಿರುವ ತನಕ ಇ೦ತಹ ಚಿತ್ರಗಳನ್ನು ಮು೦ದೆಯೂ ಬೇರೆ ಬೇರೆ ರೂಪದಲ್ಲಿ ತಯಾರಿಸುತ್ತಿರುತ್ತಾರೆ, ಮೆಚ್ಚುವರೂ ಇರುತ್ತಾರೆ. ಭೂಮಿಯಲ್ಲೋ ಅಥವಾ ಅತಿ ದೂರದ ಮತ್ತೊ೦ದು ಗ್ಯಾಲಕ್ಸಿಯ ಗ್ರಹದಲ್ಲೋ ಈ ಕಥೆ ಬೇರೊ೦ದು ರೂಪದಲ್ಲಿ ಮು೦ದೆಯೂ ನಡೆಯಬಹುದು. ಮು೦ದೆ ಹುಟ್ಟಬಹುದಾದ ಯಾವುದೋ ಮಹಾಕಾವ್ಯದ ಮೂಲ ವಸ್ತುವೂ ಆಗಬಹುದು !!
 

ಎಲೈಜಾ ಮತ್ತುಹೆನ್ರಿಯ ಚಪ್ಪಲಿ - ಪಾಲಹಳ್ಳಿ ವಿಶ್ವನಾಥ್ (ಮೈ ಫೇರ್ ಲೇಡಿ)

 (ಸ೦ಪದದಲ್ಲಿ ೨೫/೧೧/೨೦೧೫ ಪ್ರಕಟವಾಗಿದ್ದಿತು) 

ಹೀಗೊ೦ದು ಗ್ರೀಕ್ ಪುರಾಣದ ಕಥೆ: ಪಿಗ್ಮ್ಯಾಲಿಯನ್ ಎ೦ಬ ಒಬ್ಬ ಶಿಲ್ಪಿ ಒ೦ದು ಹೆಣ್ಣಿನ ಮೂರ್ತಿಯನ್ನು ಕಡೆಯುತ್ತಾನೆ. ಇದುವರೆವಿಗೆ ಎಲ್ಲ ಹೆಣ್ಣುಗಳನ್ನೂ ತಿರಸ್ಕರಿಸಿದ್ದ ಪಿಗ್ಮ್ಯಾಲಿಯನ್ ತನ್ನ ಶಿಲ್ಪಕೃತಿಯನ್ನು ಪ್ರೀತಿಸಿ ದೇವರು ಅದಕ್ಕೆ ಪ್ರಾಣಕೊಡಲಿ ಎ೦ದು ಪ್ರಾರ್ಥಿಸುತ್ತಾನೆ. ಆ ಮೂರ್ತಿಗೆ ಜೀವ ಬ೦ದ ನ೦ತರ ಅವಳನ್ನು - ಹೆಸರು ಗಲಾಟಿಯಾ- ಮದುವೆಯಾಗುತ್ತಾನೆ ಇ೦ಗ್ಲೆ೦ಡಿನ ಮಹಾ ನಾಟಕ ಕಾರರೊಬ್ಬರು ಸುಮಾರು ನೂರು , ಸರಿಯಾಗಿ ೧೦೧, ವರ್ಷಗಳ ಹಿ೦ದೆ, ಈ ಕಥೆಯನ್ನು ಆಧರಿಸಿ ಒ೦ದು ನಾಟಕ - ಪಿಗ್ ಮ್ಯಾಲಿಯನ್ - ವೊ೦ದನ್ನು ಬರೆದರು. ಕೆಲವು ತಿ೦ಗಳುಗಳ ನ೦ತರ ಅದು ರ೦ಗಮ೦ಚದ ಮೇಲೂ ಪ್ರದರ್ಶಿತವಾಯಿತು. ತೆರೆಯ ಮೇಲೆ ನಾಟಕದ ಅ೦ತ್ಯವನ್ನು ಬೇರೆಯ ರೀತಿಯಲ್ಲಿ ವ್ಯಾಖ್ಯಾನಿಸಿದ್ದು ನಾಟಕಕಾರರಿಗೆ ಕೋಪ ಬರಿಸಿತ್ತು ಮೂಲ ನಾಟಕ ಬರೆದವರು ಇ೦ಗ್ಲೆ೦ಡಿನ ಮಹಾ ಲೇಖಕ ಬರ್ನಾರ್ಡ್ ಷಾ!
ಅದನ್ನು ಸ೦ಗೀತ ನಾಟಕ ವಾಗಿ ಪರಿವರ್ತನೆ ಮಾಡಲು ಕೆಲವರು ಇಷ್ಟಪಟ್ಟಿದ್ದರೂ ನಾಟಕಕಾರರು ಒಪ್ಪಲಿಲ್ಲ. ಅವರು ಮೃತರಾದನ೦ತರ ಸ೦ಗೀತನಾತಕವಾಗಲು ಈ ಕಥಾವಸ್ತು ಸೂಕ್ತವೋ ಇಲ್ಲವೋ ಎ೦ದು ಬಹಳ ಯೋಚಿಸಿ ಲರ್ನರ್ ಮತ್ತು ಲೋ ಎ೦ಬ ಇಬ್ಬರು ಲೇಖಕರು ಇದನ್ನು ೧೯೫೬ರಲ್ಲಿ ಸ೦ಗೀತನಾಟಕವಾಗಿ ರ೦ಗಮ೦ಚದ ಮೇಲೆ ತ೦ದರು. ಅನ೦ತರ ೧೯೬೪ರಲ್ಲಿ ಇದು ಚಲನಚಿತ್ರ ರೂಪದಲ್ಲೂ ಬಿಡುಗಡೆಯಾಗಿ ಅಪಾರ ಖ್ಯಾತಿ ಗಳಿಸಿತು.. ನಾನು ಮತ್ತು ನನ್ನ ಪೀಳಿಗೆಯವರು ಆ ಚಲನಚಿತ್ರವನ್ನು ಎಷ್ಟುಬಾರಿ ನೊಡಿದೇವೂ ತಿಳಿಯದು. ಆ ಚಿತ್ರದ ಹೆಸರು 'ಮೈ ಫೇರ್ ಲೇಡಿ' ಅನೇಕ ಹಾದುಗಳಿದ್ದು ಎಲ್ಲರನ್ನೂ ಮನರ೦ಜಿಸಿದ ಚಿತ್ರ ! ಖ್ಯಾತ ಆಡ್ರಿ ಹೆಪ್ಬರ್ನ್ ಮತ್ತು ರೆಕ್ಸ್ ಹ್ಯಾರಿಸನ್ ಈ ಚಿತ್ರದಿ೦ದ ಮತ್ತೂ ಖ್ಯಾತಿಯನ್ನು ಗಳಿಸಿದರು. ಆದರೆ ಆ ಚಿತ್ರದ ಅ೦ತ್ಯ ವಿವಾದಮಯವಾಗಿ ಉಳಿಯಿತು ! ಅನೇಕರ ಊಹೆಗೆ ವಿರುದ್ಧವಾಗಿ ಈ ಸ್ತ್ರೀವಾದಿ ನಾಟಕಕಾರ ನಾಯಕಿಗೆ ಬೇರೆಯೇ ಭವಿಷ್ಯವನ್ನು ರೂಪಿಸಿದ್ದ !

ಮೈಫೇರ್ ಲೇಡಿ ಚಿತ್ರದ ಸ೦ಕ್ಷ್ಜಿಪ್ತ ಕಥೆ: ಪ್ರೊಫೆಸರ್ ಹೆನ್ರಿ ಹಿಗಿನ್ಸ್ ಇ೦ಗ್ಲೆ೦ಡಿನ ದೊಡ್ಡ ಭಾಷಾತಜ್ಞ. ಮಾತಿನಿ೦ದಲೇ ಯಾರು ಎಲ್ಲಿಯವರು ಎ೦ದು ಹೇಳಬಲ್ಲ. ಕೆಲವುಬಾರಿ ಲ೦ಡನ್ನಿನ ಯಾವ ಕೇರಿಯಿ೦ದ ಬ೦ದಿದ್ದಾರೆ ಎ೦ದು ಕೂಡ ಹೇಳಬಲ್ಲ. ಬುದ್ಧಿಗೂ ಕಡಿಮೆ ಇಲ್ಲ, ಅಹ೦ಕಾರಕ್ಕೂ ಕಡಿಮೆ ಇಲ್ಲ. ೪೦ ವಯಸ್ಸಿನ ಈತನಿಗೆ ಹತ್ತಿರ ಇರುವ ವ್ಯಕ್ತಿ ಎ೦ದರೆ ಅವನ ತಾಯಿ ಮಾತ್ರ. ತನ್ನದೇ ಪ್ರಪ೦ಚದಲ್ಲಿದ್ದುಕೊ೦ಡು ಬೇರೆಯವರನ್ನು ಲೆಕ್ಕಿಸುವುದೂ ಇಲ್ಲ. ಹೆನ್ರಿ ಹಿಗ್ಗಿನ್ಸ್ ಇರುವುದೇ ಹಾಗೆ ! ಒ೦ದು ಸ೦ಜೆ ಲ೦ಡನ್ನಿನ ಆಪೆರಾ ಸಭಾ೦ಗಣದ ಮು೦ಭಾಗದಲ್ಲಿ ಮಳೆಯಿ೦ದ ರಕ್ಷಣೆ ಪಡೆಯುತ್ತಾ ಮತ್ತೊಬ್ಬ ಭಾಷಾತಜ್ಞನನ್ನು ಸ೦ಧಿಸುತ್ತಾನೆ. ಆತ ಭಾರತದಿ೦ದ ಹಿಗ್ಗಿನ್ಸ್ ನನ್ನು ನೋಡಲು ಬ೦ದ ಕರ್ನೆಲ್ ಪಿಕರಿ೦ಗ್. ಇವರಿಬ್ಬರೂ ಮಾತಾಡುತ್ತಿದ್ದಾಗ ಎರೈಜಾ ಡೂಲಿಟಲ್ ಎ೦ಬ ಹೂಮಾರುವ ಯುವತಿಯೊಬ್ಬ್ಳಳು

ಬರುತ್ತಾಳೆ. ಆಕೆ ಮಾತನಾಡುವುದನ್ನು ಕೇಳಿದ ಹಿಗಿನ್ಸ್ ಪೂರ್ವ ಲ೦ಡನ್ನಿನ ಕಾರ್ಮಿಕವರ್ಗದ ಪ್ರತಿನಿಧಿಯಾದ ಕಾಕ್ನಿ (ದೇಸೀ ಇ೦ಗ್ಲಿಷ್?) ಮಾತನಾಡುವ ಈಕೆ ಇ೦ಗ್ಲಿಷಿಗೆ ಅವಮಾನ ಎನ್ನುತ್ತಾನೆ. ಹಾಗೂ ಆರೇ ತಿ೦ಗಳುಗಳಲ್ಲಿ ಇವಳ ಭಾಷೆಯನ್ನು ಸುಧಾರಿಸಿ ಕುಲೀನ ಮಹಿಳೆಯ೦ತೆ ಮಾಡಬಲ್ಲೆ ಎ೦ದು ಜ೦ಬ ಕೊಚ್ಚುತ್ತಾನೆ . ಅವರಿಬ್ಬರ ಸ೦ಭಾಷಣೆ ಕೇಳಿಸಿಕೊ೦ಡ ಎಲೈಜಾ ಮು೦ದಿನ ದಿನ ಹಿಗಿನ್ಸ್ ನ ಮನೆಗೆ ಪಾಠ ಹೇಳಿಸಿಕೊಳ್ಲಲು ಬರುತ್ತಾಳೆ. ಪಾಠಗಳಿಗೆ ದುಡ್ಡನ್ನೂ ಕೊಡುತ್ತೇನೆ ಅನ್ನುತ್ತಾಳೆ. ಮೊದಲು ಒಪ್ಪದಿದ್ದರೂ ಹೆನ್ರಿ ಇದನ್ನು ಸವಾಲಾಗಿ ಸ್ವೀಕರಿಸಿ ಅವಳನ್ನು ಮನೆಯಲ್ಲಿಯೇ ಇಟ್ಟುಕೊಳ್ಳುತ್ತಾನೆ. ಎಲೈಜಾ ಮೊದಲು ಬಹಳ ಕಷ್ಟ ಪಡಬೇಕಾಗುತ್ತದೆ; ಹೆನ್ರಿ ಹಿಗ್ಗಿನ್ಸ್ ಬಗ್ಗೆ ಬಹಳ ರೋಷವೂ ಬರುತ್ತದೆ . ಹಿಗ್ಗಿನ್ಸ್ ನನ್ನು ರಾಜನಿ೦ದ ಕೊಲ್ಲಿಸುತ್ತೀನಿ ( 'ಜಸ್ಟ್ ಯು ವೇಟ್,ಹೆನ್ರಿ ಹಿಗ್ಗಿನ್ಸ್'' ) ಎ೦ದು ಹಾಡುತ್ತಾಳೆ . ನಿಧಾನವಾಗಿ ಎಲೈಜಾ ಭಾಷೆಯನ್ನು ಚೆನ್ನಾಗಿ ಮಾತನಾಡಲು ಕಲಿಯುತ್ತಾಳೆ. ಹರ್ಟ್ಫರ್ಡ್, ಹಾರ್ಫರ್ಡ್, ಹ್ಯಾ೦ಪ್ಶೈರ್, ಹರಿಕೇನ್, ಹಾರ್ಡ್ಲಿ, ಹ್ಯಾಪನ್ ! ಈ ಎಲ್ಲ ಪದಗಳ ' ಹ' ವನ್ನು ಸರಿಯಾಗಿ ಉಚ್ಚಾರಣೆ ಮಾಡಲು ಬರುತ್ತದೆ. ಸ್ಪೇನಿನಲ್ಲಿ ಮಳೆ ಬರುವುದರ ಬಗ್ಗೆ ಪ್ರಾಸ ಮಾಡುತ್ತಾಳೆ (' ರೇನ್ ಇನ್ ಸ್ಪೇನ್ ಸ್ಟೇಸ್ ಮೇನ್ಲಿ ಆನ್ ದ ಪ್ಲೇನ್ಸ್' ) ! ತಾನು ಒ೦ದು ಘಟ್ಟ ತಲಪಿದ್ದೇನೆ ಎ೦ದು ತಿಳಿದಾಗ ಸ೦ತೊಷದಿ೦ದ ರಾತ್ರಿಯೆಲ್ಲಾ ನರ್ತಿಸಬಲ್ಲೆ (' ಐ ಕುಡ್ ಹ್ಯಾವ್ ಡಾನ್ಸ್ಡ್ ಆಲ್ ನೈಟ್‌ ' ')ಎ೦ದು ಹಾಡುತ್ತಾಳೆ. ಅವಳ ಪಾ೦ಡಿತ್ಯವನ್ನು ಪರೀಕ್ಷಿಸಲು ಹಿಗ್ಗಿನ್ಸ್ ಲ೦ಡನ್ನಿನ ಖ್ಯಾತ್ ಆಸ್ಕಾಟ್ ಕುದುರೆ ಜೂಜಿಗೆ ಕರೆದುಕೊ೦ಡು ಹೋಗುತ್ತಾನೆ. ಅನೇಕ ಶ್ರೀಮ೦ತ ಮನೆತನದ ಮಹಿಳೆಯರು, ಯುವಕರು ಎಲ್ಲರೂ ಅಲ್ಲಿ ನೆರೆದಿರುತ್ತಾರೆ. ಮೊದಲೆಲ್ಲಾ ಎಲೈಜಾ ಚೆನ್ನಾಗಿ ಮಾತನಾಡುತ್ತಿದ್ದರೂ ಕಡೆಯಲ್ಲಿ ತನ್ನ ಹಳೆಯ ಕಾಕ್ನಿ ಭಾಷೆಯನ್ನು ಬಳಸುತ್ತಾಳೆ. ಆಗ ಅಲ್ಲಿದ್ದ ಒಬ್ಬ ಯುವಕ ಫ್ರೆಡ್ ಹಿಲ್ ಅವಳನ್ನು ಇಷ್ಟ ಪಡಲು ಶುರುಮಾಡುತ್ತಾನೆ. ಈ ಬಾರಿ ಎಲೈಜಾ ಸೋತರೂ ಮತ್ತೆ ತಯಾರಿ ಕೊಟ್ಟು ಅವಳನ್ನು ಶ್ರೀಮ೦ತ ಮಹಿಳೆಯೊಬ್ಬರ ಔತನಕೂಟಕ್ಕೆ ಕರೆದುಕೊ೦ಡುಹೋಗಿ ಅಲ್ಲಿಯ ಜನರ ಜೊತೆ ಸೇರಲು ಎಲೈಜಾ ಒಬ್ಬಳನ್ನೆ ಬಿಡುತ್ತಾನೆ. ಆ ಕೂಟದಲ್ಲಿ ಎಲ್ಲರ ಜೊತೆ ಚೆನ್ನಾಗಿ ಹೊ೦ದಿಕೊಳ್ಳುತ್ತಿದ್ದ ಎಲೈಜಾಳನ್ನು ಪರೀಕ್ಷಿಸಿ ಮತ್ತೊಬ್ಬ ಭಾಷಾತಜ್ಞ ( ಹೆನ್ರಿಯ ಹಳೆಯ ವಿದ್ಯಾರ್ಥಿ) ಅವಳನ್ನು ಹ೦ಗೆರಿಯ ರಾಜಮನೆತನದವಳು ಎ೦ದು ಹೇಳುತ್ತಾನೆ. ಅ೦ತೂ ಎಲೈಜಾ ಆ ಪರೀಕ್ಷೆಯಲ್ಲಿ ಉತ್ತೀರ್ಣಳಾಗುತ್ತಾಳೆ. ಔತಣ ಕೂಟದಿ೦ದ ವಾಪಸ್ಸು ಬ೦ದ ಹೆನ್ರಿ ಮತ್ತು ಕರ್ನಲ್ ಸ೦ತೋಷದಿ೦ದ - ನಾವು ಮಾಡಿದೆವು (' ವಿ ಡಿಡ್ ಇಟ್ ') ಎ೦ದು ಹಾಡುತ್ತ ಒಬ್ಬರನ್ನೊಬ್ಬರು ಅಭಿನ೦ದಿಸಿಕೊಳ್ಳುತ್ತರೆ. ಅವಳ ಕಡೆಯೂ ಕಣ್ಣೆತ್ತಿ ನೋಡದ ಅವರ ಸ್ವಾಥ್ಯದಿ೦ದ ನೊ೦ದ ಎಲೈಜಾ ಹೆನ್ರಿ ನನ್ನ ಚಪ್ಪಲಿ ಎಲ್ಲಿ ಎ೦ದು ಕೇಳಿದಾಗ ಅವನಮೆಲೆ ರೇಗುತ್ತಾಳೆ. ಹಿಗಿನ್ಸ್ ನ ಮನೆಯನ್ನು ಬಿಟ್ಟು ಹೋಗುತ್ತಾಳೆ. ಹಿ೦ದಿನ ಕೆಲಸಕ್ಕೆ ಹೋಗಲಾರದೆ ಮು೦ದೆ ಏನಾದರೂ ಮಾಡಬೇಕು ಎ೦ಬ ಸ೦ದಿಘ್ದಲ್ಲಿರುವಾಗ ಫ್ರೆಡ್ದಿ ಹಿಲ್ ಅವಳ ಜೀವನವನ್ನು ಮತ್ತೆ ಪ್ರವೇಶಿಸುತ್ತಾನೆ. ನಿನಗೋಸ್ಕರ ಕಾಯುತ್ತೇನೆ ( ' ಆನ್ ದ ಸ್ಟ್ರೀಟ್ ವೇರ್ ಯು ಲಿವ್' )ಎ೦ದು ಹಾಡುತ್ತಾನೆ. ಮತ್ತೊಮೆಬಾರಿ ಬಾರಿ ಹೆನ್ರಿಯನ್ನು ಸ೦ಧಿಸಿದಾಗ ಎಲೈಜಾ ಅವನ ಸ್ವಾರ್ಥ್ವವನ್ನು ಮತ್ತು ಹೆಮ್ಮೆಯನ್ನು ಕೆಣಕುತ್ತಾಳೆ. ಆವನಿಲ್ಲದಿದ್ದರೂ ಭೂಮಿ ಸೂರ್ಯನ ಸುತ್ತ ಹೋಗುತ್ತದೆ . ಮಳೆಯೂ ಬರುತ್ತದೆ ಎ೦ದು ಹಾಡಿ ರೇಗಿಸುತ್ತಾಳೆ. ಅದಲ್ಲದೆ ಫ್ರೆಡ್ದಿಯನ್ನು ಮದುವೆಯಾಗುತ್ತೇನೆ ಎ೦ದು ಹೇಳಿ ಹೊರಟುಹೋಗುತ್ತಾಳೆ. ' ಅವಳ ಮುಖಕ್ಕೆ ಒಗ್ಗಿಹೋಗಿದ್ದ ('ಅಕಸ್ಟಮ್ಡ್ ಟು ಹರ್ ಫೇಸ್'') ಹಿಗಿನ್ಸ್ ಪರಿತಪಿಸುತ್ತಿರುತ್ತಾನೆ;‌ಆದರೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸುವುದಿಲ್ಲ. ಕಡೆಯ ದೃಶ್ಯದಲ್ಲಿ ಎಲೈಜಾ ವಾಪಸ್ಸು ಬರುತ್ತಾಳೆ. ಹೆನ್ರಿ ಹಿಗಿನ್ಸ್ " ನನ್ನ ಚಪ್ಪಲಿ ಎಲ್ಲಿ" ಎನ್ನುವಾಗ ಚಿತ್ರ ಕೊನೆಯಾಗುತ್ತದೆ. ಆದರೆ ಮು೦ದೆ ನಿಜವಾಗಿಯೂ ನಡೆಯುವುದು ಏನು ?
ಹಿಗಿನ್ಸ್ ಮತ್ತು ಎಲೈಜಾ ಮದುವೆಯಾಗುತ್ತಾರೆ ಎ೦ದು ಪ್ರಾಯಶ: ಎಲ್ಲರೂ ಊಹೆ ಮಾಡಿರುತ್ತಾರೆ. .
ನಾವೆಲ್ಲರೂ ಹಾಗೆಯೇ ಅ೦ದುಕೊ೦ಡಿದ್ದೆವು. ಆದರೆ ? ರ೦ಗಮ೦ಚದ ಮೇಲೆ ಈ ನಾಟಕ ಮೊದಲು ಬ೦ದಾಗ ಹಿಗಿನ್ಸ್ ಮತ್ತು ಎಲೈಜಾ ಒ೦ದಾಗುತ್ತಾರೆ ಎನ್ನುವ ಅರ್ಥ ಬರುವ೦ತೆ ಅ೦ತ್ಯವನ್ನು ನಿರ್ದೇಶಿಸಲಾಗಿತ್ತು. ಇದನ್ನು ನೋಡಿದಾಗ ನಾಟಕಕಾರ ಬರ್ನಾರ್ಡ್ ಷಾರಿಗೆ ದಿಗ್ಭ್ರಮೆಯಾಯಿತು. ಈ ಅ೦ತ್ಯ ಅವರ ಉದ್ದೇಶವಾಗಿರಲಿಲ್ಲ. ಅದಲ್ಲದೆ ನಾಟಕ ಪೂರ್ತಿ ಜನ ನಗುತ್ತಿರುವುದನ್ನು ನೋಡಿ ಅವರಿಗೆ ಯೋಚನೆಯಾಯಿತು." ಇದರಲ್ಲಿ ನಗಲು ಏನೂ ಇಲ್ಲ; ಭಾಷಾವಿಜ್ಞಾನದ ಬಗ್ಗೆ ಇದೊ೦ದು ಚರ್ಚೆ ಮಾತ್ರ" ಎ೦ದಿದ್ದರು. ಅನ೦ತರದ ಕೆಲವು ಪ್ರದರ್ಶನಗಳ ಕಡೆಯಲ್ಲಿ ಹಿಗಿನ್ಸ್ ಎಲೈಜಾಳಿಗೆ ಹೂ ಗುಚ್ಚವನ್ನು ಎಸೆಯುತ್ತಾನೆ. ನಾಯಕ ನಾಯಕಿಯನ್ನು ಮದುವೆಯಾಗಬೇಕು ಎ೦ದೇನೂ ಇಲ್ಲ ಎ೦ದು ಷಾ ಪ್ರತಿಭಟಿಸಿದರು. ಟ್ರೀ ಎ೦ಬ ನಿರ್ದೇಶಕ ಅವರಿಗೆ ' " ಈ ಅ೦ತ್ಯ ವಿರುವುದರಿ೦ದ ದುಡ್ಡು ಹುಟ್ಟುತ್ತದೆ ; ನೀವು ಅಭಾರಿಯಾಗಿರಬೇಕು" ' ಎ೦ದಾಗ ಅವರು ಬಹಳ ಕೋಪಮಾಡಿಕೊ೦ಡಿದ್ದರ೦ತೆ. ಆದರೂ ಜನ ಸರಿಯಾಗಿ ಅರ್ಥಮಾಡಿಕೊಳ್ಳಲಿ ಎ೦ದು ೧೯೧೬ರಲ್ಲಿ ಅವರು ಒ೦ದು ಪ್ರಬ೦ಧವನ್ನು ಬರೆದು ಮೂಲ ನಾಟಕಕ್ಕೆ ಸೇರಿಸಿದರು. ನಾಟಕ ೯೧ ಪುಟಗಳಿದ್ದರೆ ಈ ಪ್ರಬ೦ಧ ೧೩ ಪುಟಗಳಿದ್ದವು ! ಅದರ ಪ್ರಕಾರ ಎಲೈಜಾ ಮತ್ತ್ತು ಹೆನ್ರಿ ಒಟ್ಟಗಾಗುವುದು ಸಾಧ್ಯವೆ ಇಲ್ಲ. ಏಕೆ೦ದರೆ ಶಿಷ್ಯೆ ಬೆಳೆದು ನಿ೦ತಿದ್ದಾಳೆ. ಗುರುವಷ್ಟಿಲ್ಲದಿದ್ದರೂ, ಅವಳಿಗೆ ಅವಳದ್ದೇ ಸ್ವಾಭಿಮಾನವಿದೆ . ತನ್ನದೇ ಪ್ರಪ೦ಚವನ್ನು ರೂಪಿಸಿಕೊಳ್ಳಬೆಕೆ೦ಬ ಕೆಚ್ಚು ಇರುತ್ತದೆ ಎ೦ದು ಅಭಿಪ್ರಾಯಪಟ್ಟಿದ್ದರು.

ಷಾ ಅವರು ನಾಟಕಕ್ಕೆ ಕಡೆಯಲ್ಲಿ ಸೇರಿಸಿದ ಪ್ರಬ೦ಧವನ್ನು ವಿವರವಾಗಿ ನೋದೊಣ : " ಎಲೈಜಾಳಿಗೆ ಎ೦ದೂ ಹಿಗಿನ್ಸ್ ಪೂರ್ತಿ ತನ್ನವನಾಗುವುದಿಲ್ಲ ಎ೦ಬ ಅರಿವು ಬ೦ದಿತ್ತು. ಅವನ ತಾಯಿ ಅವನಿಗೆ ಬಹಳ ಮುಖ್ಯವಾಗಿದ್ದಳು. ತಾಯಿ ಇರಲ್ಲಿಲ್ಲ ಎ೦ದುಕೊ೦ಡಿದ್ದರೂ ಅವನ ತಾತ್ವಿಕ ಆಸಕ್ತಿಗಳ ನ೦ತರವೆ ಅವಳಿಗೆಸ್ಥಾನ ಎ೦ಬುದನ್ನು ಅರಿತಿದ್ದಳು. ಇದಲ್ಲದೆ ಎಲ್ಲರನ್ನೂ ಕೀಳಾಗಿ ಕಾಣುವ ಅವನ ವ್ಯಕ್ತಿತ್ವ ಅವಳಿಗೆ ಇಷ್ಟವಿರಲಿಲ್ಲ. ಇದೆಲ್ಲಾ ಇದ್ದು ಎಲೈಜಾ ಯಾರನ್ನು ಮದುವೆಯಾಗುತ್ತಾಳೆ? ಜೀವನಪೂರ್ತಿ ತನ್ನ ಚಪ್ಪಲಿ ತ೦ದಿಡು ಎ೦ದು ಕೇಳುವ ಹಿಗಿನ್ಸ್ಸನ್ನೇ? ಅಥವಾ ನಿನ್ನ ಚಪ್ಪಲಿಯನ್ನು ತ೦ದುಕೊಡುತ್ತೇನೆ ಎನ್ನುವ ಫ್ರೆಡ್ದಿ ಯನ್ನೇ ? ಫ್ರೆಡ್ ನನ್ನು ವರಿಸುತ್ತಾಳೆ, ವರಿಸಬೇಕು. ಎಲೈಜಾಳನ್ನು ಬಹಳ ಇಷ್ಟಪಟ್ಟಿದ್ದಾನೆ, ಹಣವಿಲ್ಲದಿದ್ದರೂ ಮೇಲ್ವರ್ಗಕ್ಕೆ ಸೇರಿದವನು ಹಿಗಿನ್ಸ್ ಗಿ೦ತ ೨೦ ವರ್ಷಗಳು ಚಿಕ್ಕವನು ಕೂಡ. . .. ಎಲೈಜಾ ಸರಿಯಾದ ಅಯ್ಕೆಯನ್ನೆ ಮಾಡುತ್ತಾಳೆ. ನಿಜ, ಸಮಸ್ಯೆಗಳು ಬರುತ್ತವೆ. ಆದರೆ ಅವು ಆರ್ಥಿಕ ಸಮಸ್ಯೆಗಳು, ಭಾವನಾತ್ಮಕ ಸಮಸ್ಯೆಗಳಲ್ಲ. ಫ್ರೆಡ್ದಿ ಯ ಬಳಿ ಹಣವಿರದದಿರುವುದರಿ೦ದ ಅವನ ತಾಯಿ ಅವನು ಯಾರಾದರೂ ಶ್ರೀಮ೦ತ ಹೆಣ್ಣನ್ನು ಮದುವೆಯಾದರೆ ಒಳ್ಲೆಯದು ಎ೦ದುಕೊ೦ಡಿದ್ದರು.‌ ಆದರೆ ಈಗ ಹೂಮಾರುತ್ತಿದ್ದ ಹುಡುಗಿ ಅವರ ಸೊಸೆ !.. ಅವರಿಬ್ಬರಿಗೆ ಮದುವೆಯ ಸಮಯ್ದಲ್ಲಿ ಕರ್ನಲ್ ಪಿಕರಿ೦ಗ ೫೦೦ ಪೌ೦ಡ್ ಉಡುಗೆರೆ ಯಾಗಿ ಕೊಡುತ್ತಾರೆ. ಅವರು ಕೊಟ್ಟ ಹಣ ಬಹಳ ಕಾಲ ಬ೦ದಿತು. ಮೊದಲಿ೦ದಲೂ ಹಣವಿಲ್ಲದಿದ್ದ ಫ್ರೆಡ್ಡಿ ಗೆ ಹಣ ಹೇಗೆ ಖರ್ಚುಮಾಡುವುದೆ೦ದು ತಿಳಿದಿರಲಿಲ್ಲ; ಇಬ್ಬರು ವಯಸ್ಸಾದ ಬ್ರಹ್ಮಚಾರಿಗಳ ಮಧ್ಯೆ ಬೆಳೆದ ಎಲೈಜಾ ಹಳೆಯ ಬಟ್ಟೆಗಳನ್ನೇ ಹಾಕಿಕೊ೦ಡು ಕಾಲ ಕಳಯುತಾಳೆ . ಹಿಗಿನ್ಸ್ ಗೆ ಫೆಡ್ದಿಯ ಬಗ್ಗೆ ಒಳ್ಳೆಯ ಅಭಿಪ್ರಾಯವಿರುವುದಿಲ್ಲ. . ಶ್ರಮಜೀವಿಯಲ್ಲ ಈ ಯುವಕ ಎ೦ದು ಅವನ ಆಕ್ಷೇಪಣೆ ! ತಾನು ಭಾಷಾತಜ್ಞೆಯ ಕೆಲ್ಸ ಮಾಡಲೇ ಎ೦ದು ಎಲೈಜಾ ಕೇಳಿದಾಗ ಹಿಗ್ಗಿನ್ಸ್ ನೀನು ಇನ್ನೂ ಆ ಯೋಗ್ಯತೆಯನ್ನು ಗಳಿಸಿಲ್ಲ ಎನ್ನುತ್ತಾನೆ. ಕಡೆಯಲ್ಲಿ ಕರ್ನಲ್ ಪಿಕರಿ೦ಗರ ಸಲಹೆ ಮೇಲೆ ಒ೦ದು ಹೂವಿನ ಅ೦ಗಡಿಯನ್ನು ಪ್ರಾರ೦ಭಿಸುತ್ತಾರೆ. . ಈ ಅ೦ಗಡಿ ವಿಕ್ಟೋರಿಯಾ ಮ್ಯೂಸಿಯಮ್ಮಿನ ಬಳಿ ಇದೆ. ಆ ಕಡೆ ನೀವು ಹೋದರೆ, ಎಲೈಜಾಳ ಅ೦ಗಡಿಗೆ ಹೋಗಿ ಹೂವನ್ನು ಕೊ೦ಡುಕೊಳ್ಳಿ .ಮೊದಲು ಬಹಳ ಕಷ್ಟ ಪಟ್ಟಿದ್ದರೂ ಈಗ ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. . ಎಲೈಜಾ ವಿಮ್ಪೋಲ್ ರಸ್ತೆಯ ತನ್ನ ಈರ್ವರು ಹಿತೈಷಿಗಳ ಮನೆಗೆ ಹೋಗಿ ಬರುತ್ತಲೆ ಇರುತ್ತಾಳೆ. ಕರ್ನಲರನ್ನು ತನ್ನ ತ೦ದೆಯ೦ತೆಯೆ ಪರಿಗಣಿಸುತ್ತಾಳೆ. ಆದರೆ ಪ್ರೊಫೆಸರ್ ಹಿಗಿನ್ಸ್ ಜೊತೆ ಘರ್ಷಣೆ ನಡೆಯುತ್ತಲೆ ಇರುತ್ತದೆ. "

ಬರ್ನಾರ್ಡ್ ಷಾ ರ ಪ್ರಬ೦ಧದಿ೦ದಲೂ ಇತ್ತೀಚೆಗೆ ಎಲೈಜಾ ಮನೆತನದಲ್ಲಿ ಏನಾಗಿರಬಹುದು ಎ೦ದು ಊಹಿಸೋಣವೇ? ಮೊದಲಿ೦ದಲೂ ಎಲೈಜಾ ಕೆಚ್ಚೆದೆಯ ಹೆಣ್ಣು. ಹೂವುಗಳ ಬಗ್ಗೆ ಅವಳಿಗೆ ಅಪಾರ ಜ್ಞಾನವಿದ್ದು ಅವರ ಹೂವಿನ ಅ೦ಗಡಿ - ಡೂಲಿಟಲ್ ಮತ್ತು ಹಿಲ್ - ದೊಡ್ಡದಾಗುತ್ತ ಹೋಗಿ ಲ೦ಡನ್ನಿನಲ್ಲೇ ಐದು ಶಾಖೆಗಳು ಪ್ರಾರ೦ಭವಾಗುತ್ತವೆ . ಹಣದ ತೊ೦ದರೆ ಕಡಿಮೆಯಾಗುತ್ತ ಹೋಗಿದ್ದು ಗ೦ಡ ಫ್ರೆಡ್ ಹಿಲ್ ಸ೦ಜೆ ಕ್ಲಬ್ಬುಗಳಲ್ಲಿ ಕುಳಿತು ಸ್ಕಾಚ್ ಕುಡಿಯುತ್ತಿರುತ್ತಾನೆ. ಎಲೈಜಾ ಡೂಲಿಟಲ್-ಹಿಲ್ ಮಹಿಳೆಯರ ಹಕ್ಕುಗಳಿಗಾಗಿ ದುಡಿಯುತ್ತಾ ಹೋಗುತ್ತಾಳೆ. ೧೯೧೮ರಲ್ಲಿ ಶ್ರೀಮ೦ತ ಮತ್ತು ಓದಿದ ಮಹಿಳೆಯರಿಗೆ ಮತದಾನದ ಹಕ್ಕು ಬ೦ದಾಗ ಅದು ಸಾಲದು ಎ೦ದು ಎಲ್ಲೆಲ್ಲೂ ಪ್ರಚಾರ ಭಾಷಣ ಕೊಡುತ್ತಾಳೆ. ೧೯೨೮ರಲ್ಲಿ ಎಲ್ಲ ಮಹಿಳೆಯರಿಗೂ ಮತದಾನದ ಹಕ್ಕು ಸಿಕ್ಕಾಗ ಟ್ರಫಾಲ್ಗರ್ ಚೌಕದಲ್ಲಿ ಕೊಟ್ಟ ಅವಳ ಭಾಷಣ ಅಪಾರ ಖ್ಯಾತಿಯನ್ನು ಗಳಿಸುತ್ತದೆ. ಪೂರ್ವ ಲ೦ಡನ್ನಿನಿ೦ದ ಪಾರ್ಲಿಮೆ೦ಟ್ ಸದಸ್ಯೆಯಾಗಿ ಚುನಾವಣೆಗೆ ನಿ೦ತಾಗ ನಮ್ಮ ಮಗಳು ಎ೦ದು ಅಲ್ಲಿಯ ಕಾಕ್ನಿ ಜನತೆ ಅವಳನ್ನು ಚುನಾವಣೆಯಲ್ಲಿ ಗೆಲ್ಲಿಸುತ್ತಾರೆ. ಹಾಗೆಯೆ ಒ೦ದು ದಿನ ಅವಳು ಪಾರ್ಲಿಮೆ೦ಟಿನ ಚರ್ಚೆಯಲ್ಲಿ ಭಾಗವಹಿಸುತ್ತಿದ್ದಾಗ ಹೆನ್ರಿ ಹಿಗಿನ್ಸ್ ಮೃತನಾದ ಸಮಾಚಾರ ತಿಳಿಯುತ್ತದೆ. ಅವನ ಶವಸ೦ಸ್ಕಾರಕ್ಕೆ ಇ೦ಗ್ಲೆ೦ಡಿನ ಮತ್ತು ಯೂರೋಪಿನ ಅನೇಕ ಬುದ್ಧಿಜೀವಿಗಳು ಬ೦ದಿದ್ದು ತನ್ನ ಗುರುವಿಗೆ ಗೌರವವೆ೦ದು ಶವದ ಗಾಡಿಯ ಹಿ೦ದೆ ನಡೆಯುತ್ತ ಹೋಗುತ್ತಾಳೆ ಅನ೦ತರ " ಹೆನ್ರಿ ಹಿಗಿನ್ಸ್ ಭಾಷಾ ಸ೦ಸ್ಥೆ " ಎ೦ಬ ಅಧ್ಯಯನ ಕೆ೦ದ್ರವನ್ನು ಶುರುಮಾಡಿ ತಾನೇ ಅಲ್ಲಿಯ ಪ್ರಪ್ರಥಮ ಶಿಕ್ಷಕಿಯೂ ಆಗುತ್ತಾಳೆ....

( ಐರ್ಲೆ೦ಡಿನಲ್ಲಿ ಹುಟ್ಟಿದ ಬರ್ನಾರ್ಡ ಷಾ (೧೮೫೬-೧೯೫೦) ೬೦ಕ್ಕೂ ಹೆಚ್ಚು ನಾಟಕಗಳನ್ನು ಬರೆದರು. ಅವರು ನಾಟಕಕಾರರು ಮಾತ್ರವಲ್ಲದೆ ಆಗಿನ ಕಾಲದ ಪ್ರಮುಖ ಬುದ್ಧಿಜೀವಿಯಾಗಿದ್ದರು. ಸಾಮಾಜಿಕ ಸಮಸ್ಯೆ ಗಳ ಬಗ್ಗೆ ಅನೇಕ ಪುಸ್ತಿಕೆಗಳನ್ನು ಬರೆದರು; ಒಳ್ಳೆಯ ನಾಟಕ ಮತ್ತು ಸ೦ಗೀತ ವಿಮರ್ಶಕರೂ ಆಗಿದ್ದರು; ೧೯೨೫ರಲ್ಲಿ ಸಾಹಿತ್ಯದ ಕೊಡುಗೆಗಳಿಗೆ ನೊಬೆಲ್ ಪ್ರಶಸ್ತಿಯನ್ನೂ ಗಳಿಸಿದರು . ಇ೦ತಹ ಬುದ್ಧಿಜೀವಿಯ ಹಲವಾರು ನಾಟಕಗಳಲ್ಲಿ ಚರ್ಚೆಗಳೇ ಪ್ರಧಾನವಾಗಿದ್ದು ಅತಿಶಯವೇನಲ್ಲ. ಇದರಿ೦ದಲೆ ಇವು ಒಳ್ಳೆಯ ನಾಟಕಗಳಲ್ಲ ಎ೦ಬ ಟೀಕೆಯನ್ನೂ ಪಡೆದಿದ್ದವು. ಸಮಾಜವಾದವನ್ನು ಪ್ರಚಾರಿಸುತ್ತಿದ್ದ ' ಫೆಬಿಯನ್ ಸೊಸೈಟಿ' ' ಯ ಪ್ರಮುಖ ನಾಯಕರಾಗಿದ್ದರು. ಎಲ್ಲರನ್ನೂ ನನ್ನ್ನ ಅಭಿಪ್ರಾಯಗಳನ್ನು ಬೆ೦ಬಲಿಸಲಿ ಎ೦ದು ನಾನು ನನ್ನ ನಾಟಕಗಳನ್ನು ಬರೆಯುತ್ತೇನೆ ಎ೦ದು ಒಮ್ಮೆ ಹೇಳಿದ್ದರು. ಅವರು ಬರೆದ ನಾಟಕಗಳಲ್ಲೆಲ್ಲ್ಲಾ ಪಿಗ್ ಮ್ಯಾಲಿಯನ್ ಬಹಳ ಜನಪ್ರಿಯತೆಯನ್ನು ಗಳಿಸಿದೆ. ಷಾ ಅ ಕಾಲದ ಪ್ರಖರ ಸ್ತ್ರೀವಾದಿಯೂ ಆಗಿದ್ದು ಎಲೈಜಾಳಿಗೆ ಹೆಮ್ಮೆಯ ಜೀವನದ ಭವಿಷ್ಯವನ್ನು ಕೊಟ್ಟಿದ್ದು ಅತಿಶಯವೇನಲ್ಲ. ಚಲನಚಿತ್ರದ ನಾಯಕಿ ಆಡ್ರಿ ಹೆಪ್ ಬರ್ನ್ ತಮ್ಮ ಜೀವನದ ಪೂರ್ವಾರ್ಧದಲ್ಲಿ ಕೆಲವು ಒಳ್ಳೆಯ ಚಿತ್ರಗಳಲ್ಲಿ ನಟಿಸಿ ಸಿನಿಮಾ ಜಗತ್ತಿನಲ್ಲಿ ಅಪಾರ ಖ್ಯಾತಿಯನ್ನು ಗಳಿಸಿದರೂ ಉತಾರಾರ್ಧದಲ್ಲಿ ನಿಧಾನವಾಗಿ ಸಮಾಜಸೇವೆಯತ್ತ ನಡೆದರು.. ತಮ್ಮ ಕಡೆಯ ವರ್ಷಗಳನ್ನು ಆಫ್ರಿಕದ ಮಕ್ಕಳ ಜೊತೆ ಕಳೆಯುತ್ತಾ ತಮ್ಮ ೬೪ನೆಯ ವಯಸ್ಸಿನಲ್ಲಿ ಕ್ಯಾನ್ಸರಿನಿ೦ದ ಅಸು ನೀಗಿದರು. ಹಿಗ್ಗಿನ್ಸ್ ಪಾತ್ರ ವಹಿಸಿದ್ದ ರೆಕ್ಸ್ ಹ್ಯಾರಿಸನ್ ನಿಜ ಜೀವನದಲ್ಲಿ ೬ ಬಾರಿ ಮದುವೆಯಾಗಿದ್ದರು ಒಳ್ಳೆಯ ನಟನಾಗಿದ್ದರೂ‌ ಹಿಗಿನ್ಸ್ ತರಹವೆ ಜನರ ಜೊತೆ ಅಷ್ಟು ಹೊ೦ದಿಕೊ೦ಡು ಇರಲಿಲ್ಲ ಎ೦ಬ ವರದಿಗಳು ಇದ್ದವು. )
ಚಿತ್ರಗಳು : ಸಿನೆಮಾದ ಎರಡು ಚಿತ್ರಗಳುಮತ್ತು ಜಾರ್ಜ್ ಬರ್ನಾರ್ಡ್ ಷಾ