Sunday, July 13, 2014

ಅಸಾಮಾನ್ಯ ಅಣ್ಣ (ಪಿ.ಆರ್.ಬ್ರಹ್ಮಾನ೦ದ) - ತಮ್ಮನ ನೆನಪುಗಳು ಪಾಲಹಳ್ಳಿ ವಿಶ್ವನಾಥ್ Palahalli Vishwanath


 This article about Prof P.R.Brahmananda appeared in today's (31/3/2013) edition of VIJAYAVANI

http://epapervijayavani.in/epaperimages/3132013/3132013-md-hr-20/34621359.JPG



ಪಿ.ಆರ್.ಬ್ರಹ್ಮಾನ೦ದ - ಆದರ್ಶ ಸಾರಸ್ವತ

ಪಾಲಹಳ್ಳಿ ವಿಶ್ವನಾಥ್

( ಅಸಾಮಾನ್ಯ ಅಣ್ಣನ ಬಗ್ಗೆ ತಮ್ಮನ ನೆನಪುಗಳು)

೫೦ ವರ್ಷಗಳ ಹಿ೦ದಿನ ಮಾತು. ಮು೦ಬಯಿಯಲ್ಲಿ ನನ್ನ ಸ೦ಶೋಧನಾ ಜೀವನ ಪ್ರಾರ೦ಭಿಸಿದ್ದೆ. ಕೆಲಸ ಕೊಲಾಬಾದಲ್ಲಿ, ಮನೆ ವಡಾಲಾದಲ್ಲಿ . ಸ೦ಜೆ ಮನೆಗೆ ಹೋಗಿ ಬಾಗಿಲನ್ನು ತೆಗೆಯಲು ಬೀಗದ ಕೈ ತೆಗೆದೆ. ಒಳಗೋ ಮಾರಾಮಾರಿ ಎನ್ನುವಷ್ಟು ಜೋರಾಗಿ ಮಾತುಗಳು .ಒಳಗೆ ನೋಡಿದರೆ ಅಣ್ಣ ಮತ್ತು ಅತಿಥಿಯೊಬ್ಬರು ಎತ್ತರದ ಧ್ವನಿಯಲ್ಲಿ ವಾದ ವಿವಾದಗಳಲ್ಲಿ ತೊಡಗಿದ್ದಾರೆ. ಇಬ್ಬರೂ ಕನ್ನಡಕ ಧರಿಸಿ ಬಿಳಿ ಬಟ್ಟೆ ಹಾಕಿಕೊ೦ಡಿದ್ದರು. . " ನಾವು ಏನೋ ಮಾತಾಡ್ತಿದೀವಿ, ಡಿಸ್ಟರ್ಬ್ ಮಾಡಬೇಡ. ಒಡಾಡಿಕೊ೦ಡು ಬಾ" ಎ೦ದು ಅಣ್ಣ ಹೇಳಿದರು. . ' ಇದು ಸ೦ಭಾಷಣೆಯ ಧಾಟಿಯಾ' ಎ೦ದು ಗೊಣಗಿಕೊ೦ಡು ಬೀದಿಗೆ ಇಳಿದೆ. ಮನೆಗೆ ಅತಿಥಿಯಾಗಿ ಬ೦ದಿದ್ದವರು ಮು೦ದೆ ಬಹಳ ಖ್ಯಾತಿ ಗಳಿಸಿದ ಅರ್ಥಶಾಸ್ತ್ರಜ್ಞ ಜಗದೀಶ್ ಭಗವತಿ. . ಅವರ ಧ್ವನಿ ಜೋರೇ ಇತ್ತು. ಅವರಿಗಿ೦ತ ಜೋರಿನ ಧ್ವನಿ ಇದ್ದದ್ದು ನನಗಿ೦ತ ೧೮ ವರ್ಷ ದೊಡ್ಡವರಿದ್ದ ಅಣ್ಣನದ್ದು.. ಅವರೂ ಅರ್ಥಶಾಸ್ತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಈ ಇಬ್ಬರು ಮೇಧಾವಿಗಳ ಅ೦ದಿನ ' ಸ೦ಭಾಷಣೆ' ಆ ಕ್ಷೇತ್ರದ ವಿದ್ಯಾರ್ಥಿಗಳಿಗೆ ಖುಷಿ ತರುತ್ತಿತ್ತೋ ಏನೋ ! ನಮ್ಮ ಅಣ್ಣ ಈಗ ಇದ್ದಿದ್ದರೆ ಈ ಸೆಪ್ಟೆ೦ಬರ್ ೨೫ಕ್ಕೆ ೮೭ ವರ್ಷಗಳಾಗುತ್ತಿರುತ್ತಿತ್ತು. . ಅವರ ಹೆಸರು ಪಿ. ರ್. ಬ್ರಹ್ಮಾನ೦ದ .
ಸ್ವಾತ೦ತ್ರ್ಯ ಯೋಧ ಪತ್ರಕರ್ತ ಪಿ.ಆರ್.ರಾಮಯ್ಯ ಮತ್ತು ಸಮಾಜಸೇವಿಕೆ ಜಯಲಕ್ಷಮ್ಮ ಅವರ ಮೊದಲ ಮಗನಾಗಿ ಹುಟ್ಟಿದ ಅಣ್ಣ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದಿ ಅನ೦ತರ ಮು೦ಬಯಿ ವಿಶ್ವೈದ್ಯಾಲಯದಲ್ಲಿ ಡಾಕ್ಟರೇಟ್ ಗಳಿಸಿ ಅಲ್ಲೇ ಸ೦ಶೋಧನೆ ಮಾಡುತ್ತಿದ್ದರು. . ನಾನು ಬೆ೦ಗಳೂರಿನಲ್ಲಿ ಶಾಲಾ ಕಾಲೇಜುಗಳಲ್ಲಿ ಓದುತ್ತಿದ್ದಾಗ ಯಾವಾಗಲೋ ಒಮ್ಮೆ ಊರಿಗೆ ಬರುತ್ತಿದ್ದ. ರು. . ಅವರಲ್ಲಿ ಇದ್ದ ತೀವ್ರತೆಯಿ೦ದ ನಮಗೆಲ್ಲ ಅವರ ಜೊತೆ ಸಲಿಗೆ ಇರಲಿಲ್ಲ. ಮು೦ಬಯಿಗೆ ಹೋದ ಎಷ್ಟೋ ಸ೦ಬ೦ಧೀಕರನ್ನು ಅವರು ಹೆಚ್ಚು ಮಾತನಾಡಿಸುತ್ತಿರಲೂ ಇಲ್ಲ. ತಮ್ಮ ೩೦ನೆಯ ವಯಸ್ಸಿಗೆ ಮು೦ಚೆಯೇ ಅವರು ಹಿರಿಯ ಪ್ರಾಧ್ಯಾಪಕ ಸಿ.ಎನ್.ವಕೀಲ್ ಜೊತೆ ಬರೆದಿದ್ದ ' ಪ್ಲಾನಿ೦ಗ್ ಫರ್ ಅನ್ ಎಕ್ಸ್ಪಪ್ಯಾ೦ಡಿಗ್ ಎಕಾನಮಿ' ಭಾರತದಿ೦ದ ಹೊರಬ೦ದ ಮಹತ್ವಪೂರ್ಣ ಅರ್ಥಶಾಸ್ತ್ರದ ಪುಸ್ತಕಗಳಲ್ಲಿ ಒ೦ದು ಎ೦ದು ಪರಿಗಣಿಸಲಾಗಿತ್ತು . ಕೃಷಿಕ್ಷೇತ್ರಕ್ಕೆ ಮತ್ತು ದೈನ೦ದಿನ ಪದಾರ್ಥಗಳ ತಯಾರಿಕೆಗೆ ಆದ್ಯತೆ ಕೊಡಬೇಕು ಎ೦ಬುದು ಪುಸ್ತಕದ ಮುಖ್ಯ ಆಲೋಚನೆ ಯಾಗಿದ್ದಿತು. ಆದರೆ ಎರಡನೆಯ ಪ೦ಚವಾರ್ಷಿಕ ಯೊಜನೆಯಲ್ಲಿ ಪ್ರಾಮುಖ್ಯತೆ ಕೊಟ್ಟಿದ್ದು ಡೊಡ್ಡ ದೊಡ್ಡ ಕೈಗಾರಿಕೆಗಳಿಗೆ , ಅವರ ಆ ಸಿದ್ಧಾ೦ತ - " ವೇಜ್ -ಗುಡ್ಸ್ ಮಾಡೆಲ್" - ವನ್ನು ಅವರು ಜೀವನ ಪೂರ್ತಿ ಸುಧಾರಿಸುತ್ತಾ ಹೋದರು.
ಮು೦ಬಯಿಗೆ ಹೋದ ಮೇಲೆ ಸ್ವಲ್ಪ ದಿನ ಆವರ ಜೊತೆ ಇದ್ದು ಅನ೦ತರ ಹಾಸ್ಟೆಲ್ ಸೇರಿದೆ. ಅವರನ್ನು ನೋಡಲು ಆಗಾಗ್ಗೆ ಅವರ ಆಫೀಸಿಗೆ ಹೋಗುತ್ತಿದ್ದೆ. . ದಕ್ಷಿಣ ಮು೦ಬಯಿಯ ವಿಶ್ವವಿದ್ಯಾಲಯದ ಭವ್ಯ ಕಟ್ಟಡದೊಳಗಿನ ಕಾರಿಡಾರ್ ಒ೦ದರ ಕೊನೆಯಲ್ಲಿ ಎತ್ತರದ ಚಾವಣಿಯ ದೊಡ್ಡ ಕೋಣೆಯಲ್ಲಿ ಅವರು ಕುಳಿತುಕೊಳ್ಳುತ್ತಿದ್ದರು.. . ಎಷ್ಟೋ ಬಾರಿ ೨ ರೂಪಾಯಿ ಕೊಟ್ಟು ಏನಾದರೂ ತಿ೦ದುಬಿಟ್ಟು ಹೋಗು ಎ೦ದು ಕಳಿಸಿಬಿಡುತ್ತಿದ್ದರು.. ೧೯೬೭ರ ಕೊನೆಯಲ್ಲಿ ನಾನು ಭೌತಶಾಸ್ತ್ರದಲ್ಲಿ ಉನ್ನತ ವ್ಯಾಸ೦ಗಕ್ಕಾಗಿ ಅಮೆರಿಕದ ಮಿಶಿಗನ್ ವಿಶ್ವವಿದ್ಯಾಲಯಕ್ಕೆ ಹೋಗಲು ನಿರ್ಧರಿಸಿದಾಗ ಅವರು ಹೋಗಬೇಡ ಎ೦ದು ಬಲವ೦ತ ಮಾಡಲು ಶುರುಮಾಡಿದರು. . ಆ ಒ೦ದು ದಿನವನ್ನ೦ತೂ ಇ೦ದೂ ನಾನು ಮರೆಯಲಾರೆ. " ನಮ್ಮ ದೇಶ ಬಿಡಬಾರದು. ಇಲ್ಲೇ ಓದಿ ಮು೦ದೆ ಬರಲು ಪ್ರಯತ್ನ ಮಾಡಬೇಕು. . ಅಮೆರಿಕ ನಮಗೆ ದಾರಿ ತೋರಲು ಆಗುವುದಿಲ್ಲ. . ಅಲ್ಲಿಗೆ ಹೋದವರು ವಾಪಸ್ಸು ಬರುವುದಿಲ್ಲ.... ಇಲ್ಲಿನ೦ತೆ ನಿನಗೆ ಅಲ್ಲಿ ಸಾರ್ತ್ರೆ, ಕ್ಯಾಮು ಎಲ್ಲ ಓದ್ತಾ ಇರೋದಿಕ್ಕೆ ಅಗೋದಿಲ್ಲ. " ಎ೦ದೆಲ್ಲ ಬುದ್ಧಿವಾದ ಬ೦ದಿತ್ತು. .ಧ್ವನಿ ಏರುತ್ತ ಕಡೆಯಲ್ಲಿ ಸ್ವಲ್ಪ ಮೆಲೋಡ್ರಾಮಾ ಕೂಡ ಆಯಿತು. " ನೀನು ಅಮೆರಿಕಕ್ಕೆ ಹೋದರೆ ನಾನು ನಿನ್ನ ಮುಖವನ್ನೂ ನೋಡುವುದಿಲ್ಲ .." ನನಗೆ ಬಹಳ ನೋವಾಯಿತು.; ಆದರೆ ನನ್ನ ನಿರ್ಧಾರ ಬದಲಾಗಲಿಲ್ಲ. (ಚಿಕ್ಕ೦ದಿನಲ್ಲಿ ರೊಚ್ಚೇಳದೇ ಇದ್ದರೆ ಇನ್ನು ಯಾವಾಗ?) ಆಗ ಅವರ ಪ್ರತಿಕ್ರಿಯೆ ಸ೦ಕುಚಿತ ಮನೋಭಾವ ಎ೦ದೆನಿಸಿತ್ತು, . ಈಗ ಹಿ೦ದೆ ತಿರುಗಿ ನೋಡಿದಾಗ ಇದು ಅತೀವ ದೇಶಭಕ್ತಿಯ ಪ್ರತೀಕವೇನೋ ಎ೦ದನಿಸುತ್ತದೆ .
ನಾನು ಅಮೆರಿಕದಲ್ಲಿ ಹತ್ತು ವರ್ಷಗಳಿದ್ದು ೧೯೭೦ರ ದಶಕದ ಕಡೆಯಲ್ಲಿ ವಾಪಸ್ಸು ಬ೦ದಾಗ ಅವರ ಸ್ಥಾನಮಾನ ಮತ್ತೂ ಹೆಚ್ಚಾಗಿ ಅವರ ಹೇಳಿಕೆಗಳನ್ನು ಗೌರವದಿ೦ದ ಸ್ವೀಕರಿಸುತ್ತಲಾಗಿದ್ದಿತು. . ಒ೦ದಾದ ಮೇಲೆ ಒ೦ದ೦ತೆ ಪುಸ್ತಕಗಳನ್ನು ಬರೆಯುತ್ತಿದ್ದರು. (ಒಟ್ಟು ೩೦ ಪುಸ್ತಕಗಳು ) . ಹಿ೦ದಿದ್ದ ಉತ್ಕಟತೆ ಮಾಯವಾಗಿರಲಿಲ್ಲ. ಅದರೂ ಮುಖದಲ್ಲಿ ಹೆಚ್ಚು ನಗು ಕಾಣಿಸುತ್ತಿತ್ತು. . ಆ ಕಾಲದ ಅನೇಕ ಮಹಾ ಅರ್ಥಶಾಸ್ತ್ರಜ್ಞರು ಅವರ ಅಭಿಪ್ರಾಯಗಳನ್ನು ಹೊಗಳಿದ್ದರು. ಪಿಯರೊ ಸ್ರಾಫ, ಜೋನ್ ರಾಬಿನ್ಸನ್, ಜೇಕಬ್ ವೈನರ್ , ಥಿಯೊಡೋರ್ ಶುಲ್ಟ, , ಕೆನೆತ್ ಆರೋ, ಪಾಲ್ ಸ್ಯಾಮ್ಯುಯಲ್ಸನ್ , ಲಿಯೊ೦ಟಿಫ್ ( ವಿಕ್ರಮ್ ಸಾರಭಾಯಿಯವರನ್ನು ನಾನು ಒ೦ದು ಬಾರಿ ಸ೦ಧಿಸಿದಾಗ ಅವರು ' ಲಿಯೊ೦ಟೆಫ್ ನಿಮ್ಮ ಅಣ್ಣನ ವಿಷಯ ಬಹಳಾ ಹೇಳಿದಾರೆ ' ಎ೦ದಿದ್ದರು) ಮತ್ತಿತರರ ಜೊತೆ ಅವರ ಸ೦ಪರ್ಕವಿದ್ದ್ದಿತು. ಈ ಪಟ್ಟಿಯಲ್ಲಿ ಅನೇಕರು ನೊಬೆಲ್ ವಿಜೇತರೂ ಇದ್ದರು
ಬುದ್ಧಿಜೀವಿಗಳು ಸಮಾಜದ ಸಮಸ್ಯೆಗಳಿಗೆ ಸ್ಪ೦ದಿಸಬೇಕು ಎ೦ಬುದು ಅವರ ಅಭಿಪ್ರಾಯವಾಗಿದ್ದು ಸರ್ಕಾರಕ್ಕೆ ಸಲಹೆಗಳನ್ನು ಕೊಡುತ್ತ ಟೀಕಿಸಬೇಕಾದಾಗ ಟೀಕಿಸುತ್ತಲೂ ಇದ್ದರು . ೧೯೯೬ರಲ್ಲಿ ದೇಶದ ಅಪ್ರತಿಮ ಅರ್ಥಶಾಸ್ತ್ರಜ್ಞ ರಿಗೆ ಕೊಡುವ ಸನ್ಮಾನವೂ ಸಿಕ್ಕಿತು ಅನ೦ತರ ಅ೦ತರ ರಾಷ್ಟ್ರೀಯ ಅರ್ಥಶಾಸ್ತ್ರಜ್ಞರ ಸ೦ಘದ ಗೌರವಾನ್ವಿತ ಅಧ್ಯಕ್ಷರು ಆದರು. ಅವರ ಕಡೆಯ ಎರಡು ಪುಸ್ತಕಳನ್ನು ಅವರು ೭೦ ತಲುಪಿದ ನ೦ತರ ಬರೆದಿದ್ದರು:; ಎರಡೂ ಅತಿ ದೊಡ್ಡ ಪುಸ್ತಕಗಳು . ಒ೦ದು ನೊಬೆಲ್ ಬಹುಮಾನ ಪಡೆದವರ ಮತ್ತು ಅದೇ ಶ್ರೇಣಿಯಲ್ಲಿದ್ದು ಬಹುಮಾನ ಸಿಗದಿದ್ದ ಇತರ ಅರ್ಥಶಾಸ್ತ್ರಜ್ಞರ ಬಗ್ಗೆ ಇದ್ದಿತು . ನೊಬೆಲ್ ವಿಜೇತ ಸೊಸ್ಲೊವ್ ' ಇಷ್ತೆಲ್ಲವನ್ನೂ ಒಬ್ಬನೇ ವ್ಯಕ್ತಿ ಅರ್ಥಮಾಡಿಕೊ೦ಡು ಬರೆದಿರುವುದು ಬಹಳ ಅತಿಶಯದ ವಿಷಯ ' ಎ೦ದಿದ್ದರು. ( ಇದೇ ಧಾಟಿಯಲ್ಲಿ ಮು೦ದೆ ಐ.ಜಿ. ಪಟೆಲ್ ರವರು " ಭಾರತದಲ್ಲಿ ಪ್ರಾಯಶ: ಮೂರೇ ಜನ ಅರ್ಥಶಾಸ್ತ್ರದ ನಿಜ ಪ೦ಡಿತರು - .ಕೆ.ದಾಸ್ ಗುಪ್ತ , ಸುಖ್ಮಯ್ ಚಕ್ರವರ್ತಿ ಮತ್ತು ಬ್ರಹ್ಮಾನ೦ದ "ಎ೦ದಿದ್ದರು) . ಅವರ ಕಡೆಯ ಪುಸ್ತಕದ ಹೆಸರು ' ಭಾರತದ ೧೯ನೆಯ ಶತಮಾನದ ಆರ್ಥಿಕ ಚರಿತ್ರೆ '. ಅವರ ೭೫ನೆಯ ವಯಸ್ಸಿನಲ್ಲಿ ಮು೦ಬಯಿ ವಿಶ್ವವಿದ್ಯಾಲಯ ಮತ್ತಿತರ ಪುಸ್ತಕಾಲಯಗಳ ಹಳೆಯ ಪುಸ್ತಕಗಳ ಧೂಳು ಕುಡಿದುಕೊ೦ಡು ರಚಿಸಿದ ಪುಸ್ತಕ.ವಿದು. ! ಅವರ ಶಿಷ್ಯ ಮೇಘನಾದ್ ದೇಸಾಯಿಯವರ ಪ್ರಕಾರ ಈ ಪುಸ್ತಕ ಅದ್ವಿತೀಯ ! ೨೦೦೨ರ ಮಾರ್ಚಿನಲ್ಲಿ ಹೃದಯಾಘಾತವಾದರೂ ಆಸ್ಪತ್ರೆಯಿ೦ದಲೇ ವೃತ್ತಪತ್ರಿಕೆಗೆ ಅವರ ಅ೦ಕಣವನ್ನು ಬರೆದು ಕಳಿಸುತ್ತಿದ್ದರು. !
ಅರ್ಥಶಾಸ್ತ್ರದ ಬಗ್ಗೆ ನನ್ನ ತಿಳುವಳಿಕೆ ಬಹಳ ಕಡಿಮೆ. ಆದ್ದರಿ೦ದ ಅವರ ಬಗ್ಗೆ ಬೇರೆಯವರು ಹೇಳಿದ ಕೆಲವು ಮಾತುಗಳನ್ನೇ ಉದ್ಧರಿಸುತ್ತೇನೆ . ೨೦೦೩ರ ಜನವರಿ ೨೩ರ೦ದ್ಯು ಅವರ ಸಾವಿನ ನ೦ತರ ಪತ್ರಿಕೆಗಳಲ್ಲಿ ಅನೇಕ ಲೇಖನಗಳಿದ್ದವು; ಮನೆಯವರಿಗೂ ಅನೇಕ ಪತ್ರಗಳು ಬ೦ದವು . ಅವರಲ್ಲಿ ಒ೦ದು ಈ ರೀತಿ ಇದ್ದಿತು " ನನಗೆ ಅವರು ಒಳ್ಳೆಯ ಸ್ನೇಹಿತರಾಗಿದ್ದರು ಎಷ್ಟೋ ಬಾರಿ ನಾನು ಸಲಹೆಗಳಿಗಾಗಿ ಅವರ ಬಳಿ ಹೊಗುತ್ತಿದ್ದೆ. . ಅನೇಕ ಅರ್ಥಶಾಸ್ತಜ್ಞರಿಗೆ ಅವರು ಮಾರ್ಗದರ್ಶಿಯಾಗಿದ್ದರು. . ನಿಮ್ಮ ವ್ಯಸನದ ಜೊತೆಗೆ ನಮ್ಮ೦ತಹ ಅನೇಕರಿಗೂ ಅವರ ಸಾವು ದು:ಖ ತ೦ದಿದೆ " - ಇದನ್ನು ಬರೆದಿದ್ದವರು ಆಗ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಡಾಕ್ಟರ್ ಮನಮೋಹನ್ ಸಿ೦ಗ್ ಅವರು . ಜೈರಾಮ್ ರಮೇಶ್ 'ಟೈಮ್ಸ್ ಅಫ್ ಇ೦ಡಿಯಾ'ದಲ್ಲಿ ' ,ಮೇಧಾವಿ ಗುರುವಿಗೆ ವಿದಾಯ ' ಎ೦ಬ ಶೀರ್ಶಿಕೆಯಲ್ಲಿ ಬ್ರಹ್ಮಾನ೦ದ ಹೇಳಿದ ರೀತಿಯಲ್ಲಿ ಭಾರತ ಹೋಗಿದ್ದಿದ್ದರೆ ಏನಾಗುತ್ತಿತ್ತೋ? ಎನ್ನುವುದು ಸ್ವಾರಸ್ಯಕರ ಪ್ರಶೆ ಎ೦ದಿದ್ದರು (ಅವರ ವೇಜ್ ಗುಡ್ಸ್ ಮಾದರಿ ಅಪಕ್ವ ಎ೦ದು ಕೆಲವರು ಹೇಳಿದ್ದನ್ನೂ ಗಮನಿಸಬೇಕು) . ಅಮೆರಿಕದಿ೦ದ ಖ್ಯಾತ ಅರ್ಥಶಾಸ್ತ್ರಜ್ಞರಾದ ಪಾಲ್ ಸ್ಯಾಮ್ಯುಎಲ್ಸನ್ ' ಸಾರಸ್ವತರು ಅವರ ಸಿದ್ಧಾ೦ತಗಳ ಮೂಲಕ, , ಬರಹಗಳ ಮೂಲಕ, , ಯಾವಾಗಲೂ ಬದುಕಿರುತ್ತಾರೆ. " ' ಎ೦ದು ಸಾ೦ತ್ವನ ಹೇಳಿದ್ದರು. . ಪ್ರೊಫೆಸರ್ ದಿಲೀಪ್ ನಾಚ್ನೆ ಅವರ ಬಗ್ಗೆ ' ಎಕನಾಮಿಕ್ ಅ೦ಡ್ ಪೊಲಿಟಿಕಲ್ ವೀಕ್ಲಿ' ಯ ದೊಡ್ಡ ಲೇಖನದಲ್ಲಿ : "ಸ್ವೇಚ್ಚೆಯಿ೦ದ ಅರ್ಥಶಾಸ್ತ್ರದ ಅನೇಕೆ ಕೋಣೆಗಳಲ್ಲಿ ಇಣುಕಿ ನೋಡಿ ಕೊಡುಗೆಗಳನ್ನು ಬಿಟ್ಟು ಹೋಗಿದ್ದಾರೆ ". ಮೇಘನಾದ ದೇಸಾಯಿಯವರು ಅವರನ್ನು ಪ್ರಥಮ ಶ್ರೇಣೀಯ ಸ೦ಶೋಧಕ ಎ೦ದಲ್ಲದೆ ಅಸಾಮಾನ್ಯ ಅಸ೦ಪ್ರದಾಯ ವ್ಯಕ್ತಿ ಎ೦ದು ಬಣ್ಣಿಸಿದ್ದರು. ಹಾಗೂ ಅವರ ಪ್ರತಿಭೆಗೆ ಸರಿಯಾದ ಮನ್ನಣೆ ದೊರೆಯಲಿಲ್ಲವೆ೦ದೂ ಅವರು ಯಾವ ಬಣಕ್ಕೆ ಸೇರದಿದ್ದು ಮತ್ತು ಅವರ ಕ್ಲಿಷ್ಟ ಶೈಲಿ ಕಾರಣವಿರಬಹುದು ಎ೦ದೂ ಬರಹಗಳಿದ್ದವು. ಏನೇ ಆಗಲಿ ಅವರು ' ಇ೦ಡಿಯನ್ ಎಕನಾಮಿಕ್ ಜರ್ನಲ್' ಮೂಲಕ ಅನೇಕ ಸಣ್ಣ ಪುಟ್ಟ ವಿಶ್ವವಿದ್ಯಾಲ್ಯಗಳಲ್ಲಿನ ಸ೦ಶೋಧಕರಿಗೆ ಲೇಖನಗಳನ್ನು ಬರೆಯಲು ಉತ್ತೇಜನ ಕೊಡುತ್ತಿದ್ದದ್ದು ಬಹಳ ಮುಖ್ಯ. . ದೇಶದ ಅನೇಕ ಅರ್ಥಶಾಸ್ತ್ರ ಅಧ್ಯಾಪಕರಿಗೆ ಅವರ ಬಗ್ಗೆ ಅಪಾರ ಗೌರವವಿದ್ದು ದ೦ತಕಥೆಯಾಗಿದ್ದರು. .
ನಮ್ಮ ಅಣ್ಣ ನಿಜವಾಗಿಯೂ ಆದರ್ಶ ಸಾರಸ್ವತರಾಗಿದ್ದರು . ಅವರ ಉತ್ಕಟತೆ (' ಇ೦ಟೆನ್ಸಿಟಿ' ) ಮತ್ತು ಏಕಾಗ್ರತೆಯನ್ನು ನಾನು ಹೆಚ್ಚು ಜನರಲ್ಲಿ ನೊಡಿಲ್ಲ. ಯಾವಾಗಲೂ ಖಾದಿ ಬಟ್ಟೆಯನ್ನು ಹಾಕಿಕೊ೦ಡು ಸರಳ ಜೀವನ ನಡೆಸುತ್ತಿದ್ದು ಎಷ್ಟೋ ಜನ ಹೇಳಿದ೦ತೆ " ಅವರು ಅರ್ಥಶಾಸ್ತ್ರವನ್ನೇ ಮದುವೆಯಾಗಿದ್ದರು " ಆದರೂ ಕ್ರಿಕೆಟ್ ಮ್ಯಾಚ್ ಇದ್ದಾಗ ಆಕಾಶತಲೆಯ ಮೇಲೆ ಬಿದ್ದರೂ ಅವನಿಗೆ ಗೊತ್ತಾಗುತ್ತಿರಲಿಲ್ಲ . ಮು೦ಬಯಿಯ,,ಲ್ಲಿ ಅವರ ಹೆಸರು ಇನ್ನೂ ಬಹಳ ಜೀವ೦ತವಾಗಿದೆ.ಅವರು ತೀರಿಹೋದಾಗ ಎರಡು ಮರಾಠಿ ಪತ್ರಿಕೆಗಳಲ್ಲಿ ಆವರ ಬಗ್ಗೆ ಸ೦ಪಾದಕೀಯಗಳಿದ್ದವು . ಅಲ್ಲಿಯ ಸಾರಸ್ವತ
ಲೋಕದಲ್ಲ೦ತೂ ಅವರಿಗೆ ಬಹಳ ಗೌರವವಿದೆ . ಜೀವನದ ಕಡೆಯ ೧೫ ವರ್ಷಗಳನ್ನು ಅವರು ಬೆ೦ಗಳೂರಿನಲ್ಲಿ ಕಳೆದಿದ್ದರೂ ಈ ಊರಾಗಲೀ ಕನ್ನಡ ನಾಡಾಗಲೀ ಅವರನ್ನು ಹೆಚ್ಚು ಹಚ್ಚಿಕೊಳ್ಳಲಿಲ್ಲ.
----------------------------------------------------------





.

1 comment:

  1. Respect the great personality from a great family of Karnataka. The last line of the article is really painful. Our people didn't know the worth of legends, could be because of ignorance and cast riddled society.

    ReplyDelete