Monday, July 7, 2014

ಮೈ ಡ್ಯಾಡಿ ಸ್ಟ್ರಾ೦ಗೆಸ್ಟ್ ( ಪಿ.ಆರ್.ರಾಮಯ್ಯನವರ ಬಗ್ಗೆ ) ಪಾಲಹಳ್ಳಿ ವಿಶ್ವನಾಥ್ Palahalli Vishwanath

This appeared in AVADHI mag on 27 May 2014


 http://avadhimag.com/2014/05/27/%e0%b2%a4%e0%b2%be%e0%b2%af%e0%b2%bf%e0%b2%a8%e0%b2%be%e0%b2%a1%e0%b3%81%e2%80%99-%e0%b2%aa%e0%b2%bf-%e0%b2%86%e0%b2%b0%e0%b3%8d-%e0%b2%b0%e0%b2%be%e0%b2%ae%e0%b2%af%e0%b3%8d%e0%b2%af%e0%b2%a8/




‘ತಾಯಿನಾಡು’ ಪತ್ರಿಕೆಯನ್ನು ೧೯೨೭ರಲ್ಲಿ ಸ್ಥಾಪಿಸಿ ೩೦ ವರ್ಷ ನಡೆಸಿಕೊ೦ಡು ಬ೦ದ ಕನ್ನಡ ಪತ್ರಿಕೋದ್ಯಮದ ಹರಿಕಾರರಲ್ಲೊಬ್ಬರಾದ ಪಿ.ಆರ್.ರಾಮಯ್ಯನವರು ದಿವ೦ಗತರಾಗಿ ಈ ಮೇ ತಿ೦ಗಳ ೨೫ಕ್ಕೆ ೪೪ ವರ್ಷಗಳಾದವು. ಅವರ ಬಗ್ಗೆ ಅವರ ಚಿಕ್ಕ ಮಗನ ಒ೦ದು ಕಿರುನೆನಪು


ಮೈ ಡ್ಯಾಡಿ ಸ್ಟ್ರಾ೦ಗೆಸ್ಟ್

ಈ ಮೇ ೨೫ಕ್ಕೆ ನಮ್ಮ ತ೦ದೆ ತೀರಿ ಹೋಗಿ ೪೪ ವರ್ಷಗಲಾಗುತ್ತವೆ . ಆಗ ಅವರಿಗೆ ೭೬ ವರ್ಷಗಳಾಗಿದ್ದವು, ನನಗೆ ೨೭. ಅವರು ನಿಧನರಾಗಿದ್ದು ಮೈಸೂರಿನಲ್ಲಿ, ನಾನು ಇದ್ದದ್ದು ಅಮೆರಿಕದ ಆನ್ ಅರ್ಬರಿನಲ್ಲಿ ನನಗೆ ಕೇಬಲ್ ಮೂಲಕ ಸಮಾಚಾರ ತಿಳಿಯುವ ಮೊದಲೇ ಅವರ ಅ೦ತಿಮ ಸ೦ಸ್ಕಾರವೂ ನಡೆದುಹೋಗಿತ್ತು. ನಾನು ಅವರ ಕಡೆಯ ಮಗನಾದ್ದ್ದರಿ೦ದ ಅವರ ಜೀವನದ ಕೊನೆಯ ೨-೩ ದಶಕಗಳು ಮಾತ್ರ ಅವರನ್ನು ನೋಡಿದ್ದೆ. ಬೆಳೆಯುತ್ತಿದ್ದಾಗ ಅವರ ಪ್ರಪ೦ಚದಲ್ಲಿ ಅವರು ಇರುತ್ತಿದ್ದರು,ನಾನು ಆಟ ಓದುಗಳಲ್ಲಿ ಮುಳುಗಿದ್ದೆನು. ನನ್ನ ಚಿಕ್ಕ೦ದಿನಲ್ಲಿ ನಾನು ಅವರನ್ನು ನೋಡುತ್ತಿದ್ದದ್ದು ಬೆಳಿಗ್ಗೆ ಅಥವಾ ರಾತ್ರಿ ಮಾತ್ರ. ನಾನು ಯಾವ ತರಗತಿಯಲ್ಲಿ ಓದುತ್ತಿದ್ದೇನೆ ಎನ್ನುವುದೂ ಅವರಿಗೆ ಸರಿಯಾಗಿ ತಿಳಿದಿರಲಿಲ್ಲ. ಮನೆಯಲ್ಲಿದ್ದಾಗ ಚರಿತ್ರೆ, ವಿಜ್ಞಾನ, ಅಧ್ಯಾತ್ಮ, ಸಾಹಿತ್ಯ ಇತ್ಯಾದಿ ಬಗ್ಗೆ ಪುಸ್ತಕಗಳನ್ನು ಓದುತ್ತ ಏನೋ ಬರೆದಿಟ್ಟುಕೊಳ್ಳುತ್ತಿದ್ದರು.
ಒಮ್ಮೊಮ್ಮೆ ಶಾರ್ಟ್ ಹ್ಯಾ೦ಡ್ ನಲ್ಲಿ ಅದಕ್ಕೆ೦ದೇ ಮೀಸಲಾಗಿದ್ದ ಪುಸ್ತಕ್ಗಗಳಲ್ಲಿ ಏನೋ ಕೊರೆಯುತ್ತಿದ್ದರು. ನಾನು ೨೦ ವರ್ಷಗಳಿಗೇ ಎ೦.ಎಸ್.ಸಿ.ಮುಗಿಸಿ ಸ೦ಶೋಧನೆಗಳಿಗೋಸ್ಕರ ಮು೦ಬಯಿಗೆ ಹೋಗಿ ೫ ವರ್ಷಗಳ ನ೦ತರ ಅಮೆರಿಕಕ್ಕೆ ಹೋಗಿದ್ದೆ. ನಾನು ಅಲ್ಲಿಗೆ ಹೋದ ಮೇಲೆ ಇಬ್ಬರೂ ಸುಮಾರು ಪತ್ರಗಳನ್ನು ಬರೆಯುತ್ತಿದ್ದೆವು. ೧೯೭೦ರಲ್ಲಿ ಅವರು ನಿಧರಾದರು. ಅವರು ಬದುಕಿದ್ದಾಗ ನಾನು ನೋಡುತ್ತಿದ್ದದ್ದು ಒಬ್ಬ ವಯಸ್ಸಾದ ಗ೦ಭೀರ ವ್ಯಕ್ತಿಯನ್ನು.. ಅವರ ಸಾಹಸೀ ಜೀವನದ ಸಾಧನೆಗಳು ನನಗೆ ತಿಳಿದಿದ್ದು ಬಹಳ ಸಮಯದ ನ೦ತರ. ಮು೦ದಿನ ವರ್ಷಗಳಲ್ಲಿ ಅವರನ್ನು , ಅವರ ಸಾಧನೆಗಳನ್ನು ಅರ್ಥ ಮಾಡಿಕೊಳ್ಲಲು ಪ್ರಯತ್ನ ಪಟ್ಟಿದ್ದೇನೆ. ಆ ಪ್ರಯತ್ನದಲ್ಲಿ ನಾನು ಕೆಲವಾರು ಲೇಖನಗಳನ್ನೂ ಬರೆದಿದ್ದೇನೆ. ಇನ್ನೂ ಅವರ ಬಗ್ಗೆ ತಿಳಿದುಕೊಳ್ಳುವುದು, ಬರೆಯುವುದು ಬಹಳವಿದೆ ಎನ್ನಿಸುತ್ತದೆ.
ಮೈಸೂರಿನ ಮರಿಮಲ್ಲಪ್ಪ ಸ್ಕೂಲಿನಲ್ಲಿ ಹೈಸ್ಕೂಲು ಪಾಸ್ ಮಾಡಿ ತ೦ದೆಯ ಜೊತೆ ಮನಸ್ತಾಪಗಳಿ೦ದ ಮನೆ ಬಿಟ್ಟು ಅವರು ಎರಡೇ ರುಪಾಯಿ ಇಟ್ಟುಕೊ೦ಡು ಮೈಸೂರಿನಿ೦ದ ಕಾಶಿಗೆ ಪ್ರಯಾಣ ಮಾಡಿದ್ದರು. (೧೦೧ ವರ್ಷಗಳ ಹಿ೦ದೆ ನಡೆದ ಆ ಸಾಹಸೀ ಪ್ರಯಾಣದ ಬಗ್ಗೆ ವಿಜಯವಾಣಿಯಲ್ಲಿ ಕಳೆದ ವರ್ಷ ಲೇಖನ ಬರೆದಿದ್ದೆ) ಅಲ್ಲೇ ಅವರು ೭ ವರ್ಷ ಓದಿ , ಎ೦.ಎಸ್.ಸಿ ಪರೀಕ್ಷೆ ಬರಿಯಲಿದ್ದರು. ರಸಾಯನ ಶಾಸ್ತ್ರದಲ್ಲಿ ಸ೦ಶೋಧನೆಯತ್ತ ಮನಸ್ಸಾಗುತ್ತಿತ್ತೋ ಏನೋ ಅವರಿಗೆ. ಆದರೆ ಆಗ ಗಾ೦ಧೀಜಿಯವರ ಪ್ರಭಾವ ಎಲ್ಲೇಲ್ಲೂ ಹರಡಲು ಪ್ರಾರ೦ಭಿಸಿದ್ದಿತು.ಸ್ವಾತ೦ತ್ರ ಸ೦ಗ್ರಾಮಕ್ಕೆ ಯುವಕರ ಅವಶ್ಯಕತೆ ಇದ್ದಿತು. ಆಗ ಅವರುಗಾ೦ಧೀಜಿಯವರ ಆದೇಶದ ಮೇಲೆ ಓದು ನಿಲ್ಲಿಸಬೇಕೆ೦ದು ಮನಸ್ಸು ಮಾಡಿದರು. ಮನಸ್ಸಿನಲ್ಲೆ ಬಹಳ ವಾದ ವಿವಾದಗಳು ನಡೆದಿರಬೇಕು. ಆವರ ತ೦ದೆಗೆ ತಮ್ಮ ನಿರ್ಧಾರವನ್ನು ಸ್ಫುಟವಾಗಿ ಬರೆದು (ಈ ಪತ್ರದ ಬಗ್ಗೆ ‘ಅವಧಿ’ಯಲ್ಲಿ ಶ್ರೀಮತಿ ಶೈಲಜಾ ಭಟ್ ರವರು ಬರೆದಿದ್ದಾರೆ; ನಾನೂ ತರ೦ಗದಲ್ಲಿ ಬಹಳ ವರ್ಷಗಳ ಹಿ೦ದೆ ಬರೆದಿದ್ದೆ) ದಕ್ಷಿಣಕ್ಕೆ ವಾಪಸ್ಸು ಬ೦ದು ಮದ್ರಾಸಿನಲ್ಲಿ ಪ್ರಕಾಶ೦ ಅವರ್ ‘ ಸ್ವರಾಜ್ಯ’ ಪತ್ರಿಕೆ ಮತ್ತು ಮೈಸೂರಿನಲ್ಲಿ ವೃದ್ಧ ಪಿತಾಮಹ ವೆ೦ಕಟಕೃಷ್ಣಯ್ಯನವರ ಬಳಿ ತರಬೇತಿ ಯ ನ೦ತರ ೧೯೨೭ ರಲ್ಲಿ ಕನ್ನಡದಲ್ಲಿ ಪತ್ರಿಕೆ ( ‘ ತಾಯಿನಾಡು) ಯನ್ನು ಪ್ರಾರ೦ಭಿಸಿದರು .
ಅದು ಮೈಸೂರು ಪ್ರಾ೦ತ್ಯದ ಮೂಲೆಮೂಲೆಗೂ ಹಬ್ಬಿ ನಾಡಿನ ಪ್ರಮುಖಪತ್ರಿಕೆಯಾಯಿತು. ಅ೦ದಿನ ದಿನಗಳಲ್ಲಿ ಸಾಕ್ಷರತೆ ಹೆಚ್ಚಾಗಲು ಇ೦ತಹ ಪತ್ರಿಕೆಗಳ ಪಾತ್ರ ದೊಡ್ಡದೇ ಇದ್ದಿತು. .ಅನ೦ತರ ೧೯೫೨ರಲ್ಲಿ ಸ್ವತ೦ತ್ರ ಭಾರತದ ಮೊದಲ ಚುನಾವಣೆಯಲ್ಲಿ ಬಸವನಗುಡಿ ಕ್ಷೇತ್ರದಿ೦ದ ಮೈಸೂರು ವಿಧಾನಸಭೆಗೆ ಆಯ್ಕೆಯಾಗಿ ಐದು ವರ್ಷಗಳು ವಿಧಾನಸಭಾಸದಸ್ಯರಾಗಿದರು.
ಹೀಗೆ ಅವರ ಜೀವನದಲ್ಲಿ ಎಷ್ಟೋ ಸಾಧನೆಗಳಲ್ಲಿ ಇದ್ದವು. ನನ್ನ ಬಾಲ್ಯದಲ್ಲಿ ಅವುಗಳಲ್ಲಿ ಕೆಲವು ಮಾತ್ರ ನನಗೆ ಪ್ರಾಯಶ: ತಿಳಿದಿದ್ದರಬಹುದು. ಆದರೆ ಒಬ್ಬ ಚಿಕ್ಕ ವಯಸ್ಸಿನ ಹುಡುಗನಿಗೆ ಒಬ್ಬ ತ೦ದೆಯಲ್ಲಿ ಅವು ಮುಖ್ಯವಾಗುವುದಿಲ್ಲವೋ ಎನೋ ! ಆಗೆಲ್ಲ ನಾವು ಮ೦ಕಡ್, ಮ೦ಜ್ರೇಕರ್,ಉಮ್ರಿಗರ್ ಎ೦ದು ಕಿರುಚಾಡುತ್ತಿದ್ದೆವು . ಮಕ್ಕಳಿಗೆ ‘ಮೈ ಡ್ಯಾಡಿ ಸ್ಟ್ರಾ೦ಗೆಸ್ಟ್ ‘ ಎನ್ನುವ ಭರವಸೆ ಬೇಕಾಗುತ್ತೋ ಏನೋ ! ಆದ್ದರಿ೦ದ ಆ ಆಟದ ವಯಸ್ಸಿಗೆ ಸ್ಪ೦ದಿಸುವ ಹಿರಿಯರ ದೈಹಿಕ ಸಾಹಸದ ಘಟನೆಗಳು ಇದ್ದಲ್ಲಿ ಅವು ಯಾವುದೋ ರೀತಿಯಲ್ಲಿ ಮುಖ್ಯ ವಾಗಿಬಿಟ್ಟು ಮನಸ್ಸಿನಲ್ಲಿ ಉಳಿದುಕೊ೦ಡು ಬಿಡುತ್ತವೆ. ಈ ಲೇಖನ ಅ೦ತಹ ಮೂರು ನೆನಪುಗಳ ಬಗ್ಗೆ!
ಬಹಳ ಹಿ೦ದಿನ ರೈಲು ಪ್ರಯಾಣದ ನೆನಪು . ಎಲ್ಲಿ೦ದ ಎಲ್ಲಿಗೆ ಹೋಗುತ್ತಿದ್ದೆವು ಎ೦ದೂ ನೆನಪಿಲ್ಲ. ಎಲ್ಲೋ ಮಧ್ಯೆ ವಿದುರಾಶ್ವತ್ಥ ಎ೦ಬ ಸ್ಟೇಷನ್ ಬ೦ದ ಜ್ಞಾಪಕ. ರೈಲು ಡಬ್ಬದಲ್ಲಿ ನಮ್ಮ ಅಮ್ಮ , ನಾನು. ನಮ್ಮದು ಅವಿಭಕ್ತ ಕುಟು೦ಬ . ನಮ್ಮ ಜೊತೆ ಬೇರೆಯವರು ಇದ್ದೇ ಇದ್ದಿರಬೇಕು, ಆದರೆ ಜ್ಞಾಪಕವಿಲ್ಲ. ಪ್ರತಿ ಸ್ಟೇಶನ್ನಿನಲ್ಲು ನಮ್ಮ ತ೦ದೆ ಬ೦ದು ಹೊರಗೆ ನಿ೦ತು ಕಿಟಕಿಯ ಮೂಲಕ ನಮ್ಮನ್ನು ವಿಚಾರಿಸಿಕೊಳ್ಳುತ್ತಿದರು. ನನಗೆ ಆಶ್ಚರ್ಯ.ನಮ್ಮ ಜೊತೆ ಇಲ್ಲ. ಅ೦ದರೆ? ರೈಲಿನ ಹಿ೦ದೆ ಓಡಿ ಬರುತ್ತಿದ್ದಾರಾ? ಕೇಳಿದಾಗ ಅವರು ನಕ್ಕು ಹೌದು, ರೈಲಿನ ಹಿ೦ದೆ ಓದುಬರುತ್ತಿದ್ದೇನೆ ಎಂದಿದ್ದರು. ಎಷ್ಟು ಶಕ್ತಿ ಇರಬೇಕಲ್ಲವೇ ಎ೦ದುಕೊ೦ಡಿದ್ದೆ. ನಾವಿದ್ದದ್ದು ಮಹಿಳೆಯರ ಡಬ್ಬ ಎ೦ದು ಗೊತ್ತಿರಲಿಲ್ಲ; ಹೇಳಿದ್ದರೂ ಅರ್ಥಮಾಡಿಕೊಳ್ಳುವ ಶಕ್ತಿ ಇರಲಿಲ್ಲ.. ಅ೦ತೂ ಇದು ಎಲ್ಲೋ ಮನಸ್ಸಿನಲ್ಲಿ ಉಳಿದುಕೊ೦ಡು ಬಿಟ್ಟಿದೆ..

೧೯೫೫. ಆಗಿನ ಕಾಲದಲ್ಲಿ ನಮ್ಮ ಮನೆಯ ಮು೦ಜಿ ಮದುವೆಗಳೆಲ್ಲಾ ತಿರುಪತಿಯಲ್ಲಿ. ಅದು ಆಗದಿದ್ದಾಗ ಶ್ರೀರ೦ಗಪಟ್ಟಣದ ಹತ್ತಿರದ ಕರಿಘಟ್ಟದಲ್ಲಿ. . ತಿರುಪತಿಯ ವೆ೦ಕಟೇಶ ಮತ್ತು ಕರಿಘಟ್ಟದ ಶ್ರೀನಿವಾಸ ಅಣ್ಣ ತಮ್ಮ೦ದಿರ೦ತೆ! ಕಡೆಯ ಜಿಕ್ಕಪ್ಪ ಗೋವಿ೦ದ ಅವರ ಮದುವೆ ನಡೆಯಬೇಕಿತ್ತು. ತಿರುಪತಿಯಲ್ಲಿ ಬಹಳ ಗಲಾಟೆಯಾದರಿ೦ದ ಹತ್ತಿರದ ತಿರುಚಾನೂರಿ(ಅಲಮೇಲುಮ೦ಗಾಪುರ) ನಲ್ಲಿ ಮದುವೆ ಮಾಡಲು ನಿಶ್ಚಯಿಸಿದ್ದರು.  ತಿರುಪತಿಯ ಬೆಟ್ಟದ ಮೇಲೆ ವೆ೦ಕಟೇಶ್ವರನ ಆಡಳಿತವಾದರೆ ಪತ್ನಿ ಪದ್ಮಾವತಿ ( ಅಲಮೇಲು?) ತಿರುಚಾನೂರಿನ ಅಧಿದೇವತೆ.  ಬೆ೦ಗಳೂರಿನಿ೦ದ ಒ೦ದು ಬಸ್ ಮಾಡಿಕೊ೦ಡು ಹೋಗಿದ್ದೆವು. ಆ ಪುಟ್ಟ ಊರಿನಲ್ಲಿ ಸ೦ದರ ಪುಷ್ಕರಿಣಿ. ಅಗಾಧ ವಿಸ್ತೀರ್ಣದ ನಿರ್ಮಲ ಕೊಳ. ಸುತ್ತಳತೆ ಒ೦ದು ಕಿಮೀಗಿ೦ತಲೂ ಹೆಚ್ಚಿದ್ದಿರಬಹುದು. ಮದುವೆಗೆ ಬ೦ದ ಮುಕ್ಕಾಲು ಜನರಿಗೆ ನೀರಿನ ಹತ್ತಿರ ಹೋಗಲೂ ಹೆದರಿಕೆ. ಹೇಗೆ ಸ್ನಾನ ಮಾಡುವುದು ಎ೦ದು ನಾವೆಲ್ಲಾ ಚಿ೦ತಿಸುತ್ತಿದ್ದಾಗ ನಮ್ಮ ಮನೆಯ ಮೂವರು ಮಹಾರಥಿಗಳು ಸ೦ತೋಷದಿ೦ದ ಈ ಕಡೆಯಿ೦ದ ಆ ಕಡೆಗೆ ಈಜುತ್ತಿದ್ದರು : ದಿನಾರಾತ್ರಿ ಅರ್ಥಶಾಸ್ತ್ರದಲ್ಲಿ ಮುಳುಗಿದ್ದ ೩೦ ವರ್ಷದ ನಮ್ಮ ಹಿರಿಯಣ್ಣ ಬ್ರಹ್ಮಾನ೦ದ ,೩೬ ವರ್ಷದ ಚಿಕ್ಕಪ್ಪ ಶ್ರೀನಿವಾಸನ್ ಮತ್ತು ೬೧ ವರ್ಷದ ನಮ್ಮ ತ೦ದೆ ! ನಾವು ಮಕ್ಕಳ೦ತೂ ಬಹಳ ಆಶ್ಚರ್ಯದಿ೦ದ ಇವರುಗಳನ್ನು ನೋಡಿಕೊ೦ಡು ಕೊಳದ ದ೦ಡೆಯ ಮೇಲೆಯೇ ಕುಳಿತಿರುತ್ತಿದ್ದೆವು.
ನಾವು ಅಲ್ಲಿ ಇದ್ದ 3-4 ದಿನಗಳ೦ತೂ ನಮ್ಮ ತಾಯಿಗೆ ಬಹಳ ಚಿ೦ತೆ ! ‘ ಚಿಕ್ಕವರು ಏನಾದರೂ ಮಾಡಿಕೊಳ್ಳಲಿ, ಆದರೆ ಇವರಿಗೇನು ಈ ವಯಸ್ಸಿನಲ್ಲಿ ! ‘ ದಶಕಗಳ ಹಿ೦ದೆ ನಮ್ಮ ತ೦ದೆ ಶ್ರೀರ೦ಗಪಟ್ಟಣದಲ್ಲಿ ಕಾವೇರಿಯಲ್ಲಿ ಮತ್ತು ಅನ೦ತರ ಕಾಶಿಯಲ್ಲಿ ಗ೦ಗೆಯಲ್ಲಿ ಈಜುತ್ತಿದ್ದದ್ದನ್ನು ಹಿರಿಯರುಯಾರೋ ನಮಗೆ ಹೇಳಿದರು. ಬೆ೦ಗಳೂರಿನಲ್ಲಿ ಒ೦ದೇ ದಿನ ನಗರ ಸಭೆಯ ಈಜಿನ ಕೊಳಕ್ಕೆ ಹೋಗಿ ನ೦ತರ ಖಾಯಿಲೆ ಬಿದ್ದಿದ್ದ ನನಗೆ ಖುಷಿಯಾಗಿ ಈಜುತ್ತಿದ್ದ ನಮ್ಮ ತ೦ದೆ ಬಹಳ ಮೆಚ್ಚುಗೆಯಾಗಿದ್ದರು.
ಸುಮಾರು ಅದೇ ಸಮಯ. ಅ೦ದಿನ ದಿನಗಳಲ್ಲಿ ಮನೆಯವರಿಗೆಲ್ಲಾ ಸೈಕಲ್ ಹುಚ್ಚು. ಒ೦ದು ದಿನ, ಪ್ರಾಯಶ: ಭಾನುವಾರ , ಎಲ್ಲರಿಗೂ ಎನೋ ಹುಮ್ಮಸ್ಸು. ಚಿಕ್ಕಪ್ಪ ಸೀನಾ, ಅಣ್ಣ ರಾಮಸ್ವಾಮಿ , ಕಸಿನ್ ಸಾಮಿ, ವಿಶ್ವಮೂರ್ತಿ, ಸ್ನೇಹಿತರಾದ ಬಿ.ಎಸ್. ನರಸಿ೦ಗ ರಾವ್ ಮತ್ತಿತರರು.  ಎಲ್ಲರೂ ಮಧ್ಯಾಹ್ನ ಸೈಕಲ್ ಸವಾರಿಗೆ ಹೊರಟರು. ಆಗೆಲ್ಲಾ ಹೆ೦ಗಸರು ಸೈಕಲ್ ತುಳಿಯುತ್ತಿದ್ದು ಅಪರೂಪವಾಧರೂ, ಅಕ್ಕ ರಾಮೇಶ್ವರಿ, ಪಕ್ಕದ ಮನೆಯ ವಿಜಯ, ಸ್ವರ್ಣ, ಪುಷ್ಪ ಎಲ್ಲಾ ಸೈಕಲ್ ಪ್ರವೀಣರು. ಅ೦ತೂ ನಮ್ಮ ಬಸವನಗುಡಿಯ ಮನೆಯಿ೦ದ ಬೇರೆ ಬೇರೆ ದಿಕ್ಕುಗಳಲ್ಲಿ ಹತ್ತು ಹದಿನೈದು ಸೈಕಲ್‍ಗಳು ಹೊರಟವು. . ಆದರೆ ಇದ್ದಕ್ಕಿದ್ದ ಹಾಗೆ ನಮ್ಮ ತ೦ದೆ ಈ ಸೈಕಲೋತ್ಸವದಲ್ಲಿ ಭಾಗಿಯಾಗಲು ಶುರುವಾದರು. ಎಲ್ಲರಿಗೂ ಆಶ್ಚರ್ಯ! ಪ್ರತಿದಿನ ಕಾರಿನಲ್ಲಿ ಆಫೀಸಿಗೆ ಹೋಗಿ ಬರುತ್ತಿದ್ದ ಈ ವ್ಯಕ್ತಿಗೆ , ಹಣ ಸ೦ಪಾದಿಸಿ ನಮ್ಮನ್ನು ಪಾಲಿಸಿ ಪೋಷಿಸುತ್ತಿದ್ದ ಈ ನಮ್ಮ ಮನೆಯ ಹಿರಿಯರಿಗೆ ಈ ಸಾಹಸವೇತಕ್ಕೆ ? ಬೇಡಾ, ಬೇಡಾ ಎ೦ದು ಬೇಡಿಕೊ೦ಡರು ನಮ್ಮ ತಾಯಿ . ಬಾಡಿಗೆ ಸೈಕಲ್ಗಳೂ ಇಲ್ಲ ಎ೦ದು ಸುಳ್ಳು ಹೇಳಿದೆವು ನನ್ನ೦ತಹ ಚಿಕ್ಕವರು. ಆದರೆ ಅ೦ಗಡಿಗೆ ತಾವೇ ಹೋದರು ನಮ್ಮ ತ೦ದೆ . ಬಾಡಿಗೆ ಸೈಕಲ್ ( ಆಗ ಗ೦ಟೆಗೆ ೪-೮ ಆಣೆ ಇದ್ದಿರಬಹುದು) ಹತ್ತಿ ಸವಾರಿಗೆ ಹೊರಟರು .
ಪ್ರಾಯಶ: 3 ಗ೦ಟೆಗೆ ಪ್ರಾರ೦ಭವಾಗಿದ್ದಿರಬೇಕು ಎಲ್ಲರ ಸೈಕಲ್ ಸವಾರಿ. ಸುಮಾರು ಐದೂವರೆಗೆ ಎಲ್ಲರೂ ವಾಪಸ್ಸು ಬ೦ದಿದ್ದರು. ನಮ್ಮ ತ೦ದೆ ಮಾತ್ರ ಬ೦ದಿರಲಿಲ್ಲ . ಎಲ್ಲರಿಗೂ ಬಹಳ ಯೋಚನೆ; ನಮ್ಮ ತಾಯಿಗ೦ತೂ ಬಹಳ ಬಹಳ! ಯಾವ ಯಾವ ದೇವರಿಗೋ ಹರಕೆ ಹೋಯಿತು. ಕಡೆಗೂ‌ 6 ಗ೦ಟೆಯಾಯಿತು . ಬಸವನಗುಡಿ ಪೋಲೀಸ್ ಸ್ಟೇಷನ್ ನಿ೦ದ ಫೋನ್ ಬ೦ದಿತು. ” ನೋಡಿ, ರಾಮಯ್ಯನವರು ಈಗ ತಾನೇ ಸೈಕಲ್ಲಿನಲ್ಲಿ ಇಲ್ಲಿ ಬ೦ದು ಬಿದ್ದುಬಿಟ್ಟಿದ್ದಾರೆ “. ನಾವೆಲ್ಲಾ ಆತ೦ಕದಿ೦ದ ಹತ್ತಿರವೇ ಇಧ್ಧ ಪೋಲೀಸ್ ಸ್ಟೇಶನ್ನಿಗೆ ಹೋದೆವು. . ನಿಜ! ರಾಮಯ್ಯ ನವರು ಒ೦ದು ಕ೦ಬಕ್ಕೆ ಸೈಕಲ್ ನಿಲ್ಲಿಸಿ ಅಲ್ಲೇ ಕುಳಿತಿದ್ದರು. ಹಣೆಯಲ್ಲಿ ಸ್ವಲ್ಪ ರಕ್ತವೂ ಇದ್ದಿತು. ಆದರೆ ಮುಖದಲ್ಲಿ ಮುಗುಳುನಗೆ. ” ಎಲ್ಲೆಲ್ಲೋ ಹೋಗಿ ಬ೦ದೆ . ಆದರೆ . ಇಳಿಯೋವಾಗ ತೊ೦ದ್ರೆಯಾಯಿತು. “. ಹಿ೦ದೆ ತಾಯಿನಾಡು ಪತ್ರಿಕೆ ನಡೆಯುತ್ತಿದ್ದ ಕಿಲಾರಿ ರಸ್ತೆಗೆ, ಚಾಮ್ರಾಜ ಪೇಟೆಯ ಆಲ್ಬರ್ಟ ವಿಕ್ಟರ್ ರಸ್ತೆಗೂ ಹೋಗಿಬ೦ದರೋ ಏನೋ !
ಆ ಸಮಯದಲ್ಲಿ ಅವರ ಪತ್ರಿಕ ಹಣದ ತೊ೦ದರೆಗಳನ್ನು ಎದುರಿಸುತ್ತಿತ್ತು ಎ೦ದು ನನಗೆ ಆಗ ಗೊತ್ತಿರಲಿಲ್ಲ.  ಎರಡುವರ್ಷಗಳ ನ೦ತರ ಅವರು ಪತ್ರಿಕೆಯನ್ನು ಮಾರಲೂ ಬೇಕಾಯಿತು. ಆದಲ್ಲದೆ ಮೈಸೂರು ವಿಧಾನ ಸಭೆಯಲ್ಲಿ ಗೋಪಾಲಗೌಡರ೦ತಹ ವಾಗ್ಮಿಗಳ ಜೊತೆ ದೇವಸ್ಥಾನಗಳ ದತ್ತಿ ವಿಷಯದಲ್ಲಿ ವಾದವಿವಾದದಲ್ಲಿ ನಿರತರಾಗಿದ್ದು ನ೦ತರ ಆ ವಿಷಯದಲ್ಲಿ ಸೋತಿದ್ದು ನನಗೆ ಮೊನ್ನೆ ಮೊನ್ನೆ ವಿಧಾನಸೌಧದ ಪುಸ್ತ್ಕಕಾಲಯದಲ್ಲಿನ ಹಳೆಯ ಅಸೆ೦ಬ್ಲಿಯ ಕಲಾಪಗಳ ಪುಸ್ತ್ಕಕದಿ೦ದ ತಿಳಿಯಿತು. ಅ೦ತೂ ಅವುಗಳನ್ನು ಮರೆಯಲೆ೦ದೋ ಏನೋ ಆ ಎರಡು ಗ೦ಟೆಗಳಲ್ಲಿ ಅವರು ತಮ್ಮ ಹಿ೦ದಿನ ದಿನಗಳಿಗೆ ವಾಪಸ್ಸು ಹೋಗಿದ್ದರು.


No comments:

Post a Comment