Tuesday, January 29, 2019

ಕಡೆಗೂ ಸಿಹಿ ಬಿಟ್ಟ ಮಹಾತ್ಮ - ಪಾಲಹಳ್ಳಿ ವಿಶ್ವನಾಥ್ Palahalli Vishwanath




ಸಿಹಿ ಬಿಟ್ಟ ಮಹಾತ್ಮರು
ಪಾಲಹಳ್ಳಿ ವಿಶ್ವನಾಥ್
(೨೦೦೩, ಫೆಬ್ರವರಿ ಕರ್ಮವೀರ)

ಗಾಂಧೀಜಿಯವರಿಗೆ ಯಾವ ಮನುಷ್ಯನೂ ಸಣ್ಣವನಲ್ಲ; ಆತ ಕೇಳುವ ಪ್ರಶ್ನೆಯೂ ಸಣ್ಣದಲ್ಲ. ಸಮಯ ಮಾಡಿಕೊಂಡು ಎಲ್ಲರನ್ನೂ ಮಾತನಾಡಿಸುತ್ತಿದ್ದರು. ಮತ್ತು ಎಲ್ಲ ತರಹದ ಪ್ರಶ್ನೆಗಳಿಗೂ ಉತ್ತರ ಕೊಡಲು ಪ್ರಯತ್ನಿಸುತ್ತಿದ್ದರು. ಎಲ್ಲರಿಗೂ ದಿನದಲ್ಲಿ ೨೪ಗಂಟೆಗಳಿದ್ದರೆ, ಗಾಂಧಿಯವರಿಗೆ ೨೮ ಗಂಟೆಗಳು !

ಗಾಂಧಿಯವರನ್ನು ನೋಡಲು ಯಾರೋ ಮಹಾಶಯರು ತಮ್ಮ ೧೦ ವರ್ಷ ವಯಸ್ಸಿನ ಮಗನನ್ನು ಕರೆದುಕೊಂಡು ಹೋದರು. ಯಾವಾಗ ಎಂದು ಸರಿಯಾಗಿ ಗೊತ್ತಿಲ್ಲ. ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ ಎಂದುಕೊಳ್ಳೋಣ. ಉಪ್ಪಿನಲ್ಲಿ ಮುಳುಗಿದ್ದ ಮಹಾತ್ಮರ ಮುಂದೆ ಸಿಹಿಗಳ ಬಗ್ಗೆ ತೊಂದರೆಗಳನ್ನು ಹೇಳಿಕೊಳ್ಳಲು ಬಂದಿದ್ದರು. : " ಬಾಪು ! ನನ್ನ ಮಗ ಬಹಳ ಸಿಹಿ ತಿಂಡಿಗಳನ್ನು ತಿನ್ನುತಾನೆ. ನೀವು ಅವನಿಗೆ ಬುದ್ಧಿವಾದ ಹೇಳಬೇಕು. " ಎಂದು ಕೆಳಿಕೊಂಡರು. ಪಕ್ಕದಲ್ಲಿದ್ದ ನೇತಾಜನ ಲೇವಡಿ ಮಾಡುತ್ತಾ " ದೇಶದಲ್ಲಿ ಎಷ್ಟು ತೊಂದರೆಗಳಿವೆ. ಏನೋ ದೊಡ್ಡ ಪ್ರಶ್ನೆಯನ್ನು ಇಟ್ಟುಕೊಂಡು ಮಹಾತ್ಮರ ಹತ್ತಿರ ಬಂದಿದ್ದಾನೆ. ಹೋಗಿ, ಹೋಗಿ " ಎಂದು ಆ ಮಹಾಶಯನನ್ನು ಕಳಿಸಲು ನೋಡಿದರು. ಅದರೆ ಮಹಾತ್ಮರು "ಪರವಾಯಿಲ್ಲ, ಇಲ್ಲಿ ಬನ್ನಿ' ಎಂದು ಅವರನ್ನು ಕರೆದು ನಗುತ್ತಾ " ಮುಂದಿನ ತಿಂಗಳು ಇದೇ ತಾರೀಖು ಬಂದು ನೋಡಿ" ಎಂದರು. ಅದಕ್ಕೆ ಮಹಾಶಯ"ನಾಳೆಯೇ ಬರಲೆ? " ಎಂದಿದ್ದಕ್ಕೆ " ಇಲ್ಲ, ಮುಂದಿನ ತಿಂಗಳು , ಇದೇ ತಾರೀಖು" ಎಂದು ಒತ್ತಿ ಹೇಳುತ್ತಾ ಸಾಲಿನಲ್ಲಿ ಆನಂತರ ಇದ್ದ ವ್ಯಕ್ತಿಯನ್ನು ಮಾತನಾಡಿಸಲು ಶುರುಮಾಡಿದರು.

ಮಹಾಶಯರು ಸ್ವಲ್ಪ ನಿರಾಶೆಯಿಂದಲೇ ಮಹಾತ್ಮರ ಸನ್ನಿಧಿಯಿಂದ ಹೊರಬಂದರು. ಮನೆಗೆ ಹೋಗುತ್ತಾ ಆವರ ಮಗ ದಾರಿಯಲ್ಲಿದ್ದ ಸಿಹಿ ತಿಂಡಿ ಅಂಗಡಿಯ ಕಡೆ ಕೈ ತೋರಿಸಿದ. ಮಹಾಶಯರು ಮನಸ್ಸಿನಲ್ಲೆ ಸಿಹಿತಿಂಡಿ ಮಾಡುವವನನ್ನು ಬೈದು ಕೊಂಡರು. ಅವನೇನು ತಪ್ಪು ಮಾಡಿದ್ದ ಎಂದುಕೊಂಡು ಅದಕ್ಕೆ ಬೇಕಾದ ಸಕ್ಕರೆಯನ್ನು, ನಂತರ ಸಕ್ಕರೆಯ ಕಾರ್ಖಾನೆಯನ್ನು, ಸಕ್ಕರೆ ಕೊಡುವ ಕಬ್ಬನ್ನು, ಕಬ್ಬನ್ನು ಬೆಳೆಯುವ ರೈತರನ್ನು, ಆ ಬೆಳೆಗೆ ಸಹಾಯಮಾಡಿದ ನೀರಾವರಿ ಯೋಜನೆಯನ್ನು, , ಆ ಯೋಜನೆಯನ್ನು ಪ್ರಾರಂಭಿಸಿದ ಆ ಸಂಸ್ಥಾನದ ದಿವಾನರನ್ನು, ಆ ದಿವಾನರನ್ನು ನೇಮಿಸಿಕೊಂಡ ಮಹಾರಾಜರನ್ನು .. ಅಂತೂ ಎಲ್ಲರಿಗೂ ಛೀಮಾರಿಯಾಯಿತು. ಪ್ರತಿ ದಿನ ೫ ಪೇಡಾ ತಿನ್ನುತ್ತಿದ್ದ ಹುಡುಗ ಈವತ್ತು ೭ ಪೇಡಾ ತಿಂದ; ಮುಂದಿನ ದಿನ ೯ ಪೇಡಾ ತಿಂದ. ಏನೋ ಹೆದದರಿಕೆ ಹುಟ್ಟಿ ಇನ್ನೊಂದು ತಿಂಗಳಲ್ಲಿ ಆದಷ್ಟು ತಿಂದುಬಿಡೋಣ ಎನ್ನುವ ಆತುರವಿತ್ತೋ ಏನೋ ! ಗಾಂಧಿಯವರನ್ನು ನೋಡಿಯೇ ಅವನು ಸಿಹಿ ಬಿಟ್ಟುಬಿಡುತ್ತಾನೆ ಎಂದು ನೆರೆಯಾವರೆಲ್ಲಾ ಮೊದಲು ಹೇಳಿದ್ದರು. ಆದರೆ ಹುಡುಗನ ಪೇಡಾ ಸೇವನೆ ಹೆಚ್ಚೇ ಆಗಿತ್ತು. ದಿನಗಳು ಕಳೆಯುತ್ತ ಬೀದಿಯವರಿಗೆಲ್ಲ ಗಾಂಧಿಯವರ ಮೆಲೆ ಅಸಮಾಧಾವೂ ಹುಟ್ಟಿತು. " ಅವರೇನು ಋಷಿಗಳೇ ? ಅವರ ಕೈಲಿ ಇದೆಲ್ಲಾ ಅಗೋದಿಲ್ಲ " ಎ೦ದರು ಕೆಲವರು . " ಹೌದು, ಪಕ್ಕದ ಊರಿನ ಬೆಟ್ಟದ ಮೇಲೆ ಒಬ್ಬ ಸಾಧು ಇದ್ದಾನೆ. ಅವನ ಹತ್ತಿರ ಹೋಗಿ . ನಿಮ್ಮ ಹುಡುಗ ಸಿಹಿ ಮುಟ್ಟದಂತೆ ಮಾಡಿಬಿಡುತ್ತಾನೆ " ಎ೦ದರು ಇನ್ನು ಕೆಲವರು. "ಮಾರ್ಕೆಟ್ಟಿನ ಬಳಿ ದರ್ಗಾಗೆ ಹೋಗಿ ತಾಯಿತ ಕ ಕಟ್ಟಿಸಿ" ಎ೦ದೂ ಸಲಹೆ ಬ೦ದಿತ್ತು. ಗಾಂಧಿಯವರು ಇಂತಹ ಕೆಲಸಕ್ಕೆ ಪ್ರಯೋಜನವಿಲ್ಲ ಎ೦ದು ಎಲರೂ ನಿರ್ಧರಿಸಿಬಿಟ್ಟರು.
ಅಂತೂ ತಿಂಗಳು ಮುಗಿಯಿತು. ಹೋಗಲೆ ಬೇಡವೆ ಎಂದು ಯೋಚಿಸುತ್ತಿದ್ದ ಮಹಾಶಯರನ್ನು ಅವರ ಪತ್ನಿ ಬಲಾತ್ಕಾರದಿಂದ ಗಾಂಧಿಯವರ ಬಳಿ ಕಳಿಸಿದರು. ಪ್ರತಿಭಟಿಸುತ್ತಿದ್ದ ಮಗನನ್ನೂ ಎಳೆದುಕೊಂಡು ಹೋಗಿ ಗಾಂಧಿಯವರನ್ನು ನೋಡಲು ಸಾಲಿನಲ್ಲಿ ನಿಂತರು. ಸಾಲೇನೋ ಉದ್ದವಿತ್ತು. ಆದರೆ ಹೆಚ್ಚು ಹೊತ್ತು ನಿಲ್ಲಬೇಕಾಗಲಿಲ್ಲ. ಮಹಾತ್ಮರು ದೂರದಿಂದಲೇ ಅವರನ್ನು ಗುರುತಿಸಿ ಹತ್ತಿರ ಕರೆದರು . " ಬಾ, ಮಗು " ಎಂದು ಹುಡುಗನನ್ನು ಹತ್ತಿರ ಕೂರಿಸಿಕೊಂಡು ತಲೆ ನೇವರಿಸಿ " ಸಿಹಿ ತಿಂಡಿ ಬಹಳ ತಿನ್ನುತ್ತೀಯಂತೆ. ಬೇಡಪ್ಪ. ಕಡಿಮೆ ಮಾಡು " ಎಂದು ಹೇಳಿ ಸಾಲಿನಲ್ಲಿ ಮುಂದಿದ್ದವರನ್ನು ಕರೆದರು. ಆದರೆ ಮಹಾಶಯರಿಗೆ ಬಹಳ ಕುತೂಹಲ " ಬಾಪು, ಇದನ್ನು ಆವತ್ತೆ ಹೇಳಬಹುದಿತ್ತಲ್ಲವೇ?" ಎಂದರು. ಅದಕ್ಕೆ ಗಾಂಧೀಜಿ ನಗುತ್ತಾ " ನೋಡಿ, ನನಗೂ ಸಿಹಿ ತಿಂಡಿ ಇಷ್ಟ. ನಾನೆ ಸಿಹಿ ತಿನ್ನುವಾಗ ಆ ಪುಟ್ಟ ಹುಡುಗನಿಗೆ ಹೇಗೆ ಬೇಡ ಎಂದು ಹೇಳಲಿ?" " ಆದರೆ ಒಂದು ತಿಂಗಳು.." ಎಂದು ಮಹಾಶಯರು ರಾಗ ಎಳೆದಿದ್ದಕ್ಕೆ ಅವರು " ನಾನು ಗುಜರಾತಿ, ಸಿಹಿ ಎಂದರೆ ಮಹಾ ಪ್ರಾಣ. ಪ್ರತಿ ದಿನ ಕಡಿಮೆ ಮಾಡಿಕೊಳ್ಳುತ್ತಾ ಹೋದೆ. ಅಂತೂ ಮೂರು ದಿನಗಳಿಂದ ಒಂದು ಪೇಡಾ ಕೂಡ ಮುಟ್ಟಿಲ್ಲ . ಈಗ ಮಾತ್ರ ನಾನು ಅವನಿಗೆ ಸಿಹಿ ತಿನ್ನಬೇಡ ಎಂದು ಹೇಳುವ ಸ್ಥಿತಿಗೆ ಬಂದಿದ್ದೇನೆ" ಹೌದಲ್ಲ, ನಾವೇ ಬದಲಾಗದಿದ್ದರೆ ಬೇರೆಯವರನ್ನು ಬದಲಾಗು ಎಂದು ಹೇಳಲು ನಮಗೆ ಹೇಗೆ ನೈತಿಕ ಅಧಿಕಾರವಿರುತ್ತದೆ? ( ಈ ಕತೆಯನ್ನು ಪ್ರವಾದಿ ಮಹಮದ್ ರ ಬಗ್ಗೆ, ರಾಮಕೃಷ್ಣ ಪರಮಹಂಸರ ಬಗ್ಗೆ ಕೂಡ ಹೇಳುತ್ತಾರೆ )


No comments:

Post a Comment