Saturday, January 26, 2019

ಕಡೆಗೂ ಐಸಾಕ್ ನನಗೆ ಕ್ರಾಕೋವಿನಲ್ಲಿ ಸಿಕ್ಕ !- ಪಾಲಹಳ್ಳಿ ವಿಶ್ವನಾಥ್ Palahalli Vishwanath



ಕಡೆಗೂ ಐಸಾಕ್ ನನಗೆ ಕ್ರಾಕೋವಿನಲ್ಲಿ ಸಿಕ್ಕ !

ಪಾಲಹಳ್ಳಿ ವಿಶ್ವನಾಥ್

೪೫ ವರ್ಷಗಳ ಹಿಂದಿನ ಮಾತು. ನಾನು ಅಮೆರಿಕದಲ್ಲಿದ್ದ ಸಮಯ. ಮಿಶಿಗನ್ ವಿಶ್ವವಿದ್ಯಾಲಯದ ಆನ್ ಆರ್ಬರ್ ಊರಿನಲ್ಲಿ ವಿದ್ಯಾರ್ಥಿಯಾಗಿದ್ದೆ. ಅನೇಕ ಭಾರತೀಯ ವಿದ್ಯಾರ್ಥಿಗಳಂತೆ ನನಗೂ ದೇಶದ ಬಗ್ಗೆ ಕಳಕಳಿಯಿತ್ತು. ರಾಜಾರಾವ್ ಅವರ ' ಸರ್ಪೆಂಟ್ ಅಂಡ್ ದಿ ರೋಪ್' ಪುಸ್ತಕ ಓದಿದ್ದು ಅದರಲ್ಲಿ ಹಿಮಾಲಯ ಮತ್ತು ಗಂಗೆಯ ಬಗ್ಗೆಯ ಸಾಲು ಗಳು ಕಣ್ಣಲ್ಲಿನೀರು ತರಿಸುತ್ತಿದ್ದ ಮನಸ್ಥಿತಿ ಇದ್ದಿತು. ಅದೇ ಸಮಯದಲ್ಲಿ ರಾಬರ್ಟ್ ಜಿಮ್ಮರ್ ( ಮ್ಯಾಕ್ಸ್ ಮುಲ್ಲರ್ ನಂತರ ಭಾರತದ ಬಗ್ಗೆ ಹೆಚ್ಚು ಓದಿಕೊಂಡಿದ್ದ ಜರ್ಮನಿಯ ತತ್ವಶಾಸ್ತ್ರಜ್ಞ ಮತ್ತು ಲೇಖಕ ) ' ' ಮಿತ್ಸ್ ಅಂಡ್ ಸಿಂಬಲ್ಸ್ ಇನ್ ಇಂಡಿಯನ್ ಸಿವಿಲೈಸೇಷನ್' ಓದುತ್ತಿದ್ದೆ. ಪುಸ್ತಕದ ಕಡೆಯಲ್ಲಿ ಜಿಮ್ಮರ್ ಯೆಹೂದಿಗಳ ಒಂದು ಖ್ಯಾತ ಕಥೆಯನ್ನು ಹೇಳುತ್ತಾರೆ . ಇವುಗಳಿಗೆ ಹಸಿಡಿಕ್ ಕತೆಗಳೆಂಬ ಹೆಸರು. ಆ ಕಥೆ ನನಗೆ ಬಹಳ ಇಷ್ಟವಾಯಿತು..
ಪೋಲೆಂಡಿನ ಕ್ರಾಕೊ ಎಂಬ ಊರಿನಲ್ಲಿ ಯೆಹೂದಿಗಳ ಒಂದು ಹಳೆಯ ದೇವಾಲಯ ( ಸಿನೆಗಾಗ್) . ಅದನ್ನು ನೋಡಿಕೊಳ್ಳಲು ಒಬ್ಬ ಪೂಜಾರಿ ( ರಾಬೈ ) . ಅವನ ತಂದೆಯ ಹೆಸರು ಜೇಕಬ್; ಅವನ ಹೆಸರು ಐಸಾಕ್ . ಜೇಕಬನ ಮಗ ಐಸಾಕ್ ಎಂದೇ ಅವನನ್ನು ಕರೆಯುತ್ತಿದ್ದರು. . ಐಸಾಕ್ ಗೆ ಒಂದು ರಾತ್ರಿ ಕನಸು ಬೀಳುತ್ತದೆ' ಅದರಲ್ಲಿ ' ಪ್ರಾಗ್ ನಗರಕ್ಕೆ ಹೋಗು. ಅಲ್ಲಿಯ ನದಿಯ ಸೇತುವೆಯ ಕೆಳಗಡೆ ಇರುವ ಒಂದು ನಿಧಿಯನ್ನು ಅಗೆದು ತೆಗೆದುಕೊಂಡು ಬಾ' ಎಂಬುದು ಕನಸು .ಮೊದಲುಅದನ್ನು ಐಸಾಕ್ ನಿರ್ಲಕ್ಷಿಸುತ್ತಾನೆ . ಆದರೆ ಅದೇ ಕನಸು ಪದೇ ಪದೇ ಬೀಳುತ್ತಿದ್ದರಿಂದ ಐಸಾಕ್ ಬೇಸತ್ತು ಪ್ರಾಗ್ ನಗರಕ್ಕೆ ಹೋಗುತ್ತಾನೆ. ಅಲ್ಲಿ ಸೇತುವೆಯ ಹತ್ತಿರ ಒಬ್ಬ ಸೈನಿಕನಿರುತ್ತಾನೆ. ಐಸಾಕ್ ಅಲ್ಲಿಯೆ ಹಲವಾರು ದಿನಗಳನ್ನು ಕಳೆಯುತಾನೆ. ಅದನ್ನು ನೋಡಿ ಅನುಮಾನ ಪಟ್ಟ ಸೈನಿಕ ಐಸಾಕನ್ನು ವಿಚಾರಿಸಿದಾಗ ಅವನು ತನ್ನ ಕನಸನ್ನು ಹೇಳುತ್ತಾನೆ. ಅದಕ್ಕೆ ಸೈನಿಕ ನಗುತ್ತಾ " ನನಗೂ ಅಂತಹ ಕನಸ್ಸು ಬೀಳುತ್ತಿರುತ್ತದೆ. ಕ್ರಾಕೋವಿಗೆ ಹೋಗು . ಜೇಕಬನ ಮಗ ಐಸಾಕನ ಸಿನೆಗಾಗಿದೆ. ಅದರ ಹಿತ್ತಲಲ್ಲಿ ನಿಧಿ ಇದೆ' ಈ ಕನಸನ್ನು ನಾನು ನಂಬಿದ್ದರೆ ನಿನ್ನ ತರಹವೆ ಹುಚ್ಚನಾಗುತ್ತಿದ್ದೆ' ಇದನ್ನು ಕೇಳಿದ ನಂತರ ಐಸಾಕ್ ಕ್ರಾಕೊವಿಗೆ ವಾಪಸ್ಸು ಬಂದು . ಹಿತ್ತಲಲ್ಲಿ ಅಗೆದು ನಿಧಿ ಸಿಕ್ಕಿ ತನ್ನ ದೇವಾಲಯವನ್ನು ಸರಿಪಡಿಸಿಕೊಳ್ಳುತ್ತಾನೆ
ನನ್ನ ಜೀವನದಲ್ಲಿಯೇ ಈ ಕಥೆಗೆ ಎರಡು ಉದಾಹರಣೆಗಳು ಸಿಕ್ಕವು ಅಥವಾ ನನಗೆ ತಿಳಿದಿದ್ದ ವಿಷಯಗಳನ್ನೇ ಆ ಕಥೆಗೆ ಅಳ ಡಿಸಿಕೊಂಡಿರಬಹುದು . ನನ್ನ ತಂದೆ ರಾಮಯ್ಯನವರು ೧೯೧೩ರಲ್ಲಿ ತಮ್ಮ ೧೯ನೆಯವಯಸ್ಸಿನಲ್ಲಿ ಮೈಸೂರಿನಿಂದ ಕಾಶಿಗೆ ಓಡಿಹೋಗಿ ಅಲ್ಲಿ ೭ ವರ್ಷ ವಿದ್ಯಾಭ್ಯಾಸ ಮಾಡಿ ೧೯೨೦ರಲ್ಲಿ ಎಮ್.ಎಸ್.ಸಿ ಡಿಗ್ರಿ ತೆಗೆದುಕೊಳ್ಳುವರಿದ್ದರು. ಆ ಸಮಯದಲ್ಲಿ ಗಾಂಧಿಯವರು ಆಂಗ್ಲ ಪೋಷಿತ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಹೊರಬರಬೇಕೆಂದು ಆಗ್ರಹ ಪಡಿಸುತ್ತಿದ್ದರು. ಆಗ ಯುವಕ ರಾಮಯ್ಯ .ಗಾಂಧೀಜಿಯವರನ್ನು ಭೇಟಿಮಾಡಿ ಅವರ ಆದೇಶದಂತೆ ವಿದ್ಯಾಭ್ಯಾಸವನ್ನು ನಿಲ್ಲಿಸಿ ಕಾಶಿಯನ್ನು ಬಿಟ್ಟು ಕರ್ನಾಟಕಕ್ಕೆ ಬಂದು ಗಂಗಾಧರರಾವ್ ದೇಶಪಾಂಡೆಯವರ ಜೊತೆ ಮತ್ತು ಮೈಸೂರಿನ ಖ್ಯಾತ ರಾಷ್ಟ್ರಕ ವೆಂಕಟಕೃಷ್ಣಯ್ಯ (ತಾತಯ್ಯ) ನವರ ಜೊತೆ ಕೆಲಸ ಮಾಡಿದರು. ಆನಂತರ ೧೯೨೭ರಲ್ಲಿ ತಮ್ಮದೇ ಕನ್ನಡ ಪತ್ರಿಕೆಯನ್ನು ಪ್ರಾರಂಭಿಸಿದರು. ಅದೇ ಮುಂದೆ ರಾಷ್ಟ್ರೀಯ ಪತ್ರಿಕೆಯಾಗಿ ಖ್ಯಾತಿ ಗಳಿಸಿದ ' ತಾಯಿನಾಡು ' ಪತ್ರಿಕೆ. ಅವರು ಕಾಶಿಗೆ ಹೋಗದೆ ಮೈಸೂರಿನಲ್ಲಿಯೇ ಇದ್ದ್ದಿದರೆ ಇದನ್ನೆಲ್ಲ ಮಾಡಲು ಆಗುತ್ತಿತ್ತೇ? ಕಾಶಿಯಲ್ಲೂ ಗಾಂಧಿಯಂತಹ ಗುರುಗಳು ಬೇಕಾಯಿತಲ್ಲವೇ ಇದನ್ನೇ ಜಿಮ್ಮರ್ ಒತ್ತಿ ಹೇಳುತ್ತಿದ್ದದ್ದು. : ಹೊರಗೆ ಹೋಗಬೇಕು , ನೇರ(ಪರೋಕ್ಷ)ವಾಗಿಯೋ ಒಬ್ಬ ಗುರು ಸಮಾನ ವ್ಯಕ್ತಿ ಬೇಕು ಆನಂತರ ವಾಪಸ್ಸು ಬಂದು ನಿಮ್ಮದೆ ನಿಧಿಯನ್ನು ಕಂಡುಕೊಳ್ಳಬೇಕು ! ನಮ್ಮ ರಾಮಾಯಣದಲ್ಲಿ ಹನುಮಂತನಿಗೆ ತನ್ನ ಸಾಮರ್ಥ್ಯಗಳ ಬಗ್ಗೆ ಏನೂ ಅರಿವಿರದೆ ಯಾರೋ ಬೇರೆಯವರು ಅವನಿಗೆ ಹೇಳಬೇಕಾಯಿತಲ್ಲವೆ? ಆದರೆ ಈ ಕಥೆ ಇನ್ನೂ ಹೆಚ್ಚು ಹೇಳಲು ಪ್ರಯತ್ನಿಸುತ್ತದೆ.
ನನ್ನ ಜೀವನ ನಡೆದು ಬಂದಿರುವ ರೀತಿಯಲ್ಲೂ ಇದೇ ವಿಧಾನವನ್ನು ಗುರುತಿಸಿಕೊಂಡೆ. ಅಮೆರಿಕ್ಕಕ್ಕೆ ಹೋಗ ಬೇಕು ಎಂದು ಮನಸ್ಸಿನಲ್ಲಿ ಬಂದುಬಿಟ್ಟು ೧ ೯೬೮ರ ಜನವರಿಯಲಿ ಅಲ್ಲಿಗೆ ಹೋಗಿದ್ದೆ. ಅಲ್ಲಿ ೧೦ ವರ್ಷಗಳು ವಿದ್ಯಾಭ್ಯಾಸ ಮಾಡಿ ಸಂಶೋಧನೆಗಳನ್ನು ಮಾಡಿದೆ. ಅಗ ಮನಸ್ಸು ವಾಪಸ್ಸು ಹೋಗು ಎಂದಿತು. ಭಾರತಕ್ಕೆ ಬಂದೆ. ನನ್ನ ಜೊತೆಯೇ ಬೆಳೆದಿದ್ದ ನನ್ನ ಕಸಿನ್ ಗಾಯತ್ರಿಯನ್ನು ಮದುವೆಯಾದೆ. ನನ್ನ ಸಾಮರ್ಥ್ಯಾನುಸಾರವಾಗಿ ಸಂಶೋಧನಾ ಕ್ಷೇತ್ರದಲ್ಲಿ ಕೆಲಸಮಾಡಿದೆ. . ಇದರಲ್ಲಿ ಗುರು ಎಂದು ಒಬ್ಬರ ಕಡೆ ಕೈ ತೋರಿಸಲು ಅಗದಿದ್ದರೂ ಸಂದರ್ಭಗಳು ಮತ್ತು ವ್ಯಕ್ತಿಗಳು ಸೇರಿ ನನ್ನ ಮನಸ್ಸಿಗೆ ಆದೇಶಗಳು ಸಿಕ್ಕಿರಬಹುದು. ಒಟ್ಟಿನಲ್ಲಿ, ಅಮೆರಿಕಕ್ಕೆ ಹೋಗಬೇಕಾಯಿತು ಮತ್ತು ಅಲ್ಲಿಂದ ಭಾರತಕ್ಕೆ ಬಂದು ಇಲ್ಲಿಯೇ ಇದ್ದುದನ್ನೂ ಗುರುತಿಸಬೆಕಾಯಿತು .
ಇದೇ ರೀತಿ ನನ್ನ ಮೊದಲ ೨೦ ವರ್ಷಗಳು ಬೆಂಗಳೂರಲ್ಲಿ ; ಅನಂತರ ೪೦ ವರ್ಷಗಳು ಮುಂಬಯಿ ಮತ್ತು ಅಮೆರಿಕ.ದಲ್ಲಿ. ಮತ್ತೆ ಬೆಂಗಳೂರಿಗೆ ವಾಪಸ್ಸು ಬಂದೆ. ಮೊದಲಿಂದಲೂ ಅದು ಇದು ಬರೆಯುತ್ತಿದ್ದೆ. . ಬೆಂಗಳೂರಿಗೆ ವಾಪಸ್ಸು ಬಂದ ಮೇಲೆಯೇ ಅದಕ್ಕೆ ಒಂದು ದಿಕ್ಕು ಮತ್ತು ಶಿಸ್ತು ಸಿಕ್ಕವು. . ಇದಕ್ಕೂ ನಾನು ಹೊರಗೆ ಹೋಗಿ ಮತ್ತೆ ಮನೆಗೆ ಬರಬೇಕಾಯಿತು.
ಹೀಗೆ ಐಸಾಕ್ ಪರೋಕ್ಷವಾಗಿ ನನ್ನ ಗುರುವಾಗಿದ್ದ. ನಾನು ಅವನ ಬಗ್ಗೆ ಇಂಗ್ಲಿಷಿನಲ್ಲಿ ಸುಲೇಖಾ ಎಂಬ ಜಾಲದಾಣದಲ್ಲಿ ಒಂದು ಕಥೆ ಬರೆದೆ. ಆಗ ಅಲ್ಲಿಯ ಓದುಗರು ಇದು ಪಾಲ್ ಕೊಎಲ್ಹೊ ರವರ ಆಲ್ಕೆಮಿಸ್ಟ್ ಕಥೆ ಎಂದು ಗುರುತಿಸಿದ್ದರು.. ಮತ್ತೆ ಅದನ್ನು ಕನ್ನಡದಲ್ಲಿ ಬರೆದಾಗ ನನ್ನ ಐಸಾಕ್ ಪಾದ್ರಿಯಲ್ಲದೆ ಕಥೆಗಾರನೂ ಆಗಿಬಿಟ್ಟಿದ್ದ. ಪ್ರತಿರಾತ್ರಿಯೂ ಅವನ ಕನಸಿನಲ್ಲಿ ಬೈಬಲಿನ ಕಥೆಗಳು ಧಾರಾವಾಹಿಯಂತೆ ಬರುತ್ತವೆ. ಮಾರನೆಯ ದಿನ ಅವನು ಊರಿನ ಮಾರುಕಟ್ಟೆಗೆ ಹೋಗಿ ಆಕನಸುಗಳನ್ನು ಕಥೆಯಾಗಿ ಹೇಳುತ್ತಾನೆ. ಹೀಗಿದ್ದಾಗ ಒಂದು ರಾತ್ರಿ ಅವನ ಕನಸಿನಲ್ಲಿ ಆದಮ್ ಜೊತೆ ವನವಿಹಾರ ಮಾಡುತ್ತಿದ್ದ ಈವ್ ಐಸಾಕನ ಕಡೆ ತಿರುಗಿ ಪ್ರಾಗ್ ನಲ್ಲಿನ ನಿಧಿಯಬಗ್ಗೆ ಹೇಳಿ ಅದನ್ನು ತರಲು ಆದೇಶಿಸುತ್ತಾಳೆ. ಹಾಗೆ ಮುಂದಿನ ರಾತ್ರಿಗಳ ಕನಸುಗಳಲ್ಲಿ ಆದಮ್ ಮತು ಶೈತಾನ ಬಂದು ಅವನಿಗೆ ಪ್ರಾಗ್ ಗೆ ಹೋಗಲು ಹೇಳುತ್ತಾರೆ. ಕಡೆಗೆ ವಿಧಾತನೆ ಬಂದು ಐಸಾಕನಿಗೆ ಪ್ರಾಗ್ ಗೆ ಹೋಗಲು ಆದೇಶ ಕೊಡುವಾಗ. ಐಸಾಕ್ ಅಲ್ಲಿಗೆ ಹೋಗಲೆ ಬೇಕಾಗುತ್ತದೆ. ... ಈ ಕಥೆಯ ಹೆಸರು ' ಐಸಾಕನ ಕನಸುಗಳು' ಎಂದಿದ್ದು ಅವಧಿ ಜಲದಾಣದಲ್ಲಿ ಪ್ರಕಟವಾಗಿತ್ತು.
ಕಳೆದ ಜುಲೈನಲ್ಲಿ ನಾರ್ವೆಯಲ್ಲಿ ವಾಸಮಾಡುತ್ತಿದ್ದ ಮಗಳು ಕೃತ್ತಿಕಳ ಜೊತೆ ಗಾಯತ್ರಿ ಮತ್ತು ನಾನು ಪೂರ್ವ ಯೂರೋಪಿನ ಕೆಲ ವು ಊರುಗಳನ್ನು ನೋಡಲು ಹೋದೆವು. ಬರ್ಲಿನ್, ಪ್ರಾಗ್ ಮತ್ತು ಬುಡಾಪೆಸ್ಟ್ ನೋಡಿದ ನಂತರ ನಾವು ಬುಡಾಪೆಸ್ಟ್ ನಿಂದ ಇಡೀ ದಿನ ರೈಲು ಪ್ರಯಾಣ ಮಾಡಿ ಕ್ರಾಕೋಗೆ ಹೋದೆವು. ಕ್ರಾಕೋ ತಲಪಿದಾಗ ಮಧ್ಯ ರಾತ್ರಿ. ಜ್ಯೂಯಿಷ್ ಕ್ವ್ವಾರ್ಟರ್ - ಯೆಹೂದಿಗಳ ಕಾಲೊನಿ - ಯಲ್ಲೆ ಇಳಿದುಕೊಳ್ಲಲು ಕೃತ್ತಿಕ ಮೊದಲೇ ಏರ್ಪಾಡು ಮಾಡಿದ್ದಳು . ಆ ಊರಿನಲ್ಲಿ ಅಲ್ಲಿ ನಮ್ಮ ಮುಖ್ಯ ಆಸಕ್ತಿ ಆಶ್ವಿಜ್ - ಯೆಹೂದಿಗಳ ಮಾರಣ ಹೋಮದ ಸ್ಥಳ- ಕಾನ್ಸೆನ್ಟ್ರೇಷನ್ ಕ್ಯಾಂಪ್ ಅನ್ನು ನೋಡವುದಾಗಿತ್ತು; ಹಾಗೂ ನನಗೆ ನಿಕೊಲಾಸ್ ಕೋಪರ್ ನಿಕಸ್ ಗೆ ಸಂಬಂಧ ಪಟ್ಟ ಸ್ಥಳಗಳನ್ನೂ ನೋಡುವ ಕುತೂಹಲವೂ ಇದ್ದಿತು. ರಾತ್ರಿ ಮಲಗುವ ಮುನ್ನ ನನಗೆ ಅಲ್ಲಿಯೆ ಹಿಂದಿನ ಯಾರೋ ಪ್ರವಾಸಿಗಳು ಬಿಟ್ಟಿದ ಗೈಡ್ ಪುಸ್ತಕ ಕಾಣಿಸಿತು. ಅದರಲ್ಲಿ ಸಿನೆಗಾಗುಗಳ ಪಟ್ಟಿ ಯಲ್ಲಿ ಐಸಾಕನ ಸಿನೆಗಾಗ್ ಎಂದಿತ್ತು. ತಕ್ಷಣ ನನ್ನ ಮೆದುಳು ಚುರುಕಾಯಿತು. ಹೌದಲ್ಲ ನನ್ನ ಐಸಾಕ್ ಇದೇ ಕ್ರಾಕೋವಿನವನಲ್ಲವೆ ಎಂದುಕೊಂಡೆ. ಆಂದರೆ ಅವನು ನಿಜವಾಗಿಯೂ ಬಾಳಿ ಬದುಕಿದ್ದ !! ಎಲ್ಲಿದೆ ಎಂದಾಗ ಕೃತ್ತಿಕ ನಕ್ಷೆ ನೋಡುತ್ತಾ ಇಲ್ಲೇ ಪಕ್ಕದ ಬೀದಿಯಲ್ಲಿದೆ ಎಂದಳು. ರಾತ್ರಿಯೆ ಹೋಗಿ ನೋಡುವ ಆಸಕ್ತಿ ಇದ್ದಿತು. ಅದನ್ನು ತಡೆದುಕೊಂಡು ಬೆಳಿಗ್ಗೆ ತಿಂಡಿಯ ನಂತರ ನಾವುಅಲ್ಲಿ ಹೋದೆವು. ಐಸಾಕನ ಸಿನೆಗಾಗ್ ಎಂದು ಬರೆದಿತ್ತು. ಅಂತೂ ನನಗೆ ನಿಧಿ ಸಿಕ್ಕಂತಾಯಿತು !
--------------------
ಚಿತ್ರ ೧ - ಕ್ರಾಕೋವಿನಲ್ಲಿ ಐಸಾಕನ ಸಿನೆಗಾಗಿನ ಮು೦ದೆ ಲೇಖಕರು

No comments:

Post a Comment