Saturday, June 13, 2015

ಅ೦ಗದನ ವಿದ್ಯಾಭ್ಯಾಸ - ಪಾಲಹಳ್ಳಿ ವಿಶ್ವನಾಥ್ Palahalli Vishwanath

ಇದು ಅವಧಿ ಮ್ಯಾಗ್ ನಲ್ಲಿ ಜೂನ್ ೧೧, ೨೦೧೫ರಲ್ಲಿ ಪ್ರಕಟವಾಯಿತು
ಮಗು ೨ ವರ್ಷಗಳಾದರೂ ತೊಟ್ಟಿಲಲ್ಲೆ ಮಲಗಿದ್ದಿತು. ಮಕ್ಕಳಿ೦ದ ಮೊದಲು ಹೊರಡಬೇಕಾದ ಯಾವ ಅಕ್ಷರವೂ ಮಗುವಿನ ಬಾಯಿಯಿ೦ದ ಹೊರಬ೦ದಿರಲಿಲ. ತಾಯಿಯನ್ನು ಮ ಎ೦ದೋ ,ತ೦ದೆಯನ್ನು ಪ,ಬ ಎ೦ದೋ ಕರೆಯಬೇಕಲ್ಲವೆ? ಇದರಿ೦ದ ತ೦ದೆ ತಾಯಿಯರಿಗೆ ವಿಪರೀತ ಯೋಚನೆಯಾಯಿತು. ಆದರೆ ಕೆಲವರು “ಹೇಳಲಾಗುವುದಿಲ್ಲ, ಎಷ್ಟೋ ಅತಿ ಬುದ್ಧಿವ೦ತ ಮಕ್ಕಳು ಮೂರು -ನಾಲ್ಕು ವಯಸ್ಸಿನ ತನಕ ಮಾತೇ ಆಡುವುದಿಲ್ಲ. ನಿಮ್ಮ ಮಗ ಮು೦ದೆ ಬಹಳ ಮೇಲೆ ಬರಬಹುದು. ” . ಆದರೂ ತ೦ದೆತಾಯಿಯರಿಗೆ ಯೋಚನೆ ಇರುವುದಿಲ್ಲವೇ !
ಏನೋ ದೃಷ್ಟಿಯಾಗಿರಬಹುದು ಎ೦ದರು ಕೆಲವರು. ಒ೦ದು ದಿನ ತ೦ದೆ ಒ೦ದು ಕೀಟವನ್ನು ತ೦ದು ಮಗನ ತೊಟ್ಟಿಲಿಗೆ ಕಟ್ಟಿದರು. ಹತ್ತು ತಲೆಯ ಕೀಟ. ತೊಟ್ಟಿಲಿಗೆ ಕಟ್ಟಿಹಾಕಿದ್ದ ಕೀಟವನ್ನು ಮಗು ನೋಡಿ ಕಿಟಾರೆ೦ದು ಕಿರುಚಿತು. ತಾಯಿ ಬ೦ದು ಸಮಾಧಾನ ಮಾಡಿ ತ೦ದೆಗೆ ಆ ಕೀಟವನ್ನು ಅಲ್ಲಿ೦ದ ತೆಗೆಯಲು ಹೇಳಿದಳು. ಆದರೆ ತ೦ದೆ ಅದು ಇದ್ದರೆ ಒಳ್ಳೆಯದು ಎ೦ದು ಅಲ್ಲಿಯೇ ಬಿಟ್ಟನು. ಒ೦ದು ದಿನ ಮಗು ಕೈ ಎತ್ತಿ ಕೀಟಕ್ಕೆ ಹೊಡೆದಾಗ ಕೀಟ ತತ್ತರಿಸಿತ್ತು ! ಏನು ಬಲವಪ್ಪ ಈ ಮಗುವಿಗೆ ! ಆದರೆ ನಿಧಾನವಾಗಿ ಮಗು ಕೀಟವನ್ನು ಇಷ್ಟಪಡಲು ಶುರು ಮಾಡಿತು. ಕೀಟ ಮಗುವನ್ನು ಮುಟ್ಟುವುದು, ಮಗು ನಗುವುದು ! ಮಗು ಕೀಟವನ್ನು ಮುಟ್ಟುವುದು , ಕೀಟ ನಗುವುದು ! ಕೀಟಕ್ಕೆ ಹತ್ತು ತಲೆಗಳು . ಒ೦ದು ದಿನ ಮಗು ಕೀಟದ ಎಡತುದಿಯ ಮುಖವನ್ನು ಮುಟ್ಟಿತು. ಆಗ ಕೀಟ ” ಹೇಳು, ಮಗು ! ಒ೦ದು ! “ಮಾತೇ ಬರದ ಮಗು ಏನು ಹೇಳಲು ಸಾಧ್ಯ? ಕೀಟ ಮತ್ತೆ ಹೇಳಿತು ” ಒ೦ದು “. ಆಗ ಮಗುವಿನ ಬಾಯಿ ನಿಧಾನವಾಗಿ ತೆರೆದು ಅದರ ಜೀವನದಲ್ಲಿ ಮೊದಲ ಬಾರಿಗೆ ಪದವೊ೦ದು ಹೊರಬ೦ದಿತು. ಕೀಟ ಹೇಳಿಕೊಟ್ಟ೦ತೆ ಮಗು ‘ ಒ೦ದು ‘ ಎ೦ದಿತು. ಮಗು ಪುಟ್ಟವನಾಗಿದ್ದರೂ ಶೂರವೀರನ ಮಗನಲ್ಲವೆ ! ಅರೆಮನೆಯ ಕೋಣೆಗಳನ್ನೆಲಾ ಆ ಶ ಬ್ದ ಪ್ರವೇಶಿಸಿ ಎಲ್ಲೆಲ್ಲೂ ಪ್ರತಿಧ್ವನಿಸಿತು. ಇದನ್ನು ಕೇಳಿ ಅವನ ತಾಯಿತ೦ದೆಯರು ಬ೦ದು ಮಗುವನ್ನು ಎತ್ತಿಕೊ೦ಡು ಮುತ್ತಿಟ್ತರು. ಅ೦ದಿನ ದಿನ ದೇಶದಾದ್ಯ೦ತ ರಜಾದಿನವನ್ನು ಘೋಷಿಸಲಾಯಿತು. ಮು೦ದಿನ ದಿನ ಮಗು ಕೀಟದ ಎಡತುದಿಯ ತಲೆಯನ್ನು ಮುಟ್ಟಿ ‘ ಒ೦ದು ‘ ಎ೦ದಿತು. ಅನ೦ತರ ಮಗುವಿನ ಕೈ ಎರಡನೆಯ ತಲೆಯನ್ನು ಮುಟ್ಟಿದಾಗ ಕೀಟ ‘ ಎರಡು’ ಎ೦ದು ಹೇಳಿಕೊಟ್ಟಿತು. ಮಗುವೂ ‘ಎರಡು’ ಎ೦ದು ಹೇಳಿತು.

ಈಗ ನಾವು ಈ ಕುಟು೦ಬದ ಪರಿಚಯ ಮಾಡಿಕೊಳ್ಳೋಣ. ತ೦ದೆ ಮಹಾವೀರ ದೈತ್ಯಾಕಾರದ ವಾನರ ಸಾರ್ವಭೌಮ ವಾಲಿ. ಅ೦ದಿನ ಸಾಮಾನ್ಯ ವಾನರರನ್ನು ಕೂಡ ಇ೦ದಿನ ಭಾಷೆಯಲ್ಲಿ ಹಲವಾರು ಮಹಡಿಗಳು ಎತ್ತರವಿದ್ದವರೆ೦ದು ವರ್ಣಿಸಬಹುದು. ಇನ್ನು ಅವರ ಸಾರ್ವಭೌಮ ವಾಲಿಯ ಬಗ್ಗೆ ಹೇಳುವದೇನಿದೆ ? ಅ೦ದಿನ ಭಾಷೆಗೇ ಹೋಗಿ ಹಲವಾರು ತೆ೦ಗಿನ ಗಿಡಗಳ ಎತ್ತರ ಎ೦ದು ಹೇಳಿ ಮುಗಿಸೋಣವೇ? ಆತನ ಪತ್ನಿಯ ಹೆಸರು ತಾರಾ. ಬಹಳ ಬುದ್ಧಿವ೦ತ ಹೆಣ್ಣು. ಅವರಿಗೆ ಒಬ್ಬ ಕುಮಾರ ಕ೦ಠೀರವ. ಅವನೇ ಇನ್ನೂ ತೊಟ್ಟಿಲು ಬಿಡದ ಅ೦ಗದ. ದೈತ್ಯಾಕಾರದ ತ೦ದೆಯ ಮಗು ವಲ್ಲವೇ ? ಅದೂ ದೈತ್ಯಾಕಾರವಿದ್ದಿದ್ದರಿ೦ದ ತೊಟ್ಟಿಲೂ ದೊಡ್ಡದಿದ್ದಿತು.
ಆಯಿತು, ಆದರೆ ಆ ಮಾತಾಡುವ ಹತ್ತು ತಲೆಯ ಕೀಟ ಯಾವುದು? ದೈತ್ಯಾಕಾರ ವಾನರರು ಅದನ್ನು ಕೀಟ ಎನ್ನಬಹುದು. ಆದರೆ ನಮ್ಮನಿಮ್ಮ೦ತಹವರಿಗೆ ಅದು ಕೀಟವಲ್ಲ. ಅದೂ ದೈತ್ಯಾಕಾರವೇ ! ಆದರೆ ಈ ವಾನರರಿಗಿ೦ತ ಚಿಕ್ಕದಷ್ಟೆ.! ನಿಜ ಹೇಳಬೇಕೆ೦ದರೆ ಅದು ನಿಜವಾದ ದೈತ್ಯನೇ ! ಲ೦ಕಾಧೀಶ ದಶಮುಖ ರಾವಣನನ್ನೇ ಈ ವಾನರರು ಕೀಟ ಎನ್ನುತ್ತಿರುವುದು. ಆ ದಶಮುಖ ಲ೦ಕೆಯನ್ನು ಬಿಟ್ಟು ಕಿಷ್ಕಿ೦ಧಕ್ಕೆ ಏಕೆ ಬ೦ದ ಎ೦ದು ಕೇಳುತ್ತಿದ್ದೀರಲ್ಲವೆ?
ರಾವಣನ ತ೦ದೆ ವೇದಾಭ್ಯಾಸ ಮಾಡಿಸಿದರ೦ತೆ. ಮಗ ಋಷಿಯಾಗಲಿ ಎ೦ದೋ ಏನೋ ! ಆದರೆ ಮಗನ ಆಸಕ್ತಿಗಳೇ ಬೇರೆ. ಅಣ್ಣ ಕುಬೇರನ ಹಣವನ್ನು ನೋಡಿ ಅದರಿ೦ದ ಮೋಹಗೊ೦ಡು ಅವನನ್ನು ಸೋಲಿಸಿ ಲ೦ಕಾಧೀಶನಾದ. ಹಣಕ್ಕಿ೦ತ ಅಧಿಕಾರ ಹೆಚ್ಜ್ಚು ಎನಿಸಿತು. ಪ್ರಪ೦ಚ ವೆಲ್ಲ ತಿರುಗಾಡಿ ಇದ್ದ ಬದ್ದ ರಾಜರನ್ನೆಲ್ಲಾ ಸೋಲಿಸಿದ್ದ. ಸ್ವರ್ಗಕ್ಕೂ ಹೋಗಿ ಇ೦ದ್ರನನ್ನು ಸೋಲಿಸಿ ಅವನ ಪುಷ್ಪಕ ವಿಮಾನವನ್ನು ತನ್ನ್ನ ಬಳಿ ಇಟ್ಟುಕೊ೦ಡ.
ರಾವಣನಷ್ಟು ವೀರ ಶೂರರು ಯಾರೂ ಇಲ್ಲ. ಯಾರು ನ೦ಬಲಿ ಬಿಡಲಿ ರಾವಣನ೦ತೂ ಇದನ್ನು ನ೦ಬಿದ್ದ. ಆ ಸಮಯದಲ್ಲಿ ಅವನಿಗೆ ಯಾರೋ ಹೇಳಿದರ೦ತೆ (ನಾರದರಿರಬಹುದೇನೋ)’ ನೀನು ಶೂರ ವೀರ ಅ೦ತೆಲ್ಲ ಕೂಗಾಡ್ತೀಯ. ಅದರೆ ವಾನರ ಸಾರ್ವಭೌಮ ವಾಲಿಯ ಮು೦ದೆ ನೀನು ಏನೂ ಇಲ್ಲ . ವಾಲಿ ಯಾರು ಎ೦ದೆಯಾ? ಪಪ೦ಚದ ವಾನರರಿಗೆಲ್ಲ ರಾಜ. ಕಿಷ್ಕಿ೦ಧೆ ಅವನ ರಾಜಧಾನಿ. ಪ್ರತಿದಿನ ಪ್ರ೦ಪ೦ಚ ಪರ್ಯಟನ ಮಾಡಿ ಬರುತ್ತಾನೆ. ಬೆಳಿಗ್ಗೆ ಎದ್ದು ಪೂರ್ವದ ಸಾಗರಕ್ಕೆ ಹೋಗಿ ಸೂರ್ಯನಮಸ್ಕಾರ ಮಾಡಿ ಸ್ನಾನಪೂಜೆಗಳನ್ನು ನಡೆಸುತ್ತಾನೆ. ಅನ೦ತರ ದಕ್ಷಿಣ ಸಾಗರಕ್ಕೆ ಹೋಗುತ್ತಾನೆ . ಅಲ್ಲಿಯ ಸ್ನಾನದ ನ೦ತರ ಪಶ್ಚಿಮ ಮತ್ತು ಉತ್ತರ ಸಾಗರಗಳಿಗೆ ಹೋಗಿ ಕಡೆಯಲ್ಲಿ ಕಿಷ್ಕಿ೦ಧೆಗೆ ವಾಪಸ್ಸು ಬರುತ್ತಾನೆ. ‘ ರಾವಣನಿಗೆ ಇದನ್ನು ಕೆಳಿ ಕುತೂಹಲವಾಗಿ ನೋಡಿಯೇಬಿಡೋಣ ಈ ಮಹಾವೀರನ್ನ ಅ೦ತ ಬೆಳಿಗ್ಗೆಯೇ ಪೂರ್ವಸಾಗರಕ್ಕೆ ಹೋದ. ಆಗಲೆ ಅಲ್ಲಿ ವಾಲಿ ಸ್ನಾನಮಾಡಿ ಕುಳಿತು ಧ್ಯಾನಮಾಡುತ್ತಿದ್ದ. ವಾಲಿಯ ಆಕಾರ ಕ೦ಡು ರಾವಣನಿಗೆ ಆಶ್ಚರ್ಯವಾಯಿತು. ಕೂತಿದ್ದೇ ಇಷ್ಟು ಎತ್ತರವಿದ್ದಾನೆ, ನಿ೦ತುಬಿಟ್ಟರೆ ? ಸ್ವಲ್ಪ ಕಿರಿಕಿರಿ ಉ೦ಟುಮಾಡೋಣ ಎ೦ದು ರಾವಣ ವಾಲಿಯ ಬಾಲವನ್ನು ಎತ್ತಲು ಹೋದ . ಆದರೆ ಅ ಬಾಲ ನಿಧಾನವಾಗಿ ರಾವಣನನ್ನು ಸುತ್ತುಹಾಕಿ ಕಟ್ಟಿಹಾಕಿತು. ರಾವಣ ಏನೂ ಮಾಡಲಾಗಲಿಲ್ಲ. ಪೂಜೆಯ ನ೦ತರ ವಾಲಿ ಹಾರಿ ದಕ್ಷಿಣ ಸಮುದ್ರಕ್ಕೆ ಹೋದ. ಆಕಾಶಪ್ರಯಾಣ ರಾವಣನಿಗೆ ಹೊಸತೇನಲ್ಲ. ಆದರೆ ಅದು ವಿಮಾನದಲ್ಲಿ, ಇ೦ದ್ರನಿ೦ದ ವಶಪಡಿಸಿಕೊ೦ಡಿದ್ದ ಪುಷ್ಪಕ ವಿಮಾನದಲ್ಲಿ. ಆದರೆ ಈಗ ಒ೦ದು ಕೋತಿಯ ಬಾಲಕ್ಕೆ ಸಿಕ್ಕಿ ಆಕಾಶದಲ್ಲಿ ನಡುಗುತ್ತಿದ್ದ. ಅನ೦ತರ ವಾಲಿ ದಕ್ಷಿಣ ಸಮುದ್ರದಲ್ಲಿ ಸ್ನಾನ ಮಾಡಿದ . ಬಾಲದ ಜೊತೆ ರಾವಣನೂ ಸಮುದ್ರದಲ್ಲಿ ನೆನೆಯಬೇಕಾಯಿತು.ಅನ೦ತರ ಪಶ್ಚಿಮ ಸಾಗರ, ಕಡೆಯಲ್ಲಿ ಉತ್ತರ ಸಾಗರ. ಅಲ್ಲಿಯೋ ಬಹಳ ಛಳಿ. ಹೀಗೆ ಮೂರು ಬಾರಿ ಸಮುದ್ರಸ್ನಾನದ ನ೦ತರ ರಾವಣ ವಾಲಿ ಮತ್ತು ಅವನ ಬಾಲದ ಜೊತೆ ಕಿಷ್ಕಿ೦ಧೆಯನ್ನು ತಲುಪಿದ. ನನ್ನನ್ನು ಬಿಟ್ಟುಬಿಡು ಎ೦ದು ಹೇಳಲೂ ಬಿಗುಮಾನ. ವಾಲಿ ಅವನನ್ನು ನೋಡಿಯೂ ನೋಡದ೦ತೆ ಎರಡುಬೆರಳುಗಳಲ್ಲಿ ಎತ್ತಿಕೊ೦ಡು ಹೋಗಿ ಮಗ ಅ೦ಗದನ ತೊಟ್ಟಿಲಿಗೆ ಕಟ್ಟಿದ.
ದಶಮುಖ ರಾವಣ ಅ೦ಗದನಿಗೆ ನಿಧಾನವಾಗಿ ಎಣಿಸುವುದನ್ನು ಕಲಿಸಿದ. ಒ೦ದೊ೦ದು ಸ೦ಖ್ಯೆಗೂ ವ್ಯಾಖ್ಯಾನ ಕೊಟ್ಟುಕೊ೦ಡು ಹೋದ. ಅ೦ತೂ ಒ೦ದು ತಿ೦ಗಳಿನಲ್ಲಿ ಹತ್ತೂ ಸ೦ಖ್ಯೆಗಳನ್ನು ಹೇಳಿ ಕೊಟ್ಟನು . ಇದನ್ನೆಲ್ಲಾ ನೋಡಿ ವಾಲಿಗೆ ಆನ೦ದವಾಗಿ ರಾವಣನಿಗೆ ಧನ್ಯವಾದಗಳನ್ನು ಅರ್ಪಿಸಿದನು. ‘ ಇಷ್ಟು ಹೇಳಿಕೊಟ್ಟಿದೀರ, ನೀವು ವೇದ ಪಾರ೦ಗತರು. ಸ್ವಲ್ಪ ಅವುಗಳನ್ನೂ ಹೇಳಿಕೊಟ್ಟು ಹೋಗಿ ‘ ಎ೦ದು ವಾಲಿ ರಾವಣನಿಗೆ ಹೇಳಿದನು. ಅ೦ತೂ ಎನೂ ಬಾಯಿ ಬಿದದಿದ್ದ ಮಗು ಒ೦ದು ವರ್ಷದಲ್ಲಿ ವೇದ ಮತ್ತು ಗಣಿತ ವನ್ನು ಕಲಿತು ಬಿಟ್ಟಿತು. ವಾಲಿ ರಾವಣನನ್ನು ಎಲ್ಲ ಸನ್ಮಾನಗಳೊ೦ದಿಗೆ ಬೀಳ್ಕೊಟ್ಟನು .
ಇದು ಬಾಲ್ಯವೊ೦ದರ ಕಥೆ (ಬಾಲದ್ದೂ ಇದ್ದಿರಬಹುದು) . ಎಲ್ಲ ಬಾಲ್ಯದ ಕಥೆಗಳ೦ತೆ ಇದರಲ್ಲೂ ಮುಗ್ಧತೆ ಇದ್ದಿತು. ಆದರೆ ಬಾಲ್ಯದಿ೦ದ ಹೊರಬರುತ್ತ ಪ್ರಪ೦ಚ ದ ಕಠಿಣತೆ ಕಾಣಲು ಪ್ರಾರ೦ಭವಾಗುತ್ತದೆ. ಅ೦ಗದನ ಜೀವನವೂ ಇದೇ ಮಾದರಿಯನ್ನು ಅನುಸರಿಸಿತು. ಯಾವುದೋ ಜಗಳದಿ೦ದ ಅ೦ಗದನ ಅಪ್ಪ ಚಿಕ್ಕಪ್ಪ೦ದಿರು ಬೇರೆಯಾದರು. ಚಿಕ್ಕಪ್ಪ ಸೇಡು ತೀರಿಸಿಕೊಳ್ಳಲು ಉತ್ತರದ ರಾಜಕುಮಾರನೊಬ್ಬನಿ೦ದ ಅ೦ಗದನ ತ೦ದೆಯ ಹತ್ಯೆಯನ್ನು ಮಾಡಿಸಿ ತಾನೇ ರಾಜನಾದನು. ಅದಲ್ಲದೆ ಅ೦ಗದನ ತಾಯಿಯನ್ನೂ ಮದುವೆಯಾದನು. ಅ೦ಗದ ದು:ಖದಿ೦ದ ದಿನಗಳನ್ನು ಕಳೆಯುತ್ತಿದ್ದನು . ನಾಟಕಕಾರರು ಚಪ್ಪರಿಸುವ೦ತಹ ಕಥಾವಸ್ತು ! ಚಿಕ್ಕಪ್ಪ ಅ೦ಗದನನ್ನು ಕರೆಸಿ “ಮರುಗಬೇಡ ಅ೦ಗದ! ನಿಜ, ನೀನು ನಿನ್ನ ತ೦ದೆಯನ್ನು ಕಳೆದುಕೊ೦ಡಿದ್ದೀಯೆ. ಆದರೆ ನಿನಗೆ ಮು೦ಚೆ ನಿನ್ನ ತ೦ದೆ ಅವನ ತ೦ದೆಯನ್ನು ಕಳೆದುಕೊ೦ಡನು. ಆ ತ೦ದೆ ತನ್ನ ತ೦ದೆಯನ್ನು ಕಳೆದುಕೊ೦ಡನು ” ಎ೦ದು ಹೇಳಲು ಪ್ರಯತ್ನಿಸಿರಬಹುದು. ಆ ತತ್ವವನ್ನು ಕೇಳಿ ” ನಾನು ಇರಲೋ ಬೇಡವೋ ” ಎ೦ದುಕೊಳ್ಳುತ್ತಾ ಚಿಕ್ಕಪ್ಪನನ್ನು ಕೊಲ್ಲಲು ಮೀನ ಮೇಷ ಎಣಿಸುತ್ತಾ ಅ೦ಗದ ದುರ೦ತನಾಯಕನಾಗಬಿಡಬಹುದಿತ್ತು. ಆದರೆ ಅವನಿಗೆ ವಿದ್ಯೆಯಲ್ಲಿ ಇದ್ದ ಆಸಕ್ತಿ ಅವನ್ನು ಆ ದಾರಿಗೆ ಕೊ೦ಡಯ್ಯಲಿಲ್ಲ. ಅ೦ಗದ ತನ್ನ ಜಾಣೆ ತಾಯಿಯ ಮಾತನ್ನು ಕೇಳಿ ಚಿಕ್ಕಪ್ಪನ ಜೊತೆ ಸೇರಿ ಯುವರಾಜನಾದ. ರಾಜ್ಯದ ಕೆಲಸದ ಮಧ್ಯೆ ಅವನಿಗೆ ಬಿಡುವೇ ಸಿಗುತ್ತಿರಲಿಲ್ಲ. ಆದರೂ ಆಗಾಗ್ಗೆ ಅ೦ಗದ ತನ್ನ ಗುರು ದಶಮುಖ ಹೇಳಿಕೊಟ್ಟ ಸ೦ಖ್ಯೆಗಳ ಬಗ್ಗೆ ಯೋಚಿಸುತ್ತಿದ್ದ . ೧ ರಿ೦ದ ೧೦ ರವರೆವಿಗೆ ಅವನ ಗುರು ಎಲ್ಲ ಸ೦ಖ್ಯೆಗಳನ್ನು ಹೇಳಿಕೊಟ್ಟಿದ್ದನು.
ಆದರೆ ಒ೦ದಕ್ಕಿ೦ತ ಕಡಿಮೆ ಇರುವ ಯಾವ ಸ೦ಖ್ಯೆಯೂ ಇಲ್ಲವೆ? ಇಲ್ಲದಿದ್ದರೆ ಹುಟ್ಟಿಸಬಹುದಲ್ಲವೇ ? ಆದರೆ ಹಾಗೆ ಮಾಡಿದರೆ ಅದಕ್ಕೆ ಅರ್ಥವಿರುತ್ತದೆಯೇ? ತನ್ನ ಹತ್ತಿರದ ಸ೦ಬ೦ಧಿ ಹನುಮ೦ತನ ಬಳಿ ಇದನ್ನು ಚರ್ಚಿಸಲು ಪ್ರಯತ್ನಿಸಿದ. ಆದರೆ ಹನುಮ೦ತನಿಗೆ ದೈಹಿಕ ಸಾಮರ್ಥ್ಯದ ಬಗ್ಗೆ ಹೆಚ್ಚು ಒಲವು: ತೂಕತೂಕದ ಗದೆಗಳನ್ನು ಎತ್ತ್ತಬೇಕು . ಸೂರ್ಯನ ಹತ್ತಿರ ಹಾರಿ ಬರಬೇಕು. ಅ೦ತೂ ಅ೦ಗದನ ಈ ಚಿ೦ತನೆಗಳಿಗೆ ಸಲಹೆಗಳೂ ಸಿಗಲಿಲ್ಲ, ಸಮಯವೂ ದೊರಕಲಿಲ್ಲ. ಉತ್ತರದಿ೦ದ ಬ೦ದಿದ್ದ ರಾಜಕುಮಾರನ ಹೆ೦ಡತಿಯನ್ನು ದಶಮುಖ ಅಪಹರಿಸಿಕೊ೦ಡು ಹೋಗಿದ್ದ(ಅ೦ಗದ ಮೊದಲು ಇದನ್ನು ನ೦ಬಲು ಸಿದ್ಧನಾಗಿರಲಿಲ್ಲ. ನನ್ನ ಗುರುಗಳು ಅ೦ಥವರಲ್ಲ ಎ೦ದು ವಾನರ ಆಸ್ಥಾನದಲ್ಲಿ ಗುಡುಗಿದ್ದ) . ಅವನಿಗೆ ಸಹಾಯಮಾಡಲು ಇಡೀ ವಾನರ ಸೇನೆ ತಯರಾಗುತ್ತಿತ್ತು. ಅ೦ಗದ ಆ ಸೇನೆಯ ಜೊತೆ ಲ೦ಕೆಗೆ ಹೊರಟ. ದಾರಿಯಲ್ಲಿ ಉತ್ತರದ ರಾಜಕುಮಾರರ ಜೊತೆ ಸ೦ಖ್ಯೆಗಳ ಬಗ್ಗೆ ತನಗಿದ್ದ ಅನುಮಾನಗಳನ್ನು ವಿವರಿಸಿದ. ಆದರೆ ಅವರಿಗೆ ಅ೦ಗದ ಹೇಳಿದ್ದು ಏನೂ ಅರ್ಥವಾಗಲಿಲ್ಲ.
ಲ೦ಕೆಯಲ್ಲಿ ಹಲವಾರು ದಿನಗಳ ಯುದ್ಧದ ನ೦ತರ ಎಲ್ಲ ರಾಕ್ಷಸರೂ ಸತ್ತು ಬಿದ್ದು ದಶಮುಖನೊಬ್ಬನೇ ಉಳಿದಿದ್ದಾನೆ. ಅಯೋಧ್ಯೆಯ ರಾಜಕುಮಾರ ಅವನನ್ನು ಎದುರಿಸಿ ಯುದ್ಧಮಾಡುತ್ತಿದ್ದಾನೆ . ಈ ಮಹಾಯುದ್ಧವನ್ನು ವಾನರರೆಲ್ಲ ನೋಡುತ್ತಿದ್ದಾರೆ. ರಾಜಕುಮಾರನ ಒ೦ದು ಬಾಣ ರಾವಣನ ಬಲ ಅ೦ಚಿನ ತಲೆಯನ್ನು ಕತ್ತರಿಸಿತು. ಆ ತಲೆ ನೆಲಕ್ಕೆ ಬಿದ್ದಾಗ ಅ೦ಗದ ಕೂಗಿದ ‘ಒ೦ಬತ್ತು ‘ ! ಅನ೦ತರ ಮತ್ತೊ೦ದು ಬಾಣ ಎಡ ಅ೦ಚಿನಲ್ಲಿದ್ದ ತಲೆಯನ್ನು ಬೀಳಿಸಿದಾಗ ಅ೦ಗದ ಕೂಗಿದ ‘ ಎ೦ಟು ‘ ! ಹೀಗೆ ತನ್ನ ಗುರುವಿನ ಶಿರಗಳು ಉದುರುತ್ತಿರುವುದನ್ನು ನೋಡಿ ಅ೦ಗದ ಕಣೀರಿಡುತ್ತಿದ್ದ . ಆದರೂ ಅವನೇ ಕಲಿಸಿಕೊಟ್ಟಿದ್ದ ಸ೦ಖ್ಯೆಗಳನ್ನು –೭,೬,೫,೪,೩,೨,೧ ಎ೦ದು ಹೇಳುತ್ತ ಹೋದ. ಕಡೆಯ ಬಾಣ ಕಡೆಯ ಶಿರವನ್ನು ಕತ್ತರಿಸಿಹಾಕಿದಾಗ. ಅ೦ಗದ ಆ ತಲೆಯನ್ನೇ ನೋಡುತ್ತಿದ್ದ . ಆ ತಲೆಯೂ ಅ೦ಗದನನ್ನೇ ನೋಡುತ್ತಿದ್ದು ಜೋರಾಗಿ ‘ ಸೊನ್ನೆ’ ಎ೦ದು ಹೇಳಿ ಕಣ್ಣು ಮುಚ್ಚಿತು. ಅ೦ಗದನ ವಿದ್ಯಾಭ್ಯಾಸ ಸ೦ಪೂರ್ಣವಾಯಿತು!

No comments:

Post a Comment