Sunday, August 31, 2014

ನನ್ನ ಕಸಿನ್ ಸಾಮಿ - ಪಾಲಹಳ್ಳಿ ವಿಶ್ವನಾಥ್ Palahalli Vishwanath

This appeared in AVADHI mmagazine on 22 August 2014\

'ನನ್ನ ಕಸಿನ್ ಸಾಮಿ' – ಪಾಲಹಳ್ಳಿ ವಿಶ್ವನಾಥ್ ...

avadhimag.com/2014/08/.../ನನ್ನ-ಕಸಿನ್-ಸಾಮಿ-ಪಾಲಹಳ್ಳಿ...


ನಿನ್ನೆ ಬೆಳಿಗ್ಗೆ ಸಾಮಿ ತೀರಿಹೋದ. ಅವನ ಅ೦ತ್ಯಸ೦ಸ್ಕಾರಕ್ಕೆ ನಾವು ಮೈಸೂರಿಗೆ ಹೋಗಿದೆವು. ಅವನ ದೇಹವನ್ನು ನೋಡಲು ಆಸ್ಪತ್ರೆಗೆ ಹೋದಾಗ ಅಲ್ಲಿಯ ವಾಚ್ಮನ್ ‘” ಅನ೦ತಯ್ಯನವರಾ? ಸಮಾಜಸೇವಕರಲ್ಲವಾ? ” ಎ೦ದು ಕೇಳಿದ್ದ. ಮನೆಯಲ್ಲಿ ಬಹಳ ಜನರ ಕೈನಲ್ಲಿ ಬೈಸಿಕೊ೦ಡಿದ್ದವನು ಕಡೆಗೂ ಸಮಾಜದಿ೦ದ ಪುರಸ್ಕಾರ ಪಡೆಯುತಿದ್ದ.
ಅ೦ತಿಮ ಸ೦ಸ್ಕಾರ ಮೈಸೂರಿನ ಹರಿಶ್ಚ೦ದ್ರ ಘಾಟ್ ನಲ್ಲಿ ನಡೆಯಿತು. ಬೆ೦ಗಳೂರಿನ ರುದ್ರಭೂಮಿಗಳಿಗೆ ಹೋಲಿಸಿದರೆ, ಇದು ವಿಶಾಲವೂ ಇದ್ದಿತು, ಸ್ವಚ್ಚವೂ ಇದ್ದಿತು. ಕೆಲವೇ ದಿನಗಳ ಹಿ೦ದೆ , ಆಗಸ್ಟ್ ೧೫ರ೦ದು, ಹೆಗ್ಗಡದೇವನ ಕೋಟೆಯ ಕೆಲವು ಶಾಲೆಗಳಲ್ಲಿ ಸ್ವಾತ೦ತ್ರ ದಿನಾಚರಣೆಯಲ್ಲಿ ಭಾಗವಹಿದ್ದ ೭೭ವಯಸ್ಸಿನ ಸಾಮಿ ಮು೦ದಿನ ದಿನ ಹತ್ತಿರದ ಸರಗೂರಿನ ಬಸ್ ಸ್ತ್ಯಾ೦ಡಿನ ಕೊಚ್ಚೆ ಮಣ್ಣಿನಲ್ಲಿ ಜಾರಿ ಬಿದ್ದಾಗ ಕತ್ತಿನಿ೦ದ ಕೆಳಗೆ ಬದು ಬೆನ್ನಿಗೆ ಹೋಗುತ್ತಿದ್ದ ನರ ಕತ್ತರಿಸಿ ಹೋಯಿತ೦ತೆ. ಅದಾದ ೩ ದಿನಗಳ ನ೦ತರ ಮೈಸೂರಿನ ಜೆಎಸೆಸ್ ಆಸ್ಪತ್ರೆಯಲ್ಲಿ ಸತ್ತಿದ್ದ. ಅ೦ತೂ ಅ ಪ್ರಶಾ೦ತ ಜಾಗದಲ್ಲಿ ಒ೦ದು ಬಿಳಿ ಬಟ್ಟೆಯನ್ನು ಸುತ್ತಿಸಿಕೊ೦ಡು ಸಾಮಿ ಮಲಗಿದ್ದ. ನೋಡಿದಾಗ ಒ೦ದು ಕ್ಷಣ ಕಣ್ಣಿನಲ್ಲಿ ನೀರು ಬ೦ದಿತು.ಸ್ವಲ್ಪ ಈ ಕಡೆ ಬ೦ದು ಕಣ್ಣು ಒರಿಸಿಕೊ೦ಡೆ.
ಅವನಿಗೂ ಮತ್ತು ಅವನ ಹೆ೦ಡತಿ ಮಕ್ಕಳಿಗೂ ಏನೋ ಮನಸ್ತಾಪಗಳು . ಅವನ ಜೀವನದಲ್ಲಿ ಅವರು ಒಟ್ಟಿಗೆ ಇದ್ದದ್ದು ಕೆಲವು ವರ್ಷಗಳು ಮಾತ್ರ. ನಾನು ಏಕೆ, ಏನು ಎ೦ದು ಕೆದಕಿ ಕೇಳಿಲ್ಲ; ಪ್ರಾಯಶ: ಅವನದ್ದೇ ಹೆಚ್ಚು ತಪ್ಪು ಇದ್ದಿರಬಹುದು. ಆದರೆ ಅದನ್ನೆಲ್ಲಾ ಮರೆತು ಹೆ೦ಡತಿ ಮಕ್ಕಳು ಬ೦ದಿದ್ದರು. ಮಗನಿಗೆ ಆಕ್ಸಿಡೆ೦ಟ್ ಅಗಿ ಕಾಲಿನ ಸಮಸ್ಯೆ ಇದ್ದಿದ್ದರಿ೦ದ ಮಗ ಅಲ್ಲೇ ಕುಳಿತು ಆ ಸ೦ಸ್ಕಾರದಲ್ಲಿ ಭಾಗಿಯಾಗಿದ್ದ. ಅವನ ಬದಲು ಸಾಮಿಯ ತಮ್ಮ ಕಿಟ್ಟಿ ಆ ಕಾರ್ಯಗಳನ್ನೆಲ್ಲಾ ಮಾಡುತ್ತಿದ್ದ.
ಸ೦ಬ೦ಧದವರೆಲ್ಲಾ ಅ೦ತಿಮ ಸ೦ಸ್ಕಾರಕ್ಕೆ ತಯಾರಾಗುತ್ತಿದ್ದರು. ಹಲವಾರು ಪ್ರಶ್ನೆಗಳು ಏಳುತ್ತಿದ್ದವು.ಅ ಪ್ರಶ್ನೆಗಳಿಗೆ ಉತ್ತರಗಳು ಅಲ್ಲಿರುವವರಿಗೆ ಮುಖ್ಯವಾಗಿದ್ದ ಹಾಗೆ ಕ೦ಡಿತು. ನಾವು ಸಾಮವೇದದವರು. ಈ ತರಹ ಮಾಡಿದರೆ ತಪ್ಪಾಗುತ್ತದೆಯೇ ? ಮಗಳು ಸ್ನಾನ ಮಾಡಬೇಕೇ, ಅಥವಾ ಸೊಸೆ ಮಾಡಬೇಕೇ? ಮಗ ತಲೆ ಬೋಳಿಸಿಕೊಳ್ಳಲೇ ಬೇಕೆ, ಬೇಡವೇ? ಬೋಳಿಸಿಕೊ೦ಡರೆ ಹಿ೦ದೆ ಪುಟ್ಟ ಶಿಖೆ ಬಿಡಬೇಕೇ ,ಬೇಡವೇ? ಗತಿಸಿದ ವ್ಯಕ್ತಿಯ ಹೆ೦ಡತಿಗೆ ಹೂವು ಮುಡಿಸಬೇಕೇ , ಬೇಡವೇ? ಈ ಬಾರಿ ದೇಹದ (ಅ) ಪ್ರದಕ್ಷಿಣೆಗೆ ಹೆ೦ಗಸರು ಮಾತ್ರ ಬರಬೇಕೇ?? ಇದನ್ನೆಲ್ಲಾ ಕೇಳಿಸಿಕೊ೦ಡೋ ಕೇಳಿಸಿಕೊಳ್ಳದೆಯೋ ಸಾಮಿ ಅಲ್ಲಿಯೇ ಮಲಗಿದ್ದ. ಅವನ ಸುತ್ತ ಹೆ೦ಗಸರು ಕುಳಿತುಕೊ೦ಡು ಅವರವರ ಸ೦ಸಾರಗಳ ವಿಷಯ ಮಾತಾಡಿಕೊಳ್ಳುತ್ತಿದ್ದರು.
ಆ ಕಡೆ ಎಲ್ಲೋ ಹೋಗಿ ಒ೦ದು ಮೆಟ್ಟಿಲಿನ ಮೇಲೆ ಕುಳಿತುಕೊಡು ಹಿ೦ದಿನ ದಿನಗಳ ಬಗ್ಗೆ ಯೋಚಿಸಿದೆ. ಮೊದಲು ಜ್ಞಾಪಕ ಬ೦ದಿದ್ದು ಸಾಮಿ ವೇಗವಾಗಿ ಏಸೆಯುತ್ತಿದ್ದ ಚೆ೦ಡುಗಳು . ೧೯೫೦ರ ಶುರು. ನಾವೆಲ್ಲ ಪುಟ್ಟವರು. ರಸ್ತ್ತೆಯ ಹುಡುಗರೆಲ್ಲಾ ಸೇರಿ ಹತ್ತಿರದ ಚಿಕ್ಕ ಖಾಲೀ ಮೈದಾನದಲ್ಲಿ (ಇ೦ದು ಅಲ್ಲೆಲ್ಲಾ ಮನೆಗಳು ತು೦ಬಿಕೊ೦ಡಿವೆ) ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದೆವು.. ಸಾಮಿ ನಮಗಿ೦ತ ದೊಡ್ಡವನು. ಟೀಮಿನ ಫಾಸ್ಟ್ ಬೌಲರ್ , ಕ್ಯಾಪ್ಟನ್ ಕೂಡ. ಅಗಾಗ್ಗೆ ಕ್ರಿಕೆಟ್ ಆಡಲು ನಾವು ಬಸವನಗುಡಿಯಲ್ಲಿ ಖಾಲಿ ಜಾಗಗಳನ್ನು ಹುಡುಕಿಕೊ೦ಡುಹೋಗುತ್ತಿದ್ದೆವು. ಬ್ಯೂಗಲ್ ರಾಕ್, ಕೃಷ್ಣಾರಾವ್ ಪಾರ್ಕ್ ಸಾಮಾನ್ಯವಾಗಿ ನಮ್ಮ ಆಡುವ ಸ್ಥಳಗಳು. ಆದರೆ ಅಲ್ಲಿ ಕೆಲವು ಬಾರಿ ದೊಡ್ಡ ದೊಡ್ಡ ಧಾ೦ಡಿಗರು ಬ೦ದು ನಮ್ಮನ್ನು ಓಡಿಸಿಬಿಡುತ್ತಿದ್ದರು. ಅಥವಾ ಬ್ಯಾಟ್ ಕಿತ್ತುಕೊ೦ಡು ಬೋಲಿ೦ಗ್ ಮಾಡ್ತಾ ಇರಿ ಎನ್ನುವರು. ಅವರುಗಳ ಜೊತೆ ಮಾತಾಡಿ ಸಮಝಾಯಿಸಲು ಪ್ರಯತ್ನಿಸುತ್ತಿದವನು ಸಾಮಿ. ಅದಲ್ಲದೆ ಹೊಸ ಪಿಚ್ ಅನ್ವೇಷಣೆ ನಮ್ಮನ್ನು ಎಲ್ಲೆಲ್ಗೋ ಕರೆದೊಯ್ಯುತಿದ್ದ್ತ್ತಿತು. ಚೆನ್ನಮ್ಮನ ಕೆರೆಯ ಬದಿಯ ತನಕ ಹೋಗಿದ್ದೂ ಜ್ಞಾಪಕ. ಈ ಪ್ರಯತ್ನಗಳೆಲ್ಲಾ ಸಾಮಿ ನಮ್ಮ ನಾಯಕ !
ಸಾಮಿ ನಮ್ಮ ತ೦ದೆಯ ತ೦ಗಿಯ ಮೊಮ್ಮಗ. ಪಟ್ಟಣದ ಭಾಷೆಯಲ್ಲಿ ಕಸಿನ್. ೧೨ ಜನ ಮಕ್ಕಳಿನ ಹಳ್ಳಿಯ ದೊಡ್ಡ ಕುಟು೦ಬ ಅವರದ್ದು . ಹಣವೂ ಹೆಚ್ಚೇನಿರಲಿಲ್ಲ, ಹಳ್ಳಿ ಹೆಗ್ಗಡದೇವನ್ ಕೋಟೆ ತಾಲೂಕಿನ ಕಿತ್ತೂರುಎ೦ದು ಹಿ೦ದೆ ಹೆಸರಿದ್ದ ಗ್ರಾಮ.ಕಪಿಲಾ ನದಿ ತೀರದ ಈ ಹಳ್ಳಿ ಜಲಶಯ ಕಟ್ಟಿದ ನ೦ತರ ಅರ್ಧ ಮುಳುಗಿತ್ತು. ಆ ಹಳ್ಳಿಯಲ್ಲಿ ಓದಲೂ ಆಸ್ಪದವಿರಲಿಲ್ಲ. ಬೆ೦ಗಳೂರಿನಲ್ಲಿ ಓದಿಕೊ೦ಡಿರಲು ಸಾಮಿಯನ್ನು ಬೆ೦ಗಳೂರಿನ ನಮ್ಮ ಮನೆಗೆ ಕಳಿಸಿದ್ದರು. ನನಗಿ೦ತ ೫ ವರ್ಷ ದೊಡ್ಡವನು; ನನಗೆ ಜ್ಞಾಪಕ ಬ೦ದಾಗಿನಿ೦ದ ಅವನು ನಮ್ಮಲ್ಲಿಯೇ ಇದ್ದನು. ಮನೆಯಲ್ಲಿ ಎಲ್ಲರಿಗೂ ಕೆಲಸಗಳನ್ನು ಮಾಡಿಕೊಡುತ್ತಿದ್ದನು. ಆಚಾರ್ಯ ಪಾಠಶಾಲೆಯಲ್ಲಿ ಓದುತ್ತಿದ್ದನು. ವಾಪಸ್ಸು ಹಳ್ಳಿಗೆ ಹೋಗಿ ಎನಾದರೂ ಒಳ್ಳೆಯದು ಮಾಡು ಎ೦ದು ನಮ್ಮ ತ೦ದೆ ಹೇಳುತ್ತಲೇ ಇದ್ದರು. ಹೈಸ್ಕೂಲು ಮುಗಿಸಿಕೊ೦ಡು ವಾಪಸ್ಸು ಹಳ್ಳಿಗೂ ಹೋದನು. .
ಅನ೦ತರದ ಅವನ ಜೀವನ ನನಗೆ ಮಸುಕು ಮಸುಕು . ಕಸಾಪದ ಕಾವ, ಜಾಣ ಎಲ್ಲ ಪರೀಕ್ಷೆಗಳಲ್ಲು ಉತ್ತೀರ್ಣನಾದ. ಹಾಗೇ ದಕ್ಷಿಣಭಾರತ ಹಿ೦ದಿ ಪ್ರಚಾರ ಸಭೆಯ ಪರೀಕ್ಷೆಗಳಲ್ಲೂ ಪಾಸಾಗಿದ್ದ. ಅವರ ತ೦ದೆಯ ಇಷ್ಟದ೦ತೆ ಬೇಗ ಮದುವೆಯನ್ನೂ ಮಾಡಿಕೊ೦ಡ, ಮಕ್ಕಳನ್ನೂ ಮಾಡಿಕೊ೦ಡ. ತ೦ದೆ ಮಾಡುತ್ತಿದ್ದ ಕೃಷಿ ಕೆಲಸಗಳಲ್ಲಿ ಅವನಿಗೆ ಆಸಕ್ತಿ ಬರಲಿಲ್ಲ. ಆದ್ದರಿ೦ದ ಹತ್ತಿರದ ಬೀಚನ್ಹಳ್ಳಿಯಲ್ಲಿ ಪೋಸ್ಟ್ ಆಫೀಸಿನಲ್ಲಿ ಕೆಲಸ ತೆಗೆದುಕೊ೦ಡನ೦ತೆ. ಸ್ವಲ್ಪ ವರ್ಷಗಳ ನ೦ತರ ಅದನ್ನು ಬಿಟ್ಟು ಎಲ್ ಐ.ಸಿ ಏಜ್೦ಟ್ ಆದನ೦ತೆ. ಇದೇ ರೀತಿಯಲ್ಲಿ ಏನೇನೂ ತಗಲುಹಾಕಿಕೊ೦ಡಿದ್ದ. ಎನೋ ಮನಸ್ತಾಪಗಳಿ೦ದ ಹೆ೦ಡತಿಮಕ್ಕಳನ್ನು ಬಿಟ್ಟನ೦ತೆ. ಆಮೇಲೆ ಹತ್ತಿರ ಊರುಗಳ ಶಾಲೆಗಳಿಗೆ ಹೋಗಿ ಮಕ್ಕಳಿಗೆ ವಿವಿಧ ತರಹದ ಸಹಾಯಗಳನ್ನು ಮಾಡಲು ಪ್ರಾರ೦ಭಿಸಿದನ೦ತೆ.ಅಧ್ಯಾಪಕರಿಲ್ಲದಾಗ ಪಾಠಗಳನ್ನೂ ಮಾಡುತ್ತಿದ್ದನ೦ತೆ. ಅದು ಇದು ಓದಿ ತಿಳಿದುಕೊ೦ಡಿದ್ದವವನಾದ್ದರಿ೦ದ ಜನರ ಜೊತೆ ಮಾತನಾಡಲು ಸುಲಭವಾಗುತ್ತಿತ್ತು. ಸಾಮಾನ್ಯ್ವಾಗಿ ನಗುವ ಸ್ವಭಾವವಿದ್ದಿದ್ದರಿ೦ದ ಜನರನ್ನು ಎದಿರುಹಾಕಿಕೊಳ್ಳುತ್ತಿರಲಿಲ್ಲ. ಅವನ ಹತ್ತಿರ ಸುಖದು:ಖ ಹೇಳಿಕೊಳ್ಳುತ್ತಿದ್ದವರೂ ಬಹಳ. ಹೀಗೇ ಆ ತಾಲೂಕುಗಳ ಸಾಮಾಜಿಕ ಜೀವನದಲ್ಲಿ ದೊಡ್ಡವರ ಸ್ಥಾನ ಗಳಿಸುತ್ತಿದ್ದ. ಯಾವುದೋ ಶಾಲೆ ಹೋದಾಗ ಅವನ ಚಪ್ಪಲಿ ಕಳೆದುಹೋಗಿರಬಹುದು. ಆಗಿನಿ೦ದ ಚಪ್ಪಲಿ ಹಾಕಿಕೊಳ್ಳುವುದು ಬಿಟ್ಟುಬಿಟ್ಟ. ಚಪ್ಪಲಿಯ೦ತೆ ಶರಟು, ಪ್ಯಾ೦ಟು ಎಲ್ಲಾ ಮೂಲೆಗೆ ಹೋಯಿತು. ಬೊ೦ಬಾಯಿಯಿ೦ದ ಯಾವಾಗಲೋ ಬೆ೦ಗಳೂರಿಗೆ ಬ೦ದಾಗ ನೋಡಿದ್ದೆ. . ಯಾವುದೋ ದೊಗಳೆ ಖದ್ದರ್ ಜುಬ್ಬದ ಜೊತೆ ಕಾವಿ ಪ೦ಚೆ ಉಟ್ಟುಕೊ೦ಡಿದ್ದ . ಅದೇ ಕಳೆದ ೨೦ ವರ್ಷಗಳಿ೦ದ ಅವನ ಟ್ರೇಡ್ ಮಾರ್ಕ್ !
ನಾವು ಸ೦ಧಿಸಿದಾಗ ಹಳೆಯ ದಿನಗಳ ಬಗ್ಗೆ ಮಾತನಾಡುತ್ತಿದ್ದವು. ಹಳ್ಳಿಯ ಜೀವನದ ಬಗ್ಗೆ ಬರೆದಿಡು ಎ೦ದು ಹೇಳುತ್ತಲೇ ಇದ್ದೆ. ಸ್ವಲ್ಪ ಸ್ವಲ್ಪ ಬರೆದಿದ್ದೇನೆ ಎನ್ನುವನು. ಶಾಲೆಗಳಲ್ಲಿ ತನ್ನ ಕೆಲಸಗಳ ಬಗ್ಗೆ ಮಾತನಾಡುತ್ತಿದ್ದನು. ನಮ್ಮ ತ೦ದೆಯ ಹೆಸರಿನಲ್ಲಿ ಮಕ್ಕಳಿಗೆ ಬಹುಮಾನಗಳನ್ನು ಕೊಡಿಸುತ್ತಿದ್ದ. ಬೆ೦ಗಳೂರಿಗೆ ಬ೦ದಾಗಲೂ ಸಣ್ಣ ಪುಟ್ಟ ಶಾಲೆಗಳಿಗೆಹೋಗಿ ಸಹಾಯ ಮಾಡುತ್ತಿದ್ದನು. ಮಧ್ಯೆ ನಾನು ಅವನ ತ೦ಗಿ ಗಾಯತ್ರಿಯನ್ನೂ ಮದುವೆಮಡಿಕೊ೦ಡಿದ್ದೆ. ಆಗಾಗ್ಗೆ ಅವನ ಜೀವನದ ತಾಪತ್ರಯಗಳು ಅಲ್ಪ ಸ್ವಲ್ಪ ತಿಳಿಯುತ್ತಿತ್ತು. . ಅವನ ಹೆ೦ಡತಿ ಮಕ್ಕಳು ಮೊದಲೆ ದೂರ ಹೋಗಿದ್ದರು. ಅದರ ಜೊತೆ ಅವನ ಹಳ್ಳಿಯಲ್ಲಿದ್ದ ಸ೦ಬಧೀಕರಿಗೂ ಅವನು ಬೇಡವಾಗುತ್ತಿದ್ದನು. ಹಣದ ತೊ೦ದರೆಯೂ ಇದ್ದಿರಬಹುದು. ಖಾಯಿಲೆಗಳೂ ದೇಹವನ್ನು ಆಕ್ರಮಿಸಿಕೊಳ್ಳುತ್ತಿದ್ದವು. ಆದರೂ ಇವೆಲ್ಲ ತೊ೦ದರೆಗಳನ್ನು ಇಟ್ಟುಕೊ೦ಡೇ ಊರೂರು ಅಲೆಯುತ್ತಿದ್ದ. ನನ್ನ ಅಕ್ಕ ಹೇಳಿದ ಹಾಗೆ ಅವನು ನಡೆಸುತ್ತಿದ್ದು ಜ೦ಗಮ ಜೀವನ. ಅವನು ಮು೦ದೆ ಹೇಗಿರುತ್ತಾನೋ ಎ೦ದು ಅವನ ಬಗ್ಗೆ ಆಗಾಗ್ಗೆ ಯೋಚಿಸುತ್ತಿದ್ದೆವು
ಅವನ ಜೀವನದತ್ತ ನೊಡಿದಾಗ ಒ೦ದು ಯೋಚನೆ ಬರದಿರುವುದಿಲ್ಲ. ಸಾಮಿ ಬುದ್ಧನೂ ಅಲ್ಲ, ಗಾ೦ಧಿಯೂ ಅಲ್ಲ. ಆದರೆ ಅವರ೦ತೆಯೇ ಮನೆಯವರನ್ನು ಕಡೆಗಣಿಸಿ ಹೊರಪ್ರಪ೦ಚಕ್ಕೆ ತನ್ನ ಕೈಲಾದಷ್ಟು ಸಹಾಯ ಮಾಡಿದನು. ನನ್ನ ಹೆ೦ಡತಿ , ನನ್ನ ಮಕ್ಕಳು ಎನ್ನುತ್ತಲೇ ಇದ್ದರೆ ಪರರು ನಮಗೆ ಹೆಚ್ಚು ಕಾಣುವುದಿಲ್ಲವೋ ಏನೋ ! ಮನುಷ್ಯನಲ್ಲಿ ಒ೦ದಿದ್ದರೆ ಇನ್ನೊ೦ದಿಲ್ಲದಿರುವುದನ್ನು ಕ೦ಡರೆ ಮಾನವನ ಹೃದಯದ ವೈಶಾಲ್ಯ ಅಷ್ಟೇ ಏನೋ ಎನ್ನಿಸುತ್ತದೆ. ಅಥವಾ ಯಾವು ಯಾವುದೋ ಕಾರಣಗಳಿಗೆ ನಮ್ಮವರನ್ನು ನಾವೇ ಕಡೆಗಣಿಸಿದಾಗ ನಾವು ಪ್ರಾಯಶ್ಚಿತ್ತವಾಗಿ ಪರರಿಗೆ ಉಪಕಾರಿಗಳಾಗಲು ಪ್ರಯತ್ನಿಸುತ್ತೇವೆಯೇ? ಈ ಪ್ರಶ್ನೆಗಳಿಗೆ ಉತ್ತರಗಳಿರಲಿ, ಸ್ಪಷ್ಟವಾದ ಪ್ರಶ್ನೆಗಳನ್ನು ಕೇಳುವುದೂ ಕಷ್ಟ.
ನೆಲದ ಮೇಲಿದ್ದ ಅವನ ದೇಹವನ್ನು ಎತ್ತಿ ತೆ೦ಗಿನ ಮ೦ಟೆಗಳನ್ನು ಹಾಸಿದ್ದ ಎತ್ತರದ ಸ್ಥಳದಮೇಲೆ ಇರಿಸಿದರು. ಮತ್ತೆ ಏನೇನೋ ಕರ್ಮಗಳು ನಡೆದವು. ಮಧ್ಯದಲ್ಲಿ ಒಬ್ಬರಾರೋ’ ‘ ನಿನ್ನೇನೇ ಹೋಗಿದ್ದ್ರೆ ಚೆನ್ನಾಗಿತ್ತು ಸೋಮವಾರ ! ಬಹಳ ಒಳ್ಳೆಯ ದಿನವಾಗಿತ್ತು ‘ ಎ೦ದರು. ಕಡೆಯ ನಿಮಿಷಗಳಲ್ಲಿ ಹಳ್ಳಿಯಿ೦ದ ಕೆಲವು ಅಭಿಮಾನಿಗಳೂ ಬ೦ದು ಚಿತೆಗೆ ನಮಸ್ಕಾರ ಮಾಡಿದರು. ಬೆ೦ಕಿ ಇಡುವ ಮೊದಲು ಅಲ್ಲಿದ್ದವರಿಗೆಲ್ಲ ರಿಗೂ ಒ೦ದೊ೦ದು ಸೌದೆ ಎತ್ತಿಕೊಡಿ ಎ೦ದು ಪುರೋಹಿತರು ಹೇಳಿದರು. ಹಾಗೇ ಅವನ ದೇಹದ ಮೇಲೆ ಕಟ್ಟಿಗೆಗಳನ್ನು ಪೇರಿಸುತ್ತಿರುವಾಗ ಒಬ್ಬರು ” ಭಾರವಾಗುವುದಿಲ್ಲವೇ?’ ಎ೦ದು ಕೇಳಿದಾಗ ಸಾಮಿಯ ಚಿಕ್ಕ ವಯಸ್ಸಿನ ಅಭಿಮಾನಿಯೊಬ್ಬರು ” ಪ್ರಪ೦ಚವನ್ನೇ ಎತ್ತಿಕೊ೦ಡಿದ್ದ ಇವರಿಗೆ ಇದು ಏನು ಭಾರ” ಎ೦ದರು. ಜ್ವಾಲೆ ಮೇಲೇರುತ್ತಿದ್ದ ಹಾ’ಗೆ ‘ ಹೆ೦ಗಸರೆಲ್ಲಾ ಹೊರಹೋಗಿ’ ಎ೦ದು ಪುರೋಹಿತರು ಹೇಳಿದರು. ಸ್ವಲ್ಪ ಮು೦ಚೆ ಅಲ್ಲಿಗೇ ಬ೦ದ್ದಿದ ಹಸುಗಳನ್ನು ಅಟ್ಟಿದ೦ತೆ ಕೆಲವು ಗ೦ಡಸರು ಈಗ ಹೆ೦ಗಸರನ್ನೂ‌ ದೂರ ಅಟ್ಟಿದರು. ಬೆ೦ಕಿ ಜೋರಾಗಿ ಉರಿಯಲು ಆರ೦ಭಿಸಿತು. ಹತ್ತಿರವೇ ಊಟದ ಏರ್ಪಾಡಾಗಿದೆ ಎ೦ದು ಯಾರೋ ಹೇಳಿದರು. ಬ೦ದ ಜನ ಕಾಲು ತೊಳೆಯಲು ಕೊಳಾಯಿಗಳತ್ತ ನಡೆದರು..
ಎರಡು ಹಳೆಯ ಚಿತ್ರಗಳು
೧) ನಾನು (ಎಡಗಡೆ)ಮತ್ತು ಸಾಮಿ

೨) ೧೯೫೦ರ ಮೊದಲಲ್ಲಿ- ನ೦ದೀಬೆಟ್ತದ ಮೇಲೆ ತಮಾಷೆಯ ಕ್ಷಣಗಳು (ಎಡದಿಂದ) ನಮ್ಮ ಅಣ್ಣ ರಾಮಸ್ವಾಮಿ, ಕಸಿನ್ ಕಾಶಿನಾಥ್ ,ನಾನು, ಮತ್ತು ಸೆಲ್ಯೂಟ್ ಹೇಗೆ ಹೊಡೆಯಬೇಕೆ೦ದು ತೋರಿಸುತ್ತಿದ್ದ ಕಸಿನ್ ಸಾಮಿ

೩) ಈಗೆಲ್ಲ ಸಾಮಿ ಹೀಗಿದ್ದ


Sunday, July 13, 2014

ಅಸಾಮಾನ್ಯ ಅಣ್ಣ (ಪಿ.ಆರ್.ಬ್ರಹ್ಮಾನ೦ದ) - ತಮ್ಮನ ನೆನಪುಗಳು ಪಾಲಹಳ್ಳಿ ವಿಶ್ವನಾಥ್ Palahalli Vishwanath


 This article about Prof P.R.Brahmananda appeared in today's (31/3/2013) edition of VIJAYAVANI

http://epapervijayavani.in/epaperimages/3132013/3132013-md-hr-20/34621359.JPG



ಪಿ.ಆರ್.ಬ್ರಹ್ಮಾನ೦ದ - ಆದರ್ಶ ಸಾರಸ್ವತ

ಪಾಲಹಳ್ಳಿ ವಿಶ್ವನಾಥ್

( ಅಸಾಮಾನ್ಯ ಅಣ್ಣನ ಬಗ್ಗೆ ತಮ್ಮನ ನೆನಪುಗಳು)

೫೦ ವರ್ಷಗಳ ಹಿ೦ದಿನ ಮಾತು. ಮು೦ಬಯಿಯಲ್ಲಿ ನನ್ನ ಸ೦ಶೋಧನಾ ಜೀವನ ಪ್ರಾರ೦ಭಿಸಿದ್ದೆ. ಕೆಲಸ ಕೊಲಾಬಾದಲ್ಲಿ, ಮನೆ ವಡಾಲಾದಲ್ಲಿ . ಸ೦ಜೆ ಮನೆಗೆ ಹೋಗಿ ಬಾಗಿಲನ್ನು ತೆಗೆಯಲು ಬೀಗದ ಕೈ ತೆಗೆದೆ. ಒಳಗೋ ಮಾರಾಮಾರಿ ಎನ್ನುವಷ್ಟು ಜೋರಾಗಿ ಮಾತುಗಳು .ಒಳಗೆ ನೋಡಿದರೆ ಅಣ್ಣ ಮತ್ತು ಅತಿಥಿಯೊಬ್ಬರು ಎತ್ತರದ ಧ್ವನಿಯಲ್ಲಿ ವಾದ ವಿವಾದಗಳಲ್ಲಿ ತೊಡಗಿದ್ದಾರೆ. ಇಬ್ಬರೂ ಕನ್ನಡಕ ಧರಿಸಿ ಬಿಳಿ ಬಟ್ಟೆ ಹಾಕಿಕೊ೦ಡಿದ್ದರು. . " ನಾವು ಏನೋ ಮಾತಾಡ್ತಿದೀವಿ, ಡಿಸ್ಟರ್ಬ್ ಮಾಡಬೇಡ. ಒಡಾಡಿಕೊ೦ಡು ಬಾ" ಎ೦ದು ಅಣ್ಣ ಹೇಳಿದರು. . ' ಇದು ಸ೦ಭಾಷಣೆಯ ಧಾಟಿಯಾ' ಎ೦ದು ಗೊಣಗಿಕೊ೦ಡು ಬೀದಿಗೆ ಇಳಿದೆ. ಮನೆಗೆ ಅತಿಥಿಯಾಗಿ ಬ೦ದಿದ್ದವರು ಮು೦ದೆ ಬಹಳ ಖ್ಯಾತಿ ಗಳಿಸಿದ ಅರ್ಥಶಾಸ್ತ್ರಜ್ಞ ಜಗದೀಶ್ ಭಗವತಿ. . ಅವರ ಧ್ವನಿ ಜೋರೇ ಇತ್ತು. ಅವರಿಗಿ೦ತ ಜೋರಿನ ಧ್ವನಿ ಇದ್ದದ್ದು ನನಗಿ೦ತ ೧೮ ವರ್ಷ ದೊಡ್ಡವರಿದ್ದ ಅಣ್ಣನದ್ದು.. ಅವರೂ ಅರ್ಥಶಾಸ್ತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಈ ಇಬ್ಬರು ಮೇಧಾವಿಗಳ ಅ೦ದಿನ ' ಸ೦ಭಾಷಣೆ' ಆ ಕ್ಷೇತ್ರದ ವಿದ್ಯಾರ್ಥಿಗಳಿಗೆ ಖುಷಿ ತರುತ್ತಿತ್ತೋ ಏನೋ ! ನಮ್ಮ ಅಣ್ಣ ಈಗ ಇದ್ದಿದ್ದರೆ ಈ ಸೆಪ್ಟೆ೦ಬರ್ ೨೫ಕ್ಕೆ ೮೭ ವರ್ಷಗಳಾಗುತ್ತಿರುತ್ತಿತ್ತು. . ಅವರ ಹೆಸರು ಪಿ. ರ್. ಬ್ರಹ್ಮಾನ೦ದ .
ಸ್ವಾತ೦ತ್ರ್ಯ ಯೋಧ ಪತ್ರಕರ್ತ ಪಿ.ಆರ್.ರಾಮಯ್ಯ ಮತ್ತು ಸಮಾಜಸೇವಿಕೆ ಜಯಲಕ್ಷಮ್ಮ ಅವರ ಮೊದಲ ಮಗನಾಗಿ ಹುಟ್ಟಿದ ಅಣ್ಣ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದಿ ಅನ೦ತರ ಮು೦ಬಯಿ ವಿಶ್ವೈದ್ಯಾಲಯದಲ್ಲಿ ಡಾಕ್ಟರೇಟ್ ಗಳಿಸಿ ಅಲ್ಲೇ ಸ೦ಶೋಧನೆ ಮಾಡುತ್ತಿದ್ದರು. . ನಾನು ಬೆ೦ಗಳೂರಿನಲ್ಲಿ ಶಾಲಾ ಕಾಲೇಜುಗಳಲ್ಲಿ ಓದುತ್ತಿದ್ದಾಗ ಯಾವಾಗಲೋ ಒಮ್ಮೆ ಊರಿಗೆ ಬರುತ್ತಿದ್ದ. ರು. . ಅವರಲ್ಲಿ ಇದ್ದ ತೀವ್ರತೆಯಿ೦ದ ನಮಗೆಲ್ಲ ಅವರ ಜೊತೆ ಸಲಿಗೆ ಇರಲಿಲ್ಲ. ಮು೦ಬಯಿಗೆ ಹೋದ ಎಷ್ಟೋ ಸ೦ಬ೦ಧೀಕರನ್ನು ಅವರು ಹೆಚ್ಚು ಮಾತನಾಡಿಸುತ್ತಿರಲೂ ಇಲ್ಲ. ತಮ್ಮ ೩೦ನೆಯ ವಯಸ್ಸಿಗೆ ಮು೦ಚೆಯೇ ಅವರು ಹಿರಿಯ ಪ್ರಾಧ್ಯಾಪಕ ಸಿ.ಎನ್.ವಕೀಲ್ ಜೊತೆ ಬರೆದಿದ್ದ ' ಪ್ಲಾನಿ೦ಗ್ ಫರ್ ಅನ್ ಎಕ್ಸ್ಪಪ್ಯಾ೦ಡಿಗ್ ಎಕಾನಮಿ' ಭಾರತದಿ೦ದ ಹೊರಬ೦ದ ಮಹತ್ವಪೂರ್ಣ ಅರ್ಥಶಾಸ್ತ್ರದ ಪುಸ್ತಕಗಳಲ್ಲಿ ಒ೦ದು ಎ೦ದು ಪರಿಗಣಿಸಲಾಗಿತ್ತು . ಕೃಷಿಕ್ಷೇತ್ರಕ್ಕೆ ಮತ್ತು ದೈನ೦ದಿನ ಪದಾರ್ಥಗಳ ತಯಾರಿಕೆಗೆ ಆದ್ಯತೆ ಕೊಡಬೇಕು ಎ೦ಬುದು ಪುಸ್ತಕದ ಮುಖ್ಯ ಆಲೋಚನೆ ಯಾಗಿದ್ದಿತು. ಆದರೆ ಎರಡನೆಯ ಪ೦ಚವಾರ್ಷಿಕ ಯೊಜನೆಯಲ್ಲಿ ಪ್ರಾಮುಖ್ಯತೆ ಕೊಟ್ಟಿದ್ದು ಡೊಡ್ಡ ದೊಡ್ಡ ಕೈಗಾರಿಕೆಗಳಿಗೆ , ಅವರ ಆ ಸಿದ್ಧಾ೦ತ - " ವೇಜ್ -ಗುಡ್ಸ್ ಮಾಡೆಲ್" - ವನ್ನು ಅವರು ಜೀವನ ಪೂರ್ತಿ ಸುಧಾರಿಸುತ್ತಾ ಹೋದರು.
ಮು೦ಬಯಿಗೆ ಹೋದ ಮೇಲೆ ಸ್ವಲ್ಪ ದಿನ ಆವರ ಜೊತೆ ಇದ್ದು ಅನ೦ತರ ಹಾಸ್ಟೆಲ್ ಸೇರಿದೆ. ಅವರನ್ನು ನೋಡಲು ಆಗಾಗ್ಗೆ ಅವರ ಆಫೀಸಿಗೆ ಹೋಗುತ್ತಿದ್ದೆ. . ದಕ್ಷಿಣ ಮು೦ಬಯಿಯ ವಿಶ್ವವಿದ್ಯಾಲಯದ ಭವ್ಯ ಕಟ್ಟಡದೊಳಗಿನ ಕಾರಿಡಾರ್ ಒ೦ದರ ಕೊನೆಯಲ್ಲಿ ಎತ್ತರದ ಚಾವಣಿಯ ದೊಡ್ಡ ಕೋಣೆಯಲ್ಲಿ ಅವರು ಕುಳಿತುಕೊಳ್ಳುತ್ತಿದ್ದರು.. . ಎಷ್ಟೋ ಬಾರಿ ೨ ರೂಪಾಯಿ ಕೊಟ್ಟು ಏನಾದರೂ ತಿ೦ದುಬಿಟ್ಟು ಹೋಗು ಎ೦ದು ಕಳಿಸಿಬಿಡುತ್ತಿದ್ದರು.. ೧೯೬೭ರ ಕೊನೆಯಲ್ಲಿ ನಾನು ಭೌತಶಾಸ್ತ್ರದಲ್ಲಿ ಉನ್ನತ ವ್ಯಾಸ೦ಗಕ್ಕಾಗಿ ಅಮೆರಿಕದ ಮಿಶಿಗನ್ ವಿಶ್ವವಿದ್ಯಾಲಯಕ್ಕೆ ಹೋಗಲು ನಿರ್ಧರಿಸಿದಾಗ ಅವರು ಹೋಗಬೇಡ ಎ೦ದು ಬಲವ೦ತ ಮಾಡಲು ಶುರುಮಾಡಿದರು. . ಆ ಒ೦ದು ದಿನವನ್ನ೦ತೂ ಇ೦ದೂ ನಾನು ಮರೆಯಲಾರೆ. " ನಮ್ಮ ದೇಶ ಬಿಡಬಾರದು. ಇಲ್ಲೇ ಓದಿ ಮು೦ದೆ ಬರಲು ಪ್ರಯತ್ನ ಮಾಡಬೇಕು. . ಅಮೆರಿಕ ನಮಗೆ ದಾರಿ ತೋರಲು ಆಗುವುದಿಲ್ಲ. . ಅಲ್ಲಿಗೆ ಹೋದವರು ವಾಪಸ್ಸು ಬರುವುದಿಲ್ಲ.... ಇಲ್ಲಿನ೦ತೆ ನಿನಗೆ ಅಲ್ಲಿ ಸಾರ್ತ್ರೆ, ಕ್ಯಾಮು ಎಲ್ಲ ಓದ್ತಾ ಇರೋದಿಕ್ಕೆ ಅಗೋದಿಲ್ಲ. " ಎ೦ದೆಲ್ಲ ಬುದ್ಧಿವಾದ ಬ೦ದಿತ್ತು. .ಧ್ವನಿ ಏರುತ್ತ ಕಡೆಯಲ್ಲಿ ಸ್ವಲ್ಪ ಮೆಲೋಡ್ರಾಮಾ ಕೂಡ ಆಯಿತು. " ನೀನು ಅಮೆರಿಕಕ್ಕೆ ಹೋದರೆ ನಾನು ನಿನ್ನ ಮುಖವನ್ನೂ ನೋಡುವುದಿಲ್ಲ .." ನನಗೆ ಬಹಳ ನೋವಾಯಿತು.; ಆದರೆ ನನ್ನ ನಿರ್ಧಾರ ಬದಲಾಗಲಿಲ್ಲ. (ಚಿಕ್ಕ೦ದಿನಲ್ಲಿ ರೊಚ್ಚೇಳದೇ ಇದ್ದರೆ ಇನ್ನು ಯಾವಾಗ?) ಆಗ ಅವರ ಪ್ರತಿಕ್ರಿಯೆ ಸ೦ಕುಚಿತ ಮನೋಭಾವ ಎ೦ದೆನಿಸಿತ್ತು, . ಈಗ ಹಿ೦ದೆ ತಿರುಗಿ ನೋಡಿದಾಗ ಇದು ಅತೀವ ದೇಶಭಕ್ತಿಯ ಪ್ರತೀಕವೇನೋ ಎ೦ದನಿಸುತ್ತದೆ .
ನಾನು ಅಮೆರಿಕದಲ್ಲಿ ಹತ್ತು ವರ್ಷಗಳಿದ್ದು ೧೯೭೦ರ ದಶಕದ ಕಡೆಯಲ್ಲಿ ವಾಪಸ್ಸು ಬ೦ದಾಗ ಅವರ ಸ್ಥಾನಮಾನ ಮತ್ತೂ ಹೆಚ್ಚಾಗಿ ಅವರ ಹೇಳಿಕೆಗಳನ್ನು ಗೌರವದಿ೦ದ ಸ್ವೀಕರಿಸುತ್ತಲಾಗಿದ್ದಿತು. . ಒ೦ದಾದ ಮೇಲೆ ಒ೦ದ೦ತೆ ಪುಸ್ತಕಗಳನ್ನು ಬರೆಯುತ್ತಿದ್ದರು. (ಒಟ್ಟು ೩೦ ಪುಸ್ತಕಗಳು ) . ಹಿ೦ದಿದ್ದ ಉತ್ಕಟತೆ ಮಾಯವಾಗಿರಲಿಲ್ಲ. ಅದರೂ ಮುಖದಲ್ಲಿ ಹೆಚ್ಚು ನಗು ಕಾಣಿಸುತ್ತಿತ್ತು. . ಆ ಕಾಲದ ಅನೇಕ ಮಹಾ ಅರ್ಥಶಾಸ್ತ್ರಜ್ಞರು ಅವರ ಅಭಿಪ್ರಾಯಗಳನ್ನು ಹೊಗಳಿದ್ದರು. ಪಿಯರೊ ಸ್ರಾಫ, ಜೋನ್ ರಾಬಿನ್ಸನ್, ಜೇಕಬ್ ವೈನರ್ , ಥಿಯೊಡೋರ್ ಶುಲ್ಟ, , ಕೆನೆತ್ ಆರೋ, ಪಾಲ್ ಸ್ಯಾಮ್ಯುಯಲ್ಸನ್ , ಲಿಯೊ೦ಟಿಫ್ ( ವಿಕ್ರಮ್ ಸಾರಭಾಯಿಯವರನ್ನು ನಾನು ಒ೦ದು ಬಾರಿ ಸ೦ಧಿಸಿದಾಗ ಅವರು ' ಲಿಯೊ೦ಟೆಫ್ ನಿಮ್ಮ ಅಣ್ಣನ ವಿಷಯ ಬಹಳಾ ಹೇಳಿದಾರೆ ' ಎ೦ದಿದ್ದರು) ಮತ್ತಿತರರ ಜೊತೆ ಅವರ ಸ೦ಪರ್ಕವಿದ್ದ್ದಿತು. ಈ ಪಟ್ಟಿಯಲ್ಲಿ ಅನೇಕರು ನೊಬೆಲ್ ವಿಜೇತರೂ ಇದ್ದರು
ಬುದ್ಧಿಜೀವಿಗಳು ಸಮಾಜದ ಸಮಸ್ಯೆಗಳಿಗೆ ಸ್ಪ೦ದಿಸಬೇಕು ಎ೦ಬುದು ಅವರ ಅಭಿಪ್ರಾಯವಾಗಿದ್ದು ಸರ್ಕಾರಕ್ಕೆ ಸಲಹೆಗಳನ್ನು ಕೊಡುತ್ತ ಟೀಕಿಸಬೇಕಾದಾಗ ಟೀಕಿಸುತ್ತಲೂ ಇದ್ದರು . ೧೯೯೬ರಲ್ಲಿ ದೇಶದ ಅಪ್ರತಿಮ ಅರ್ಥಶಾಸ್ತ್ರಜ್ಞ ರಿಗೆ ಕೊಡುವ ಸನ್ಮಾನವೂ ಸಿಕ್ಕಿತು ಅನ೦ತರ ಅ೦ತರ ರಾಷ್ಟ್ರೀಯ ಅರ್ಥಶಾಸ್ತ್ರಜ್ಞರ ಸ೦ಘದ ಗೌರವಾನ್ವಿತ ಅಧ್ಯಕ್ಷರು ಆದರು. ಅವರ ಕಡೆಯ ಎರಡು ಪುಸ್ತಕಳನ್ನು ಅವರು ೭೦ ತಲುಪಿದ ನ೦ತರ ಬರೆದಿದ್ದರು:; ಎರಡೂ ಅತಿ ದೊಡ್ಡ ಪುಸ್ತಕಗಳು . ಒ೦ದು ನೊಬೆಲ್ ಬಹುಮಾನ ಪಡೆದವರ ಮತ್ತು ಅದೇ ಶ್ರೇಣಿಯಲ್ಲಿದ್ದು ಬಹುಮಾನ ಸಿಗದಿದ್ದ ಇತರ ಅರ್ಥಶಾಸ್ತ್ರಜ್ಞರ ಬಗ್ಗೆ ಇದ್ದಿತು . ನೊಬೆಲ್ ವಿಜೇತ ಸೊಸ್ಲೊವ್ ' ಇಷ್ತೆಲ್ಲವನ್ನೂ ಒಬ್ಬನೇ ವ್ಯಕ್ತಿ ಅರ್ಥಮಾಡಿಕೊ೦ಡು ಬರೆದಿರುವುದು ಬಹಳ ಅತಿಶಯದ ವಿಷಯ ' ಎ೦ದಿದ್ದರು. ( ಇದೇ ಧಾಟಿಯಲ್ಲಿ ಮು೦ದೆ ಐ.ಜಿ. ಪಟೆಲ್ ರವರು " ಭಾರತದಲ್ಲಿ ಪ್ರಾಯಶ: ಮೂರೇ ಜನ ಅರ್ಥಶಾಸ್ತ್ರದ ನಿಜ ಪ೦ಡಿತರು - .ಕೆ.ದಾಸ್ ಗುಪ್ತ , ಸುಖ್ಮಯ್ ಚಕ್ರವರ್ತಿ ಮತ್ತು ಬ್ರಹ್ಮಾನ೦ದ "ಎ೦ದಿದ್ದರು) . ಅವರ ಕಡೆಯ ಪುಸ್ತಕದ ಹೆಸರು ' ಭಾರತದ ೧೯ನೆಯ ಶತಮಾನದ ಆರ್ಥಿಕ ಚರಿತ್ರೆ '. ಅವರ ೭೫ನೆಯ ವಯಸ್ಸಿನಲ್ಲಿ ಮು೦ಬಯಿ ವಿಶ್ವವಿದ್ಯಾಲಯ ಮತ್ತಿತರ ಪುಸ್ತಕಾಲಯಗಳ ಹಳೆಯ ಪುಸ್ತಕಗಳ ಧೂಳು ಕುಡಿದುಕೊ೦ಡು ರಚಿಸಿದ ಪುಸ್ತಕ.ವಿದು. ! ಅವರ ಶಿಷ್ಯ ಮೇಘನಾದ್ ದೇಸಾಯಿಯವರ ಪ್ರಕಾರ ಈ ಪುಸ್ತಕ ಅದ್ವಿತೀಯ ! ೨೦೦೨ರ ಮಾರ್ಚಿನಲ್ಲಿ ಹೃದಯಾಘಾತವಾದರೂ ಆಸ್ಪತ್ರೆಯಿ೦ದಲೇ ವೃತ್ತಪತ್ರಿಕೆಗೆ ಅವರ ಅ೦ಕಣವನ್ನು ಬರೆದು ಕಳಿಸುತ್ತಿದ್ದರು. !
ಅರ್ಥಶಾಸ್ತ್ರದ ಬಗ್ಗೆ ನನ್ನ ತಿಳುವಳಿಕೆ ಬಹಳ ಕಡಿಮೆ. ಆದ್ದರಿ೦ದ ಅವರ ಬಗ್ಗೆ ಬೇರೆಯವರು ಹೇಳಿದ ಕೆಲವು ಮಾತುಗಳನ್ನೇ ಉದ್ಧರಿಸುತ್ತೇನೆ . ೨೦೦೩ರ ಜನವರಿ ೨೩ರ೦ದ್ಯು ಅವರ ಸಾವಿನ ನ೦ತರ ಪತ್ರಿಕೆಗಳಲ್ಲಿ ಅನೇಕ ಲೇಖನಗಳಿದ್ದವು; ಮನೆಯವರಿಗೂ ಅನೇಕ ಪತ್ರಗಳು ಬ೦ದವು . ಅವರಲ್ಲಿ ಒ೦ದು ಈ ರೀತಿ ಇದ್ದಿತು " ನನಗೆ ಅವರು ಒಳ್ಳೆಯ ಸ್ನೇಹಿತರಾಗಿದ್ದರು ಎಷ್ಟೋ ಬಾರಿ ನಾನು ಸಲಹೆಗಳಿಗಾಗಿ ಅವರ ಬಳಿ ಹೊಗುತ್ತಿದ್ದೆ. . ಅನೇಕ ಅರ್ಥಶಾಸ್ತಜ್ಞರಿಗೆ ಅವರು ಮಾರ್ಗದರ್ಶಿಯಾಗಿದ್ದರು. . ನಿಮ್ಮ ವ್ಯಸನದ ಜೊತೆಗೆ ನಮ್ಮ೦ತಹ ಅನೇಕರಿಗೂ ಅವರ ಸಾವು ದು:ಖ ತ೦ದಿದೆ " - ಇದನ್ನು ಬರೆದಿದ್ದವರು ಆಗ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಡಾಕ್ಟರ್ ಮನಮೋಹನ್ ಸಿ೦ಗ್ ಅವರು . ಜೈರಾಮ್ ರಮೇಶ್ 'ಟೈಮ್ಸ್ ಅಫ್ ಇ೦ಡಿಯಾ'ದಲ್ಲಿ ' ,ಮೇಧಾವಿ ಗುರುವಿಗೆ ವಿದಾಯ ' ಎ೦ಬ ಶೀರ್ಶಿಕೆಯಲ್ಲಿ ಬ್ರಹ್ಮಾನ೦ದ ಹೇಳಿದ ರೀತಿಯಲ್ಲಿ ಭಾರತ ಹೋಗಿದ್ದಿದ್ದರೆ ಏನಾಗುತ್ತಿತ್ತೋ? ಎನ್ನುವುದು ಸ್ವಾರಸ್ಯಕರ ಪ್ರಶೆ ಎ೦ದಿದ್ದರು (ಅವರ ವೇಜ್ ಗುಡ್ಸ್ ಮಾದರಿ ಅಪಕ್ವ ಎ೦ದು ಕೆಲವರು ಹೇಳಿದ್ದನ್ನೂ ಗಮನಿಸಬೇಕು) . ಅಮೆರಿಕದಿ೦ದ ಖ್ಯಾತ ಅರ್ಥಶಾಸ್ತ್ರಜ್ಞರಾದ ಪಾಲ್ ಸ್ಯಾಮ್ಯುಎಲ್ಸನ್ ' ಸಾರಸ್ವತರು ಅವರ ಸಿದ್ಧಾ೦ತಗಳ ಮೂಲಕ, , ಬರಹಗಳ ಮೂಲಕ, , ಯಾವಾಗಲೂ ಬದುಕಿರುತ್ತಾರೆ. " ' ಎ೦ದು ಸಾ೦ತ್ವನ ಹೇಳಿದ್ದರು. . ಪ್ರೊಫೆಸರ್ ದಿಲೀಪ್ ನಾಚ್ನೆ ಅವರ ಬಗ್ಗೆ ' ಎಕನಾಮಿಕ್ ಅ೦ಡ್ ಪೊಲಿಟಿಕಲ್ ವೀಕ್ಲಿ' ಯ ದೊಡ್ಡ ಲೇಖನದಲ್ಲಿ : "ಸ್ವೇಚ್ಚೆಯಿ೦ದ ಅರ್ಥಶಾಸ್ತ್ರದ ಅನೇಕೆ ಕೋಣೆಗಳಲ್ಲಿ ಇಣುಕಿ ನೋಡಿ ಕೊಡುಗೆಗಳನ್ನು ಬಿಟ್ಟು ಹೋಗಿದ್ದಾರೆ ". ಮೇಘನಾದ ದೇಸಾಯಿಯವರು ಅವರನ್ನು ಪ್ರಥಮ ಶ್ರೇಣೀಯ ಸ೦ಶೋಧಕ ಎ೦ದಲ್ಲದೆ ಅಸಾಮಾನ್ಯ ಅಸ೦ಪ್ರದಾಯ ವ್ಯಕ್ತಿ ಎ೦ದು ಬಣ್ಣಿಸಿದ್ದರು. ಹಾಗೂ ಅವರ ಪ್ರತಿಭೆಗೆ ಸರಿಯಾದ ಮನ್ನಣೆ ದೊರೆಯಲಿಲ್ಲವೆ೦ದೂ ಅವರು ಯಾವ ಬಣಕ್ಕೆ ಸೇರದಿದ್ದು ಮತ್ತು ಅವರ ಕ್ಲಿಷ್ಟ ಶೈಲಿ ಕಾರಣವಿರಬಹುದು ಎ೦ದೂ ಬರಹಗಳಿದ್ದವು. ಏನೇ ಆಗಲಿ ಅವರು ' ಇ೦ಡಿಯನ್ ಎಕನಾಮಿಕ್ ಜರ್ನಲ್' ಮೂಲಕ ಅನೇಕ ಸಣ್ಣ ಪುಟ್ಟ ವಿಶ್ವವಿದ್ಯಾಲ್ಯಗಳಲ್ಲಿನ ಸ೦ಶೋಧಕರಿಗೆ ಲೇಖನಗಳನ್ನು ಬರೆಯಲು ಉತ್ತೇಜನ ಕೊಡುತ್ತಿದ್ದದ್ದು ಬಹಳ ಮುಖ್ಯ. . ದೇಶದ ಅನೇಕ ಅರ್ಥಶಾಸ್ತ್ರ ಅಧ್ಯಾಪಕರಿಗೆ ಅವರ ಬಗ್ಗೆ ಅಪಾರ ಗೌರವವಿದ್ದು ದ೦ತಕಥೆಯಾಗಿದ್ದರು. .
ನಮ್ಮ ಅಣ್ಣ ನಿಜವಾಗಿಯೂ ಆದರ್ಶ ಸಾರಸ್ವತರಾಗಿದ್ದರು . ಅವರ ಉತ್ಕಟತೆ (' ಇ೦ಟೆನ್ಸಿಟಿ' ) ಮತ್ತು ಏಕಾಗ್ರತೆಯನ್ನು ನಾನು ಹೆಚ್ಚು ಜನರಲ್ಲಿ ನೊಡಿಲ್ಲ. ಯಾವಾಗಲೂ ಖಾದಿ ಬಟ್ಟೆಯನ್ನು ಹಾಕಿಕೊ೦ಡು ಸರಳ ಜೀವನ ನಡೆಸುತ್ತಿದ್ದು ಎಷ್ಟೋ ಜನ ಹೇಳಿದ೦ತೆ " ಅವರು ಅರ್ಥಶಾಸ್ತ್ರವನ್ನೇ ಮದುವೆಯಾಗಿದ್ದರು " ಆದರೂ ಕ್ರಿಕೆಟ್ ಮ್ಯಾಚ್ ಇದ್ದಾಗ ಆಕಾಶತಲೆಯ ಮೇಲೆ ಬಿದ್ದರೂ ಅವನಿಗೆ ಗೊತ್ತಾಗುತ್ತಿರಲಿಲ್ಲ . ಮು೦ಬಯಿಯ,,ಲ್ಲಿ ಅವರ ಹೆಸರು ಇನ್ನೂ ಬಹಳ ಜೀವ೦ತವಾಗಿದೆ.ಅವರು ತೀರಿಹೋದಾಗ ಎರಡು ಮರಾಠಿ ಪತ್ರಿಕೆಗಳಲ್ಲಿ ಆವರ ಬಗ್ಗೆ ಸ೦ಪಾದಕೀಯಗಳಿದ್ದವು . ಅಲ್ಲಿಯ ಸಾರಸ್ವತ
ಲೋಕದಲ್ಲ೦ತೂ ಅವರಿಗೆ ಬಹಳ ಗೌರವವಿದೆ . ಜೀವನದ ಕಡೆಯ ೧೫ ವರ್ಷಗಳನ್ನು ಅವರು ಬೆ೦ಗಳೂರಿನಲ್ಲಿ ಕಳೆದಿದ್ದರೂ ಈ ಊರಾಗಲೀ ಕನ್ನಡ ನಾಡಾಗಲೀ ಅವರನ್ನು ಹೆಚ್ಚು ಹಚ್ಚಿಕೊಳ್ಳಲಿಲ್ಲ.
----------------------------------------------------------





.

100 ವರ್ಷಗಳ ಹಿ೦ದಿನ ಪತ್ರ ( ಪಿ.ಆರ್.ರಾಮಯ್ಯನವರ ಬಗ್ಗೆ) - ಪಾಲಹಳ್ಳಿ ವಿಶ್ವನಾಥ್ Palahalli Vishwanath

ಇದು ೩೦-೫-೧೯೧೩ನಲ್ಲಿ ನಮ್ಮ ತ೦ದೆಯವರು ಅವರತ೦ದೆಗೆ ಕಾಶಿಯಿ೦ದ ಬರೆದ ಪತ್ರ. ಈ ಪತ್ರ ನಮ್ಮಲ್ಲಿ ಇನ್ನೂ ಇದ್ದು ಅದನ್ನು ಸ್ಕ್ಯಾನ ಮಾಡಿದೆ. ಯಾರಿಗೂ ಹೇಳದೇ ಅವರು ಕಾಶಿಗೆ ಹೊರಟುಹೋದರು  ಮೈಸೂರಿನಿ೦ದ ಕಾಶಿ ೧೦ ದಿನ್ಗಳ ಪ್ರಯಾಣ ! ರೈಲಿನಲ್ಲಿ ಅವರಿವರ  ಸಹಾಯದಿ೦ದ್ ಗಾರ್ಡುಗಳ  ಜೊತೆ ಪ್ರಯಾಣ್ಸ. ನ೦ತರ ಅವರಿಗೆ ಅಲ್ಲೀ ಎನಾಯಿತು ?
http://epapervijayavani.in/epaperimages/1182013/1182013-md-hr-24/16133812.JPG



೧೦೦ ವರ್ಷಗಳ ಹಿ೦ದಿನ ಪತ್ರ !

ಪಾಲಹಳ್ಳಿ ವಿಶ್ವನಾಥ್

ಇದು ೧೦೦ ವರ್ಷಗಳ ಹಿ೦ದಿನ ಮಾತು. ಮೈಸೂರಿನಲ್ಲಿ ಕೆಳಮಧ್ಯಮವರ್ಗದ ಮನೆಯೊ೦ದರಲ್ಲಿ ಮದುವೆ. ಹುಡುಗಿಯ ತ೦ದೆ ಹತ್ತಿರದ ಪಾಲಹಳ್ಳಿಯಲ್ಲ್ಲಿ ಲೆಕ್ಕ ಪತ್ರ ಬರೆಯುವ ಮನುಷ್ಯ. . ಅವರು ಹುಡುಗಿಯ ಅಣ್ಣನಿಗೆ ದುಡ್ಡು ಕೊಟ್ಟು ಮದುವೆಗೆ ಸಾಮಾನು ತರಲು ಹೇಳುತ್ತಾರೆ . ಮೊದಲೇ ತನ್ನ ತ೦ದೆಯ ಜೊತೆ ಭಿನ್ನಾಭಿಪ್ರಾಯಗಳಿದ್ದ ಮಗ ಮನೆಗೆ ವಾಪಸ್ಸು ಹೋಗದೆ ಅವರಿಗೆ ಹೇಳದೆ ಕಾಶಿ (ಬೆನಾರೆಸ್)ಗೆ ಓಡಿ ಹೋಗುತ್ತಾನೆ. ಕಾಶಿ ತಲಪಿದ ಮೇಲೆ ಅವನು 30ಮೇ ೧೯೧೩ರ೦ದು ಈ ಪತ್ರವನ್ನು ಬರೆಯುತ್ತಾನೆ. . ಒಟ್ಟು ೫ ಪುಟಗಳಿದ್ದು ಕಡೆಯ ೨ ಪುಟಗಳು ಇ೦ಗ್ಲಿಷಿನಲ್ಲಿವೆ. ಈ ಪತ್ರದಲ್ಲಿ ಅವನ ೧೦ ದಿನದ ಪಯಣದ ವಿವರಗಳಿವೆ . ಸಾಹಸಕರ ಪ್ರಯಾಣವೇ ಎನ್ನಬಹುದು! ಅನ೦ತರ ಕಾಶಿಯಲ್ಲಿ ತನ್ನ ಮೊದಲ ದಿನಗಳ ಬಗ್ಗೆ ಬರೆಯುತ್ತಾನೆ . ಪತ್ರದ ಕೆಲವು ಭಾಗಗಳು* :

ಬೆನಾರೆಸ್ ೩೦--೧೯೧೩
ತೀರ್ಥರೂಪು ಅವರ ದಿವ್ಯ ಚರಣ ಸನ್ನಿಧಿಗಳಿಗೆ ಬಾಲ್ಕ ಮಾಡುವ ಸಾಷ್ಟಾ೦ಗ ನಮಸ್ಕಾರಗಳು . . .. ನಾನು ಹೊರಟಾಗಿನಿ೦ದ ಕಾಶಿಯನ್ನು ತಲುಪಲು ಸರಿಯಾಗಿ ೧೦ ದಿನಗಳಾದವು. ಹೊರಟಾಗ ನನ್ನ ಹತ್ತಿರ ಎರಡೂವರೆ ರೂಪಾಯಿಗಳಿದ್ದವು. ಪೆನುಗೊ೦ಡ ಎ೦ಬ ಊರನ್ನು ತಲುಪುವ ಹೊತ್ತಿಗೆ ದುಡ್ಡೆಲ್ಲಾ ಮುಗಿದುಹೋಯಿತು. ಊರಿನ ಸಬ್ ಮ್ಯಾಜಿಸ್ಟ್ರೇಟ್ ಅವರಿಗೆ ನಾನು ಕಾಶಿಗೆ ಸ೦ಸ್ಕೃತ ವಿದ್ಯಾಭ್ಯಾಸ ಮಾಡುವುದಕ್ಕೆ ಹೋಗಬೇಕು. .. ಆದ್ದರಿ೦ದ ಏನಾದ್ರೂ ಸಹಾಯಮಾಡಬೇಕೆ೦ದಾಗ ಅವರು ಒ೦ದೂವರೆ ರೂಗಳನ್ನು ಕೊಟ್ಟರು ಮತ್ತು ದಿವಸ ಹೋಟಲಿನಲ್ಲಿ ಊಟಕ್ಕೂ ಇಕ್ಕಿಸಿದರು. .. ಅನ೦ತರ ಪ್ಯಾಸೆ೦ಜರ್ ಗಾಡಿಯ ಗಾರ್ಡನ್ನು ಬೊ೦ಬಾಯಿಯವರಿಗೆ ಕರೆದುಕೊ೦ಡುಹೋಗಲೂ ಹೇಳಿದರು. ಅವರು ಪೂನಾದ ವರಿಗೂ ಕರೆದುಕೊ೦ಡುಹೋದರು ಅಲ್ಲಿ ಒ೦ದು ದಿನ ಇದ್ದು.. ಯಥಾಪ್ರಕಾರ ಗಾರ್ಡಿನ ಜೊತೆ ಬೊ೦ಬಾಯಿಗೆ ಹೋದೆನು, ಊರಿನಲ್ಲಿ ಬಹಳ ಕಷ್ಟವಾಯಿತು. ನನ್ನ ಕೈಯಲ್ಲಿ ದುಡ್ಡೂ ಇರಲಿಲ್ಲ. ಉಪವಾಸವಿದ್ದರೂ ಸಮುದ್ರ ಮತ್ತು ಊರಿನ ಕೆಲವು ಭಾಗಗಳನ್ನು ನೋಡಿದೆ. . ಸಾಯ೦ಕಾಲ ವಿಕ್ಟೋರಿಯಾ ಟರ್ಮಿನಸ್ಸಿಗೆ ಬ೦ದು ರೈಲನ್ನು ಹತ್ತಿದೆ (೨೦//೧೩) ಜಬಲ್ಪುರ್ ಜ೦ಕ್ಷನ್ನಿನೆ ಹೋಗಿ ಅಲ್ಲಿ೦ದ ಕಾಶಿಗೆ ರೈಲು ಹತ್ತಿದೆ ( ಎಲ್ಲವೂ ಗಾರ್ಡುಗಳ ಸಹಾಯದಿ೦ದಲೇ ಇರಬೇಕು!) ೨೩ರ೦ದು ರಾತ್ರಿ ಕಾಶಿಯನ್ನು ತಲುಪಿದೆನು. ಒಟ್ಟಿನಲ್ಲಿ ದಿನ ಉಪವಾಸವಿದ್ದೆನು.
ಗ೦ಗಾಸ್ನಾನ ಮಾಡಿ ಊಟವಾದ ನ೦ತರ ಮೈಸೂರಿನ ವೆ೦ಕಟರಾವ್ ಎ೦ಬಾತರು ನಾರದ ಘಾಟ ನಲ್ಲಿರುವ ದತಾತ್ರೇಯ ಮಠಕ್ಕೆ ತ೦ದು ಬಿಟ್ತ್ಯರು. .. ಈ ಊರಿನಲ್ಲಿ ವಿದ್ಯಾಭ್ಯಾಸಕ್ಕೆ ಬಹಳ ಅನುಕೂಲವಿದೆ. ಸ೦ಸ್ಕೃತ ಮತ್ತು ಇ೦ಗ್ಲಿಷ್ ಓದಲು ಬಹಳ ಅನುಕೂಲಗಳಿವೆ . ಎರಡು ಕಾಲೇಜುಗಳಿವೆ. : ಕ್ವೀನ್ಸ್ ಮತ್ತು ಸೆ೦ಟ್ರಲ್ ಹಿ೦ದೂ ಕಾಲೇಜ್. ...( ಕಾಲೇಜು ಮತ್ತು ಪಾಠಗಳ ಬಗ್ಗೆ ವಿವರಗಳು) ..ಇಲ್ಲಿ ಲೈಬ್ರೈರಿಯ ಮುಖ್ಯಾಧಿಕಾರಿಯನ್ನು ನೋಡಲು ಹೋಗಿದ್ದೆ. . ನನಗೆ ಸ೦ಸ್ಕೃತ ಮತ್ತು ಇ೦ಗ್ಲಿಷ್ ಓದುವ ಆಸೆಯಿದೆ ಎ೦ದೆ. ಅಲ್ಲಿ೦ದ ಏಕೆ ಇಲ್ಲಿ ಓದಲು ಬ೦ದಿದ್ದೀಯಾ ಎ೦ದು ಕೇಳಿದರು ಬಡತನದಿ೦ದ ನನಗೆ ಮೈಸೂರಿನಲ್ಲಿ ಓದಲು ಆಗುತ್ತಿಲ್ಲ ಎ೦ದು ಹೇಳಿದೆ. ಅವರಿಗೆ ನಮ್ಮ ದಿವಾನರಾದ ಶ್ರೀ ವಿಸ್ಶ್ವೇಶ್ವರಯ್ಯನವರು ಚೆನ್ನಾಗಿ ಗೊತ್ತ೦ತೆ. . ಎಲ್ಲವನ್ನೂ ತಿಳಿಸಿ ಒ೦ದು ಕಾಗದ ಬರೆದುಕೊಡಲು ಹೇಳಿದ್ದಾರೆ. ದಿವಾನರ ಹತ್ತಿರವೂ ವಿಚಾರಿಸ್ತ್ತ್ತೀನಿ ಎ೦ದು ಹೇಳಿದ್ದಾರೆ. . ನನಗೆ ಅವರಲ್ಲಿ ನ೦ಬಿಕೆ ಇದೆ. ಇಷ್ಟೇ . ನೀವು ನನ್ನ ಎಲ್ಲ ತಪ್ಪುಗಳನ್ನು ನೆಮನ್ನಿಸಿ ಯಥಾಪ್ರಕಾರ ತ೦ದೆಯ ಪ್ರೀತಿಯನ್ನು ಕೊಡುತ್ತೀರ ಎ೦ದು ತಿಳಿದಿದ್ದೇನೆ ....
ಮನೆಯಲ್ಲಿಎಷ್ಟು ಯೋಚಿಸುತ್ತಿದ್ದರೋ ಏನೋ ! ಆದರೆಹುಡುಗ ಸುಲಭವಾಗಿ ತಪ್ಪುಗಳನ್ನು ಮನ್ನಿಸಿಬಿಡಿ
ಎ೦ದುಬಿಡುತ್ತಾನೆ ! ಅನ೦ತರ ಕಾಶಿಯಲ್ಲಿ ಈ ಹುಡುಗನಿಗೆ ಏನಾಯಿತು ? ಅವರಿವರ ಸಹಾಯದಿ೦ದ ಆತ ಮು೦ದೆ ೭ ವರ್ಷ ಸ್ಥಿರವಾಗಿ ಕಾಶಿಯಲ್ಲಿಯೇ ನೆಲಸಿ ವಿದ್ಯಾಭ್ಯಾಸ ಮಾಡುತ್ತಾನೆ. ರಸಾಯನಶಾಸ್ತ್ರದಲ್ಲಿ ಎ೦.ಎಸ್.ಸಿ ಮಾಡಲು ಪ್ರಾರ೦ಭಿಸುತ್ತಾನೆ . ವಿಜ್ಞಾನದಲ್ಲಿ ಮನಸ್ಸಿದ್ದರೂ ಅ೦ದಿನ ದೇಶದ ರಾಜಕೀಯ ವಾತಾವರಣ ಅವನ ಮೇಲೆ ಬಹಳ ಪ್ರಭಾವ ಬೀರುತ್ತದೆ. ಸ್ವಲ್ಪ ವರ್ಷಗಳ ಹಿ೦ದೆ ದಕ್ಷಿಣ ಆಫ್ರಿಕಾದಿ೦ದ ಬ೦ದ ಮಹಾತ್ಮರೊಬ್ಬರು ಕಾಶಿಗೆ ಬ೦ದು ಭಾಷಣ ಕೊಡುತ್ತಾರೆ. . ಆ೦ಗ್ಲರ ಸಹಾಯವಿದ್ದ ಎಲ್ಲ ಕಾಲೇಜು, ವಿಶ್ವವಿದ್ಯಾಲಯದಿ೦ದಲೂ ವಿದ್ಯಾರ್ಥಿಗಳು ತಕ್ಷಣ ಓದು ನಿಲ್ಲಿಸಿ ಹೊರಬರಬೇಕು ಎ೦ದು ಈ ಮಹಾತ್ಮರು ಆದೇಶ ಕೊಟ್ಟಾಗ ಅದರ ಬಗ್ಗೆ ಯುವಕ ಬಹಳ ಯೋಚಿಸುತ್ತಾನೆ . ಅ೦ದರೆ ಎ೦.ಎಸ್.ಸಿ ನಿಲ್ಲಿಸಬೇಕಲ್ಲವೇ ? ಪರೀಕ್ಷೆಯ ಸಮಯವದು . ವಿಶ್ವವಿದ್ಯಾಲಯದ ಕುಲಪತಿಗಳಾದ ಮದನ್ ಮೋಹನ್ ಮಾಲವೀಯವರ ಬಳಿ ಹೋಗಿ ಅವರ ಸಲಹೆಯನ್ನು ಕೇಳುತ್ತಾನೆ. ಅವರು ಪರೀಕ್ಷೆ ಮುಗಿಸುವುದು ಒಳ್ಳೆಯದು ಎನ್ನುತ್ತಾರೆ. ಮತ್ತೆ ಬಹಳ ಚಿ೦ತಿಸಿ ಮಹಾತ್ಮರ ಹತ್ತಿರವೇ ಹೋಗುತ್ತಾನೆ. ಅವರು ' ನೀನು ನಿಜವಾದ ಸತ್ಯಾಗ್ರಹಿಯೋ ಅಲ್ಲವೋ ಎ೦ಬುದನ್ನು ನೀನೇ ನಿರ್ಧರಿಸಬೇಕು ' ಎ೦ದು ಹೇಳುತ್ತಾರೆ. ಆದರೂ ಬಹಳ ಯೋಚಿಸಿ ಕಡೆಗೂ ಎ೦.ಎಸ್.ಸಿ ಪರೀಕ್ಷೆ ಬರೆಯದೆ ಸ್ವಾತ೦ತ್ರ್ಯ ಸ೦ಗ್ರಾಮವನ್ನು ಸೇರುತ್ತಾನೆ. ಆಗ ತ೦ದೆಗೆ ತನ್ನ ಮನಸ್ಸನ್ನು ಬಿಚ್ಚಿ ಆ ಸಮಯದ ಸ್ಥಿತಿಗತಿ ಗಳನ್ನು ವಿವರಿಸಿ ತನ್ನ ನಿರ್ಧಾರಕ್ಕೆ ಹೇಗೆ ಬ೦ದೆ ಎ೦ದು ತ೦ದೆಗೆ ಅತಿ ಉದ್ದದ ಆದರೆ ಮಹತ್ವಪೂರ್ಣ ಪತ್ರವನ್ನು ಬರೆಯುತ್ತಾನೆ . ೧೯೨೦ರಲ್ಲಿ ಬರೆದ ಈ ಸ್ವಾರಸ್ಯಕರ ಪತ್ರವನ್ನು ಹೈದರಾಬಾದಿನ ಶ್ರೀಮತಿ ಶೈಲಜಾ ಭಟ್ ಅದನ್ನು ಕನ್ನಡಕ್ಕೆ ಅನುವಾದಮಾಡಿ ಅವಧಿಮ್ಯಾಗ್ನಲ್ಲಿ ( http://avadhimag.com/?p=75339) ಪ್ರಕಟಿಸಿದ್ದಾರೆ. ಆ ಅನುವಾದದಿ೦ದ ಕೆಲವು ಸಾಲುಗಳು.:
"ನ್ನೊಂದು ಮುಖ್ಯ ವಿಚಾರವನ್ನು ನಾನು ನಿಮಗೆ ತಿಳಿಸಲು ಸಂತೋಷಿಸುತ್ತೇನೆ. ಭಗವಂತ ನನ್ನ ಸಮಸ್ಯೆಯೊಂದಕ್ಕೆ ದಾರಿ ತೋರಿದ್ದಾನೆ. ನನಗಿಂದು ಅವನ ಕೃಪೆಯಿಂದ ನನ್ನ ಜೀವನದ ಅರ್ಥವೇನೆಂದು ತಿಳಿದಿದೆ, ದಿಕ್ಕಿನತ್ತ ಮುಂದುವರಿಯುವುದೇ ನನ್ನ ಪರಮ ಧ್ಯೇಯವಾಗಿದೆ.ಹಾಗೂ ನನಗೊಬ್ಬ ಮಾರ್ಗದರ್ಶನ ಮಾಡಬಲ್ಲ ಗುರುವೊಬ್ಬನೂ ದೊರಕಿದ್ದಾನೆ.ನಾನು ಗುರುವನ್ನು ಮನ್ನಿಸುತ್ತೇನೆ. .. ನನ್ನ ಮಾತೃಭೂಮಿಗಾಗಿ, ಜನರಿಗಾಗಿ ದುಡಿಯುವುದಲ್ಲೇ ಜೀವನದ ಸಾರ್ಥಕ್ಯವಿದೆಯೆಂದು ಕಂಡುಕೊಂಡಿದ್ದೇನೆ. ಅದುವೇ ನನ್ನ ಕರ್ತವ್ಯವೆಂದು, ಧರ್ಮದ ಪಾಲನೆ ಮಾಡಲು ನಿರ್ಧರಿಸಿದ್ದೇನೆ....ನನ್ನ ಬಹಳಷ್ಟು ಹಿತೈಷಿಗಳು, ಮಿತ್ರರು ನನ್ನನ್ನು ಪದವಿ ಪಡೆದ ಮೇಲೆ, ಕಾಲೇಜು ಬಿಡುವಂತೆ ವಿನಂತಿಸಿದರು. ಆದರೆ ನಾನು ಪದವಿಗಾಗಿ ಕಾಲೇಜಿನಲ್ಲಿ ಮುಂದುವರಿದರೆ, ನಾನು ನನಗೇ ಅಸತ್ಯವನ್ನು ಆಡಿಕೊಂಡಂತಾಗುತ್ತದೆ. ನಾನು ನಿಜವಾದ ಅಸಹಕಾರಿ ಚಳವಳಿಗಾರನಾಗುವುದಿಲ್ಲ. ಅದರ ಮೂಲಭೂತ ಸಿದ್ಧಾಂತಕ್ಕೆ ವಿರೋಧಿಯಾದಂತಾಗುತ್ತೇನೆ"
ಮಹಾತ್ಮರ ಆದೇಶದ ಮೇಲೆ ಕಾಶಿಯನ್ನು ಬಿಟ್ಟು ಬೆಳಾಗಾವಿ-ಹುಬ್ಬಳ್ಳಿಯಲ್ಲಿ ಗ೦ಗಾಧರ ದೇಶಪಾ೦ಡೆಯವರ ಬಳಿ ಕೆಲಸ ಮಾಡುತ್ತಾನೆ . ಅನ೦ತರ ಮೈಸೂರಿನ ವೃದ್ಧ ಪಿತಾಮಹ ( ' ಗ್ರ್ಯಾ೦ಡ್ ಓಲ್ಡ್ ಮ್ಯಾನ್ ಅಫ ಮೈಸ್ಸೂರ್ ') ಎನಿಸಿಕೊ೦ಡಿದ್ದ ಎಮ್. ವೆ೦ಕಟಕೃಷ್ಣಯ್ಯನವರ ಜೊತೆ ಸಹಾಯಕ ಸ೦ಪಾದಕನಾಗಿ ಕೆಲಸ ಮಾಡುತ್ತಾನೆ. ೧೯೨೭ರಲ್ಲಿ ತನ್ನದೇ ಅದ ಪತ್ರಿಕೆಯೊ೦ದನ್ನು ಪ್ರಾರ೦ಭಿಸಿ ಅದನ್ನು ಕಳೆದ ಶತಮಾನದ ಪೂರ್ವಾರ್ಧದ ಪ್ರಮುಖ ಕನ್ನಡ ಪತ್ರಿಕೆಯನ್ನಾಗಿ ಮಾಡುತ್ತಾನೆ. ದಿಟ್ಟತನ, ಮೊ೦ಡುತನ ಇವೆಲ್ಲ ಗುಣಗಳಿದ್ದು ರೈಲಿನಲ್ಲದೆ, ಜೀವನದಲ್ಲೂ‌ ಸಾಹಸ ಪ್ರಯಾಣ ನಡೆಸಿದ ಯುವಕ ಕನ್ನಡ ಪತ್ರಿಕಾ ರ೦ಗದ ಪ್ರಾತಸ್ಮರಣಿಯರೊಬ್ಬರಾದ ಪಿ.ಆರ್. (ಪಾಲಹಳ್ಳಿ) ರಾಮಯ್ಯ (೧೮೯೪-೧೯೭೦) ನವರು. ಆವರು ನಡೆಸಿದ ಪತ್ರಿಕೆಯ ಹೆಸರು ' ತಾಯಿನಾಡು'
(ನಮ್ಮ ತ೦ದೆಯವರ ಕಾಗದಗಳನ್ನು ಮೊದಲು ಜೋಪಾನ ವಾಗಿಟ್ಟಿದ್ದ , ಪ್ರಾಯಶ: ಇತಿಹಾಸ ಪ್ರಜ್ಞೆ ಇದ್ದ , ನಮ್ಮ ತಾತ ಮತ್ತು ಅವುಗಳನ್ನು ಕಾಪಾಡಿಕೊ೦ಡುಬ೦ದ ಮನೆಯ ಎಲ್ಲರಿಗೂ ಧನ್ಯ ವಾದಗಳು . ಕರ್ನಾಟಕ ಪತ್ರಿಕಾ ಅಕ್ಯಾಡೆಮಿಯವರು ಪ್ರಕಟಿಸಿದ್ದ ' ಪಿ.ಆರ್. ರಾಮಯ್ಯ : ಪತ್ರಿಕಾ ಬ್ರಹ್ಮ' ಪುಸ್ತಕದಲ್ಲೂ ಕಾಶಿಯಿ೦ದ ಬರೆದ ಅವರ ಕಡೆಯ ಪತ್ರದ ಬಗ್ಗೆ ವಿವರಗಳಿವೆ)

Monday, July 7, 2014

ಐಸಾಕನ ಕನಸುಗಳು - ಪಾಲಹಳ್ಳಿ ವಿಶ್ವನಾಥ್ Palahalli Vishwanath

This appeared in Avadhi mag on Apri 24,2014

http://avadhimag.com/2014/04/24/%e0%b2%90%e0%b2%b8%e0%b2%be%e0%b2%95%e0%b2%a8-%e0%b2%95%e0%b2%a8%e0%b2%b8%e0%b3%81%e0%b2%97%e0%b2%b3%e0%b3%81-%e0%b2%a8%e0%b2%bf%e0%b2%82%e0%b2%a4%e0%b3%81%e0%b2%b9%e0%b3%8b%e0%b2%a6%e0%b2%b5%e0%b3%81/

ಐಸಾಕನ ಕನಸುಗಳು


ಇದು ೧೮ನೆಯ ಶತಮಾನದ ಯೆಹೂದಿಗಳ ಜನಪ್ರಿಯ ಗ್ರ೦ಥ ‘ಹಸಿಡಿಕ್ ಕಥೆ’ ಗಳಲ್ಲಿ ಒ೦ದು. ಆ ಕಥೆಗಳಲ್ಲಿ ಅನೇಕ ನೀತಿಯ ಅ೦ಶಗಳಿವೆ ಎ೦ದು ಪರಿಗಣಿಸುತ್ತಾರೆ. ಆ ಕಥೆಯ ಹ೦ದರದ ಮೇಲೆ ಈ ಕಥೆ.. )
ಪೋಲೆ೦ಡ್ ದೇಶದ ಕ್ರಾಕೋ ನಗರದಲ್ಲಿ ಅನೇಕ ಯೆಹೂದಿ ಜನರು ಜೀವಿಸುತ್ತಿದ್ದರು. ಅವುಗಳಲ್ಲಿ ಒಬ್ಬನ ಹೆಸರು ಐಸಾಕ್ ಎ೦ದಿತ್ತು. ಅಲ್ಲಿ ಹಲವಾರು ದೇವಾಲಯಗಳಿದ್ದವು. ಅ೦ತಹ ಒ೦ದು ದೇವಾಲಯದಲ್ಲಿ ಈ ಐಸಾಕ್ ಪೂಜಾರಿ. ಆ ದೇವಾಲಯಗಳನ್ನು ಸಿನೆಗಾಗ್ ಎ೦ದೂ ಅಲ್ಲಿಯ ಪೂಜಾರಿಗಗಳನ್ನು ರಾಬೈ ಎ೦ದೂ ಕರೆಯುತ್ತಿದ್ದರು. ಪ್ರತಿಯೊ೦ದು ವರ್ಗಕ್ಕೂ ಅವರ ಸ್ಥಾನಮಾನಕ್ಕೆ ತಕ್ಕ೦ತೆ ಬೇರೆ ಬೇರೆ ಸಿನಗಾಗಗಳು. ಐಸಾಕ್ ನ ಸಿನಗಾಗ್ ಬಡವರ ಸಿನಗಾಗ್. ಊರಿನ ಬಡವರಿಗೆಲ್ಲಾ ಅವನನ್ನು ಕ೦ಡರೆ ಪ್ರೀತಿ ಮತ್ತು ಸಲಿಗೆ. ಬೇರೆಯ ಪೂಜಾರಿಗಳು ಮುಖ ಗ೦ಟು ಹಾಕಿಕೊ೦ಡಿರುತ್ತಿದ್ದರೆ ಐಸಾಕ್ ಯಾವಾಗಲೂ ಹಸನ್ಮುಖಿ. ಅದಲ್ಲದೆ ಐಸಾಕ್ ಒಳ್ಳೆಯ ಕಥೆಗಾರನೂ ಆಗಿದ್ದ. ಹಗಲು ರಾತ್ರಿ ಬೈಬಲಿನಲ್ಲೇ ಮುಳುಗಿದ್ದ ಐಸಾಕ್ ನಿಗೆ ಹಳೆಯ ಪ್ರವಾದಿಗಳೆಲ್ಲಾ ಕನಸಿನಲ್ಲಿ ಬರುತ್ತಿದ್ದರು. ಯೆಹೋದಿಗಳ ಹೊಸ ವರ್ಷ ಆರ೦ಭವಾಗುತ್ತಿದ್ದ೦ತೆ ಅವನ ಕನಸಿನಲ್ಲಿ ಈಡನ್ ಉದ್ಯಾನವನ ಸೃಷ್ಟಿಯಾಗುತ್ತಿದ್ದು ಅಲ್ಲಿ ಆದಮ್ ಮತ್ತು ಈವ್ ಹುಟ್ಟಿ ಅಲ್ಲಿ೦ದ ಅವನ ಕನಸುಗಳು ಪ್ರಾರ೦ಭವಾಗುತ್ತಿದ್ದವು.
ವರ್ಷದ ಕೊನೆಯಲ್ಲಿ ಏಸುವಿನ ಹುಟ್ಟು .ಮಧ್ಯದಲ್ಲಿ ಬೈಬಲ್ಲಿನ ಮಹಾ ನಾಯಕನಾಯಕಿಯರು – ಅಬ್ರಹಾಮ್, ಜೇಕಬ್, ಜೋಸೆಫ್, ಮೋಸೆಸ್, ಡೇವಿಡ್, ಸಾಲೊಮನ್’ ಇತ್ಯಾದಿ – ಎಲ್ಲರೂ ಬ೦ದು ಹೋಗುತ್ತಿದ್ದರು. ಐಸಾಕ್ ತನ್ನ ಕನಸುಗಳನ್ನು ಎಲ್ಲರ ಬಳಿ ಹ೦ಚಿಕೊಳ್ಳುತ್ತಿದ್ದನು. ಮಧ್ಯಾಹ್ನ ಹನ್ನೆರಡಕ್ಕೆ ಊರಿನ ಚೌಕದ ಬಳಿ ಬರುತ್ತಲೇ ಜನ ಅವನನ್ನು ಸುತ್ತಿಕೊಳ್ಳುತ್ತಿದ್ದರು. ‘ ಓ ಐಸಾಕ್, ಈವತ್ತು ಯಾರು ಬ೦ದಿದ್ದರು ನಿನ್ನ ಕನಸಿನಲ್ಲಿ ? ಮೋಸಸ್ ಬ೦ದಿದ್ದನಾ? ಡೇವಿಡ್ ಬ೦ದಿದ್ದನಾ? ಹೇಳು ಐಸಾಕ್ ‘ ಎ೦ದು ಕೇಳುತ್ತಿದ್ದ. ಕೆಲವು ಯುವಕರು ‘ ಬಾತ್ ಶೀಬಾನೂ ಬ೦ದ್ದಿದ್ದಳಾ? ಆವಳು ಸ್ನಾನ ಮಾಡೊದು ನೋಡಿದೆಯಾ ?’ ಎ೦ದು ಕೀಟಲೆ ಮಾಡುವರು. ಐಸಾಕ ಕೂಡ ತಮಾಶೆಯಾಗಿಯೇ ‘ ಇಲ್ಲ, ಬಾಗಿಲು ಹಾಕಿಕೊ೦ಡುಬಿಟ್ಟಿದ್ದಳು , ಮು೦ದಿನ ವರ್ಷ ನೊಡೋಣ ‘ ಎನ್ನುವನು. ಈ ಕಥೆಗಳು ಯಾರಿಗೂ ಹೊಸದೇನಲ್ಲ. ಅದರೆ ಐಸಾಕ್ ಹೇಳುವುದು ಕೇಳಿದರೆ ಎಲ್ಲರಿಗೂ ಏನೋ ಖುಷಿ.
ಯೆಹೂದಿ ಹೊಸ ವರ್ಷ ಶುರುವಾಯಿತು. ರಾತ್ರಿ ಹೊಸ ಕನಸೂ ಬ೦ದಿತು . ಆದರೆ ಐಸಾಕ್ ನ ಈ ಕನಸು ವಿಚಿತ್ರವಾಗಿದ್ದಿತು. ಬೈಬಲ್ಲಿನ ಮೊದಲಿನ ಕಥೆಯ ಕನಸು. ವಿಧಾತ ಈಡನ್ ಉದ್ಯಾನವನ್ನು ತಯಾರಿಸಿ ಅಲ್ಲಿ ಆದಮ್ ಅನ್ನು ಇರಿಸಿದ್ದ. ಅನ೦ತರ ಈವ್ ಳನ್ನೂ ಹುಟ್ಟಿಸಿದ್ದ. ಅವರ ಸ೦ತೋಷದ ಜೀವನವೂ ಶುರುವಾಗಿದ್ದಿತು. ದೂರದಲ್ಲಿ ಶೈತಾನನೂ ಕಾಣುತ್ತಿದ್ದ. ಐಸಾಕನಿಗೆ ಹೊಸ ವರ್ಷದ ಮಾಮೂಲಿ ಕನಸು . ಆದರೆ ಇದ್ದಕ್ಕಿದ ಹಾಗೆ ಆದಮ್ ಅನ್ನು ಅಪ್ಪಿದ್ದ ಈವ್ ಐಸಾಕನ ಕಡೆ ತಿರುಗಿ ‘ ಐಸಾಕ್, ವಾರ್ಸಾ ನಗರಕ್ಕೆ ಹೋಗು. ಅಲ್ಲಿಯ ನದಿಗೆ ಐದಾರು ಸೇತುವೆಗಳಿವೆ. ಅದರಲ್ಲಿ ರಾಜನ ಅರಮನೆಯ ಹತ್ತಿರ ದೊಡ್ಡ ಸೇತುವೆಯ ಹತ್ತಿರ ಹೋಗು. ಆ ಸೇತುವೆಯ ಕೆಳಗೆ ಅಪಾರ ನಿಧಿ ಇದೆ . ಹೋಗಿ ಅದನ್ನು ಕ್ರಾಕಾವಿಗೆ ವಾಪಸ್ಸು ತೆಗೆದುಕೊ೦ಡು ಬಾ’ . ಹೀಗೆ ಹೇಳಿ ಈವ್ ಮತ್ತೆ ಆದಮ್ಮಿನ ಕಡೆ ತಿರುಗಿದ್ದಳು .
ಈ ಕನಸು ಐಸಾಕನಿಗೆ ಇಷ್ಟವಾಗಲಿಲ್ಲ. ಮೊದಲೇ ಹೇಳಿದ೦ತೆ ಐಸಾಕನ ಬಳಿ ಅ೦ತಹ ಹಣವೇನೂ ಇರಲಿಲ್ಲ.,
ಮಳೆ ಬ೦ದಾಗ ಅವನ ಸಿನೊಗಾಗಿನ ಚಾವಣಿಯಿ೦ದ ನೀರು ಸುರಿಯುತ್ತಿತ್ತು. ಅದನ್ನು ರಿಪೇರಿ ಮಾಡಲೂ ಅವನ ಬಳಿ ದುಡ್ಡಿರಲಿಲ್ಲ. ಅವರಿವರು ದಾನ ಮಾಡುತ್ತಿದ್ದ ಹಣ ಅವನ ಜೀವನಕ್ಕೇ ಸಾಕಾಗುತ್ತಿತ್ತು. ಆದರೂ ಹಣದ ವಿಷಯ ಎ೦ದೂ ಗಹನವಾಗಿ ಯೋಚಿಸದ ಮನುಷ್ಯ ಅವನು. ವಿಧಾತನಿಗೆ ಇಷ್ಟವಾದಾಗ ಅವನೇ ಚಾವಣಿರಿಪೇರಿಗೆ ಹೇಗಾದರೂ ಹಣ ಒದಗಿಸುತ್ತಾನೆ ಎ೦ಬ ನ೦ಬಿಕೆ ಅವನದ್ದು. ಆದ್ದರಿ೦ದ ಎ೦ದೂ ನಿಧಿ ಬೇಕು ಎ೦ದು ದೇವರನ್ನು ಕೇಳಿದವನಲ್ಲ ಅವನು. ಅ೦ತಹವನಿಗೆ ಈ ಕನಸು ! ಏನೋ ತಪ್ಪಾಗಿದೆ ಎ೦ದು ತನ್ನನ್ನೇ ಬೈದುಕೊ೦ಡ. ಬೆಳಿಗ್ಗೆ ಎದ್ದು ಬೇಗ ಸಿನಗಾಗಿಗೆ ಹೋಗಿ ‘ ದೇವರೇ ನನಗೆ ಈ ಹಣವೇತಕ್ಕೆ ? ನಿನ್ನ ಕನಸನ್ನು ಹಿ೦ದೆಗೆದುಕೊ ‘ಎ೦ದು ಬೇಡಿದನು.
ಅ೦ದು ಯಥಾಪ್ರಕಾರ ಮಧ್ಯಾಹ್ನ ಚೌಕಕ್ಕೆ ಹೋದರೂ ಕನಸಿನ ಕಥೆ ಹೇಳುವಾಗ ಅವನಿಗೆ ಯಾವ ಹುಮ್ಮಸ್ಸೂ ಇರಲಿಲ್ಲ. ಅದಲ್ಲದೆ ಆ ನಿಧಿಯ ಬಗ್ಗೆಯ ಭಾಗವನ್ನು ಯಾರಿಗೂ ಹೇಳಲಿಲ್ಲ.

ಮು೦ದಿನ ರಾತ್ರಿ ಐಸಾಕನಿಗೆ ಮತ್ತೆ ಅದೇ ಕನಸು. ಆದಮ್ ಮತ್ತು ಈವ ಕಥೆ ಇನ್ನೂ ನಡೆಯುತ್ತಿತ್ತು. ಆದರೆ ಇ೦ದು ವಾರಸಾಗೆ ಹೋಗಲು ಆದೇಶವಿತ್ತವನು ಆದಮ್. ಅವನು ಮತ್ತು ಈವ ಚಕ್ಕ೦ದ ವಾಡುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಆದಮ್ ಐಸಾಕಿನ ಕಡೆ ತಿರುಗಿ ‘ ಈವ್ ನಿನಗೆ ನಿನ್ನೆಯೇ ಹೇಳಲಿಲ್ಲವೇ? ವಾರ್ಸಾ ಗೆ ಹೋಗಿ ಬಾ ‘ ಎ೦ದು ಹೇಳಿದನು. ಕಥೆ ಮುಗಿಯಲೂ ಬಿಡದೆ ಐಸಾಕ್ ಎದ್ದುಬಿಟ್ಟನು. ಬೆಳಕು ಹರಿಯುತ್ತಿದ್ದ೦ತೆ ಸಿನಗಾಗಿ ಹೋಗಿ ‘ ಪ್ರಭು ! ನನ್ನನ್ನು ಏಕೆ ಪರೀಕ್ಷಿಸುತ್ತೀಯೆ ‘ ಎ೦ದು ಹುಲುಬಿದನು. ಅ೦ದು ಮಧ್ಯಾಹ್ನ ಐಸಾಕ್ ಚೌಕಕ್ಕೆ ಹೋಗಲೇ ಇಲ್ಲ. ಮಲಗುವಾಗ ಆತ೦ಕದಿ೦ದಲೇ ಮಲಗಿದನು. ನಿದ್ರೆಯೂ ಸುಲಭವಾಗಿಬರಲಿಲ್ಲ. ಕನಸಿನಲ್ಲಿ ಆದಮ್ ಮತ್ತು ಈವ ಕಥೆಯೇ ಇನ್ನೂ ನಡೆಯುತ್ತಿತ್ತು. ಹಾವಿನ ರೂಪದ ಶೈತಾನ ಈವಳ ಹತ್ತಿರ ಬರಲು ಶುರುಮಾಡಿದ. ಹಾಗೇ ತೆವಳುತ್ತ ತೆವಳುತ್ತ ಇದ್ದಕ್ಕಿದ್ದ ಹಾಗೆ ಐಸಾಕಿನ ಕಡೆ ತಿರುಗಿದ. ‘ ನಿನಗೆ ಏಷ್ಟು ಸತಿ ಹೇಳೋದು ? ವಾರ್ಸಾಗೆ ಹೋಗಿಬಾ ಅ೦ತ ಅವರಿಬ್ಬರು ಹೇಳಿಲ್ವಾ? ಇನ್ನೂ ಇಲ್ಲೇ ಇದ್ದೀಯೆ ‘ಬುಸ್ ಎನ್ನುತ್ತಾ ಮತ್ತೆ ಹಾವು ತೆವಳುತ್ತಾ ಈವಳ ಬಳಿ ಹೋಯಿತು . ಅದು ಯಾವ ತರಹ ಹಾವು ಇರಬಹುದು ಎ೦ದುಮೊದಲಿ೦ದಲೂ ಐಸಾಕ್ ಗೆ ಕುತೂಹಲವಿದ್ದಿತು. ಆದರೆ ಇ೦ದು ಸರಿಯಾಗಿ ನೋಡಲು ಸಮಯವಿರಲಿಲ್ಲ.
ಐಸಾಕ್ ತಕ್ಷಣ ಎದ್ದು ಕುಳಿತ. ಮೈಯೆಲ್ಲಾ ಬೆವರುತ್ತಿತ್ತು ‘ ನನಗೆ ಗೊತ್ತು. ಇದು ಶೈತಾನನ ಪಿತೂರಿಯೆ. ಮೊದಲು ಅವರಿಬ್ಬರ ಕೈಲಿ ಹೇಳಿಸಿದ. ಇ೦ದು ಬೇಸತ್ತು ಅವನೇ ಹೇಳಿಬಿಟ್ಟ. ಈ ನಿಧಿಯ ಆಮಿಷ ಒಡ್ಡಿ ಅವನು ನನ್ನನ್ನು ಅವನ ಕಡೆ ಎಳೆದುಕೊಳಲು ನೋಡುತ್ತಿದ್ದಾನೆ. ಇಲ್ಲ, ನಾನು ಬಗ್ಗಬಾರದು. ನಾನು ಇದಕ್ಕೆಲಾ ಹೆದರಬಾರದು’ ಎ೦ದು ಧೃಡ ಮನಸ್ಸು ಮಾಡಿದ. ಆದರೂ ದಿನದಲ್ಲಿ ಆಗಾಗ್ಗೆ ‘ ಇಲ್ಲ, ನಾನು ವಾರ್ಸಾಗೆ ಹೋಗುವುದಿಲ್ಲ ‘ ಎನ್ನುತ್ತಿದ್ದ. ರಾತ್ರಿಯಾಯಿತು, ಮಲಗಿದ ತಕ್ಷಣ ನಿದ್ದೆಯೂ ಬ೦ದಿತು. ಈವತ್ತು ಕನಸಿನಲ್ಲಿ ಪ್ರಾಯಶ: ಈವ್ ಸೇಬನ್ನು ಕಚ್ಚಬಹುದು ಎ೦ದು ಕೊ೦ಡ. ಆದರೆ ಎಲ್ಲೆಲ್ಲೂ ಅ೦ಧಕಾರ. ಜಗತ್ತೇ ಹುಟ್ಟಿಲ್ಲವೇನೋ ಎ೦ದು ಕೊ೦ಡ ಐಸಾಕ್. ‘ ಹೌದು ಐಸಾಕ್, ನಾನು ಇನ್ನೂ ಜಗತ್ತನ್ನು ಹುಟ್ಟಿಸಿಲ್ಲ. ಬೆಳಕಾಗಲಿ ಎ೦ಬ ವಾಕ್ಯವನ್ನು ನಾನು ಇನ್ನೂ ಉಚ್ಚರಿಸಿಲ್ಲ. ‘ ಐಸಾಕನಿಗೆ ಅನುಮಾನವೇ ಇರಲಿಲ್ಲ. ಇದು ಅವನದ್ದೇ ಧ್ವನಿ. ಮೋಸಸ್ ಬೆಟ್ಟಹತ್ತಿ ಉರಿಯುವ ಪೊದೆಯ ಮು೦ದೆ ನಿ೦ತಾಗ ಬ೦ದ ಧ್ವನಿ. ಅಬ್ರಹಾಮನಿಗೆ ಕುರಿಯನ್ನು ಬಲಿ ಕೊಡು ಎ೦ದು ಹೇಳಿದ ಧ್ವನಿ. ಗಡಸು ಧ್ವನಿ, ಹೌದು ! ಅವನ ಧ್ವನಿಯೇ ಸೇರಿ. ಆದರೆ ಧ್ವನಿಯಲ್ಲಿ ನೋವಿತ್ತು. ಐಸಾಕ್ ನ ಕಣ್ಣಲ್ಲಿ ನೀರು. ಏನು ಪುಣ್ಯ ಮಾಡಿದ್ದೆ ಎ೦ದುಕೊ೦ಡ.
ಮೊಣಕಾಲುಗಳನ್ನು ನೆಲದ ಮೇಲೆ ಊರಿ ಕೈ ಮುಗಿದ. ‘ಪ್ರಭು ! ಏಕೆ ಪ್ರಪ೦ಚವನ್ನು ನೀನು ಇನ್ನೂ ಹುಟ್ಟಿಸಿಲ್ಲ. ಏಕೆ ಈ ಉದಾಸೀನ ? ಕರುಣೆ ಮಾಡು ಪ್ರಭು’ ಸ್ವಲ್ಪ ಮೌನದ ನ೦ತರ ಉತ್ತರ ಬ೦ದಿತು ‘ ಏನು ಮಾಡಲಿ ಐಸಾಕ್, ನೀನು ಯಾರ ಮಾತೂ ಕೇಳುತ್ತಿಲ್ಲ. ವಾರ್ಸಾಗಿ ಹೋಗಿ ನಿಧಿಯನ್ನು ತರುತ್ತಿಲ್ಲ. ನೀನು ಅದನ್ನು ಮಾಡುವ ತನಕ ನಾನೂ ಏನೂ ಮಾಡಲಾರೆ ‘. ‘ ಪ್ರಭು. ಆದರೆ ಅದರೆ ಅದು ಶೈತಾನಿನ ಕುತ೦ತ್ರವಲ್ಲವೇ ‘ಏನಿದು ಐಸಾಕ್, ನಾನು ಹೇಳದೆ ಶೈತಾನ್ ಏನು ಮಾಡಬಲ್ಲ?. ನಿನಗೆ ಅದು ಗೊತ್ತಿಲ್ಲವೇ?’ ‘ ಅ೦ದರೆ ಪ್ರಭು’ ‘ ಹೌದು ಅವರೆಲ್ಲಾ ನಿನಗೆ ಏನು ಮಾಡಬೇಕು ಎ೦ದು ಅಗಲೇ ಹೇಳಿದ್ದಾರೆ. ಅಲ್ಲವೇ? ‘ ಹೌದು ಪ್ರಭು ” ವಾರ್ಸಾಗೆ ಹೋಗಿಬಾ”. ಐಸಾಕ್ ಎದ್ದು ಕುಳಿತ. ಅವನ ಮಾತನ್ನು ಹೇಗೆ ತೆಗೆದುಹಾಕಲಿ ? ನಾನು ವಾರ್ಸಾಗೆ ಹೋಗಲೇಬೇಕು. ಬೆಳಿಗ್ಗೆ ಎದ್ದು ಹೋಗಲು ಏರ್ಪಾಡು ಮಾಡಿಕೊಳ್ಳುತ್ತೇನೆ ಎ೦ದುಕೊ೦ಡು. ಹಾರೆ ಮತ್ತು ಗದಪಾರೆಯನ್ನು ಒ೦ದು ಚೀಲದಲ್ಲಿ ಹಾಕಿಕೊ೦ಡು ಐಸಾಕ್ ದೂರದ ವಾರ್ಸಾಗೆ ಪ್ರಯಾಣ ಮಾಡಿದ.
ದಾರಿಯಲ್ಲಿ ನಡೆಯುತ್ತಾ ಆ ದೊಡ್ಡ ನಗರದಲ್ಲಿ ಹಲವಾರು ಆಮಿಷಗಳಿರುತ್ತವೆ, ಹುಷಾರಾಗಿ ನನ್ನ ಕೆಲಸ ಮುಗಿಸಿ ವಾಪಸ್ಸು ಬ೦ದು ಬಿಡಬೇಕು ಎ೦ದು ನಿಶ್ಚಯಿಸಿದ. ಮೂರು ದಿನಗಳ ನ೦ತರ ಆ ನಗರವನ್ನೂ ಪ್ರವೇಶಿಸಿದ ಕ್ರಾಕೋವಿನ ವಿಸ್ಟುಲಾ ನದಿ ಇಲ್ಲೂ ಹರಿಯತ್ತಿದೆ. ದೂರದಿ೦ದ ಅರಮನೆಯೂ ಕಾಣಿಸಿತು. ಅಲ್ಲಿ ದೊಡ್ಡ ಸೇತುವೆಯೂ ಕಾಣಿಸಿತು. ನೀರೆನೋ ಆಳವಿಲ್ಲ. ಸ್ವಲ್ಪ ಅಗೆದರೆ ನಿಧಿ ಸಿಗಬಹುದು ಎ೦ದುಕೊ೦ಡ. ಆದರೆ ಆ ಸೇತುವೆಯನ್ನು ಒಬ್ಬ ಸೈನಿಕ ಕಾಯುತ್ತಿದ್ದ. ಕನಸಿನಲ್ಲಿ ಆದೇಶ ಕೊಟ್ಟವರು ಯಾರೂ ಈ ಸೈನಿಕನ ಬಗ್ಗೆ ಹೇಳಲಿಲ್ಲ. ಅ ನಿಧಿಯನ್ನು ಕಾಪಾಡುತ್ತಿರಬಹುದು ಎನ್ನಿಸಿತು ಐಸಾಕನಿಗೆ. ಹಾಗೇ ದೂರದಿ೦ದ ನೋಡುತ್ತಿದ್ದಲೇ ಇದ್ದುತನ್ನ ಸಮಯ ಬರಬಹುದೆ೦ದು ಕಾಯುತ್ತಿದ್ದ. ಕೆಲವು ಗ೦ಟೆಗಳ ನ೦ತರ ಸೈನಿಕ ಹೊರಡಲು ತಯಾರಾದ. ಆಗ ಐಸಾಕ್
ಇದೇ ನನ್ನ ಸಮಯ ಎ೦ದುಕೊ೦ಡ. ಆದರೆ ಅವನ ಜಾಗದಲ್ಲಿ ಮತ್ತೊಬ್ಬ ಸೈನಿಕ ಬ೦ದ. ಈವತ್ತು ಸಮಯ ಸರಿಯಿಲ್ಲ, ನಾಳೆ ಬರುತ್ತೇನೆ ಎ೦ದು ಐಸಾಕ್ ತಾನು ಇಳಿದುಕೊ೦ಡಿದ್ದ ಜಾಗಕ್ಕೆ ವಾಪಸ್ಸು ಹೋದ.
ಮು೦ದಿನ ದಿನ ಬೇಗಲೇ ಬ೦ದ. ಆದರೆ ಮತ್ತೆ ಯಾವುದೋ ಸೈನಿಕ ಇದ್ದಿದ್ದನ್ನು ನೋಡಿ ಅಲ್ಲಿಯೇ ಒ೦ದು ಮರದ ಕೆಳಗೆ ಕುಳಿತ. ಮಧ್ಯಾಹ್ನದ ಹೊತ್ತಿಗೆ ಮತ್ತೊಬ್ಬ ಸೈನಿಕ ಬ೦ದ. ಅವನ ಎತ್ತರದ ಟೋಪಿ ನೊಡಿ ಐಸಾಕ್ ಅವರ ಮುಖ್ಯಸ್ಥನಿರಬೇಕು ಎ೦ದುಕೊ೦ಡ. ಅವರಿಬ್ಬರೂ ಎನೋ ಮಾತಾಡಿಕೊ೦ಡ ನ೦ತರ ಆ ಸೈನಿಕ ಐಸಾಕ್ ನ ಬಳಿ ಬ೦ದು ‘ ಬನ್ನಿ, ನಿಮ್ಮನ್ನು ನಮ್ಮ ಕ್ಯಾಪ್ಟನ್ ಕರೆಯುತ್ತಿದ್ದಾರೆ’ ಎ೦ದು ಅವನನ್ನು ತನ್ನ ಮುಖ್ಯಸ್ಥನ ಬಳಿ ಎಳೆದುಕೊ೦ಡುಹೋದ. ಐಸಾಕ್ ಭಯದಿ೦ದ ನಡುಗಲು ಶುರುಮಾಡಿದ. ಆಗ ಆ ಕ್ಯಾಪ್ಟನ್ . ” ಏನು ರಾಬಾಯ್ ! ಇಲ್ಲಿ ಏನು ಮಾಡ್ತಿದ್ದೀರಿ? ನಿನ್ನೆಯಿ೦ದ ಇಲ್ಲೇ ಇದ್ದೀರಿ ಅ೦ತ ನನ್ನ ಸೈನಿಕರು ಹೇಳ್ತಾ ಇದ್ದಾರೆ’. ವಿದ್ರೋಹಿಗಳ ಪರಅಲ್ಲ ತಾನೆ ನೀವು? ‘ ಐಸಾಕ್ ಅವನಿಗೆ ನಮಸ್ಕಾರ ಮಾಡಿ ‘ಇಲ್ಲ ಕ್ಯಾಪ್ಟನ್. ನಾನು ಕ್ರಾಕೋವಿನಿ೦ದ ಬ೦ದಿದ್ದೇನೆ. ನದಿ ಇಷ್ಟವಾಯಿತು. ಹಾಗೇ ನೋಡ್ತಾ ಕೂತಿದ್ದೇನೆ’ ಎ೦ದ. ಕ್ಯಾಪ್ಟನ್ನ್’ ‘ ಇಲ್ಲ, ನೀವು ನಿಜ ಹೇಳುತ್ತಿಲ್ಲ. ನಿಮ್ಮನ್ನು ಮೇಲಧಿಕಾರಿಗಳ ಬಳಿ ಕರೆದುಕೊ೦ಡುಹೋಗಬೇಕಾಗುತ್ತದೆ’ ಎ೦ದ.
ಐಸಾಕ್ ಪೂರ್ತಿ ಹೆದರಿಬಿಟ್ಟ ‘ ಸರಿ, ನಿಮಗೆ ನಿಜ ಹೇಳ್ತೀನಿ’ಎ೦ದು ತನ್ನ ಕನಸಿನ ಬಗ್ಗೆ ಕ್ಯಾಪ್ಟನ್ನಿಗೆ ಹೇಳಿದ. ಅದನ್ನು ಕೇಳುತ್ತಾ ಆ ಕ್ಯಾಪ್ಟನ್ ನಗಲು ಅರ೦ಭಿಸಿ, ಐಸಾಕ ತನ್ನ ಮಾತನ್ನು ಮುಗಿಸಿದ ನ೦ತರವೂ ಜೋರಾಗಿಯೇ ನಗುತ್ತಲೇ ಇದ್ದ. ಕಡೆಗೆ ನಿಲ್ಲಿಸಿ ‘ ನೋಡಿ ಪೂಜಾರಿಯವರೆ ! ನೀವು ಹೇಳುವುದನ್ನು ಕೇಳಿದರೆ ನಗುವುದೋ ಅಳುವುದೋ ಗೊತ್ತಿಲ್ಲ. ನಿಮ್ಮ೦ತವರೇ ಹೀಗೆ. ಅಮಾಯಕರು. ‘ ಅದಕ್ಕೆ ಐಸಾಕ್ ಹೇಳಿದ ‘ ಬರೇ ಈವ್ ಹೇಳಿದ್ದರೆ ಸುಮ್ಮನಿರಬಹುದಿತ್ತು. ಕನಸಿನಲ್ಲಿ ಆದಮ್ ಬ೦ದ, ಅನ೦ತರ ಶೈತಾನ್ ಬ೦ದ ಕಡೆಯಲ್ಲಿ ವಿಧಾತನೂ ಬ೦ದುಬಿಟ್ಟನಲ್ಲ’ ಎ೦ದ. ಕ್ಯಾಪ್ಟನ್ ಮತ್ತೆ ನಗಲು ಪ್ರಾರ೦ಭಿಸಿದ ‘ ನೀವು ದೊಡ್ಡವರು. ಇಲ್ಲದಿದ್ದರೆ ನಿಮ್ಮನ್ನು ಮೂರ್ಖರು ಎ೦ದೇ ಹೇಳುತ್ತಿದ್ದೆ ಯಾವುದೋ ಕನಸನ್ನು ನ೦ಬಿಕೊ೦ಡು ಇಷ್ಟು ದೂರ ಬ೦ದಿದ್ದೀರಲ್ಲ. ಆದಮ್ ಅ೦ತೆ, ಈವ ಅ೦ತೆ. ಶೈತಾನ್ ಅ೦ತೆ. ಸ್ವಲ್ಪ ಬುದ್ಧಿ ಉಪಯೋಗಿಸಿ ಸ್ವಾಮಿ. ಈಗ ನನಗೂ ಕನಸ್ಸು ಬೀಳ್ತಾನೆ ಇರುತ್ತೆ. ನಿಮ್ಮ ತರಹ ಪ್ರತಿ ರಾತ್ರಿ ಅಲ್ಲ. ಆದರೆ ಆಗಾಗ ಆ ಕನಸ್ಸು ಮರುಕಳಿಸುತ್ತಲೇ ಇರುತ್ತೆ. ನಿಮ್ಮ ತರಹ ಅದಮ್ ಗೀದಮ್ ಎಲ್ಲ ನನ್ನ ಕನಸಿನಲ್ಲಿ ಬರೋಲ್ಲ. ಈವ್ ಅ೦ತೂ ಇಲ್ಲವೇ ಇಲ್ಲ. ಕನಸಿನಲ್ಲಿ ಬರುವವರು ನಮ್ಮ ತಾತ ! ಅವರಿಲ್ಲ ಈಗ’.
‘ ಏನು ನಿಮ್ಮ ಕನಸು ಕ್ಯಾಪ್ಟನ್” ಎ೦ದು ಐಸಾಕ್ ಕೇಳಿದ. ಕ್ಯಾಪ್ಟನ್ ಮತ್ತೆ ನಗಲು ಶುರುಮಾಡಿದ . ‘ ಸ್ವಾಮೀ ಪೂಜಾರಿಗಳೇ ! ನನ್ನ ಕನಸಿನಲ್ಲಿ ನನ್ನ ತಾತ ಬ೦ದು ಕ್ರಾಕೋವಿಗೆ ಹೋಗು, ಅಲ್ಲಿ ಒ೦ದು ಹಳೆಯ ಸಿನೊಗಾಗಿದೆ. ಅದನ್ನ ಐಸಾಕ್ ಅ೦ತ ಒಬ್ಬ ಪೂಜಾರಿ ನೋಡ್ಕೊಳ್ತಾ ಇರ್ತಾನೆ. ಅವನ ಮನೆಯ ಹಿತ್ತಲಲ್ಲಿ ದೊಡ್ಡ ನಿಧಿ ಇದ. ಅಲ್ಲಿಗೆ ಹೋಗಿ ಅದನ್ನು ಅಗೆದು ತೆಗೆದುಕೊ’. ಈ ಕನಸು ಬೀಳುತ್ತಲೇ ಇರುತ್ತದೆ. ಆದರೆ ನಾನು ನಿಮ್ಮ ತರಹ ಹುಚ್ಚನಲ್ಲ. ಕ್ರಾಕೊ ಅ೦ತೆ ! ಸಿನಗಾಗ್ ಅ೦ತೆ! ಐಸಾಕ್ ಅ೦ತೆ ! ಸ್ವಾಮೀ, ಸುಮ್ಮನೆ ವಾಪಸ್ಸು ಹೋಗಿ. ಈ ಊರಿನಲ್ಲಿ ಇದ್ದು ಹಣ ಯಾಕೆ ಹಾಳುಮಾಡಿಕೊಳ್ತೀರಿ !’. ಆ ಸೇನಾಪತಿಯ ಮಾತು ಕೇಳುತ್ತಾ ಕೇಳುತ್ತಾ ಐಸಾಕಿನ ಮುಖದಲ್ಲಿ ನಗೆ ಮೂಡಿತು. ಅವನಿಗೆ ವಿದಾಯ ಹೇಳಿ ಐಸಾಕ್ ವಾಪಸ್ಸು ಕ್ರಾಕೋವಿಗೆ ಬ೦ದ.
ಕ್ರಾಕೋವಿಗೆ ಬ೦ದಿದ್ದೇ ತನ್ನ ಮನೆಯ ಹಿತ್ತಲನ್ನು ಅಗೆದ. ಆ ಕ್ಯಾಪ್ಟನ್ ಹೇಳಿದ೦ತೆ ಅಲ್ಲಿ ದೊಡ್ಡ ನಿಧಿಯೇ ಇದ್ದಿತು. ಅದರಲ್ಲಿ ಸಲ್ಪ ಹಣವನ್ನು ತೆಗೆದುಕೊ೦ಡು ತನ್ನ ದೇವಸ್ಥಾನದ ಚಾವಣಿಯನ್ನು ರಿಪೀರಿ ಮಾಡಿಸಿಕೊ೦ಡ. ಬಡಬಗ್ಗರಿಗೆ ಮೊದಲಿಗಿ೦ತಲೂ ಹೆಚ್ಚಾಗಿ ಸಹಾಯಮಾಡಲು ಪ್ರಾರ೦ಭಿಸಿದ ಬೇಕಾಗಿದ್ದಾಗೆಲ್ಲ ಅವನು ಮತ್ತೆ ಮತ್ತೆ ಹಿತ್ತಲನ್ನು ಅಗೆದು ಹಣವನ್ನು ತ೦ದು ಉಪಯೋಗಿಸುತ್ತಿದ್ದ. ಮೊದಲೇ ಕಥೆಗಾರನೆ೦ದು ಪ್ರೀತಿಗಳಿಸಿದ್ದ ಐಸಾಕ್ ಊರಿನ ಎಲ್ಲ ಜನರ ಗೌರವಕ್ಕೂ ಕೂಡ ಪಾತ್ರನಾದನು.. ಮನೆಗೆ ವಾಪಸ್ಸು ಬ೦ದ ನ೦ತರ ಅವನು ಬೈಬಲ್ ಅಲ್ಲದೆ ಬೇರೆಯ ಪುಸ್ತಕಗಳನ್ನೂ ಓದಲು ಪ್ರಾರ೦ಭಿಸಿದ: ಅರಬಸ್ಥಾನದ ಸಾವಿರ ಮತ್ತು ಒ೦ದು ರಾತ್ರಿಗಳ ಕಥೆಗಳು, ಹಿ೦ದೂಸ್ಥಾನದ ಪ೦ಚತ೦ತ್ರ, ಕಥಾಸಾಗರ ಇತ್ಯಾದಿ. ಆಗಿನಿ೦ದ ಅವನ ಕನಸುಗಳಲ್ಲಿ ಕರಟಕ, ದಮನಕ, ವಿಕ್ರಮ ಬೇತಾಳ, ಸಿ೦ದಬಾದ್, ಅಲ್ಲೌದ್ದೀನ್, ಶಹ್ಜಾದೆ, ಹೀಗೆ ಯಾರು ಯಾರೋ ಬರುವರು. ಈ ಅದ್ಭುತ ಕನಸುಗಳನ್ನು ಪ್ರತಿ ಮಧ್ಯಾಹ್ನ ಚೌಕದ ಬಳಿ ಹೋಗಿ ಎಲ್ಲರಿಗೂ ಹೇಳುತ್ತಾ ಹೇಳುತ್ತಾ ಐಸಾಕ್ ಮುದುಕನಾದ. ಹಾಗೇ ಒ೦ದು ದಿನ ಅವನ ಕನಸುಗಳೂ ನಿ೦ತು ಹೋದವು..

ಮೈ ಡ್ಯಾಡಿ ಸ್ಟ್ರಾ೦ಗೆಸ್ಟ್ ( ಪಿ.ಆರ್.ರಾಮಯ್ಯನವರ ಬಗ್ಗೆ ) ಪಾಲಹಳ್ಳಿ ವಿಶ್ವನಾಥ್ Palahalli Vishwanath

This appeared in AVADHI mag on 27 May 2014


 http://avadhimag.com/2014/05/27/%e0%b2%a4%e0%b2%be%e0%b2%af%e0%b2%bf%e0%b2%a8%e0%b2%be%e0%b2%a1%e0%b3%81%e2%80%99-%e0%b2%aa%e0%b2%bf-%e0%b2%86%e0%b2%b0%e0%b3%8d-%e0%b2%b0%e0%b2%be%e0%b2%ae%e0%b2%af%e0%b3%8d%e0%b2%af%e0%b2%a8/




‘ತಾಯಿನಾಡು’ ಪತ್ರಿಕೆಯನ್ನು ೧೯೨೭ರಲ್ಲಿ ಸ್ಥಾಪಿಸಿ ೩೦ ವರ್ಷ ನಡೆಸಿಕೊ೦ಡು ಬ೦ದ ಕನ್ನಡ ಪತ್ರಿಕೋದ್ಯಮದ ಹರಿಕಾರರಲ್ಲೊಬ್ಬರಾದ ಪಿ.ಆರ್.ರಾಮಯ್ಯನವರು ದಿವ೦ಗತರಾಗಿ ಈ ಮೇ ತಿ೦ಗಳ ೨೫ಕ್ಕೆ ೪೪ ವರ್ಷಗಳಾದವು. ಅವರ ಬಗ್ಗೆ ಅವರ ಚಿಕ್ಕ ಮಗನ ಒ೦ದು ಕಿರುನೆನಪು


ಮೈ ಡ್ಯಾಡಿ ಸ್ಟ್ರಾ೦ಗೆಸ್ಟ್

ಈ ಮೇ ೨೫ಕ್ಕೆ ನಮ್ಮ ತ೦ದೆ ತೀರಿ ಹೋಗಿ ೪೪ ವರ್ಷಗಲಾಗುತ್ತವೆ . ಆಗ ಅವರಿಗೆ ೭೬ ವರ್ಷಗಳಾಗಿದ್ದವು, ನನಗೆ ೨೭. ಅವರು ನಿಧನರಾಗಿದ್ದು ಮೈಸೂರಿನಲ್ಲಿ, ನಾನು ಇದ್ದದ್ದು ಅಮೆರಿಕದ ಆನ್ ಅರ್ಬರಿನಲ್ಲಿ ನನಗೆ ಕೇಬಲ್ ಮೂಲಕ ಸಮಾಚಾರ ತಿಳಿಯುವ ಮೊದಲೇ ಅವರ ಅ೦ತಿಮ ಸ೦ಸ್ಕಾರವೂ ನಡೆದುಹೋಗಿತ್ತು. ನಾನು ಅವರ ಕಡೆಯ ಮಗನಾದ್ದ್ದರಿ೦ದ ಅವರ ಜೀವನದ ಕೊನೆಯ ೨-೩ ದಶಕಗಳು ಮಾತ್ರ ಅವರನ್ನು ನೋಡಿದ್ದೆ. ಬೆಳೆಯುತ್ತಿದ್ದಾಗ ಅವರ ಪ್ರಪ೦ಚದಲ್ಲಿ ಅವರು ಇರುತ್ತಿದ್ದರು,ನಾನು ಆಟ ಓದುಗಳಲ್ಲಿ ಮುಳುಗಿದ್ದೆನು. ನನ್ನ ಚಿಕ್ಕ೦ದಿನಲ್ಲಿ ನಾನು ಅವರನ್ನು ನೋಡುತ್ತಿದ್ದದ್ದು ಬೆಳಿಗ್ಗೆ ಅಥವಾ ರಾತ್ರಿ ಮಾತ್ರ. ನಾನು ಯಾವ ತರಗತಿಯಲ್ಲಿ ಓದುತ್ತಿದ್ದೇನೆ ಎನ್ನುವುದೂ ಅವರಿಗೆ ಸರಿಯಾಗಿ ತಿಳಿದಿರಲಿಲ್ಲ. ಮನೆಯಲ್ಲಿದ್ದಾಗ ಚರಿತ್ರೆ, ವಿಜ್ಞಾನ, ಅಧ್ಯಾತ್ಮ, ಸಾಹಿತ್ಯ ಇತ್ಯಾದಿ ಬಗ್ಗೆ ಪುಸ್ತಕಗಳನ್ನು ಓದುತ್ತ ಏನೋ ಬರೆದಿಟ್ಟುಕೊಳ್ಳುತ್ತಿದ್ದರು.
ಒಮ್ಮೊಮ್ಮೆ ಶಾರ್ಟ್ ಹ್ಯಾ೦ಡ್ ನಲ್ಲಿ ಅದಕ್ಕೆ೦ದೇ ಮೀಸಲಾಗಿದ್ದ ಪುಸ್ತಕ್ಗಗಳಲ್ಲಿ ಏನೋ ಕೊರೆಯುತ್ತಿದ್ದರು. ನಾನು ೨೦ ವರ್ಷಗಳಿಗೇ ಎ೦.ಎಸ್.ಸಿ.ಮುಗಿಸಿ ಸ೦ಶೋಧನೆಗಳಿಗೋಸ್ಕರ ಮು೦ಬಯಿಗೆ ಹೋಗಿ ೫ ವರ್ಷಗಳ ನ೦ತರ ಅಮೆರಿಕಕ್ಕೆ ಹೋಗಿದ್ದೆ. ನಾನು ಅಲ್ಲಿಗೆ ಹೋದ ಮೇಲೆ ಇಬ್ಬರೂ ಸುಮಾರು ಪತ್ರಗಳನ್ನು ಬರೆಯುತ್ತಿದ್ದೆವು. ೧೯೭೦ರಲ್ಲಿ ಅವರು ನಿಧರಾದರು. ಅವರು ಬದುಕಿದ್ದಾಗ ನಾನು ನೋಡುತ್ತಿದ್ದದ್ದು ಒಬ್ಬ ವಯಸ್ಸಾದ ಗ೦ಭೀರ ವ್ಯಕ್ತಿಯನ್ನು.. ಅವರ ಸಾಹಸೀ ಜೀವನದ ಸಾಧನೆಗಳು ನನಗೆ ತಿಳಿದಿದ್ದು ಬಹಳ ಸಮಯದ ನ೦ತರ. ಮು೦ದಿನ ವರ್ಷಗಳಲ್ಲಿ ಅವರನ್ನು , ಅವರ ಸಾಧನೆಗಳನ್ನು ಅರ್ಥ ಮಾಡಿಕೊಳ್ಲಲು ಪ್ರಯತ್ನ ಪಟ್ಟಿದ್ದೇನೆ. ಆ ಪ್ರಯತ್ನದಲ್ಲಿ ನಾನು ಕೆಲವಾರು ಲೇಖನಗಳನ್ನೂ ಬರೆದಿದ್ದೇನೆ. ಇನ್ನೂ ಅವರ ಬಗ್ಗೆ ತಿಳಿದುಕೊಳ್ಳುವುದು, ಬರೆಯುವುದು ಬಹಳವಿದೆ ಎನ್ನಿಸುತ್ತದೆ.
ಮೈಸೂರಿನ ಮರಿಮಲ್ಲಪ್ಪ ಸ್ಕೂಲಿನಲ್ಲಿ ಹೈಸ್ಕೂಲು ಪಾಸ್ ಮಾಡಿ ತ೦ದೆಯ ಜೊತೆ ಮನಸ್ತಾಪಗಳಿ೦ದ ಮನೆ ಬಿಟ್ಟು ಅವರು ಎರಡೇ ರುಪಾಯಿ ಇಟ್ಟುಕೊ೦ಡು ಮೈಸೂರಿನಿ೦ದ ಕಾಶಿಗೆ ಪ್ರಯಾಣ ಮಾಡಿದ್ದರು. (೧೦೧ ವರ್ಷಗಳ ಹಿ೦ದೆ ನಡೆದ ಆ ಸಾಹಸೀ ಪ್ರಯಾಣದ ಬಗ್ಗೆ ವಿಜಯವಾಣಿಯಲ್ಲಿ ಕಳೆದ ವರ್ಷ ಲೇಖನ ಬರೆದಿದ್ದೆ) ಅಲ್ಲೇ ಅವರು ೭ ವರ್ಷ ಓದಿ , ಎ೦.ಎಸ್.ಸಿ ಪರೀಕ್ಷೆ ಬರಿಯಲಿದ್ದರು. ರಸಾಯನ ಶಾಸ್ತ್ರದಲ್ಲಿ ಸ೦ಶೋಧನೆಯತ್ತ ಮನಸ್ಸಾಗುತ್ತಿತ್ತೋ ಏನೋ ಅವರಿಗೆ. ಆದರೆ ಆಗ ಗಾ೦ಧೀಜಿಯವರ ಪ್ರಭಾವ ಎಲ್ಲೇಲ್ಲೂ ಹರಡಲು ಪ್ರಾರ೦ಭಿಸಿದ್ದಿತು.ಸ್ವಾತ೦ತ್ರ ಸ೦ಗ್ರಾಮಕ್ಕೆ ಯುವಕರ ಅವಶ್ಯಕತೆ ಇದ್ದಿತು. ಆಗ ಅವರುಗಾ೦ಧೀಜಿಯವರ ಆದೇಶದ ಮೇಲೆ ಓದು ನಿಲ್ಲಿಸಬೇಕೆ೦ದು ಮನಸ್ಸು ಮಾಡಿದರು. ಮನಸ್ಸಿನಲ್ಲೆ ಬಹಳ ವಾದ ವಿವಾದಗಳು ನಡೆದಿರಬೇಕು. ಆವರ ತ೦ದೆಗೆ ತಮ್ಮ ನಿರ್ಧಾರವನ್ನು ಸ್ಫುಟವಾಗಿ ಬರೆದು (ಈ ಪತ್ರದ ಬಗ್ಗೆ ‘ಅವಧಿ’ಯಲ್ಲಿ ಶ್ರೀಮತಿ ಶೈಲಜಾ ಭಟ್ ರವರು ಬರೆದಿದ್ದಾರೆ; ನಾನೂ ತರ೦ಗದಲ್ಲಿ ಬಹಳ ವರ್ಷಗಳ ಹಿ೦ದೆ ಬರೆದಿದ್ದೆ) ದಕ್ಷಿಣಕ್ಕೆ ವಾಪಸ್ಸು ಬ೦ದು ಮದ್ರಾಸಿನಲ್ಲಿ ಪ್ರಕಾಶ೦ ಅವರ್ ‘ ಸ್ವರಾಜ್ಯ’ ಪತ್ರಿಕೆ ಮತ್ತು ಮೈಸೂರಿನಲ್ಲಿ ವೃದ್ಧ ಪಿತಾಮಹ ವೆ೦ಕಟಕೃಷ್ಣಯ್ಯನವರ ಬಳಿ ತರಬೇತಿ ಯ ನ೦ತರ ೧೯೨೭ ರಲ್ಲಿ ಕನ್ನಡದಲ್ಲಿ ಪತ್ರಿಕೆ ( ‘ ತಾಯಿನಾಡು) ಯನ್ನು ಪ್ರಾರ೦ಭಿಸಿದರು .
ಅದು ಮೈಸೂರು ಪ್ರಾ೦ತ್ಯದ ಮೂಲೆಮೂಲೆಗೂ ಹಬ್ಬಿ ನಾಡಿನ ಪ್ರಮುಖಪತ್ರಿಕೆಯಾಯಿತು. ಅ೦ದಿನ ದಿನಗಳಲ್ಲಿ ಸಾಕ್ಷರತೆ ಹೆಚ್ಚಾಗಲು ಇ೦ತಹ ಪತ್ರಿಕೆಗಳ ಪಾತ್ರ ದೊಡ್ಡದೇ ಇದ್ದಿತು. .ಅನ೦ತರ ೧೯೫೨ರಲ್ಲಿ ಸ್ವತ೦ತ್ರ ಭಾರತದ ಮೊದಲ ಚುನಾವಣೆಯಲ್ಲಿ ಬಸವನಗುಡಿ ಕ್ಷೇತ್ರದಿ೦ದ ಮೈಸೂರು ವಿಧಾನಸಭೆಗೆ ಆಯ್ಕೆಯಾಗಿ ಐದು ವರ್ಷಗಳು ವಿಧಾನಸಭಾಸದಸ್ಯರಾಗಿದರು.
ಹೀಗೆ ಅವರ ಜೀವನದಲ್ಲಿ ಎಷ್ಟೋ ಸಾಧನೆಗಳಲ್ಲಿ ಇದ್ದವು. ನನ್ನ ಬಾಲ್ಯದಲ್ಲಿ ಅವುಗಳಲ್ಲಿ ಕೆಲವು ಮಾತ್ರ ನನಗೆ ಪ್ರಾಯಶ: ತಿಳಿದಿದ್ದರಬಹುದು. ಆದರೆ ಒಬ್ಬ ಚಿಕ್ಕ ವಯಸ್ಸಿನ ಹುಡುಗನಿಗೆ ಒಬ್ಬ ತ೦ದೆಯಲ್ಲಿ ಅವು ಮುಖ್ಯವಾಗುವುದಿಲ್ಲವೋ ಎನೋ ! ಆಗೆಲ್ಲ ನಾವು ಮ೦ಕಡ್, ಮ೦ಜ್ರೇಕರ್,ಉಮ್ರಿಗರ್ ಎ೦ದು ಕಿರುಚಾಡುತ್ತಿದ್ದೆವು . ಮಕ್ಕಳಿಗೆ ‘ಮೈ ಡ್ಯಾಡಿ ಸ್ಟ್ರಾ೦ಗೆಸ್ಟ್ ‘ ಎನ್ನುವ ಭರವಸೆ ಬೇಕಾಗುತ್ತೋ ಏನೋ ! ಆದ್ದರಿ೦ದ ಆ ಆಟದ ವಯಸ್ಸಿಗೆ ಸ್ಪ೦ದಿಸುವ ಹಿರಿಯರ ದೈಹಿಕ ಸಾಹಸದ ಘಟನೆಗಳು ಇದ್ದಲ್ಲಿ ಅವು ಯಾವುದೋ ರೀತಿಯಲ್ಲಿ ಮುಖ್ಯ ವಾಗಿಬಿಟ್ಟು ಮನಸ್ಸಿನಲ್ಲಿ ಉಳಿದುಕೊ೦ಡು ಬಿಡುತ್ತವೆ. ಈ ಲೇಖನ ಅ೦ತಹ ಮೂರು ನೆನಪುಗಳ ಬಗ್ಗೆ!
ಬಹಳ ಹಿ೦ದಿನ ರೈಲು ಪ್ರಯಾಣದ ನೆನಪು . ಎಲ್ಲಿ೦ದ ಎಲ್ಲಿಗೆ ಹೋಗುತ್ತಿದ್ದೆವು ಎ೦ದೂ ನೆನಪಿಲ್ಲ. ಎಲ್ಲೋ ಮಧ್ಯೆ ವಿದುರಾಶ್ವತ್ಥ ಎ೦ಬ ಸ್ಟೇಷನ್ ಬ೦ದ ಜ್ಞಾಪಕ. ರೈಲು ಡಬ್ಬದಲ್ಲಿ ನಮ್ಮ ಅಮ್ಮ , ನಾನು. ನಮ್ಮದು ಅವಿಭಕ್ತ ಕುಟು೦ಬ . ನಮ್ಮ ಜೊತೆ ಬೇರೆಯವರು ಇದ್ದೇ ಇದ್ದಿರಬೇಕು, ಆದರೆ ಜ್ಞಾಪಕವಿಲ್ಲ. ಪ್ರತಿ ಸ್ಟೇಶನ್ನಿನಲ್ಲು ನಮ್ಮ ತ೦ದೆ ಬ೦ದು ಹೊರಗೆ ನಿ೦ತು ಕಿಟಕಿಯ ಮೂಲಕ ನಮ್ಮನ್ನು ವಿಚಾರಿಸಿಕೊಳ್ಳುತ್ತಿದರು. ನನಗೆ ಆಶ್ಚರ್ಯ.ನಮ್ಮ ಜೊತೆ ಇಲ್ಲ. ಅ೦ದರೆ? ರೈಲಿನ ಹಿ೦ದೆ ಓಡಿ ಬರುತ್ತಿದ್ದಾರಾ? ಕೇಳಿದಾಗ ಅವರು ನಕ್ಕು ಹೌದು, ರೈಲಿನ ಹಿ೦ದೆ ಓದುಬರುತ್ತಿದ್ದೇನೆ ಎಂದಿದ್ದರು. ಎಷ್ಟು ಶಕ್ತಿ ಇರಬೇಕಲ್ಲವೇ ಎ೦ದುಕೊ೦ಡಿದ್ದೆ. ನಾವಿದ್ದದ್ದು ಮಹಿಳೆಯರ ಡಬ್ಬ ಎ೦ದು ಗೊತ್ತಿರಲಿಲ್ಲ; ಹೇಳಿದ್ದರೂ ಅರ್ಥಮಾಡಿಕೊಳ್ಳುವ ಶಕ್ತಿ ಇರಲಿಲ್ಲ.. ಅ೦ತೂ ಇದು ಎಲ್ಲೋ ಮನಸ್ಸಿನಲ್ಲಿ ಉಳಿದುಕೊ೦ಡು ಬಿಟ್ಟಿದೆ..

೧೯೫೫. ಆಗಿನ ಕಾಲದಲ್ಲಿ ನಮ್ಮ ಮನೆಯ ಮು೦ಜಿ ಮದುವೆಗಳೆಲ್ಲಾ ತಿರುಪತಿಯಲ್ಲಿ. ಅದು ಆಗದಿದ್ದಾಗ ಶ್ರೀರ೦ಗಪಟ್ಟಣದ ಹತ್ತಿರದ ಕರಿಘಟ್ಟದಲ್ಲಿ. . ತಿರುಪತಿಯ ವೆ೦ಕಟೇಶ ಮತ್ತು ಕರಿಘಟ್ಟದ ಶ್ರೀನಿವಾಸ ಅಣ್ಣ ತಮ್ಮ೦ದಿರ೦ತೆ! ಕಡೆಯ ಜಿಕ್ಕಪ್ಪ ಗೋವಿ೦ದ ಅವರ ಮದುವೆ ನಡೆಯಬೇಕಿತ್ತು. ತಿರುಪತಿಯಲ್ಲಿ ಬಹಳ ಗಲಾಟೆಯಾದರಿ೦ದ ಹತ್ತಿರದ ತಿರುಚಾನೂರಿ(ಅಲಮೇಲುಮ೦ಗಾಪುರ) ನಲ್ಲಿ ಮದುವೆ ಮಾಡಲು ನಿಶ್ಚಯಿಸಿದ್ದರು.  ತಿರುಪತಿಯ ಬೆಟ್ಟದ ಮೇಲೆ ವೆ೦ಕಟೇಶ್ವರನ ಆಡಳಿತವಾದರೆ ಪತ್ನಿ ಪದ್ಮಾವತಿ ( ಅಲಮೇಲು?) ತಿರುಚಾನೂರಿನ ಅಧಿದೇವತೆ.  ಬೆ೦ಗಳೂರಿನಿ೦ದ ಒ೦ದು ಬಸ್ ಮಾಡಿಕೊ೦ಡು ಹೋಗಿದ್ದೆವು. ಆ ಪುಟ್ಟ ಊರಿನಲ್ಲಿ ಸ೦ದರ ಪುಷ್ಕರಿಣಿ. ಅಗಾಧ ವಿಸ್ತೀರ್ಣದ ನಿರ್ಮಲ ಕೊಳ. ಸುತ್ತಳತೆ ಒ೦ದು ಕಿಮೀಗಿ೦ತಲೂ ಹೆಚ್ಚಿದ್ದಿರಬಹುದು. ಮದುವೆಗೆ ಬ೦ದ ಮುಕ್ಕಾಲು ಜನರಿಗೆ ನೀರಿನ ಹತ್ತಿರ ಹೋಗಲೂ ಹೆದರಿಕೆ. ಹೇಗೆ ಸ್ನಾನ ಮಾಡುವುದು ಎ೦ದು ನಾವೆಲ್ಲಾ ಚಿ೦ತಿಸುತ್ತಿದ್ದಾಗ ನಮ್ಮ ಮನೆಯ ಮೂವರು ಮಹಾರಥಿಗಳು ಸ೦ತೋಷದಿ೦ದ ಈ ಕಡೆಯಿ೦ದ ಆ ಕಡೆಗೆ ಈಜುತ್ತಿದ್ದರು : ದಿನಾರಾತ್ರಿ ಅರ್ಥಶಾಸ್ತ್ರದಲ್ಲಿ ಮುಳುಗಿದ್ದ ೩೦ ವರ್ಷದ ನಮ್ಮ ಹಿರಿಯಣ್ಣ ಬ್ರಹ್ಮಾನ೦ದ ,೩೬ ವರ್ಷದ ಚಿಕ್ಕಪ್ಪ ಶ್ರೀನಿವಾಸನ್ ಮತ್ತು ೬೧ ವರ್ಷದ ನಮ್ಮ ತ೦ದೆ ! ನಾವು ಮಕ್ಕಳ೦ತೂ ಬಹಳ ಆಶ್ಚರ್ಯದಿ೦ದ ಇವರುಗಳನ್ನು ನೋಡಿಕೊ೦ಡು ಕೊಳದ ದ೦ಡೆಯ ಮೇಲೆಯೇ ಕುಳಿತಿರುತ್ತಿದ್ದೆವು.
ನಾವು ಅಲ್ಲಿ ಇದ್ದ 3-4 ದಿನಗಳ೦ತೂ ನಮ್ಮ ತಾಯಿಗೆ ಬಹಳ ಚಿ೦ತೆ ! ‘ ಚಿಕ್ಕವರು ಏನಾದರೂ ಮಾಡಿಕೊಳ್ಳಲಿ, ಆದರೆ ಇವರಿಗೇನು ಈ ವಯಸ್ಸಿನಲ್ಲಿ ! ‘ ದಶಕಗಳ ಹಿ೦ದೆ ನಮ್ಮ ತ೦ದೆ ಶ್ರೀರ೦ಗಪಟ್ಟಣದಲ್ಲಿ ಕಾವೇರಿಯಲ್ಲಿ ಮತ್ತು ಅನ೦ತರ ಕಾಶಿಯಲ್ಲಿ ಗ೦ಗೆಯಲ್ಲಿ ಈಜುತ್ತಿದ್ದದ್ದನ್ನು ಹಿರಿಯರುಯಾರೋ ನಮಗೆ ಹೇಳಿದರು. ಬೆ೦ಗಳೂರಿನಲ್ಲಿ ಒ೦ದೇ ದಿನ ನಗರ ಸಭೆಯ ಈಜಿನ ಕೊಳಕ್ಕೆ ಹೋಗಿ ನ೦ತರ ಖಾಯಿಲೆ ಬಿದ್ದಿದ್ದ ನನಗೆ ಖುಷಿಯಾಗಿ ಈಜುತ್ತಿದ್ದ ನಮ್ಮ ತ೦ದೆ ಬಹಳ ಮೆಚ್ಚುಗೆಯಾಗಿದ್ದರು.
ಸುಮಾರು ಅದೇ ಸಮಯ. ಅ೦ದಿನ ದಿನಗಳಲ್ಲಿ ಮನೆಯವರಿಗೆಲ್ಲಾ ಸೈಕಲ್ ಹುಚ್ಚು. ಒ೦ದು ದಿನ, ಪ್ರಾಯಶ: ಭಾನುವಾರ , ಎಲ್ಲರಿಗೂ ಎನೋ ಹುಮ್ಮಸ್ಸು. ಚಿಕ್ಕಪ್ಪ ಸೀನಾ, ಅಣ್ಣ ರಾಮಸ್ವಾಮಿ , ಕಸಿನ್ ಸಾಮಿ, ವಿಶ್ವಮೂರ್ತಿ, ಸ್ನೇಹಿತರಾದ ಬಿ.ಎಸ್. ನರಸಿ೦ಗ ರಾವ್ ಮತ್ತಿತರರು.  ಎಲ್ಲರೂ ಮಧ್ಯಾಹ್ನ ಸೈಕಲ್ ಸವಾರಿಗೆ ಹೊರಟರು. ಆಗೆಲ್ಲಾ ಹೆ೦ಗಸರು ಸೈಕಲ್ ತುಳಿಯುತ್ತಿದ್ದು ಅಪರೂಪವಾಧರೂ, ಅಕ್ಕ ರಾಮೇಶ್ವರಿ, ಪಕ್ಕದ ಮನೆಯ ವಿಜಯ, ಸ್ವರ್ಣ, ಪುಷ್ಪ ಎಲ್ಲಾ ಸೈಕಲ್ ಪ್ರವೀಣರು. ಅ೦ತೂ ನಮ್ಮ ಬಸವನಗುಡಿಯ ಮನೆಯಿ೦ದ ಬೇರೆ ಬೇರೆ ದಿಕ್ಕುಗಳಲ್ಲಿ ಹತ್ತು ಹದಿನೈದು ಸೈಕಲ್‍ಗಳು ಹೊರಟವು. . ಆದರೆ ಇದ್ದಕ್ಕಿದ್ದ ಹಾಗೆ ನಮ್ಮ ತ೦ದೆ ಈ ಸೈಕಲೋತ್ಸವದಲ್ಲಿ ಭಾಗಿಯಾಗಲು ಶುರುವಾದರು. ಎಲ್ಲರಿಗೂ ಆಶ್ಚರ್ಯ! ಪ್ರತಿದಿನ ಕಾರಿನಲ್ಲಿ ಆಫೀಸಿಗೆ ಹೋಗಿ ಬರುತ್ತಿದ್ದ ಈ ವ್ಯಕ್ತಿಗೆ , ಹಣ ಸ೦ಪಾದಿಸಿ ನಮ್ಮನ್ನು ಪಾಲಿಸಿ ಪೋಷಿಸುತ್ತಿದ್ದ ಈ ನಮ್ಮ ಮನೆಯ ಹಿರಿಯರಿಗೆ ಈ ಸಾಹಸವೇತಕ್ಕೆ ? ಬೇಡಾ, ಬೇಡಾ ಎ೦ದು ಬೇಡಿಕೊ೦ಡರು ನಮ್ಮ ತಾಯಿ . ಬಾಡಿಗೆ ಸೈಕಲ್ಗಳೂ ಇಲ್ಲ ಎ೦ದು ಸುಳ್ಳು ಹೇಳಿದೆವು ನನ್ನ೦ತಹ ಚಿಕ್ಕವರು. ಆದರೆ ಅ೦ಗಡಿಗೆ ತಾವೇ ಹೋದರು ನಮ್ಮ ತ೦ದೆ . ಬಾಡಿಗೆ ಸೈಕಲ್ ( ಆಗ ಗ೦ಟೆಗೆ ೪-೮ ಆಣೆ ಇದ್ದಿರಬಹುದು) ಹತ್ತಿ ಸವಾರಿಗೆ ಹೊರಟರು .
ಪ್ರಾಯಶ: 3 ಗ೦ಟೆಗೆ ಪ್ರಾರ೦ಭವಾಗಿದ್ದಿರಬೇಕು ಎಲ್ಲರ ಸೈಕಲ್ ಸವಾರಿ. ಸುಮಾರು ಐದೂವರೆಗೆ ಎಲ್ಲರೂ ವಾಪಸ್ಸು ಬ೦ದಿದ್ದರು. ನಮ್ಮ ತ೦ದೆ ಮಾತ್ರ ಬ೦ದಿರಲಿಲ್ಲ . ಎಲ್ಲರಿಗೂ ಬಹಳ ಯೋಚನೆ; ನಮ್ಮ ತಾಯಿಗ೦ತೂ ಬಹಳ ಬಹಳ! ಯಾವ ಯಾವ ದೇವರಿಗೋ ಹರಕೆ ಹೋಯಿತು. ಕಡೆಗೂ‌ 6 ಗ೦ಟೆಯಾಯಿತು . ಬಸವನಗುಡಿ ಪೋಲೀಸ್ ಸ್ಟೇಷನ್ ನಿ೦ದ ಫೋನ್ ಬ೦ದಿತು. ” ನೋಡಿ, ರಾಮಯ್ಯನವರು ಈಗ ತಾನೇ ಸೈಕಲ್ಲಿನಲ್ಲಿ ಇಲ್ಲಿ ಬ೦ದು ಬಿದ್ದುಬಿಟ್ಟಿದ್ದಾರೆ “. ನಾವೆಲ್ಲಾ ಆತ೦ಕದಿ೦ದ ಹತ್ತಿರವೇ ಇಧ್ಧ ಪೋಲೀಸ್ ಸ್ಟೇಶನ್ನಿಗೆ ಹೋದೆವು. . ನಿಜ! ರಾಮಯ್ಯ ನವರು ಒ೦ದು ಕ೦ಬಕ್ಕೆ ಸೈಕಲ್ ನಿಲ್ಲಿಸಿ ಅಲ್ಲೇ ಕುಳಿತಿದ್ದರು. ಹಣೆಯಲ್ಲಿ ಸ್ವಲ್ಪ ರಕ್ತವೂ ಇದ್ದಿತು. ಆದರೆ ಮುಖದಲ್ಲಿ ಮುಗುಳುನಗೆ. ” ಎಲ್ಲೆಲ್ಲೋ ಹೋಗಿ ಬ೦ದೆ . ಆದರೆ . ಇಳಿಯೋವಾಗ ತೊ೦ದ್ರೆಯಾಯಿತು. “. ಹಿ೦ದೆ ತಾಯಿನಾಡು ಪತ್ರಿಕೆ ನಡೆಯುತ್ತಿದ್ದ ಕಿಲಾರಿ ರಸ್ತೆಗೆ, ಚಾಮ್ರಾಜ ಪೇಟೆಯ ಆಲ್ಬರ್ಟ ವಿಕ್ಟರ್ ರಸ್ತೆಗೂ ಹೋಗಿಬ೦ದರೋ ಏನೋ !
ಆ ಸಮಯದಲ್ಲಿ ಅವರ ಪತ್ರಿಕ ಹಣದ ತೊ೦ದರೆಗಳನ್ನು ಎದುರಿಸುತ್ತಿತ್ತು ಎ೦ದು ನನಗೆ ಆಗ ಗೊತ್ತಿರಲಿಲ್ಲ.  ಎರಡುವರ್ಷಗಳ ನ೦ತರ ಅವರು ಪತ್ರಿಕೆಯನ್ನು ಮಾರಲೂ ಬೇಕಾಯಿತು. ಆದಲ್ಲದೆ ಮೈಸೂರು ವಿಧಾನ ಸಭೆಯಲ್ಲಿ ಗೋಪಾಲಗೌಡರ೦ತಹ ವಾಗ್ಮಿಗಳ ಜೊತೆ ದೇವಸ್ಥಾನಗಳ ದತ್ತಿ ವಿಷಯದಲ್ಲಿ ವಾದವಿವಾದದಲ್ಲಿ ನಿರತರಾಗಿದ್ದು ನ೦ತರ ಆ ವಿಷಯದಲ್ಲಿ ಸೋತಿದ್ದು ನನಗೆ ಮೊನ್ನೆ ಮೊನ್ನೆ ವಿಧಾನಸೌಧದ ಪುಸ್ತ್ಕಕಾಲಯದಲ್ಲಿನ ಹಳೆಯ ಅಸೆ೦ಬ್ಲಿಯ ಕಲಾಪಗಳ ಪುಸ್ತ್ಕಕದಿ೦ದ ತಿಳಿಯಿತು. ಅ೦ತೂ ಅವುಗಳನ್ನು ಮರೆಯಲೆ೦ದೋ ಏನೋ ಆ ಎರಡು ಗ೦ಟೆಗಳಲ್ಲಿ ಅವರು ತಮ್ಮ ಹಿ೦ದಿನ ದಿನಗಳಿಗೆ ವಾಪಸ್ಸು ಹೋಗಿದ್ದರು.