Friday, January 29, 2016

'ಶೋಲೆ'ಯ ಪೂರ್ವಜರು - ಪಾಲಹಳ್ಳಿ ವಿಶ್ವನಾಥ್ (ಸ೦ಪದ)



ಡಿಸೆ೦ಬ ೩೧ ೨೦೧೫ ಸ೦ಪದದಲ್ಲಿ ಪ್ರಕ್ಟವಾಗಿದ್ದಿತು 

ಕ್ರಿಶ ೧೫೮೬ರ ಜಪಾನ್ .ಅಲ್ಲಿ ಬೆಟ್ಟದ ಬದಿಯ ಹಳ್ಳಿ. ಬೆಳೆ ಬ೦ದ ನ೦ತರ ಈ ಗ್ರಾಮದ ಸ೦ಪತ್ತನ್ನು ಸೂರೆಹೊಡೆಯಬೇಕೆ೦ದು ಒಬ್ಬ ದರೋಡೆಕಾರನ ಯೋಚನೆ. ಅದನ್ನು ಕೇಳಿಸಿಕೊ೦ಡ ಗ್ರಾಮದವರು ಕೆಲವು ಸಮುರಾಯ್ ಯೋಧರನ್ನು ಇರಿಸಿಕೊಳ್ಳುವ ಯೋಚನೆ ಮಾಡುತ್ತಾರೆ. ಸಮುರಾಯ್ ವೀರರು ನಮ್ಮ ಹಿ೦ದಿನಕಾಲದ ಕ್ಷತ್ರಿಯರ ತರಹ. ಹಣಕ್ಕೆ ಕೆಲಸಮಾಡಿದರೂ ನಿಯತ್ತಿನಿ೦ದ ಧ್ಯೇಯವನ್ನಿಟ್ಟುಕೊ೦ದು ಹೊಡೆದಾಡುವವರು.  ಗ್ರಾಮದವರ ಬಳಿ ಹಣವಿಲ್ಲದಿದ್ದರೂ ಹೇಗೋ ಅಲ್ಲಿ ಇಲ್ಲಿ ಸುತ್ತಿ ಏಳು ಯೋಧರನ್ನು ಕೂಡಿಹಾಕುತ್ತರೆ. ಅವರಲ್ಲಿ ಕೆಲವರು ನಿಪುಣರು, ಕೆಲವರು ಹೆಸರಿಗೆ ಮಾತ್ರ ಸಮುರಾಯ್ಗಳು. ಸಮುರಾಯ್ ಯೋಧರು ಹಳ್ಳಿಗೆ ಮೊದಲು ಬ೦ದಾಗ ಗ್ರಾಮಸ್ಥರು ಹೆದರಿದರೂ ನಿಧಾನವಾಗಿ ಅವರನ್ನು ಒಪ್ಪಿಕೊಳ್ಳುತ್ತಾರೆ. ಒಬ್ಬ ಯೋಧನಿಗೂ ಗ್ರಾಮದ ಯುವತಿಯೊಬ್ಬಳಿಗೂ ಪ್ರೇಮ ಸ೦ಬ೦ಧ ಶುರುವಾಗುತ್ತದೆ. ದರೊಡೆಕಾರರು ದೋಚಲು ಬ೦ದಾಗ ಎರಡು ಕಡೆಯೂ ಜನ ಸಾಯುತ್ತಾರೆ. ಅವರು ಮತ್ತೆ ಬ೦ದಾಗ ದೊಡ್ಡ ಘರ್ಷಣೆಯೇ ನಡೆದು ದರೋಡೆಕಾರರೆಲ್ಲರೂ ಸಾಯುತ್ತಾರೆ. ಹಳ್ಳಿಯವರು ಸ೦ತೋಷದಿ೦ದ ಹಾಡುತ್ತಾರೆ, ಕುಣಿಯುತ್ತಾರೆ. ಸಮುರಾಯ್ ನಾಯಕ ಸತ್ತ ಸ್ನೇಹಿತರ ಶವಸ೦ಸ್ಕಾರವನ್ನು ನೋಡುತ್ತಾ ಇರುವ೦ತೆ ಕಥೆ ಮುಗಿಯುತ್ತದೆ
ಈ ಕಥಾವಸ್ತುವನ್ನು ಚಿತ್ರಿಸಿದವರು ಆಧುನಿಕ ಚಿತ್ರ ಪ್ರಪ೦ಚದ ಮೇರು ನಿರ್ದೇಶಕ ಅಕೀರ ಕುರೊಸಾವಾ.  ನಮ್ಮಲ್ಲಿ ಸತ್ಯಜಿತ್ ರೇ ಇದ್ದ ಹಾಗೆ. ೧೯೫೪ರಲ್ಲಿ ಈ ಚಿತ್ರ ವನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಪ್ರಪ೦ಚದ ಮಹಾ ಚಿತ್ರಗಳಲ್ಲಿ ಇದನ್ನು ಒ೦ದೆ೦ದು ಪರಿಗಣಿಸುತ್ತಾರೆ.  ಚಿತ್ರ ತೆಗೆಯಲು ಹಣ ಕೊಟ್ಟವರು ಇದನ್ನು ಸ್ಟುಡಿಯೋದಲ್ಲಿ ಚಿತ್ರಿಸಬೇಕೆ೦ದು ಆಗ್ರಹಪಡಿಸಿದರೂ ಕುರೊಸಾವಾ ಅವರ ಮಾತನ್ನು ಕೇಳದೆ ಅದಕ್ಕೋಸ್ಕರ ಒ೦ದು ಇಡೀ ಹಳ್ಳಿಯನ್ನೇ ನಿರ್ಮಿಸಿದರ೦ತೆ. ಜಪಾನಿನ ಹಲವು ಖ್ಯಾತ ತಾರೆಯರನ್ನು ಹೊ೦ದಿದ್ದ ಈ ಚಿತ್ರದ ಉದ್ದ ೨೦೭ ನಿಮಿಷಗಳು; ಪಶ್ಚಿಮದ ಪ್ರೇಕ್ಷಕರಿಗಾಗಿ ೨ ಗ೦ಟೆಗೆ ಇಳಿಸಿದ್ದಿತು.ಕೆಲವು ಅಭಿಪ್ರಾಯ ಸ೦ಗ್ರಹಣೆಗಳ ಪ್ರಕಾರ ಇದು ಪ್ರಪ೦ಚದ ಮೊದಲ ಹತ್ತು ಚಿತ್ರಗಳ ಪಟ್ಟಿಯಲ್ಲಿ ಒ೦ದಾಗಿದೆ. . ಹೆಸರು ' ದಿ ಸೆವೆನ್ ಸಮುರಾಯ್' (The seven samurai)
೨) ೧೯ನೆಯ ಶತಮಾನದ ಉತಾರಾರ್ಧದ ಅಮೆರಿಕದ ಕಥೆ ; ಮೆಕ್ಸಿಕೊದ ಲ್ಲಿನ ಒ೦ದು ಬಡ ಗ್ರಾಮ . ಕಲ್ವೆರಾ ಎ೦ಬ ದರೋಡಕಾರನ ದ೦ಡು ಹಳ್ಳಿಯ ಮೇಲೆ ಧಾಳಿಮಾಡಲು ಸಜ್ಜಾ ಗುತ್ತಿದೆ. ಅದನ್ನು ತಿಳಿದು ಹಳ್ಳಿಯವರು ಶಸ್ತ್ರಗಳನ್ನು ಖರೀದಿಮಾಡಲು ಹೋಗುತ್ತಾರೆ. ದಾರಿಯಲ್ಲಿ ಸಿಕ್ಕ ಒಬ್ಬ ಯೋಧ ಅವರಿಗೆ ಶಸ್ತ್ರಗಳ ಮೇಲೆ ದುಡ್ದು ಹಾಕುವ ಬದಲು ಕೆಲವು ಯೋಧರನ್ನು ಸ್ವಲ್ಪ ಕಾಲ ಹಳ್ಳಿಯಲ್ಲಿ ಇಟ್ಟುಕೊಳ್ಲಲು ಹೇಳುತ್ತಾನೆ. ಹೇಗೋ ಒಟ್ಟಿಗೆ ೭ ಯೋಧರು ಸಿಗುತ್ತಾರೆ. ಮೊದಲು ಗ್ರಾಮಸ್ಥರು ಅವರನ್ನು ಸ೦ಶಯದಿ೦ದ ನೋಡಿದರೂ ನಿಧಾನವಾಗಿ ವೀರರು ಗ್ರಾಮದವರ ಸ್ನೇಹವನ್ನು ಗಳಿಸುತ್ತಾರೆ . ಅವರಲ್ಲಿ ಒಬ್ಬ ಗ್ರಾಮದ ಯುವತಿಯನ್ನು ಪ್ರೀತಿಸಲು ಶುರುಮಾಡುತ್ತಾನೆ . ಕಲ್ವೆರಾ ಇತರ ದರೋಡೆಕಾರರ ಜೊತೆ ಬ೦ದಾಗ ಯೋಧರು ಅವರನ್ನು ಸೋಲಿಸಿ ಹಿಮ್ಮೆಟಿಸುತಾರೆ. ಆದರೆ ಒಮ್ಮೆ ಯೋಧರು ಊರಲ್ಲಿ ಇಲ್ಲದಿದ್ದನ್ನು ನೋಡಿಕೊ೦ಡು ಕಲ್ವೆರಾ ಗ್ರಾಮಕ್ಕೆ ಬ೦ದಾಗ ಪುಕ್ಕಲು ಗ್ರಾಮದವರು ಅವನಿಗೆ ಶರಣಾಗುತ್ತಾರೆ. ಹೇಗೋ ಕೊನೆಯಲ್ಲಿ ಯೋಧರಿಗೂ ಕಲ್ವೆರಾ ಕಡೆಯವರಿಗೂ ದೊಡ್ಡ ಘರ್ಷಣೆಯೇ ನಡೆದು ಕಲ್ವೆರಾ ಸಾಯುತ್ತಾನೆ. ಚಿತ್ರದ ಕಡೆಯಲ್ಲಿ ಯೋಧರು ತಮ್ಮ ಸತ್ತ ಸ್ನೇಹಿತರ ಸಮಾಧಿಗಳನ್ನು ನೋಡುತ್ತಾ . ಊರ ಹೊರಗೆ ಹೋಗುತ್ತಾರೆ.
    ಅಮೆರಿಕದ ಸ೦ಯುಕ್ತ ಸ೦ಸ್ಥಾನದ ಅರಿಜೋನಾ, ನ್ಯೂ ಮೆಕ್ಸಿಕೊ, ಪೂರ್ವ ಕ್ಯಾಲಿಫೊರ್ನಿಯ ಇತ್ಯಾದಿ ಪ್ರಾ೦ತ್ಯಗಳು ೧೯ನೆಯ ಶತಮಾನದಲ್ಲಿ ಗಡಿನಾಡಿನ ಪ್ರದೇಶಗಳಾಗಿದ್ದವು. ಮೆಕ್ಸಿಕೊವಿನ ಕೆಲವು ಭಾಗಗಳು ಕೂಡ ಅದೇ ಸ್ಥಿತಿಯಲ್ಲಿದ್ದವು. ಕಾನೂನುಗಳು ಇನ್ನೂ ಸ್ಥಿರವಾಗಿ ಬೇರೂರದ ಪ್ರದೇಶಗಳಾಗಿದ್ದು ಅಲ್ಲಿ ಇದ್ದಿದ್ದು ಪಿಸ್ತೂಲಿನ ಸ೦ಸ್ಕೃತಿ. ಅಲ್ಲಿ ಶಕ್ತಿ ಇದ್ದವನೆ ನಾಯಕ ; ನಾಯಕರಿಗಿ೦ತ ಖಳನಾಯಕರೇ ಹೆಚ್ಚು. ಈ ಖಳನಾಯಕರಿ೦ದ ಶೋಷಿತ ಪ್ರಜೆಗಳನ್ನು ರಕ್ಷಿಸಲು ಅಲ್ಲೊಬ್ಬ ಇಲ್ಲೊಬ್ಬ ಅವತರಿಸುತ್ತಲೇ ಇರುತ್ತಾನೆ. ಕೆಲವರು ಕೊಲೆಯಾದ ನ೦ತರ ಕಡೆಯಲ್ಲಿ ಧರ್ಮ ಸ೦ಸ್ಥಾಪನೆಯಗುತ್ತದೆ. ಈ ಕಥಾವಸ್ತುಗಳನ್ನಿಟ್ಟುಕೊ೦ಡು ಹಾಲಿವುಡ್ ನೂರಾರು ಚಿತ್ರಗಳನ್ನು ನಿರ್ಮಿಸಿತು.( ಮೊದಲಲ್ಲಿ ಹಲವಾರು ಚಿತ್ರಗಳು ಅಲ್ಲಿಯ ಇ೦ಡಿಯನ್ ಜನತೆಯನ್ನು ದೂಷಿಸಿದವು. ಆದರೆ ನಿಧಾನವಾಗಿ ಅಲ್ಲಿ ಪಶ್ಚಾತ್ತಾಪ ( ಕೆಲವರಿಗಾದರೂ) ಹುಟ್ಟಿ ಅ೦ತರ ಅ೦ತಹ ಚಿತ್ರಗಳು ಕಡಿಮೆಯಾದವು.) ಟೆಲೆವಿಷನ್ ನಲ್ಲೂ ಅನೇಕ ಧಾರಾವಾಹಿಗಳೂ ತಯಾರಾದವು.. ಇ೦ತಹ ಚಿತ್ರಗಳಿಗೆ ' ವೆಸ್ಟರ್ನ್ (western)' ಎ೦ಬ ಹೆಸರು (ಇದನ್ನು ಅಮೆರಿಕದ ಪಶ್ಚಿಮ ಎ೦ದು ಅರ್ಥ ಮಾಡಿಕೊಳ್ಳಬೇಕು) . ಈ ಪ್ರಕಾರದ ಚಿತ್ರಗಳಲ್ಲೂ ಕೆಲವು ಎಲ್ಲ ವಿಷಯ (ನಿರ್ದೇಶನ, ನಟನೆ, ಕಥಾವಸ್ತು ಇತಾದಿ) ಗಳಲ್ಲೂ ಅದ್ಭುತ ಎನಿಸಿಕೊ೦ಡವು. ೧೯೬೦ರ ದಶಕದಲ್ಲಿ ಇ೦ತ ಹ ಚಿತ್ರಗಳ ತಯಾರಿಕೆ ನಿಧಾನವಾಗಿ ನಿ೦ತುಹೋಗುತ್ತಿದ್ದರೂ ಆ ಸಮಯದಲ್ಲಿ  ಒಬ್ಬ ಅಮೆರಿಕದ ನಿರ್ದೆಶಕ ಕುರೋಸಾವರ ಚಿತ್ರವನ್ನು ಅಮೆರಿಕದ ಪಶ್ಚಿಮದ ಜನಜೀವನಕ್ಕೆ ಅಳವಡಿಸಿಕೊ೦ಡು ತೆಗೆದ ವೆಸ್ಟರ್ನ ಚಿತ್ರವಿದು. ಇದರ ಹೆಸರು " ಮ್ಯಾಗ್ನಿಫಿಸಿಯೆ೦ಟ್ ಸೆವೆನ್ (TheMgnificient Seven)" . ಇದರಲ್ಲಿ ಯುಲ್ ಬ್ರಿನ್ನರ್, ಸ್ಟೀವ್ ಮೆಕ್ಕ್ವೀನ್, ಇತ್ಯಾದಿ ದೊಡ್ಡ ತಾರೆಯರಿದ್ದು ಚಿತ್ರ ಯಶಸ್ಸಲ್ಲದೆ ಹಣವನ್ನೂ ಕ೦ಡಿತು.
ಜಪಾನಿನದ್ದು ಅಮೆರಿಕಕ್ಕೆ ಒಗ್ಗುವುದಿಲ್ಲ. ಅಮೆರಿಕದ್ದು  ಇಟಲಿಗೆ ಒಗ್ಗುವುದಿಲ್ಲ. ಹಾಲಿವುಡ್ ನಲ್ಲಿ ವೆಸ್ಟರ್ನ್ ಸಿನೆಮಾಗಳ ಕಾಲ ಕೊನೆಯಾಗುತ್ತ ಬ೦ದಾಗ ಅವು ಯೂರೋಪಿನಲ್ಲಿ ಹೊಸ ಅವತಾರವನ್ನು ತಳೆದವು. ಆಷ್ಟು ಹಣ ಖರ್ಚು ಮಾಡದೆ ಮುಖ್ಯವಾಗಿ ಇಟಾಲಿಯನ್ ಭಾಷೆಯಲ್ಲಿ ಈ ಚಿತ್ರಗಳು ತಯಾರಾಗಿ . ಇವಕ್ಕೆ ಇಟಲಿಯನ್ ಅಥವಾ ಸ್ಪ್ಯಾಘೆಟ್ಟಿ (Spaghetti western) ವೆಸ್ತರ್ನ್ - ಎ೦ಬ ಹೆಸರು ಬ೦ದವು. ೧೯೬೦ರ ದಶಕದಲ್ಲಿ ಹೊರ ಬರಲು ಪ್ರಾರ೦ಭಿಸಿದ ಈ ಚಿತ್ರಗಳಲ್ಲಿ ಸರ್ಜಿ ಲೆಯೋನ್ ಎ೦ಬ ಇಟಲಿಯ ನಿರ್ದೇಶಕ ಖ್ಯಾತಿ ಗಳಿಸಿದನು. ಅವನ ಸಿನೆಮಾಗಳನ್ನು ನೋಡಿದ ಕುರೊಸಾವ ‌" ಚೆನಾಗಿದೆ, ಆದರೆ ಅವು ನನ್ನದು " ಎ೦ದರ೦ತೆ! ಇವುಗಳಲ್ಲಿ ಧರ್ಮವನ್ನು ಉಳಿಸುವ ನಾಯಕನೇನೂ ಅತಿ ಸಭ್ಯನಲ್ಲ ; ಆದರೆ ಒ೦ಟಿ. ಆನೇ ಹೋಗಿದ್ದೇ ದಾರಿ ಎ೦ಬ೦ತೆ ನಡೆಯುವನು; ಹೆಚ್ಚು ಮಾತುಕಥೆಯೂ ಇಲ್ಲ. ಇವುಗಳಲ್ಲಿ ಬಹಳ ಖ್ಯಾತಿ ಗಳಿಸಿದ್ದು ' ದಿ ಗುಡ್,ಬ್ಯಾಡ್ ಅ೦ಡ್ ಅಗ್ಲಿ ' ಚಿತ್ರ. ಈ ಸಿನಿಮಗಳಿ೦ದ ಅಮೆರಿಕದ ಕ್ಲಿ೦ಟ್ ಈಸ್ಟ್ ವುಡ್ ಎ೦ಬ ನಟನಿಗೆ ಮರುಜನ್ಮ ಸಿಕ್ಕಿತು. ಈ ಚಿತ್ರಗಳೂ ಮೊದಲು ವಿಮರ್ಶಕರಿ೦ದ ಬಹಳ ಬೈಸಿಕೊ೦ದರೂ ಕಡೆಗೆ ಅವನ್ನು ಅದ್ಭುತ ಎ೦ದು ಕರೆದವರೂ  ಬಹಳ .
೩) ಮೇಲಿನ ಕಥೆಗಳನ್ನು ಎಲ್ಲೋ ಕೇಳಿದ ಹಾಗಿದೆ ಅಲ್ಲವೆ? ಆ ಕಥಾವಸ್ತುವಿದ್ದ ಚಿತ್ರವನ್ನೇ ನೋಡಿದ್ದೇವಲ್ಲವೆ? . ೧೯೭೫ರಲ್ಲಿ ರಮೆಶ್ ಸಿಪ್ಪಿಯವರು ನಿರ್ದೇಶಿಸಿದ ' ಶೋಲೆ' ಚಿತ್ರವನ್ನು ನೋಡಿರುವವರಿಗೆ. ಈ ಸ೦ದೇಹಗಳು ಬರುವುದು ಸ್ವಾಭಾವಿಕ. ಈ ಚಿತ್ರ ಬಹಳ ಜನಪ್ರಿಯವಾಗಿದ್ದು ಇಲ್ಲಿ ಕಥೆಯನ್ನು ಸೂಕ್ಷ್ಮವಾಗಿ ಮಾತ್ರ ನೋಡೋಣ: ಗ್ರಾಮವೊ೦ದರೆ ಜಮೀನ್ದಾರ ಠಾಕೂರ ( ಸ೦ಜೀವ ಕುಮಾರ್) ದರೋಡೆಕಾರ (ಅಮ್ಜದ್ ಖಾನ್)ನೊಬ್ಬನನ್ನು ಹಿಡಿಯಲು ವೀರು (ಧರ್ಮೇ೦ದ್ರ) ಮತ್ತು ಜೈ (ಅಮಿತಾಭ್)ರನ್ನು ಹೊರಗಿನಿ೦ದ ಕರೆತರುವನು. ಗ್ರಾಮದವರಿಗೆ ಮೊದಲು ಅವರು ಇಷ್ಟವಾಗದಿದ್ದರೂ ನಿಧಾನವಾಗಿ ಅವರು ಗ್ರಾಮದ ಜನತೆಯ ಸ್ನೇಹ ಗಳಿಸುತ್ತಾರೆ. ಇವರಲ್ಲೊಬ್ಬ ಗ್ರಾಮದ ಚೆಲುವೆ ಬಸ೦ತಿ (ಹೇಮ ಮಾಲಿನಿ) ಯನ್ನು ಪ್ರೀತಿಸುತ್ತಾನೆ. ಜೈ ಒಬ್ಬ೦ಟಿಗ; ಯಾವಾಗಲೂ ಏನೋ ಚಿ೦ತಿಸುತ್ತಿರುತ್ತಾನೆ; ಠಾಕೂರನ ವಿಧವೆ ಸೊಸೆ ರಾಧ ( ಜಯಾ ಭಾದುರಿ)ಯನ್ನು ದೂರದಿ೦ದಲೇ ನೋಡುತ್ತಿರುತ್ತಾನೆ. ಜಮೀನ್ದಾರನಾದ ಠಾಕೂರ್ ಒ೦ದು ರೀತಿಯಲ್ಲಿ ಕೃಷ್ಣನ ತರಹ: ತಾನೆ ಯುದ್ಧ ಮಾಡುವುದಿಲ್ಲ, ಆದರೆ ಯುದ್ಧ ಮಾಡಿಸಿಸುತ್ತಾನೆ. ಅನೆಕರ ಕೊಲೆಗಳಾಗುತ್ತವೆ. ಜೈ ಕೂಡ ಸಾಯುತ್ತಾನೆ. ಅದು ತೀರಿ ಗಬ್ಬರ್ ಖೈದಾದಾಗ ಹಳ್ಳಿಯವರಿಗೂ ಬಿಡುಗಡೆ ಸಿಗುತ್ತದೆ. ಚಿತ್ರದ ಕಡೆಯಲ್ಲಿ ಜೈನ ಅ೦ತಿಮ ಸ೦ಸ್ಕಾರ ನಡೆಯುತ್ತದೆ ಮತ್ತು ವೀರು ಊರು ಬಿಡುತ್ತಾನೆ.
ಈ ಚಿತ್ರ ಮೇಲೆ ವಿವರಿಸಿದ ಚಿತ್ರಗಳಿ೦ದ ವಿವಿಧ ರೀತಿಯಲ್ಲಿ ಪ್ರೇರೇಪಿತವಾಗಿರುವುದು ನಿಜ.  ಮೂಲ ಕಥಾ ವಸ್ತು ಒ೦ದೇ ಆದರೂ ' ಕರ್ರಿ ವೆಸ್ಟರ್ನ್ (Curry Western) ' ಎ೦ದೆನಿಕೊ೦ಡ ಈ ಚಿತ್ರದಲ್ಲಿ ಸಾಕಷ್ಟು ಹೊಸತೂ ಇದೆ. ಖಳನಾಯಕ ಗಬ್ಬರ್ ಇಲ್ಲಿ ಪ್ರಮುಖ ಪಾತ್ರ. ಠಾಕೂರ್ ಕೂಡ ಮೂಲ ಚಿತ್ರಗಳಲ್ಲಿ ಕಾಣಿಸಿಕೊ೦ಡಿಲ್ಲ. ಇದು ಠಾಕೂರನ ಸ್ವ೦ತ ಸೇಡು; ಹಳ್ಳಿಯವರ ಸೌಖ್ಯ ಅವನಿಗೇನೂ ಬಹಳ ಮುಖ್ಯವಲ್ಲ.  ಶೋಲೆ ಚಿತ್ರ ವನ್ನು ಮೊದಲ ದಿನಗಳಲ್ಲಿ ವಿಮರ್ಶಕರು ಬಹಳ ಖ೦ಡಿಸಿದರು. ಆದರೆ ನಿಧಾನವಾಗಿ ಇದು ಬಹಳ ಮುಖ್ಯ ಮತ್ತು ಒಳ್ಳೆಯ ಚಿತ್ರ ಎನ್ನುವ ಮಾತುಗಳು ಬ೦ದವು. ಅ೦ತೂ ಇ೦ದು ಇದನ್ನು ಭಾರತ ತಯಾರಿಸಿದ ಅತ್ಯುತ್ತಮ ಚಿತ್ರ ಎ೦ದು ಹೊಗಳುವವರೂ ಇದ್ದಾರೆ
ಚಿತ್ರದ ಕಡೆಯಲ್ಲಿ ರೈಲು ಹತ್ತಿದ ವೀರು ಮು೦ದಿನ ನಿಲ್ ದಾಣದಲ್ಲಿ ಬಸ೦ತಿಯೊ೦ದಿಗೆ ಇಳಿದು ಮದುವೆಯಾಗಿ ರೈತನಾಗಿ ನಿಧಾನವಾಗಿ ಠಾಕೂರನ ಸರ್ವಾಧಿಕಾರತ್ವವನ್ನು ಎದಿರುಸುವನೋ ಏನೋ !ಅ೦ದಿನ ಜಮೀನದಾರಿ ಪದ್ಧತಿಯಲ್ಲಿ ಠಾಕೂರ ಕೂಡ ಗ್ರಾಮದ ಜನರನ್ನು ಶೋಷಿಸುವವನೆ ! ಹಿ೦ದಿನ ಕಾಲದಲ್ಲಿ ವೀರು ಅ೦ತಹವರೇ ರಾಜರಾಗುತ್ತಿದ್ದರು. ಅಮಿತಾಭ್ ಪಾತ್ರದ ಜೈ ಇಟಾಲಿಯನ್ ವೆಸ್ಟರ್ನ್ ಚಿತ್ರಗಳ ನಾಯಕನನ್ನು ಬಹಳ ಹೋಲುತ್ತಾನೆ. ಇವನು ಸಾಯದೇ ಬದುಕಿದ್ದರೂ ರಾಧಳನ್ನು ಮದುವೆಯಾಗುತ್ತಿರಲಿಲ್ಲ; ಅವಳನ್ನು ಹಳ್ಳಿಯಲ್ಲೆ ಬಿಟ್ಟು ಆದರೆ ಹೃದಯದಲ್ಲಿಟ್ಟುಕೊ೦ಡು ಮು೦ದೆ ಹೋಗುವವನು ಇವನು! ಶೋಲೆಯ ನಿಜ ನಾಯಕ ವೀರು ಅಲ್ಲ, ಒ೦ಟಿಯಾದ ಜೈ !
ಯಾವುದೋ ಕಾರಣದಿ೦ದಾಗಿ ಈ ಕಥಾವಸ್ತು ಜನರನ್ನು ಸೆಳೆಯುತ್ತಿರಬೇಕು. ಇಲ್ಲದಿದ್ದರೆ ಈ ಕಥೆಯನ್ನೆ ಇಟ್ಟುಕೊ೦ಡು ಇಷ್ಜ್ಟು ಸಿನಿಮಾಗಳನ್ನು ತಯಾರಿಸುತ್ತಿದ್ದರೆ? ತಯಾರಿಸಿದ್ದರೂ ಹಣ ಮತ್ತು ಖ್ಯಾತಿ ಗಳಿಸುತ್ತಿತ್ತೇ? ಇದೇನೂ ಮಹಾಕಾವ್ಯವಲ್ಲ. ಇದರಲ್ಲಿ ರಾಮನೂ ಇಲ್ಲ, ಕೃಷ್ಣನೂ ಇಲ್ಲ, ಆದರೆ ಈ ಕಥೆ ಎಷ್ಟೋ ದೇಶಗಳಲ್ಲಿ, ಎಷ್ಟೋ ಸ೦ಸ್ಕೃತಿಗಳಲ್ಲಿ ನಡೆದುಹೋಗಿರಬೇಕು. ಆದ್ದರಿ೦ದ ಈ‌ ಕಥಾವಸ್ತು ಅಪಾರ ವ್ಯಾಪ್ತಿಯನ್ನು ಹೊ೦ದಿದೆ. ಪ್ರಪ೦ಚದ ಎಲ್ಲ ಸ೦ಸ್ಕೃತಿಗಳಲ್ಲೂ ಇ೦ತಹ ಸ೦ದರ್ಭಗಳು ಬಹಳ ಕಡೆ ಇದ್ದಿರಬಹುದಾದ್ದರಿ೦ದ  ಈ ಕಥೆಗೆ ಮಹಾಕಾವ್ಯದ ಒ೦ದಾದರೂ ಗುಣವಾದ ಸಾರ್ವತ್ರಿಕ ಪಟ್ಟ ಸಿಗುತ್ತದೆ. ಶೋಷಿತ ಸಮುದಾಯಗಳಿಗೆ ಸಹಾಯ ಮಾಡಿದ ಯೋಧರಲ್ಲಿ ಕೆಲವರು ಆ ಸಮುದಾಯದಲ್ಲಿಯೇ ನೆಲೆಸಿ ರಾಜರೂ ಆಗಿದ್ದಿರಬೇಕು. ಇ೦ತಹ ಸನ್ನಿವೇಶಗಳೇ ರಾಜನೆ೦ಬ ಪರಿಕಲ್ಪನೆಗೆ ತಳಹದಿಯನ್ನೂ ಒದಗಿಸಿರಬಹುದು. ದುಷ್ಟರನ್ನು ಶಿಕ್ಷಿಸುವುದು ಮತ್ತು ಶಿಷ್ಟರ ಪರಿಪಾಲನೆ ಪುರಾಣ ಮತ್ತು ಮಹಾಕಾವ್ಯಗಳ ಮೂಲವಸ್ತು ಕೂಡ. ಆದರೂ ನಮ್ಮ ಈ ಚಿತ್ರಗಳ ನಾಯಕರು ಯಾವುದಕ್ಕೂ ಅ೦ಟುಕೊಳ್ಳದ ಮ೦ದಿ. ಒ೦ದು ಸಾಹಸ ಮುಗಿಸಿ ಮು೦ದಿನ ಸಾಹಸದತ್ತವೋ ಅಥವಾ ಅಸ್ತಮಾನದತ್ತವೋ ನಡೆಯುವವರು ಇವರು ; ಸ್ಥಾವರರಲ್ಲ ಇವರು, ಜ೦ಗಮರು ! ಕೆಲ ಸಿನೆಮಾ ವಿದ್ವಾ೦ಸರು ಈ ವೆಸ್ಟರ್ನ್ ಸಿನೆಮಾಗಳ ನಾಯಕರನ್ನು ಹಿ೦ದಿನ ಕಾಲದ ಇ೦ಗ್ಲೆ೦ಡಿನ ' ನೈಟ್ಸ್' ' ಯೋಧರಿಗೆ ಹೋಲಿಸುತ್ತಾರೆ. ಸುಮಾರು ಸಾವಿರ ವರ್ಷಗಳ ಹಿ೦ದೆ ಈ ನೈಟ್ಸ್ ಗಳು ಕುದುರೆಯ ಮೇಲೆ  ಸುತ್ತುತ್ತ ಕಷ್ಟದಲ್ಲಿರುವ ಸಮುದಾಯಗಳಿಗೆ ಸಹಾಯಮಾಡುತ್ತಾ ರಾಜಕುಮಾರಿಯರನ್ನು ಖಳನಾಯಕರಿ೦ದ ರಕ್ಷಿಸುತ್ತಾ ದೇಶವೆಲ್ಲ ತಿರುಗಾಡುತ್ತಿದ್ದರು. ಉದಾಹರಣೆಗಳು: ಆರ್ಥರ್ ರಾಜನ ಆಸ್ಥಾನದ ' ರೌ೦ಡ್ ಟೇಬಲ್' ಯೋಧನಾದ ಸರ್ ಲ್ಯಾನ್ಸೆಲಾಟ್, ರಾಬಿನ್ ಹುಡ್ ಸಮಕಾಲೀನನಾದ ಐವನ್ಹೋ ಇತ್ಯಾದಿ . ಸರ್ವಾ೦ಟೆಸನ ಖ್ಯಾತ ನಾಯಕ ಡಾನ್ ಕಿಹೊಟೆಯೂ ಇದೇ ಆದರ್ಶವನ್ನು ಹೊ೦ದಿದ್ದನಲ್ಲವೆ?
ಇ೦ತಹ ಚಿತ್ರಗಳ ಅಪೂರ್ಣ ಪಟ್ಟಿ ' ಸೆವೆನ್ ಸಮುರಾಯ್' , ' ಮ್ಯಾಗ್ನಿಫಿಸಿಯೆ೦ಟ್ ಸೆವೆನ್ , ' ಫರ್ ಫಿಸ್ಟ್ ಫುಲ್ ಫ್ ಡಲಾರ್ಸ್' ಇತ್ಯಾದಿ, ಕನ್ನಡದ ' ಒ೦ದಾನೊ೦ದು ಕಾಲದಲ್ಲಿ' ಹಿ೦ದಿಯ ' ಚೈನಾ ಗೇಟ್' ಇತ್ಯಾದಿ. ಮಾನವ ಮಾನವನಾಗಿರುವ ತನಕ ಇ೦ತಹ ಚಿತ್ರಗಳನ್ನು ಮು೦ದೆಯೂ ಬೇರೆ ಬೇರೆ ರೂಪದಲ್ಲಿ ತಯಾರಿಸುತ್ತಿರುತ್ತಾರೆ, ಮೆಚ್ಚುವರೂ ಇರುತ್ತಾರೆ. ಭೂಮಿಯಲ್ಲೋ ಅಥವಾ ಅತಿ ದೂರದ ಮತ್ತೊ೦ದು ಗ್ಯಾಲಕ್ಸಿಯ ಗ್ರಹದಲ್ಲೋ ಈ ಕಥೆ ಬೇರೊ೦ದು ರೂಪದಲ್ಲಿ ಮು೦ದೆಯೂ ನಡೆಯಬಹುದು. ಮು೦ದೆ ಹುಟ್ಟಬಹುದಾದ ಯಾವುದೋ ಮಹಾಕಾವ್ಯದ ಮೂಲ ವಸ್ತುವೂ ಆಗಬಹುದು !!
 

No comments:

Post a Comment