Wednesday, September 28, 2016

ಶತಮಾನಪುರುಷ ಐನ್ ಸ್ಟೈನ್ ( ಪಾಲಹಳ್ಳಿ ವಿಶ್ವನಾಥ್ ) - ವಿಮರ್ಶೆ - ಗಿರೀಶ್ ವೆ೦ಕಟಸುಬ್ಬರಾವ್ (ವಿಜ್ಞಾನ ಲೋಕ -ನವೆ೦ಬರ್ ೨೦೧೬)


ಸಾಧಕರ ಆತ್ಮಚರಿತ್ರೆಯ ಓದಿನಿಂದ ನಮಗೆ ದೊರಕುವ ಪ್ರಯೋಜನಗಳು ಬಹಳಷ್ಟು. ಆ ಮಹನೀಯರು ತಮ್ಮ ಜೀವನದಲ್ಲಿ ಮಾಡಿದ ಸಾಧನೆ, ಆ ಸಾಧನೆಯಿಂದ ಜಗತ್ತಿಗಾದ ಅನುಕೂಲಗಳು, ಆ ಸಾಧನೆಯ ಹಾದಿಯಲ್ಲಿ ಅವರು ಎದುರಿಸಿದ ಕಠಿಣ ಸವಾಲುಗಳು, ಅದಕ್ಕೆ ಹಿಮ್ಮೆಟ್ಟದೇ ಮುನ್ನಡೆದ ಅವರ ಮನೋಭಾವ, ಅಮಿತ ಆತ್ಮವಿಶ್ವಾಸದಿಂದ ಕೈಗೆಟುಕಿದ ಅನುಕೂಲಗಳನ್ನೇ ಬಳಸಿಕೊಂಡು ಅದನ್ನು ಸಾಧಿಸಿದ ಪರಿ, ಅವರ ಸಾಧನೆಗೆ ಸಿಕ್ಕ ಸೂಕ್ತ ಬೆಂಬಲ, ಅದು ಅವರಿಗೆ ತಂದುಕೊಟ್ಟ ಕೀರ್ತಿ, ಹೀಗೆ ಹತ್ತು ಹಲವು ಮಾಹಿತಿಗಳ ಅಗರ ಆತ್ಮಚರಿತ್ರೆಗಳು. ಪ್ರತಿಯೊಂದು ವಿಶ್ವಪ್ರಸಿದ್ಧರ ಆತ್ಮಚರಿತ್ರೆಯೂ ಒಂದು ರೀತಿಯಲ್ಲಿ ಓದುಗರನನ್ನು ಅರಿವಿನ ಮೂಲಸೆಲೆಯನ್ನು ತೋರುವುದಷ್ಟೇ ಅಲ್ಲದೇ, ಓದುಗರರಿಗೆ ಧನಾತ್ಮಕ ಪ್ರೇರಣೆ ಮತ್ತು ಸ್ಪೂರ್ತಿಯನ್ನೂ ನೀಡುವಲ್ಲಿ ಸಫಲವಾಗುತ್ತದೆ. ಅದರಲ್ಲೂ ಜಗತ್ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೈನರನ್ನು ಅರಿಯದ ಮಂದಿ ಬಹಳ ಕಡಿಮೆಯೇ. ಭೌತಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರ ಪಡೆದ ಆಲ್ಬರ್ಟ್ ಐನ್‍ಸ್ಟೈನ್ ಎಂದರೆ ಪ
ರಮಾಣು ಬಾಂಬ್ ನಿರ್ಮಾಣಕ್ಕೆ ಸೂತ್ರ ಕಟ್ಟಿಕೊಟ್ಟವರೆಂದೂ, ಸಾಪೇಕ್ಷತಾ ಸಿದ್ಧಾಂತ(Theory of Relatvity), ಇಲ್ಲವೆ "E=mC^2 ಸಾಧಿಸಿ ತೋರಿಸಿದವರೆಂದೇ ಹೆಚ್ಚಾಗಿ ಎಲ್ಲರೂ ತಿಳಿದಿರುವುದು. ಆದರೆ ಅವರಿಗೆ ನೊಬೆಲ್ ಪ್ರಶಸ್ತಿ ತಂದುಕೊಟ್ಟದ್ದು ಅವರ "ದ್ಯುತಿ ವಿದ್ಯುತ್ ಪರಿಣಾಮ"(Photo Electric Effect) ಸಂಶೋಧನೆ ಎಂದಾಗ ಹೆಚ್ಚಿನವರಿಗೆ ಅಚ್ಚರಿಯಾಗುವುದು ಸಹಜವೆ. ಕಲಿಕೆಯ ದಿನಗಳಿಂದಲೇ ಸುಲಭ ಗ್ರಹಿಕೆಗೆ ನಿಲುಕುವುದು ಶಾಸ್ತ್ರೀಯ ಭೌತಶಾಸ್ತ್ರವೇ(Classical Physics), ಇನ್ನು ಆಧುನಿಕ ಭೌತಶಾಸ್ತ್ರ(Modern Physics) ಒಂದುರೀತಿಯಲ್ಲಿ ಸರಳ ಬೋಧನೆಗೂ, ಕಲಿಕೆಗೂ ಸಿಗದ ಕಬ್ಬಿಣದ ಕಡಲೆಯೇ ಅನ್ನಬಹುದು. ಅದಕ್ಕೇ ಏನೋ ಹೆಚ್ಚಿನಮಂದಿ ತೃಪ್ತಿಕರವಾಗಿ ಕಲಿಯಲಾರದೆ ಆಧುನಿಕ ಭೌತಶಾಸ್ತ್ರ ಉಳಿದು ಹೋಗುತ್ತದೆ. ಇಂಥಹ ತೊಡಕಿನಿಂದಲೇ ಆಲ್ಬರ್ಟ್ ಐನ್‍ಸ್ಟೈನರ ಅನ್ವೇಷಣೆಗಳು ಸಾಮಾನ್ಯರಿಗಿರಲಿ ವಿಜ್ಞಾನದ ವಿದ್ಯಾರ್ಥಿಗಳಿಗೇ ಅರಿಯಲು ಕಷ್ಟಕರವಾಗಿ ಹೋಗುತ್ತದೆ. ಇಂಥಹ ಕಠಿಣ ವಿಷಯಗಳನ್ನು ಆಸಕ್ತರು ಆಳವಾಗಿ ಅರಿಯುವಂತೆ ಮಾಡಲು ಕನ್ನಡದಲ್ಲೇ ದೊರಕುತ್ತಿರುವ ವಿಜ್ಞಾನ ಪುಸ್ತಕಗಳ ಪಾತ್ರ ಹಿರಿದು. ಐನ್‍ಸ್ಟೈನರಂತಾ ಪ್ರತಿಭಾವಂತ ವಿಜ್ಞಾನಿಯನ್ನು ಕುರಿತು ಈ ವರ್ಷ ಮುದ್ರಣಗೊಂಡ "ಶತಮಾನಪುರುಷ ಐನ್‍ಸ್ಟೈನ್" ಪುಸ್ತಕ, ವಿಶ್ವಪ್ರಸಿದ್ಧ ಐನ್‍ಸ್ಟೈನರ ಸಾಧನೆಯನ್ನು ಕೇವಲ ವಿಜ್ಞಾನಾಸಕ್ತರಿಗೋ, ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೋ ತಿಳಿಸಿಕೊಡುವುದಷ್ಟಕ್ಕೇ ಸೀಮಿತಗೊಳ್ಳದೇ ಅದನ್ನು ಜನಸಾಮಾನ್ಯರ ಬಳಿಗೆ ತರುವ ಒಂದು ಸಫಲ ಯತ್ನವೆನಿಸುತ್ತದೆ.
ಐನ್‍ಸ್ಟೈನರ ಆತ್ಮಚರಿತ್ರೆಯನ್ನು ಜಾಗತಿಕ ಮಟ್ಟದಲ್ಲಿ ೧೯೯೭ರಿಂದಲೇ ಬಹಳಷ್ಟು ಮಂದಿ ಬರೆದಿದ್ದಾರಂತೆ ಅವರಲ್ಲಿ ಆಲ್ಬ್ರೆಕ್ಟ್ ಫೋಲ್ಸಿಂಗ್, ಹಾಫ್ಮನ್ ಬಾನೆಶ್, ವಾಲ್ಟರ್ ಐಸಾಕ್ಸನ್, ಅಬ್ರಹಾಮ್ ಪಯಾಸ್, ಬ್ಯಾರಿ ಪಾರ್ಕರ್, ರಾಬರ್ಟ್ ಆಪನ್ಹೇಮರ್ ಪ್ರಮುಖರು. ಕನ್ನಡದಲ್ಲೂ ಕೆಲವು ಕೃತಿಗಳು ಮೂಡಿದೆ. ಆದರೆ, ಈ ಕೃತಿಯಲ್ಲಿ ಕಣ್ಣಾಡಿಸುತ್ತಿದಂತೆ ಅದೊಂದು ಪ್ರಖ್ಯಾತ ವಿಜ್ಞಾನಿಯೊಬ್ಬರ ಬರಿಯ ಆತ್ಮಚರಿತ್ರೆಯಲ್ಲ ಎನ್ನಿಸುವ ಭಾವನೆ ಮೂಡತೊಡಗುತ್ತದೆ. ಐನ್‍ಸ್ಟೈನರ ತಂದೆ ತಾಯಿಗಳ ಲಘು ಪರಿಚಯ, ಅವರಿಗೆ ತಮ್ಮ ಕಂದನಲ್ಲಿ ಬಾಲ್ಯದಲ್ಲೇ ಕಂಡು ಬರುವ ವಿಶಿಷ್ಟತೆ, ಆ ಬಾಲಕ ಮುಂದೆ ಸಂಗೀತದಲ್ಲಿ ಮೂಡಿಸಿಕೊಳ್ಳುವ ಆಸಕ್ತಿ. ಸಂಗೀತ ರಚನೆಯಲ್ಲಿ ತೋರಿದ್ದ ಆಸಕ್ತಿ, ಮುಂದೆ ವಿಜ್ಞಾನದತ್ತ ಹೊರಳುವಂತೆ ಮಾಡಿದ ಪ್ರೇರಣೆಯಾವುದು? ಆ ಪ್ರೇರಕರು ಯಾರು? ಶಾಲಾದಿನಗಳಲ್ಲಿ ಅದು ಹೇಗೆ ಪೊರೆಯಲ್ಪಟ್ಟಿತು? ಇತ್ಯಾದಿಗಳ ವಿವರಣೆ, ಜರ್ಮನರ ಸೈನಿಕರ ರೀತಿಯ ಧಾರ್ಷ್ಟತೆಯನ್ನು ಮೆಚ್ಚದೇ, ತರಗತಿಗಳಲ್ಲಿ ಅಲ್ಪಸಂಖ್ಯಾತ ಯುಹೂದಿಯಾಗಿ, ಒಂಟಿತನದಲ್ಲೇ ತನ್ನ ವಿಶಿಷ್ಟವಾಗಿ ರೂಪಗೊಳ್ಳುವ ವ್ಯಕ್ತಿತ್ವವನ್ನು ಐನ್‍ಸ್ಟೈನ್ ಆತ್ಮಚರಿತ್ರೆಯ ಆರಂಭದಲ್ಲಿ ಕಾಣಬಹುದು. ಮುಂದೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಕಲಿಯಲು ಪಾಲಿಟೆಕ್ನಿಕ್ ಸೇರಿ ವಿದ್ಯುತ್ ಕಾಂತತ್ವದ ಕ್ಷೇತ್ರದಲ್ಲಿ ಆತ್ಮವಿಶ್ವಾಸಗಳಿಸಿ, ಏಕತಾನತೆಗೆ ಸಿಲುಕದೆ ಸದಾ ಹೊಸತನ್ನೇ ಕಲಿಯಬಯಸುವ ಯುವಕನಾಗಿ ಪರಿವರ್ತನೆ ಹೊಂದಿ, ಅಧ್ಯಾಪಕರ ದೃಷ್ಠಿಯಲ್ಲಿ "ಕೇಳಿಸಿಕೊಳ್ಳದವ" ಎಂದೆನಿಸಿಕೊಳ್ಳುವುದು. ಸತತವಾಗಿ ಪ್ರಯತ್ನಿಸಿದರೂ ತಾವು ಬಯಸಿದ ಅಧ್ಯಾಪಕ ವೃತ್ತಿ ದೊರಕದಂತಾಗುವುದು. ಕೊನೆಗೆ ಉದರ ನಿಮಿತ್ಥಂ, ಬರ್ನ್ ನಗರದ ಹಕ್ಕುಸ್ವಾಮ್ಯ(ಪೇಟೆಂಟ್) ಕಚೇರಿಯಲ್ಲಿ ಸಾಮಾನ್ಯ ಕಾರಕೂನ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಜೋಶಿನ ಯೌವನದ ದಿನಗಳಲ್ಲಿ ಗೆಳತಿ ಮಿಲೆವಾಳಲ್ಲಿ ಚಿಗುರುವ ಮೊದಲ ಪ್ರೀತಿ, ಅದು ಅವರನ್ನು ವಿವಾಹ ಬಂಧನಕ್ಕೆ ಸಿಲುಕಿಸುವುದು. ಈ ಘಟನೆಗಳು ಆತ್ಮಚರಿತ್ರೆಯಲ್ಲಿ ಐನ್‍ಸ್ಟೈನರನ್ನು ಕ್ರಾಂತಿಕಾರಿ ಯುವಕನಾಗಿ ಬಿಂಬಿಸಿವುದನ್ನು ಕಾಣಬಹುದು. ಮುಂದೆ ಆ ಹಕ್ಕುಸ್ವಾಮ್ಯ ಕಛೇರಿಯ ಅನಾಸಕ್ತಿಕರವಾದ ನಿಯತಕ್ರಮವನ್ನಗಿಸಿಕೊಳ್ಳದೇ, ಕ್ರಿಯಾತ್ಮಕತೆಯಿಂದ ತಮ್ಮ ವಿದ್ಯುತ್ಕಾಂತೀಯ ಸಿದ್ಧಾಂತಗಳ ಪರಿಣಿತಿಯಿಂದ ಬೆಳಕು ಮತ್ತು ಶಕ್ತಿಯ ಬಗೆಗೆ ವಿಜ್ಞಾನಲೇಖನಗಳನ್ನು ಬರೆಯುತ್ತಾ ತಮ್ಮಲ್ಲಿದ್ದ ಸಂಶೋಧಕ ಪ್ರವೃತ್ತಿಯನ್ನು ಜಾಗೃತಗೊಳಿಸಿಕೊಂಡಿದ್ದು. ಸಮಾನ ಮನಸ್ಕರೊಂದಿಗೆ ನಡೆಸಿದ ಕ್ರಿಯಾತ್ಮ ಚರ್ಚೆಗಳಿಗಾಗಿ ಒಲಂಪಿಯಾ ಅಕಾಡೆಮಿ ಸ್ಥಾಪಿಸಿದ್ದು. ಮುಂದೆ ಅವರ ಲೇಖನಗಳು ೧೯೦೫ರಲ್ಲಿ ಖ್ಯಾತ ಭೌತಶಾಸ್ತ್ರದ ಪತ್ರಿಕೆ "ಆನ್ಲೇನ್ ಡರ್ ಫಿಸಿಕ್" ಪ್ರಕಟಗೊಂಡು ಜೀವನಕ್ಕೆ ತಂದು ನೀಡುವ ತಿರುವುಗಳ ವಿವರಗಳು ವೃತ್ತಿಯಲ್ಲೂ ನೈಜ ಪ್ರವೃತ್ತಿಯನ್ನು ಐನ್‍ಸ್ಟೈನರು ಮೂಡಿಸಿಕೊಂಡ ಬಗೆಯನ್ನು ತಿಳಿಸಿಕೊಡುತ್ತದೆ. ಕ್ವಾಂಟಂ ಫಿಸಿಕ್ಸ್ ಪ್ರತಿಪಾದಿಸಿದ ವಿಜ್ಞಾನಿ ಮ್ಯಾಕ್ಸ್ ಪ್ಲಾಂಕ್ ನೀಡುವ ನೆರವು ಮತ್ತು ಪ್ರೋತ್ಸಾಹಗಳು, ಕೊನೆಗೂ ತಾವು ಬಯಸಿದ್ದ ಅಧ್ಯಾಪಕ ವೃತ್ತಿ ಸಿಕ್ಕುವಂತೆ ಮಾಡಿದ್ದರ ಸೊಗಸಾದ ವಿವರಗಳು "ಛಲ ಬಿಡದವನಿಗೆ ಗೆಲುವು ಎಂದಿಗೂ ಕಟ್ಟಿಟ್ಟಬುತ್ತಿ" ಎಂದು ನಿರೂಪಿಸಿ ಓದುಗರರಲ್ಲಿ ಸ್ಪೂರ್ತಿಯ ಬುಗ್ಗೆಯುಕ್ಕಿಸುತ್ತದೆ.

ಪೇಟೆಂಟ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾಗ ಐನ್‍ಸ್ಟೈನರು ಪ್ರತಿಪಾದಿಸಿದ ದ್ಯುತಿ ವಿದ್ಯುತ್ ಪರಿಣಾಮ, ಅವರ ಪ್ರಖ್ಯಾತ ಸಮೀಕರಣ E=mC^2 , ಬೆಳಕಿನ ವೇಗವನ್ನು ಯಾವುದೂ ಮೀರಲಾಗದು ಏಕೆ? ಅವಳಿಗಳಲ್ಲೋರ್ವ ಬೆಳಕಿನವೇಗದಲ್ಲಿ ಚಲಿಸಿ ಭುವಿಗೆ ಮರಳಿದಾಗ, ಭುವಿಯಲ್ಲೇ ಉಳಿದಿದ್ದ ಇನ್ನೊಬ್ಬನ ಜೊತೆಗಿನ ಅವನ ವಯಸ್ಸಿನ ವಿರೋಧಾಭಾಸ (Twin Paradox), ಎಲ್ಲೆಡೆಯೂ ಕಾಲದ ಹರಿವು ಏಕರೀತಿಯಲ್ಲೇ ಇದೆ ಎಂದು ನಂಬಿರುವಾಗ, ದೇಶ-ಕಾಲಮಾನಗಳು ಬೆಸೆಗೊಳ್ಳುವ ಬಗೆಯ ಚಿತ್ರಣದ ವಿವರ, ಈ ನಿಟ್ಟಿನಲ್ಲಿ ನಡೆಸಿದ ಇನ್ನಷ್ಟು ಪ್ರಯೋಗಗಳ ವಿವರಗಳು ಆಧುನಿಕ ಭೌತಶಾಸ್ತ್ರದಲ್ಲಿ ನಾವು ಅಸ್ಪಷ್ಟವಾಗಿ ಓದಿಮರೆತಿರುವ ಸಾಪೇಕ್ಷತಾ ಸಿದ್ಧಾಂತದ ಹುರುಳನ್ನು ಸರಳ ಸುಲಲಿತವಾಗಿ ತಿಳಿಸಿಕೊಡುತ್ತದೆ. ಐನ್‍ಸ್ಟೈನ್ ಪ್ರತಿಪಾದಿಸುವ ಇನ್ನೊಂದು ಸಿದ್ಧಾಂತ ಆಕಾಶಕಾಯಗಳ ದ್ರವ್ಯರಾಶಿ ಸುತ್ತಲಿನ ವ್ಯೂಮಕಾಲದ ಮೇಲೆ ಬೀರುವ "ಸಾರ್ವತ್ರಿಕ ಸಾಪೇಕ್ಷತೆ". ಅದನ್ನು ಪ್ರಯೋಗಗಳ ಮೂಲಕ ನಿರೂಪಿಸುವ ಯತ್ನಗಳು, ಕೊನೆಗೂ ಅದನ್ನು ಪ್ರಾತ್ಯಕ್ಷಿಕವಾಗಿ ಪರಿಶೀಲಿಸಲು ನಿಸರ್ಗವೇ ಕೊಡುವ ಅವಕಾಶ, ಅದರಲ್ಲಿ ಐನ್‍ಸ್ಟೈನರ ಸಿದ್ಧಾಂತ ಸಾಬೀತಾದ ಬಗೆ, ಅದು ಅವರಿಗೆ ತಂದುಕೊಡುವ ವಿಶ್ವವಿಖ್ಯಾತಿ ಇವೆಲ್ಲವನ್ನೂ ವಿವರಿಸಿರುವ ಬಗೆಯಂತೂ ಈ ಪುಸ್ತಕದ ಹೈಲೈಟ್ ಅನಿಸುತ್ತದೆ.

ತಮ್ಮ ಸಮಕಾಲೀನ ಅನೇಕ ವಿಜ್ಞಾನಿಗಳೊಂದಿಗೆ ಐನ್‍ಸ್ಟೈನರು ನಡೆಸಿದ ಒಡನಾಟದ ಸಮಗ್ರವಿವರಗಳು. ಕೆಲವು ಆ ವಿಜ್ಞಾನಿಗಳ ಕುರಿತ ಮಾಹಿತಿ, ಆತ್ಮಚರಿತ್ರೆಯನ್ನು ಕೇವಲ ಐನ್‍ಸ್ಟೈನರ ವ್ಯಕ್ತಿತ್ವಕ್ಕಷ್ಟೇ ಸೀಮಿತಗೊಳಿಸದಂತೆ ಮಾಡುತ್ತದೆ. ಇನ್ನು ಅದೇ ಕಾಲಮಾನದಲ್ಲಿ ಆರಂಭಗೊಳ್ಳುವ ಎರಡನೆಯ ಮಹಾಯುದ್ಧದ ಚಿತ್ರಣ. ಅದು ಬೀರುವ ಘೋರ ಪರಿಣಾಮಗಳಲ್ಲಿ ಒಂದಾದ ಬೌದ್ಧಿಕ ವಲಸೆ. ಆ ಮಹಾಯುದ್ಧಗಳಲ್ಲಿ ಮೇಲುಗೈ ಹೊಂದಲು ಜರ್ಮನಿ ನಡೆಸುವ ವೈಜ್ಞಾನಿಕ ಪ್ರಯೋಗಗಳ ಸುಳಿವನ್ನು ರಾಜಕೀಯ ಹಾಗೂ ಸಾಮಾಜಿಕ ಕಳಕಳಿಯನ್ನು ಹೂಂದಿದ್ದ ಸಹವಿಜ್ಞಾನಿ ಲಿಯೊ ಸಿಲಾರ್ಡರಿಂದ ಐನ್‍ಸ್ಟೈನ್ ಅರಿಯುವುದು. ಮಹಾಯುದ್ಧಕ್ಕೆ ಕಾರಣರಾದ ನಿರಂಕುಶ ಪ್ರಭೃತಿಗಳಿಗೇನಾದರೂ ಆ ಪ್ರಯೋಗಗಳಲ್ಲಿ ಸಫಲತೆ ಸಿಕ್ಕಿದರೆ ಅವರ ಕೈಮೇಲಾಗ ಬಹುದೆಂಬುದನ್ನು ತಮ್ಮ ಮುಂದಾಲೋಚನೆಯಿಂದ ಕಂಡುಕೊಳ್ಳುವ ಐನ್‍ಸ್ಟೈನ್, ಅಮೆರಿಕ ಕೂಡ ಆ ಪ್ರಯೋಗವನ್ನು ಕೈಗೆತ್ತಿಕೊಳ್ಳಬೇಕೆಂದು ಅಮೆರಿಕಾ ಅಧ್ಯಕ್ಷರಿಗೆ ತಮ್ಮ ಪತ್ರದ ಮೂಲಕ ಎಚ್ಚರಿಸುತ್ತಾರೆ. ಮುಂದೆ ಅಮೆರಿಕ ಅದನ್ನು ಅತ್ಯಂತ ರಹಸ್ಯವಾಗಿ "ಮ್ಯಾನ್ ಹಟನ್ ಪ್ರಾಜೆಕ್ಟ್" ರೂಪದಲ್ಲಿ ಕೈಗೆತ್ತಿಕೊಂಡು ಆ ಸಿದ್ಧಾಂತದಿಂದ ಅಣ್ವಸ್ತ್ರವನ್ನು ರಚಿಸಿ ಸಫಲವಾಗಿ ಪರೀಕ್ಷಿಸುತ್ತದೆ. ಬೈಜಿಕ ವಿದಳನ ಮತ್ತು ಪರಮಾಣು ಶಕ್ತಿಯ ಬಳಕೆಯ ಕುರಿತು ನೀಡುವ ಸರಳ ವಿವರಗಳು ಓದುಗರರಿಗೆ ಸ್ಪಷ್ಟ ಅರಿವನ್ನು ನೀಡುತ್ತದೆ. ಅಷ್ಟರಲ್ಲಿ ಅಣ್ವಸ್ತ್ರಗಳಿಂದ ವಿಶ್ವಕ್ಕೆ ಬರಬಹುದಾದ ಅಪಾಯಗಳನ್ನು ಕುರಿತು ಚಿಂತಿಸಿ, ಅಮೆರಿಕ ಅಧ್ಯಕ್ಷರಿಗೆ ಐನ್‍ಸ್ಟೈನ್ ಇನ್ನೊಂದು ಪತ್ರ ಬರೆದದ್ದು. ಆದರೂ ಅದನ್ನು ಮಹಾಯುದ್ಧದಲ್ಲಿ ಮುಂಚೂಣಿಯಲ್ಲಿದ್ದ ಜಪಾನನ್ನು ಬಗ್ಗು ಬಡಿಯಲು ಅಮೆರಿಕ ಕೊನೆಗೂ ಅದನ್ನು ಬಳಸಿಯೇ ಬಿಡುವುದು!! ಅದರ ಬಳಕೆಯ ಘನಘೋರ ಪರಿಣಾವನ್ನು ಕಂಡಾಗ ನಲುಗುವ ಐನ್‍ಸ್ಟೈನ್ ತಮ್ಮನ್ನೇ ತಾವು ಹಳಿದುಕೊಂಡ ಪರಿ, ಇತ್ಯಾದಿಗಳ ವಿವರವಂತೂ ಹೃದಯಸ್ಪರ್ಶಿ. ಅಣ್ವಸ್ತ್ರಗಳ ಬಳಕೆಯ ಬಗ್ಗೆ ಜಾಗತಿಕವಾಗಿ ಅರಿವು ಮೂಡಿಸುವ ಛಲ, ಅದಕ್ಕಾಗಿ ಜಗತ್ತಿನ ಎಲ್ಲ ವಿಜ್ಞಾನಿಗಳೊಂದಿಗೆ ಒಡಗೂಡಿ ಕೆಲಸಮಾಡುವ ಐನ್‍ಸ್ಟೈನ್, ಅದರ ಫಲವಾಗಿ ನಾಂದಿಯಾಗುವ ಐನ್‍ಸ್ಟೈನ್-ರಸೆಲ್ ಪ್ರಣಾಳಿಕೆ ಇವುಗಳ ವಿವರಗಳು ಓದುಗರರು ಮೆಚ್ಚುವಂತೆ ಮಾಡುತ್ತದೆ.

ಕೇವಲ ವಿಜ್ಞಾನ ಕ್ಷೇತ್ರಕಷ್ಟೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ, ಅಂದಿನ ಸಾಮಾಜಿಕ ಚಿಂತಕರಾದ ಗಾಂಧೀಜಿ, ರವೀಂದ್ರನಾಥ್ ಟಾಗೋರರ ಜೊತೆಯ ಐನ್‍ಸ್ಟೈನ್ ಒಡನಾಟ ಮತ್ತು ಸಂವಾದಗಳ ವಿವರಗಳು ಓದುಗರರಿಗೆ ಐನ್‍ಸ್ಟೈನರ ವ್ಯಕ್ತಿತ್ವವನ್ನು ಓರ್ವ ಜಾಗತಿಕ ಚಿಂತಕರಾಗಿಯೂ ಅರಿಯುವಂತೆ ಮಾಡುತ್ತದೆ. ಮುಂದೆ ಯುಹೂದಿಯರಿಗೇ ಒಂದು ಸ್ವತಂತ್ರ ರಾಷ್ಟ್ರವಾದ ಇಸ್ರೇಲ್ ನಿರ್ಮಾಣಗೊಂಡಿದ್ದು, ಅದರಲ್ಲಿ ಐನ್‍ಸ್ಟೈನರ ಪಾತ್ರ. ರಾಜಕೀಯವಾಗಿಯೂ ಮುನ್ನಡೆಸಲು ದೊರಕುವ ಮಹದವಕಾಶಗಳು. ಅದನ್ನು ಬದಿಗೊತ್ತಿ ಸಂಶೋಧನೆಗಳಲ್ಲಿಯೇ ತೊಡಗಿಕೊಳ್ಳುವ ಐನ್‍ಸ್ಟೈನ್ ಮುಂದೆ ಏಕೀಕರಣ ಸಿದ್ಧಾಂತ(Unified Theory), ಕೃಷ್ಣರಂಧ್ರಗಳನ್ನು(Black Hole)ಕುರಿತು ಸಂಶೋಧನೆ ನಡೆಸಿದ್ದರ ಲಘುವಿವರಗಳು, ವಿಧಾತ ಸುಮ್ಮನೆ ದಾಳವೆಸೆದಂತೆ ಜಗತ್ತನ್ನು ಸೃಷ್ಟಿಸುತ್ತಿಲ್ಲ ಎಂಬ ನಂಬಿಕೆಯನ್ನು ಸಾರಿದ್ದು, ಮುಂದಿನ ಪೀಳಿಗೆಯ ವಿಜ್ಞಾನಿಗಳೊಂದಿಗೆ ನಡೆದ ವೈಜ್ಞಾನಿಕ ಸಮ್ಮೇಳನ, ಐನ್‍ಸ್ಟೈನರ ಕೌಟುಂಬಿಕ ಜೀವನ, ಐನ್‍ಸ್ಟೈನ್ ನೆರೆಹೊರೆಯವರು ಕಂಡಂತೆ, ಐನ್‍ಸ್ಟೈನರ ಅಂತ್ಯ, ಇಹಲೋಕತೊರೆದರೂ ತಮ್ಮ ಅಪಾರ ಬೌದ್ಧಿಕಮಟ್ಟದಿಂದ ಗಮನ ಸೆಳೆದಿದ್ದ ಅವರ ಮೆದುಳನ್ನು ಅಭ್ಯಯಿಸಲು ಕಾಯ್ದಿಟ್ಟುಕೊಳ್ಳುವ ವೈದ್ಯನೋರ್ವನ ವಿಷಯವಂತೂ ಈ ವರೆಗೂ ಅರಿಯದ ಓದುಗರರು ಅಚ್ಚರಿಗೊಳ್ಳುವಂತೆ ಮಾಡುತ್ತದೆ.

ಗಣಿತ ಸಮೀಕರಣಗಳ ನೆರವನ್ನು ಹಿತಮಿತವಾಗಿ ಬಳಸುತ್ತಾ ಆಧುನಿಕ ಭೌತಶಾಸ್ತ್ರದ ಸಿದ್ಧಾಂತಗಳನ್ನು ಪರಿಣಾಮಕಾರಿಯಾಗಿ ತಿಳಿಸಿಕೊಡುವ ಪರಿ ಅಭಿನಂದನೀಯ. ಕೆಲವೆಡೆ ಆ ಸಮೀಕರಣ ಚಿಹ್ನೆಗಳು ಮುದ್ರಣಗೊಂಡ ರೀತಿ ಅತ್ಯಲ್ಪ ಅಸ್ಪಷ್ಟತೆ ತರುವಂತೆ ಎನಿಸುತ್ತದೆ. ಪುಸ್ತಕದಲ್ಲಿ ಅಳವಡಿಸಿರುವ ಚಿತ್ರಗಳು ಕೆಲವೆಡೆ ಪುಟ್ಟದೆನಿಸಿ ಹಾಗೂ ಓದುತ್ತಿರುವಾಗ ಕೆಲವು ಚಿತ್ರಗಳ ಗಮನಿಸಲು ಪುಟ ತಿರುಗುವಂತೆ ಮಾಡಿ, ಓದುವಾಗ ಹೆಚ್ಚಿನ ಗಮನವನ್ನು ನೀಡುವಂತೆ ಮಾಡುತ್ತದೆ. ಅಪಾರ ಮಾಹಿತಿಯನ್ನು ಆತ್ಮಚರಿತ್ರೆಯ ಚೌಕಟ್ಟಿನೊಳಗೆ ಕಟ್ಟಿಕೊಟ್ಟಿರುವ ರೀತಿ ಮೆಚ್ಚುಗೆ ಮೂಡಿಸಿದರೂ, ಅಲ್ಪಮಟ್ಟಿಗೆ ಓದುತ್ತಿರುವಾಗ ಪುಟಗಳನ್ನು ತಿರುಗಿಸಿ ನೋಡುವಂತೆ ಮಾಡುತ್ತದೆ. ಅಂತಿಮವಾಗಿ ಪುಸ್ತಕವನ್ನು ಮುಗಿಸಿರುವ ರೀತಿಯಂತೂ ಅದ್ಭುತ: ದೇವರು, ಧರ್ಮ, ಜೀವನ, ವಿಜ್ಞಾನ, ರಾಜಕೀಯ, ಶಾಂತಿ, ತಮ್ಮ ಬಗ್ಗೆ, ತಮ್ಮ ಆತ್ಮೀಯರ ಬಗೆಗಿನ ಐನ್‍ಸ್ಟೈನರ ಉವಾಚಗಳು ಐನ್‍ಸ್ಟೈನರನ್ನು ಒಬ್ಬ ದಾರ್ಶನಿಕನಂತೆ ಕಾಣುವಂತೆ ಮಾಡುತ್ತದೆ. ಜಗತ್ಪ್ರಸಿದ್ಧ ಐನ್‍ಸ್ಟೈನರ ಸಾಧನೆಗಳನ್ನು ತಕ್ಕಮಟ್ಟಿಗಾದರೂ ಅರಿಯ ಬೇಕೆಂದರೆ ಇರುವ ಚಾಲೆಂಜ್ ಎಂದರೆ: ನಮ್ಮ ಸಾಮಾನ್ಯ ಪರಿಕಲ್ಪನೆಯ ಚೌಕಟ್ಟಿನೊಳಗೆ ನಿಲುಕದ ಮತ್ತು ಸರಳಗಣಿತ ಸಮೀಕರಣಗಳ ನೆರವಿನಿಂದ ಅರಿಯಲಾರದ ಅದರ ಕ್ಲಿಷ್ಟ ಹಿನ್ನಲೆ. ಅದಕ್ಕೇ ಏನೋ ಬ್ರಿಟೀಷ್ ಖಗೋಳಶಾಸ್ತ್ರಜ್ಞ ಸರ್ ಅರ್ಥರ್ ಎಡ್ಡಿಂಗ್ಟನ್ ಸಾಪೇಕ್ಷತಾ ಸಿದ್ಧಾಂತದ ಮೇಲೆ ಹಲವು ಲೇಖನಗಳನ್ನು ಬರೆಯತೊಡಗಿದಾಗ ಅವರನ್ನು ಯಾರೋ, ಈ ಸಾಪೇಕ್ಷತಾ ಸಿದ್ಧಾಂತವನ್ನು ಅರಿತ ಮೂವರಲ್ಲಿ ತಾವೊಬ್ಬರಾಗಿರುವುದು ತಮಗೆ ಹೇಗೆ ಅನಿಸುತ್ತದೆ? ಎಂದು ಪ್ರಶ್ನಿಸಿದರಂತೆ. ಆಗ ಅವರು "ಆ ಮೂರನೆಯವರು ಯಾರೆಂದು ಹೇಳುವಿರಾ ಮೊದಲು" ಅಂದಿದ್ದರಂತೆ !! ಇಂಥಹ ಭೌತವಿಜ್ಞಾನದ ಅನ್ವೇಷಣೆಯ ಆಳವಾದ ಮಾಹಿತಿಯನ್ನೂ, ಅದನ್ನು ಕಂಡುಹಿಡಿದ ವಿಜ್ಞಾನಿ ಐನ್‍ಸ್ಟೈನರ ಆತ್ಮಚರಿತ್ರೆಯ ಜೊತೆಯಲ್ಲೇ ಹದವಾಗಿ ಸಮ್ಮಿಳಿತಗೊಳಿಸಿ ಪುಸ್ತಕರೂಪದಲ್ಲಿ ನೀಡಿರುವ ವಿಶಿಷ್ಟ ಪ್ರಯತ್ನ ಹಿರಿಯ ಭೌತವಿಜ್ಞಾನಿ, ಸಂಶೋಧಕ, ಪ್ರಗಲ್ಭ ಲೇಖಕರಾದ ಪ್ರೊಫೆಸರ್ ಪಾಲಹಳ್ಳಿ ವಿಶ್ವನಾಥ್ ಅವರದು. ಸ್ವತಃ ವಿಜ್ಞಾನಿಯಾಗಿ ತಾವು ಗಳಿಸಿದ ಅಪಾರ ಅನುಭವದಿಂದ, ಸರಳ ನಿರೂಪಣಾ ಶೈಲಿಯಲೇ ಕೌತುಕ ಕೆರಳಿಸುವ ಅನೇಕ ವೈಜ್ಞಾನಿಕ ವಿಷಯಗಳನ್ನು ಓದುಗರರಿಗೆ ತಮ್ಮ ಒಂದೊಂದು ಪುಸ್ತಕಗಳಲ್ಲೂ ತಲುಪಿಸುತ್ತಿರುವ ಪ್ರೊ|| ವಿಶ್ವನಾಥರ ಪ್ರಯತ್ನ ನಿಜಕ್ಕೂ ಅಭಿನಂದನೀಯ. ವೈಜ್ಞಾನಿಕ ಅರಿವನ್ನು ಸಾಮಾನ್ಯರಿಗೆ ತಲುಪಿಸುತ್ತಿರುವ ಅವರ ಪ್ರಾಮಾಣಿಕ ಯತ್ನಗಳನ್ನು ಈಗಲೇ ಬಿಡುಗಡೆ ಹೊಂದಿರುವ ಅವರ ಪ್ರತಿಯೊಂದು ಉತ್ಕೃಷ್ಟ ಕೃತಿಗಳಲ್ಲೂ ಎದ್ದುಕಾಣುತ್ತದೆ. "ಕಣಕಣ ದೇವಕಣ", "ಭೂಮಿಯಿಂದ ಬಾನಿನತ್ತ", "ಆಕಾಶದಲ್ಲೊಂದು ಮನೆ" ಹಾಗು "ಪಾಪ ಪ್ಲೂಟೋ" ಪುಸ್ತಕಗಳನ್ನು ಓದುಗರರು ಇದನ್ನು ಈಗಾಗಲೇ ಬಲ್ಲರು. ವಿಜ್ಞಾನದ ಶಿಕ್ಷಕರು, ಅಧ್ಯಾಪಕರುಗಳು, ವಿದ್ಯಾರ್ಥಿಗಳಂತೂ ವಿಫುಲವಾದ ಮಾಹಿತಿಗಾಗಿ ಇಂಥಹ ಪರಿಪೂರ್ಣ ಪುಸ್ತಕಗಳ ಮೊರೆ ಹೋಗಲೇಬೇಕು.