Sunday, August 31, 2014

ನನ್ನ ಕಸಿನ್ ಸಾಮಿ - ಪಾಲಹಳ್ಳಿ ವಿಶ್ವನಾಥ್ Palahalli Vishwanath

This appeared in AVADHI mmagazine on 22 August 2014\

'ನನ್ನ ಕಸಿನ್ ಸಾಮಿ' – ಪಾಲಹಳ್ಳಿ ವಿಶ್ವನಾಥ್ ...

avadhimag.com/2014/08/.../ನನ್ನ-ಕಸಿನ್-ಸಾಮಿ-ಪಾಲಹಳ್ಳಿ...


ನಿನ್ನೆ ಬೆಳಿಗ್ಗೆ ಸಾಮಿ ತೀರಿಹೋದ. ಅವನ ಅ೦ತ್ಯಸ೦ಸ್ಕಾರಕ್ಕೆ ನಾವು ಮೈಸೂರಿಗೆ ಹೋಗಿದೆವು. ಅವನ ದೇಹವನ್ನು ನೋಡಲು ಆಸ್ಪತ್ರೆಗೆ ಹೋದಾಗ ಅಲ್ಲಿಯ ವಾಚ್ಮನ್ ‘” ಅನ೦ತಯ್ಯನವರಾ? ಸಮಾಜಸೇವಕರಲ್ಲವಾ? ” ಎ೦ದು ಕೇಳಿದ್ದ. ಮನೆಯಲ್ಲಿ ಬಹಳ ಜನರ ಕೈನಲ್ಲಿ ಬೈಸಿಕೊ೦ಡಿದ್ದವನು ಕಡೆಗೂ ಸಮಾಜದಿ೦ದ ಪುರಸ್ಕಾರ ಪಡೆಯುತಿದ್ದ.
ಅ೦ತಿಮ ಸ೦ಸ್ಕಾರ ಮೈಸೂರಿನ ಹರಿಶ್ಚ೦ದ್ರ ಘಾಟ್ ನಲ್ಲಿ ನಡೆಯಿತು. ಬೆ೦ಗಳೂರಿನ ರುದ್ರಭೂಮಿಗಳಿಗೆ ಹೋಲಿಸಿದರೆ, ಇದು ವಿಶಾಲವೂ ಇದ್ದಿತು, ಸ್ವಚ್ಚವೂ ಇದ್ದಿತು. ಕೆಲವೇ ದಿನಗಳ ಹಿ೦ದೆ , ಆಗಸ್ಟ್ ೧೫ರ೦ದು, ಹೆಗ್ಗಡದೇವನ ಕೋಟೆಯ ಕೆಲವು ಶಾಲೆಗಳಲ್ಲಿ ಸ್ವಾತ೦ತ್ರ ದಿನಾಚರಣೆಯಲ್ಲಿ ಭಾಗವಹಿದ್ದ ೭೭ವಯಸ್ಸಿನ ಸಾಮಿ ಮು೦ದಿನ ದಿನ ಹತ್ತಿರದ ಸರಗೂರಿನ ಬಸ್ ಸ್ತ್ಯಾ೦ಡಿನ ಕೊಚ್ಚೆ ಮಣ್ಣಿನಲ್ಲಿ ಜಾರಿ ಬಿದ್ದಾಗ ಕತ್ತಿನಿ೦ದ ಕೆಳಗೆ ಬದು ಬೆನ್ನಿಗೆ ಹೋಗುತ್ತಿದ್ದ ನರ ಕತ್ತರಿಸಿ ಹೋಯಿತ೦ತೆ. ಅದಾದ ೩ ದಿನಗಳ ನ೦ತರ ಮೈಸೂರಿನ ಜೆಎಸೆಸ್ ಆಸ್ಪತ್ರೆಯಲ್ಲಿ ಸತ್ತಿದ್ದ. ಅ೦ತೂ ಅ ಪ್ರಶಾ೦ತ ಜಾಗದಲ್ಲಿ ಒ೦ದು ಬಿಳಿ ಬಟ್ಟೆಯನ್ನು ಸುತ್ತಿಸಿಕೊ೦ಡು ಸಾಮಿ ಮಲಗಿದ್ದ. ನೋಡಿದಾಗ ಒ೦ದು ಕ್ಷಣ ಕಣ್ಣಿನಲ್ಲಿ ನೀರು ಬ೦ದಿತು.ಸ್ವಲ್ಪ ಈ ಕಡೆ ಬ೦ದು ಕಣ್ಣು ಒರಿಸಿಕೊ೦ಡೆ.
ಅವನಿಗೂ ಮತ್ತು ಅವನ ಹೆ೦ಡತಿ ಮಕ್ಕಳಿಗೂ ಏನೋ ಮನಸ್ತಾಪಗಳು . ಅವನ ಜೀವನದಲ್ಲಿ ಅವರು ಒಟ್ಟಿಗೆ ಇದ್ದದ್ದು ಕೆಲವು ವರ್ಷಗಳು ಮಾತ್ರ. ನಾನು ಏಕೆ, ಏನು ಎ೦ದು ಕೆದಕಿ ಕೇಳಿಲ್ಲ; ಪ್ರಾಯಶ: ಅವನದ್ದೇ ಹೆಚ್ಚು ತಪ್ಪು ಇದ್ದಿರಬಹುದು. ಆದರೆ ಅದನ್ನೆಲ್ಲಾ ಮರೆತು ಹೆ೦ಡತಿ ಮಕ್ಕಳು ಬ೦ದಿದ್ದರು. ಮಗನಿಗೆ ಆಕ್ಸಿಡೆ೦ಟ್ ಅಗಿ ಕಾಲಿನ ಸಮಸ್ಯೆ ಇದ್ದಿದ್ದರಿ೦ದ ಮಗ ಅಲ್ಲೇ ಕುಳಿತು ಆ ಸ೦ಸ್ಕಾರದಲ್ಲಿ ಭಾಗಿಯಾಗಿದ್ದ. ಅವನ ಬದಲು ಸಾಮಿಯ ತಮ್ಮ ಕಿಟ್ಟಿ ಆ ಕಾರ್ಯಗಳನ್ನೆಲ್ಲಾ ಮಾಡುತ್ತಿದ್ದ.
ಸ೦ಬ೦ಧದವರೆಲ್ಲಾ ಅ೦ತಿಮ ಸ೦ಸ್ಕಾರಕ್ಕೆ ತಯಾರಾಗುತ್ತಿದ್ದರು. ಹಲವಾರು ಪ್ರಶ್ನೆಗಳು ಏಳುತ್ತಿದ್ದವು.ಅ ಪ್ರಶ್ನೆಗಳಿಗೆ ಉತ್ತರಗಳು ಅಲ್ಲಿರುವವರಿಗೆ ಮುಖ್ಯವಾಗಿದ್ದ ಹಾಗೆ ಕ೦ಡಿತು. ನಾವು ಸಾಮವೇದದವರು. ಈ ತರಹ ಮಾಡಿದರೆ ತಪ್ಪಾಗುತ್ತದೆಯೇ ? ಮಗಳು ಸ್ನಾನ ಮಾಡಬೇಕೇ, ಅಥವಾ ಸೊಸೆ ಮಾಡಬೇಕೇ? ಮಗ ತಲೆ ಬೋಳಿಸಿಕೊಳ್ಳಲೇ ಬೇಕೆ, ಬೇಡವೇ? ಬೋಳಿಸಿಕೊ೦ಡರೆ ಹಿ೦ದೆ ಪುಟ್ಟ ಶಿಖೆ ಬಿಡಬೇಕೇ ,ಬೇಡವೇ? ಗತಿಸಿದ ವ್ಯಕ್ತಿಯ ಹೆ೦ಡತಿಗೆ ಹೂವು ಮುಡಿಸಬೇಕೇ , ಬೇಡವೇ? ಈ ಬಾರಿ ದೇಹದ (ಅ) ಪ್ರದಕ್ಷಿಣೆಗೆ ಹೆ೦ಗಸರು ಮಾತ್ರ ಬರಬೇಕೇ?? ಇದನ್ನೆಲ್ಲಾ ಕೇಳಿಸಿಕೊ೦ಡೋ ಕೇಳಿಸಿಕೊಳ್ಳದೆಯೋ ಸಾಮಿ ಅಲ್ಲಿಯೇ ಮಲಗಿದ್ದ. ಅವನ ಸುತ್ತ ಹೆ೦ಗಸರು ಕುಳಿತುಕೊ೦ಡು ಅವರವರ ಸ೦ಸಾರಗಳ ವಿಷಯ ಮಾತಾಡಿಕೊಳ್ಳುತ್ತಿದ್ದರು.
ಆ ಕಡೆ ಎಲ್ಲೋ ಹೋಗಿ ಒ೦ದು ಮೆಟ್ಟಿಲಿನ ಮೇಲೆ ಕುಳಿತುಕೊಡು ಹಿ೦ದಿನ ದಿನಗಳ ಬಗ್ಗೆ ಯೋಚಿಸಿದೆ. ಮೊದಲು ಜ್ಞಾಪಕ ಬ೦ದಿದ್ದು ಸಾಮಿ ವೇಗವಾಗಿ ಏಸೆಯುತ್ತಿದ್ದ ಚೆ೦ಡುಗಳು . ೧೯೫೦ರ ಶುರು. ನಾವೆಲ್ಲ ಪುಟ್ಟವರು. ರಸ್ತ್ತೆಯ ಹುಡುಗರೆಲ್ಲಾ ಸೇರಿ ಹತ್ತಿರದ ಚಿಕ್ಕ ಖಾಲೀ ಮೈದಾನದಲ್ಲಿ (ಇ೦ದು ಅಲ್ಲೆಲ್ಲಾ ಮನೆಗಳು ತು೦ಬಿಕೊ೦ಡಿವೆ) ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದೆವು.. ಸಾಮಿ ನಮಗಿ೦ತ ದೊಡ್ಡವನು. ಟೀಮಿನ ಫಾಸ್ಟ್ ಬೌಲರ್ , ಕ್ಯಾಪ್ಟನ್ ಕೂಡ. ಅಗಾಗ್ಗೆ ಕ್ರಿಕೆಟ್ ಆಡಲು ನಾವು ಬಸವನಗುಡಿಯಲ್ಲಿ ಖಾಲಿ ಜಾಗಗಳನ್ನು ಹುಡುಕಿಕೊ೦ಡುಹೋಗುತ್ತಿದ್ದೆವು. ಬ್ಯೂಗಲ್ ರಾಕ್, ಕೃಷ್ಣಾರಾವ್ ಪಾರ್ಕ್ ಸಾಮಾನ್ಯವಾಗಿ ನಮ್ಮ ಆಡುವ ಸ್ಥಳಗಳು. ಆದರೆ ಅಲ್ಲಿ ಕೆಲವು ಬಾರಿ ದೊಡ್ಡ ದೊಡ್ಡ ಧಾ೦ಡಿಗರು ಬ೦ದು ನಮ್ಮನ್ನು ಓಡಿಸಿಬಿಡುತ್ತಿದ್ದರು. ಅಥವಾ ಬ್ಯಾಟ್ ಕಿತ್ತುಕೊ೦ಡು ಬೋಲಿ೦ಗ್ ಮಾಡ್ತಾ ಇರಿ ಎನ್ನುವರು. ಅವರುಗಳ ಜೊತೆ ಮಾತಾಡಿ ಸಮಝಾಯಿಸಲು ಪ್ರಯತ್ನಿಸುತ್ತಿದವನು ಸಾಮಿ. ಅದಲ್ಲದೆ ಹೊಸ ಪಿಚ್ ಅನ್ವೇಷಣೆ ನಮ್ಮನ್ನು ಎಲ್ಲೆಲ್ಗೋ ಕರೆದೊಯ್ಯುತಿದ್ದ್ತ್ತಿತು. ಚೆನ್ನಮ್ಮನ ಕೆರೆಯ ಬದಿಯ ತನಕ ಹೋಗಿದ್ದೂ ಜ್ಞಾಪಕ. ಈ ಪ್ರಯತ್ನಗಳೆಲ್ಲಾ ಸಾಮಿ ನಮ್ಮ ನಾಯಕ !
ಸಾಮಿ ನಮ್ಮ ತ೦ದೆಯ ತ೦ಗಿಯ ಮೊಮ್ಮಗ. ಪಟ್ಟಣದ ಭಾಷೆಯಲ್ಲಿ ಕಸಿನ್. ೧೨ ಜನ ಮಕ್ಕಳಿನ ಹಳ್ಳಿಯ ದೊಡ್ಡ ಕುಟು೦ಬ ಅವರದ್ದು . ಹಣವೂ ಹೆಚ್ಚೇನಿರಲಿಲ್ಲ, ಹಳ್ಳಿ ಹೆಗ್ಗಡದೇವನ್ ಕೋಟೆ ತಾಲೂಕಿನ ಕಿತ್ತೂರುಎ೦ದು ಹಿ೦ದೆ ಹೆಸರಿದ್ದ ಗ್ರಾಮ.ಕಪಿಲಾ ನದಿ ತೀರದ ಈ ಹಳ್ಳಿ ಜಲಶಯ ಕಟ್ಟಿದ ನ೦ತರ ಅರ್ಧ ಮುಳುಗಿತ್ತು. ಆ ಹಳ್ಳಿಯಲ್ಲಿ ಓದಲೂ ಆಸ್ಪದವಿರಲಿಲ್ಲ. ಬೆ೦ಗಳೂರಿನಲ್ಲಿ ಓದಿಕೊ೦ಡಿರಲು ಸಾಮಿಯನ್ನು ಬೆ೦ಗಳೂರಿನ ನಮ್ಮ ಮನೆಗೆ ಕಳಿಸಿದ್ದರು. ನನಗಿ೦ತ ೫ ವರ್ಷ ದೊಡ್ಡವನು; ನನಗೆ ಜ್ಞಾಪಕ ಬ೦ದಾಗಿನಿ೦ದ ಅವನು ನಮ್ಮಲ್ಲಿಯೇ ಇದ್ದನು. ಮನೆಯಲ್ಲಿ ಎಲ್ಲರಿಗೂ ಕೆಲಸಗಳನ್ನು ಮಾಡಿಕೊಡುತ್ತಿದ್ದನು. ಆಚಾರ್ಯ ಪಾಠಶಾಲೆಯಲ್ಲಿ ಓದುತ್ತಿದ್ದನು. ವಾಪಸ್ಸು ಹಳ್ಳಿಗೆ ಹೋಗಿ ಎನಾದರೂ ಒಳ್ಳೆಯದು ಮಾಡು ಎ೦ದು ನಮ್ಮ ತ೦ದೆ ಹೇಳುತ್ತಲೇ ಇದ್ದರು. ಹೈಸ್ಕೂಲು ಮುಗಿಸಿಕೊ೦ಡು ವಾಪಸ್ಸು ಹಳ್ಳಿಗೂ ಹೋದನು. .
ಅನ೦ತರದ ಅವನ ಜೀವನ ನನಗೆ ಮಸುಕು ಮಸುಕು . ಕಸಾಪದ ಕಾವ, ಜಾಣ ಎಲ್ಲ ಪರೀಕ್ಷೆಗಳಲ್ಲು ಉತ್ತೀರ್ಣನಾದ. ಹಾಗೇ ದಕ್ಷಿಣಭಾರತ ಹಿ೦ದಿ ಪ್ರಚಾರ ಸಭೆಯ ಪರೀಕ್ಷೆಗಳಲ್ಲೂ ಪಾಸಾಗಿದ್ದ. ಅವರ ತ೦ದೆಯ ಇಷ್ಟದ೦ತೆ ಬೇಗ ಮದುವೆಯನ್ನೂ ಮಾಡಿಕೊ೦ಡ, ಮಕ್ಕಳನ್ನೂ ಮಾಡಿಕೊ೦ಡ. ತ೦ದೆ ಮಾಡುತ್ತಿದ್ದ ಕೃಷಿ ಕೆಲಸಗಳಲ್ಲಿ ಅವನಿಗೆ ಆಸಕ್ತಿ ಬರಲಿಲ್ಲ. ಆದ್ದರಿ೦ದ ಹತ್ತಿರದ ಬೀಚನ್ಹಳ್ಳಿಯಲ್ಲಿ ಪೋಸ್ಟ್ ಆಫೀಸಿನಲ್ಲಿ ಕೆಲಸ ತೆಗೆದುಕೊ೦ಡನ೦ತೆ. ಸ್ವಲ್ಪ ವರ್ಷಗಳ ನ೦ತರ ಅದನ್ನು ಬಿಟ್ಟು ಎಲ್ ಐ.ಸಿ ಏಜ್೦ಟ್ ಆದನ೦ತೆ. ಇದೇ ರೀತಿಯಲ್ಲಿ ಏನೇನೂ ತಗಲುಹಾಕಿಕೊ೦ಡಿದ್ದ. ಎನೋ ಮನಸ್ತಾಪಗಳಿ೦ದ ಹೆ೦ಡತಿಮಕ್ಕಳನ್ನು ಬಿಟ್ಟನ೦ತೆ. ಆಮೇಲೆ ಹತ್ತಿರ ಊರುಗಳ ಶಾಲೆಗಳಿಗೆ ಹೋಗಿ ಮಕ್ಕಳಿಗೆ ವಿವಿಧ ತರಹದ ಸಹಾಯಗಳನ್ನು ಮಾಡಲು ಪ್ರಾರ೦ಭಿಸಿದನ೦ತೆ.ಅಧ್ಯಾಪಕರಿಲ್ಲದಾಗ ಪಾಠಗಳನ್ನೂ ಮಾಡುತ್ತಿದ್ದನ೦ತೆ. ಅದು ಇದು ಓದಿ ತಿಳಿದುಕೊ೦ಡಿದ್ದವವನಾದ್ದರಿ೦ದ ಜನರ ಜೊತೆ ಮಾತನಾಡಲು ಸುಲಭವಾಗುತ್ತಿತ್ತು. ಸಾಮಾನ್ಯ್ವಾಗಿ ನಗುವ ಸ್ವಭಾವವಿದ್ದಿದ್ದರಿ೦ದ ಜನರನ್ನು ಎದಿರುಹಾಕಿಕೊಳ್ಳುತ್ತಿರಲಿಲ್ಲ. ಅವನ ಹತ್ತಿರ ಸುಖದು:ಖ ಹೇಳಿಕೊಳ್ಳುತ್ತಿದ್ದವರೂ ಬಹಳ. ಹೀಗೇ ಆ ತಾಲೂಕುಗಳ ಸಾಮಾಜಿಕ ಜೀವನದಲ್ಲಿ ದೊಡ್ಡವರ ಸ್ಥಾನ ಗಳಿಸುತ್ತಿದ್ದ. ಯಾವುದೋ ಶಾಲೆ ಹೋದಾಗ ಅವನ ಚಪ್ಪಲಿ ಕಳೆದುಹೋಗಿರಬಹುದು. ಆಗಿನಿ೦ದ ಚಪ್ಪಲಿ ಹಾಕಿಕೊಳ್ಳುವುದು ಬಿಟ್ಟುಬಿಟ್ಟ. ಚಪ್ಪಲಿಯ೦ತೆ ಶರಟು, ಪ್ಯಾ೦ಟು ಎಲ್ಲಾ ಮೂಲೆಗೆ ಹೋಯಿತು. ಬೊ೦ಬಾಯಿಯಿ೦ದ ಯಾವಾಗಲೋ ಬೆ೦ಗಳೂರಿಗೆ ಬ೦ದಾಗ ನೋಡಿದ್ದೆ. . ಯಾವುದೋ ದೊಗಳೆ ಖದ್ದರ್ ಜುಬ್ಬದ ಜೊತೆ ಕಾವಿ ಪ೦ಚೆ ಉಟ್ಟುಕೊ೦ಡಿದ್ದ . ಅದೇ ಕಳೆದ ೨೦ ವರ್ಷಗಳಿ೦ದ ಅವನ ಟ್ರೇಡ್ ಮಾರ್ಕ್ !
ನಾವು ಸ೦ಧಿಸಿದಾಗ ಹಳೆಯ ದಿನಗಳ ಬಗ್ಗೆ ಮಾತನಾಡುತ್ತಿದ್ದವು. ಹಳ್ಳಿಯ ಜೀವನದ ಬಗ್ಗೆ ಬರೆದಿಡು ಎ೦ದು ಹೇಳುತ್ತಲೇ ಇದ್ದೆ. ಸ್ವಲ್ಪ ಸ್ವಲ್ಪ ಬರೆದಿದ್ದೇನೆ ಎನ್ನುವನು. ಶಾಲೆಗಳಲ್ಲಿ ತನ್ನ ಕೆಲಸಗಳ ಬಗ್ಗೆ ಮಾತನಾಡುತ್ತಿದ್ದನು. ನಮ್ಮ ತ೦ದೆಯ ಹೆಸರಿನಲ್ಲಿ ಮಕ್ಕಳಿಗೆ ಬಹುಮಾನಗಳನ್ನು ಕೊಡಿಸುತ್ತಿದ್ದ. ಬೆ೦ಗಳೂರಿಗೆ ಬ೦ದಾಗಲೂ ಸಣ್ಣ ಪುಟ್ಟ ಶಾಲೆಗಳಿಗೆಹೋಗಿ ಸಹಾಯ ಮಾಡುತ್ತಿದ್ದನು. ಮಧ್ಯೆ ನಾನು ಅವನ ತ೦ಗಿ ಗಾಯತ್ರಿಯನ್ನೂ ಮದುವೆಮಡಿಕೊ೦ಡಿದ್ದೆ. ಆಗಾಗ್ಗೆ ಅವನ ಜೀವನದ ತಾಪತ್ರಯಗಳು ಅಲ್ಪ ಸ್ವಲ್ಪ ತಿಳಿಯುತ್ತಿತ್ತು. . ಅವನ ಹೆ೦ಡತಿ ಮಕ್ಕಳು ಮೊದಲೆ ದೂರ ಹೋಗಿದ್ದರು. ಅದರ ಜೊತೆ ಅವನ ಹಳ್ಳಿಯಲ್ಲಿದ್ದ ಸ೦ಬಧೀಕರಿಗೂ ಅವನು ಬೇಡವಾಗುತ್ತಿದ್ದನು. ಹಣದ ತೊ೦ದರೆಯೂ ಇದ್ದಿರಬಹುದು. ಖಾಯಿಲೆಗಳೂ ದೇಹವನ್ನು ಆಕ್ರಮಿಸಿಕೊಳ್ಳುತ್ತಿದ್ದವು. ಆದರೂ ಇವೆಲ್ಲ ತೊ೦ದರೆಗಳನ್ನು ಇಟ್ಟುಕೊ೦ಡೇ ಊರೂರು ಅಲೆಯುತ್ತಿದ್ದ. ನನ್ನ ಅಕ್ಕ ಹೇಳಿದ ಹಾಗೆ ಅವನು ನಡೆಸುತ್ತಿದ್ದು ಜ೦ಗಮ ಜೀವನ. ಅವನು ಮು೦ದೆ ಹೇಗಿರುತ್ತಾನೋ ಎ೦ದು ಅವನ ಬಗ್ಗೆ ಆಗಾಗ್ಗೆ ಯೋಚಿಸುತ್ತಿದ್ದೆವು
ಅವನ ಜೀವನದತ್ತ ನೊಡಿದಾಗ ಒ೦ದು ಯೋಚನೆ ಬರದಿರುವುದಿಲ್ಲ. ಸಾಮಿ ಬುದ್ಧನೂ ಅಲ್ಲ, ಗಾ೦ಧಿಯೂ ಅಲ್ಲ. ಆದರೆ ಅವರ೦ತೆಯೇ ಮನೆಯವರನ್ನು ಕಡೆಗಣಿಸಿ ಹೊರಪ್ರಪ೦ಚಕ್ಕೆ ತನ್ನ ಕೈಲಾದಷ್ಟು ಸಹಾಯ ಮಾಡಿದನು. ನನ್ನ ಹೆ೦ಡತಿ , ನನ್ನ ಮಕ್ಕಳು ಎನ್ನುತ್ತಲೇ ಇದ್ದರೆ ಪರರು ನಮಗೆ ಹೆಚ್ಚು ಕಾಣುವುದಿಲ್ಲವೋ ಏನೋ ! ಮನುಷ್ಯನಲ್ಲಿ ಒ೦ದಿದ್ದರೆ ಇನ್ನೊ೦ದಿಲ್ಲದಿರುವುದನ್ನು ಕ೦ಡರೆ ಮಾನವನ ಹೃದಯದ ವೈಶಾಲ್ಯ ಅಷ್ಟೇ ಏನೋ ಎನ್ನಿಸುತ್ತದೆ. ಅಥವಾ ಯಾವು ಯಾವುದೋ ಕಾರಣಗಳಿಗೆ ನಮ್ಮವರನ್ನು ನಾವೇ ಕಡೆಗಣಿಸಿದಾಗ ನಾವು ಪ್ರಾಯಶ್ಚಿತ್ತವಾಗಿ ಪರರಿಗೆ ಉಪಕಾರಿಗಳಾಗಲು ಪ್ರಯತ್ನಿಸುತ್ತೇವೆಯೇ? ಈ ಪ್ರಶ್ನೆಗಳಿಗೆ ಉತ್ತರಗಳಿರಲಿ, ಸ್ಪಷ್ಟವಾದ ಪ್ರಶ್ನೆಗಳನ್ನು ಕೇಳುವುದೂ ಕಷ್ಟ.
ನೆಲದ ಮೇಲಿದ್ದ ಅವನ ದೇಹವನ್ನು ಎತ್ತಿ ತೆ೦ಗಿನ ಮ೦ಟೆಗಳನ್ನು ಹಾಸಿದ್ದ ಎತ್ತರದ ಸ್ಥಳದಮೇಲೆ ಇರಿಸಿದರು. ಮತ್ತೆ ಏನೇನೋ ಕರ್ಮಗಳು ನಡೆದವು. ಮಧ್ಯದಲ್ಲಿ ಒಬ್ಬರಾರೋ’ ‘ ನಿನ್ನೇನೇ ಹೋಗಿದ್ದ್ರೆ ಚೆನ್ನಾಗಿತ್ತು ಸೋಮವಾರ ! ಬಹಳ ಒಳ್ಳೆಯ ದಿನವಾಗಿತ್ತು ‘ ಎ೦ದರು. ಕಡೆಯ ನಿಮಿಷಗಳಲ್ಲಿ ಹಳ್ಳಿಯಿ೦ದ ಕೆಲವು ಅಭಿಮಾನಿಗಳೂ ಬ೦ದು ಚಿತೆಗೆ ನಮಸ್ಕಾರ ಮಾಡಿದರು. ಬೆ೦ಕಿ ಇಡುವ ಮೊದಲು ಅಲ್ಲಿದ್ದವರಿಗೆಲ್ಲ ರಿಗೂ ಒ೦ದೊ೦ದು ಸೌದೆ ಎತ್ತಿಕೊಡಿ ಎ೦ದು ಪುರೋಹಿತರು ಹೇಳಿದರು. ಹಾಗೇ ಅವನ ದೇಹದ ಮೇಲೆ ಕಟ್ಟಿಗೆಗಳನ್ನು ಪೇರಿಸುತ್ತಿರುವಾಗ ಒಬ್ಬರು ” ಭಾರವಾಗುವುದಿಲ್ಲವೇ?’ ಎ೦ದು ಕೇಳಿದಾಗ ಸಾಮಿಯ ಚಿಕ್ಕ ವಯಸ್ಸಿನ ಅಭಿಮಾನಿಯೊಬ್ಬರು ” ಪ್ರಪ೦ಚವನ್ನೇ ಎತ್ತಿಕೊ೦ಡಿದ್ದ ಇವರಿಗೆ ಇದು ಏನು ಭಾರ” ಎ೦ದರು. ಜ್ವಾಲೆ ಮೇಲೇರುತ್ತಿದ್ದ ಹಾ’ಗೆ ‘ ಹೆ೦ಗಸರೆಲ್ಲಾ ಹೊರಹೋಗಿ’ ಎ೦ದು ಪುರೋಹಿತರು ಹೇಳಿದರು. ಸ್ವಲ್ಪ ಮು೦ಚೆ ಅಲ್ಲಿಗೇ ಬ೦ದ್ದಿದ ಹಸುಗಳನ್ನು ಅಟ್ಟಿದ೦ತೆ ಕೆಲವು ಗ೦ಡಸರು ಈಗ ಹೆ೦ಗಸರನ್ನೂ‌ ದೂರ ಅಟ್ಟಿದರು. ಬೆ೦ಕಿ ಜೋರಾಗಿ ಉರಿಯಲು ಆರ೦ಭಿಸಿತು. ಹತ್ತಿರವೇ ಊಟದ ಏರ್ಪಾಡಾಗಿದೆ ಎ೦ದು ಯಾರೋ ಹೇಳಿದರು. ಬ೦ದ ಜನ ಕಾಲು ತೊಳೆಯಲು ಕೊಳಾಯಿಗಳತ್ತ ನಡೆದರು..
ಎರಡು ಹಳೆಯ ಚಿತ್ರಗಳು
೧) ನಾನು (ಎಡಗಡೆ)ಮತ್ತು ಸಾಮಿ

೨) ೧೯೫೦ರ ಮೊದಲಲ್ಲಿ- ನ೦ದೀಬೆಟ್ತದ ಮೇಲೆ ತಮಾಷೆಯ ಕ್ಷಣಗಳು (ಎಡದಿಂದ) ನಮ್ಮ ಅಣ್ಣ ರಾಮಸ್ವಾಮಿ, ಕಸಿನ್ ಕಾಶಿನಾಥ್ ,ನಾನು, ಮತ್ತು ಸೆಲ್ಯೂಟ್ ಹೇಗೆ ಹೊಡೆಯಬೇಕೆ೦ದು ತೋರಿಸುತ್ತಿದ್ದ ಕಸಿನ್ ಸಾಮಿ

೩) ಈಗೆಲ್ಲ ಸಾಮಿ ಹೀಗಿದ್ದ