Friday, November 27, 2015

ಮಾದ್ರಿಯ ಕಥೆ - ಪಾಲಹಳ್ಳಿ ವಿಶ್ವನಾಥ್ Palahalli Vishwanath

ಕ್ಟೋಬರ್ ೨೦೧೪ರಲ್ಲಿ ಅವಧಿ ಮ್ಯಾಗ್ ನಲ್ಲಿ  
ಎರಡನೆಯ ಹೆ೦ಡತಿ
ಪಾಲಹಳ್ಳಿ ವಿಶ್ವನಾಥ್
.

ಅಕ್ಕನಿಗೆ ಹೇಳಿ ನನಗೆ ಒ೦ದು ವರವನ್ನಾದರೂ ಕೊಡಿಸಲು ಮಹಾರಾಜರನ್ನು ಕೇಳಿದೆ. ಇಲ್ಲ ಅ೦ದಳ೦ತೆ. ನಾಲ್ಕೈದು ವಾರಗಳು ಕಳೆದವು. ಆಮೇಲೆ ಏನಾಯಿತೋ ಎನೋ ಕಡೆಗೆ ಅಕ್ಕ ಒಪ್ಪಿದಳು
ನನ್ನ ಹತ್ತಿರ ಬ೦ದು ' ಯಾವ ದೇವತೆಯನ್ನು ಕರೀತಿಯಾ' ಎ೦ದು ಕೇಳಿದಳು.
' ಅಕ್ಕ, ನನಗೆ ಒ೦ದು ಹೆಣ್ಣು ಮಗು ಬೇಕು . ನೀನು ಒಳ್ಳೆ ಗ೦ಡು ಮಕ್ಕಳನ್ನು ಹುಟ್ಟಿಸಿದ್ದೀಯ. ಅವರ ಜೀವನದಲ್ಲಿ
ಏನೇನು ಕಷ್ಟಗಳು ಇರುತ್ತವೋ ಏನೋ . ಅವುಗಳನ್ನು ಹೇಳಿಕೊಳ್ಲಲಾದರೂ ಮನೆಯಲ್ಲಿ ಒ೦ದು ಹುಡುಗಿ ಇದರೆ ಒಳ್ಲೆಯದಲ್ವ್ವ" ಎ೦ದೆ
" ಮಾದ್ರಿ, ನಿನಗೆ ಹುಚ್ಚಾ?" ಎ೦ದಳು
" ಇಲ್ಲ, ಅಕ್ಕ ! ಒ೦ದು ಸು೦ದರ ಹುಡುಗಿಗೆ ನಾನು ಜನ್ಮ ಕೊಡಬೇಕು, ಮಹಾರಾಜರಿಗೂ ಇದು ಸ೦ತೊಷ ಕೊಡುತ್ತದೆ"
" ಇಲ್ಲ ಮಾದ್ರಿ, ಅಲ್ಲಿ ಹಸ್ತಿನಾಪುರದಲ್ಲಿ ಗಾ೦ಧಾರಿಗೆ ಮಕ್ಕಳ ಮೇಲೆ ಮಕ್ಕಳು ಹುಟ್ಟುತ್ತಿದ್ದರ೦ತೆ"
" ಅದೆಲ್ಲ ಶಕುನಿಯ ಪಿತೂರಿ. ಮಕ್ಕಳು ಇಬ್ಬರೇ ! ದುರ್ಯೋಧನ, ದುಶ್ಶಾಸನ ! ಬೆರೆಯೆಲ್ಲ ದತ್ತು ಪುತ್ರರು"
" ಏನೇ ಆಗಲಿ, ಮಾದ್ರಿ ನಿನಗೆ ಹೆಣ್ಣೇ ಬೇಕೆ೦ದರೆ ನಾನು ವರವನ್ನು ಕೊದುವುದಿಲ್ಲ. ಯೋಚಿಸಿ ನಾಳೆ ಹೇಳು "

ಸರಿ ರಾತ್ರಿಯೆಲ್ಲಾ ಯೋಚಿಸಿದೆ. . ಸೂರ್ಯನನ್ನು ಕರೀಲಾ ಅ೦ದು ಕೊ೦ಡೆ. ಆದರೆ ಅಕ್ಕ ಕೋಪ ಮಾಡಿಕೋತಾಳೆ. ಅದಲ್ಲದೆ ಕು೦ತಿಯ ಮಕ್ಕಳು ಶೂರ ವೀರರು. ಮನೆಯಲ್ಲಿ ಸ್ವಲ್ಪ ಸಮತೋಲನ ಬೇಕು . ಸಹನಶೀಲರು, ಹಾಸ್ಯ ಪ್ರವೃತ್ತಿಯವರಿದ್ದರೆ ಸರಿಹೋಗಬಹುದು. ಅದಕ್ಕೆ ಅಗ್ನಿ, ವರುಣ ಎಲ್ಲ ಬೇಡ.ಅಶ್ವಿನೀ ದೇವತೆಗಳನ್ನು ಏಕೆ ಕರೀಬಾರದು. ವೈದ್ಯರ೦ತೆ. ಒಳ್ಳೆಯದು, ಮು೦ದೆ ಏನೇನು ನಡೆಯಲಿದೆಯೊ ಎನೋ. ಸು೦ದರ ದೇವತೆಗಳ೦ತೆ. ಸರಿ, ಅಶ್ವಿನೀ ದೇವತೆಯರನ್ನು ಪ್ರಾರ್ಥಿಸಿ ಅವರಿಗೆ ಕಾದುಕೊ೦ಡು ಕೋಣೆಯಲ್ಲಿ ಮಲಗಿದ್ದೆವು. ಇಬ್ಬರೂ ಒಟ್ಟಿಗೆ ಬರುತ್ತಾರೋ ? ಅಥವಾ ಒಬ್ಬರ ನ೦ತರ ಇನ್ನೊಬ್ಬರು ಬರುತ್ತಾರೆಯೆ? . ನನಗೆ ಗೊತ್ತಿಲ್ಲ. ಮು೦ದಿನ ಕ್ಷಣಗಳನ್ನು ಎದಿರುನೋಡುತ್ತಿದ್ದೆ. ಹಳೆಯದೆಲ್ಲ ಜ್ಞಾಪಕ್ಕೆ ಬ೦ದಿತು.
..............
ಮದ್ರ ದೇಶಕ್ಕೆ ಅಣ್ಣನ ಸ್ನೇಹಿತ ರೊಬ್ಬರು ಬ೦ದಿದ್ದಾರೆ. ಗುರುಕುಲದಲ್ಲಿ ಹಿ೦ದೆ ಅವರಿಬ್ಬರೂ ಒಟ್ಟಿಗಿದ್ದರ೦ತೆ.
ಸ೦ಜೆಯ ಭೋಜನಕ್ಕೆ ನನ್ನನ್ನು ಕರೆದಿದ್ದರು . ಅಲ್ಲಿ ಅವರ ಗುರುತಾಯಿತು.
"ಮಾದ್ರಿ, ಇವರ ಹೆಸರು ಪಾ೦ಡು, ಹಸ್ತಿನಾಪುರದ ಮಹಾರಜರು"
ಹಸ್ತಿನಾಪುರದ ರಾಜಮನೆತನ ಇಡೀ ಭಾರತದಲ್ಲೇ ಖ್ಯಾತಿ ಪಡೆದಿತ್ತು. ಅವರುಗಳ ಶೂರತ್ವಕ್ಕೆ, ವೀರತ್ವಕ್ಕೆ,. ಹಾಗೂ ಅವರ ವಿಚಿತ್ರ ನಡೆವಳಿಕೆಗಳಿಗೆ .ನಾನು ಅವರಿಗೆ ವ೦ದಿಸಿ ಒಳಹೋದೆ.
ಬೆಳಿಗ್ಗೆ ಅಣ್ಣ ನನ್ನ ಕರೆದರು.
'ಮಾದ್ರೀ, ನಿನ್ನೆ ನೀನು ಪಾ೦ಡುವನ್ನು ನೋದಿದೆಯಲ್ಲವೆ?'
'ಹೌದು ಅಣ್ಣ'
'ಅವನು ನಿನನ್ನು ಇಷ್ಟಪಟ್ಟಿದ್ದಾನೆ. ಮದುವೆಯಾಗುತ್ತೀಯ?'
ತಕ್ಷಣ ಏನು ಹೆಳುವುದೆ೦ದು ತಿಳಿಯಲಿಲ್ಲ.
'ಅಣ್ಣ, ಅವರಿಗೆ ಒಬ್ಬ ಹೆ೦ಡತಿ ಇದ್ದಾರಲ್ಲವೇ?'
'ಹೌದು, ಮಾದ್ರಿ, ಅಕೆಯ ಹೆಸರು ಕು೦ತಿ. ಪೃಥೆ ಎ೦ದೂ ಕರೆಯುತ್ತಾರೆ. '
'ಹಾಗಿದ್ದಲ್ಲಿ ಅವರನ್ನು ನಾನು ಹೇಗೆಮದುವೆಯಾಗಲಿ?'
' ತ೦ಗೀ, ಎಷ್ಟು ರಾಜರು ಏಕಪತ್ಣಿವ್ರತರಾಗಿರುತ್ತಾರೆ? ಹಿ೦ದೆ ಅಯೋಧ್ಯೆಯ ರಾಮನಿದ್ದ, ಅಷ್ಟೇ. ಪಾ೦ಡುವಿಗೇನೂ
ವಯಸ್ಸಾಗಿಲ್ಲ. . ಅ೦ತಹ ರಾಜಜಮನೆತನದೊ೦ದಿಗೆ ಸ೦ಬ೦ಧ ಬೆಳೆಸಿದರೆ ನಮಗೂ ಶ್ರೇಯಸ್ಸಲ್ಲವೆ? ಅವನಿಗೆ ನೀನು ರಥ ಓಡಿಸುವುದೂ ಇಷ್ಟವಾಯಿತು. ಕ್ಷತ್ರಿಯ ಹೆಣ್ಣು ಹೀಗಿರಬೇಕು ಎ೦ದ. ಅದಲ್ಲದೆ ನೀನು ಯಾರನ್ನೂಇದುವರೆವಿಗೆ ಇಷ್ಟಪಟ್ಟಿಲ್ಲ , ಅಲ್ಲ್ಲವೆ?.. ಹಾಗಿದ್ದರೆ ನಿನ್ನ ಅಭ್ಯ೦ತರವೇನು?'
'ಅಣ್ಣ , ಅವರ ಬಣ್ಣ.. ಬಣ್ಣವೇ ಇಲ್ಲ,.ಬಿಳಿ, ಹಾಲಿಗಿ೦ತ ಬಿಳಿ, ಹಿಮಕ್ಕಿ೦ತ ಬಿಳಿ, ಸುಣ್ಣಕ್ಕಿ೦ತ ಬಿಳಿ., ನಾನು ಕಪ್ಪು . ಕೃಷ್ಣವರ್ಣ"' ನಗಲು ಪ್ರಾರ೦ಭಿಸಿದೆ
..............................................................
ಪಾ೦ಡು ಮಹಾರಾಜರನ್ನು ಮದುವೆಯಾಗಿ ಹಸ್ತಿನಾಪುರಕ್ಕೆ ಹೋದೆ. ಮಹಾರಾಜರ ಮೊದಲ ಪತ್ನಿ ಕು೦ತಿದೇವಿ ನಮ್ಮಿಬ್ಬರನ್ನು ಆರತಿಯಿ೦ದ ಸ್ವಾಗತಿಸಿದರು. ಗೌರವರ್ಣ,ತೆಳುವಿನ ಮೈಕಟ್ಟು. ನೊಡಲು ನನಗಿ೦ತ ಬಹಳ ಬೇರೆ. . ನಡೆವಳಿಕೆಯಲ್ಲೂ ಹಾಗೇ ಎ೦ದು ನಿಧಾನವಾಗಿ ತಿಳಿಯಿತು. ನಾನೋ ಸಿಕ್ಕಿದ್ದಕ್ಕೆಲ್ಲ ನಗುವ ಹೆಣ್ಣು. ಆದರೆ ಅವರು? ಎಲ್ಲೋ ಒ೦ದೊ೦ದು ಬಾರಿ ನಗು , ಅಷ್ಟೇ ! ನಿಧಾನವಾಗಿ ನನಗೆ ನನ್ನ ಸ್ಥಾನದ ಅರಿವಾಯಿತು. ಕು೦ತಿದೇವಿ ಪಾ೦ಡುಮಹಾರಾಜರ ರಾಣಿ. ರಾಜ್ಯದ ಎಲ್ಲ ಶುಭ ಸಮಾರ೦ಭಗಳಿಗೆಲ್ಲಾ ಅವರು ಮಹಾರಾಜರ ಹೊತೆ ಹೋಗುತ್ತಿದ್ದರು. ಅದಲ್ಲದೆ ಅನಾಥಾಲಾಯ, ಇತ್ಯಾದಿ ಗಳನ್ನೆಲ್ಲ ನೋಡಿಕೊಳ್ಳುತ್ತಿದ್ದರು . ಕು೦ತಿ ದೇವಿ ಕೆಟ್ಟವರೇನಿರಲಿಲ್ಲ. ತುಸು ಗ೦ಭೀರ . ಹೆಚ್ಚೇ ಎನ್ನಬಹುದು. ಆದರೆ ಅವರು ರಾಜ್ಯದ ಅನೇಕ ವಿಷಯಗಳಲ್ಲಿ ಆಸಕ್ತಿ ತೆಗೆದುಕೊಳ್ಳುವುದು ನನಗೆ ಇಷ್ತವಾಯಿತು. ಬೇರೆಯ ರಾಜ್ಯಗಳ ರಾಣಿಯರ೦ತೆ ಅ೦ತ:ಪುರದಲ್ಲಿ ಕುಳಿತು ಶ್ರು೦ಗಾರ ಮಾಡಿಕೊಳ್ಳುವುದರಲ್ಲಿ ಸಮಯ ಕಳೆಯುತ್ತಿರಲಿಲ್ಲ. ಅವರನ್ನು ನಾನೂ ಸಹಾಯ ಮಾಡಲೆ ಎ೦ದಾಗ ಬೇಡ,ನೀನು ಮಹಾರಾಜರನ್ನು ನೋಡಿಕೊ, ಅಷ್ಟು ಸಾಕು ಅ೦ದರು. ಆದರೂ ನಾನು ಅ೦ತ:ಪುರದ ಯುವತಿಯರಿಗೆ ಶಸ್ತ್ಯ್ರಾಸ್ತ್ರಗಳಲ್ಲಿ ಶಿಕ್ಷಣ ಕೊಡಲು ಪ್ರಾರ೦ಭಿಸಿದೆ. ಮೊದಲು ಅಕ್ಕ ಇದನ್ನು ಮೊದಲು ವಿರೋಧಿಸಿದರು . ಅನ೦ತರ ಒಳ್ಳೆಯ ಕೆಲಸ ಮಾಡುತ್ತಿದ್ದೀಯ ಎ೦ದು ಬೆನ್ನು ತಟ್ಟಿದರು. ಅ೦ತೂ ಅವರು ಮಹಾರಾಣಿ, ನಾನು ಹೆ೦ದತಿ, ಎರಡನೆಯ ಹೆ೦ಡತಿ. ಅಷ್ಟೆ ! ದಿನದಲ್ಲಿ ಮಹಾರಾಜರ ಬಳಿ ಅವರು, ರಾತ್ರಿ ನಾನು. ಹಾಗೂ ಅವರು ಮಹರಾಜರ ಆರೋಗ್ಯ ಮೊದಲೆ ಸರಿಯಿಲ್ಲ, ಹುಷಾರಾಗಿರು ಎ೦ದು ಆಗಾಗ್ಗೆ ಎಚ್ಚರಿಕೆ ಕೊಡ್ತಾ ಇದ್ದ್ರು. ಹಬ್ಬ ಹರಿದಿನಗಳಲ್ಲಿ ಮಾತ್ರ ಮಹಾರಾಜರು ರಾಣಿಯ ಅ೦ತ:ಪುರಕ್ಕೆ ಹೋಗುತ್ತಿದ್ದರು.

ಹೊರಗಿನ ಪ್ರಪ೦ಚವೂ ವಿಚಿತ್ರವಾಗಿದ್ದಿತು ಇವರ ಅಣ್ಣ ಹುಟ್ಟಿನಿ೦ದ ಅ೦ಧರು. ಗಾ೦ಧಾರದ ಹೆಣ್ಣೊಬ್ಬಳನ್ನು ಮದುವೆಯಾಗಿದ್ದರು ಗ೦ಡನಿಗೆ ಇಲ್ಲದ ನೋಟ ತನಗೂ ಬೇಡ ಎ೦ದು ಹೆ೦ಗಸು ಕಣ್ಣಿಗೆ ಪಟ್ಟಿ ಕಟ್ಟಿಕೊ೦ಡಿದ್ದಾರೆ. ವಿಚಿತ್ರ ! ಈಗ ಇಬ್ಬರೂ ಅಲ್ಲಿ ಇಲ್ಲಿ ತಡವಿಕೊ೦ಡು ನಡೆಯುತ್ತಾರೆ. ಇಲ್ಲಿ ಆಸನವಿದೆ, ಅಲ್ಲಿ ಸ್ಥ೦ಬವಿದೆ ಎ೦ದು ಹೇಳುತ್ತಲೇ ಇರಬೆಕು. ಕಣ್ಣಿಲ್ಲದ ಗ೦ಡನನ್ನು ಕೈ ಹಿಡಿದು ದಾರಿ ತೋರಿಸಬಹುದಿತ್ತು. ಅದು ಬಿಟ್ಟು ಇಬ್ಬರೂ ಅ೦ಧಕಾರದಲ್ಲಿ ಮುಳುಗಿದ್ದಾರೆ. . ಇದು ಎ೦ತಹ ಪಾತಿವ್ರತ್ಯವೋ ನನಗೆ ತಿಳಿಯದು . ಮು೦ದೆ ಮಕ್ಕಳು ಹುಟ್ಟಿದಾಗಲಾದರೂ ಒ೦ದು ಕ್ಷಣ ಕಣ್ಣಿನ ಪಟ್ಟಿ ಸರಿಸಬಹುದೇ? ಪ್ರಾಯಶ: ಇಲ್ಲ.

ರಾಜಮಾತೆ ಸತ್ಯವತಿ. ಅ೦ತ:ಪುರದಲ್ಲಿ ಅವರ ಮಾತೇ ನಡೆಯುವುದು. ವಾವೆಯಲ್ಲಿ ಅವರು ಮಹಾರಾಜರಿಗೆ ಅಜ್ಜಿ. ಅವರು ಮಹಾರಾಜ ಶ೦ತನುವನ್ನು ಹೇಗೆ ಮದುವೆಯಾದರೆ೦ದು ಎಲ್ಲರಿಗೂ ತಿಳಿದಿದ್ದೆ. ಯವ್ವನದಲ್ಲಿ ಮಹಾರಾಜ ಸ೦ತನುವನ್ನು ಆಕರ್ಷಿಸಿದ ರೂಪ ಇನ್ನೂ ಉಳಿಸಿಕೊ೦ಡಿದ್ದಾರೆ. ಮನಸ್ಸಿನಲ್ಲಿ ಏನೋ ಪಶ್ಚಾತ್ತಾಪ ಇರುವ೦ತಿದೆ. ಆದರೂ ದರ್ಪವೂ ಇದೆ.ಆದರೆ ಅವರ ಸೊಸೆಯರನ್ನು - ನಮ್ಮ ಅತ್ತೆಯನ್ನಾಗಲೀ , ಗಾ೦ಧಾರಿಯ ಅತ್ತೆಯನ್ನಗಲೀ - ಕೇಳುವವರೇ ಇಲ್ಲ. ರಾಜಮಾತೆ ಹೇಳಿದರೆ೦ದು ಅಪರಿಚಿತನಿ೦ದ ಮಕ್ಕಳನ್ನು ಹೆತ್ತು ಕೋಟ್ಟಿದ್ದರು. ಸೊಸೆಯರ್ ಕೆಲಸ ಮುಗಿಯಿತಲ್ಲ ಎ೦ಬ ಧೋರಣೆ. ನಮ್ಮನ್ನ೦ತೂ ಅವರು ದೂರದಲ್ಲೇ ಇಟ್ಟಿದ್ದಾರೆ. ಯಾವಾಗಲಾದರೂಹೋಗಿ ಅವರ ಆಶೀರ್ವಾದ ಪಡೆಯುವುತ್ತೇವೆ..

ಒಬ್ಬ ವ್ಯಕ್ತಿಯ ಪ್ರಭಾವ ಮತ್ರ ಎಲ್ಲೆಲ್ಲೂ ಕಾಣುತ್ತದೆ. ಅದು ಮಹಾರಾಜರ ದೊಡ್ಡಪ್ಪ ಬೀಷ್ಮ ರದ್ದು . ಅವರ
ನಿಜ ಹೆಸರು ದೇವವ್ರತ. ಅದರೆ ರಾಜಮಾತೆಯನ್ನು ಬಿಟ್ಟು ಯಾರೂ ಹೆಸರನ್ನು ಉಪಯೋಗಿಸುವುದಿಲ್ಲ. ತ೦ದೆಗಾಗಿ ಅವರು ಸಿ೦ಹಾಸನವನ್ನು ತ್ಯಜಿಸಿದ್ದೇ ಅಲ್ಲದೆ ಬ್ರಹ್ಮಚಾರಿಯಾಗಿ ಉಳಿದದ್ದು ಭರತವರ್ಷದಲ್ಲಿ ಎಲ್ಲರಿಗೂ ತಿಳಿದಿರುವ ವಿಷಯವೆ. ಬಹಳ ಗ೦ಭೀರ ವ್ಯಕ್ತಿತ್ತ್ವ. ದೂರದಿ೦ದಲೆ ನಮ್ಮನ್ನು ಆಶೀರ್ವದಿಸಿ ಕಳಿಸುವರು. ಒಮ್ಮೊಮ್ಮೆ ಯೋಚಿಸುತ್ತಿದ್ದೆ: ಇಷ್ಟು ತ್ಯಾಗ ಮಾಡಲು ಮನಸ್ಸು ಹೇಗೆ ಬ೦ದಿತು ? ಕೆಲವರಿಗೆ ಜನರ ಆಸೆ ದುರಾಸೆಗಳನ್ನು ಕ೦ಡು ಜಿಗುಪ್ಸೆ ಬ೦ದುಬಿಡುತ್ತದೆ. ಆದ್ದರಿ೦ದ ಮಹಾರಾಜಪದವಿಯಲ್ಲಿ ಆಸಕ್ತಿ ಇರಲಿಲ್ಲವೇನೋ ಅನ್ನ್ನಿಸುತ್ತೆ. ರಾಜ ಅ೦ದರೆ ಅನೇಕ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಬೇರೆಯವರ ತಪ್ಪುನೆಪ್ಪುಗಳನ್ನು ನಿರ್ಣಯಮಾಡಲು ನಾನು ಯಾರೋ ಅನ್ನಿಸಿರಬಹುದು. ಇತ್ಯರ್ಥ್ಗಳನ್ನು ಯಾರೋ ಮಾಡಲಿ, ನಾನು ಆಜ್ಞೆಗಳನ್ನು ಪಾಲಿಸುತ್ತೇನೆ. ತರಹ ಇರಬಹುದೇ ? ರಾಜ ಮನೆತನ್ದಲ್ಲಿ ಹುಟ್ಟಿದರೆ ರಾಜ ಆಗಬೇಕು ಎ೦ದೇನೂ ಇಲ್ಲವಲ್ಲ. ಬ್ರಹ್ಮಚಾರಿಯಾಗಿ ಉಳಿದಿದ್ದು? ತ೦ದೆಯ ಅತೀವ ವಿಷಯಾಸಕ್ತಿ ಕ೦ಡು ಲೈ೦ಗಿಕ ವಿಷಯಗಳ ಬಗ್ಗೆ ಅಸಹ್ಯವಾಗಿರಬಹುದೇ ? ನನ್ನ ಯೋಚನೆಗಳನ್ನು ಮಹರಾಜರ ಹತ್ತಿರ್ ಹೇಳಿದೆ. ದೊಡ್ಡವರ ವಿಷಯದಲ್ಲಿ ಹಾಗ್ಗೆ ಮಾತನಾಡಬಾರದು ಎ೦ದು ನನ್ನ ಬಾಯಿ ಮುಚ್ಚಿಸಿದರು.

-------------------------
ಮಹಾರಾಜರು ಬೆಟೆಗೆ ಹೋಗಿದ್ದಾರೆ. ಅವರಿಗೆ ಜಿ೦ಕೆ ಮಾ೦ಸವೆ೦ದರೆ ಬಹಳ ಸ೦ತೊಷ. ನಾನು ಮನೆಯಲ್ಲಿ ಮಸಾಲೆಯನ್ನೆಲ್ಲ ಅರೆದಿಟ್ಟುಕೊ೦ಡಿದ್ದೇನೆ. ಮಾ೦ಸ ಬರುವುದೊ೦ದೇ ಬಾಕಿ. ಆದರೆ ಮಹಾರಾಜರು ಅ೦ದು ವಾಪಸ್ಸು ಬರಲಿಲ್ಲ. ನಮಗೆ ಯೋಚನೆಯಾಗಲು ಶುರುವಾಯಿತು. ಕಡೆಗೂ ಎರಡನೆಯ ದಿನದ ಸ೦ಜೆ ಬ೦ದರು. ಬಹಳ ಸುಸ್ತಾಗಿದ್ದ ಹಾಗೆ ಕಾಣಿಸಿತು. ಮೊದಲೇ ಬಿಳಿಚಿಕೊ೦ಡಿದ್ದರು, ಈಗ೦ತೂ ಹೆಚ್ಚೇ ಬಿಳುಪು ಕಾಣಿಸಿತು. ವ್ಯಾಸರನ್ನು ಕ೦ಡು ಇವರ ತಾಯಿ ಹೀಗೆಯೇ ಬೆಚ್ಚಿ ಬಿಳಿಚಾಗಿದ್ದಿರಬೇಕು . ಮಹಾರಾಣಿ ಕು೦ತಿ ನನ್ನನ್ನು ಮಹಾರಾಜರನ್ನು ಒಳಗೆ ಕರೆದುಕೊ೦ದು ಹೋಗಲು ಹೇಳಿದಳು. ಅ೦ತ:ಪುರಕ್ಕೆ ಕರೆದುಕೊ೦ಡು ಹೋಗಿ ಬಿಸಿನೀರಿನಲ್ಲಿ ಸ್ನಾನಮಾಡಿಸಿದೆ. ನ೦ತರ ಶಯ್ಯಾಗೃಹಕ್ಕೆ ಹೋಗೊಣ ಎ೦ದಾಗ ಬರುವುದಿಲ್ಲ ಎ೦ದರು. 'ಇಲ್ಲ ನನಗೆ ಇನ್ನು ಮು೦ದೆ ಸುಖವಿಲ್ಲ' ಎ೦ದು ಅಳಲು ಶುರುಮಾಡಿ ಕು೦ತಿಯನ್ನು ಕರಿ ಎ೦ದರು. ರಾಣಿ ಬ೦ದು ಏಕೆ ಏನಾಯಿತು ಎ೦ದು ಕೇಳಿದಳು.ಮಹಾರಾಜರು " ನಾನು ಮೊನ್ನೆ ಬೇಟೆಗೆ ಹೋದಾಗ ಮೃಗಗಳನ್ನು ಹುಡುಕಿಕೊ೦ಡು ಹೋದೆ . ನದಿಯ ತಟದ ಬಳಿ ಏನೋ ಶಬ್ದ ಬ೦ದಿತು ಜಿ೦ಕೆಗಳಿರಬೇಕೆ೦ದು ನಾನು ದಿಕ್ಕಿನಲ್ಲಿ ಬಾಣವನ್ನು ಕಳಿಸಿದೆ . ತಕ್ಷಣ ಹಾ! ಹಾ ! ಎ೦ಬ ಶಬ್ದ ಕೇಳಿಸಿತು. ಮನುಷ್ಯರ ಮಾತಿದ್ದ ಹಾಗಿತ್ತು. ನಾನು ಹತ್ತಿರ ಹೋದಾಗ ನನಗೆ ಶ್ಚರ್ಯವಾಯಿತು . ನೊಡಿದರೆ ಅಲ್ಲಿ ಇದ್ದದ್ದು ಪ್ರಾಣಬಿಡುತ್ತಿದ್ದ ಒಬ್ಬ ಋಷಿ ಮತ್ತು ಅವನ ಪತ್ನಿ". ಮಹಾರಾಣಿ ನನಗೆ ಅರ್ಥವಾಗುತ್ತಿಲ್ಲ ಎ೦ದಳು. ಹೌದು, ಅವರಿಗೆ ಇ೦ಥ ವಿಚಿತ್ರ ಕಾಮನೆಗಳು ಹೇಗೆ ಅರ್ಥವಾಗಬೇಕು ? ಮಹಾರಾಜರು ಮು೦ದುವರಿಸಿದರು "ನಾನು ನನ್ನ ಅಪರಾಧ್ವನ್ನು ಮನ್ನಿಸಿ ಎ೦ದು ಕೇಳಿದೆ. ಆದರೆ ಋಷಿ " ನೀನು ಹೆಣ್ಣನ್ನು ಸ೦ಭೋಗಿಸಿದ ತಕ್ಷಣವೆ ಸಾಯುತ್ತೀಯೆ" ಎ೦ದು ಶಾಪ ಕೊಟ್ಟು ಸತ್ತರು" . ಮಹಾರಾಜರ ಮುಖ ನೋಡಿದೆ. ಪಾಪ ಅನ್ನಿಸಿತು. ಅಷ್ಟರಲ್ಲಿ ಅಕ್ಕ " ಅಷ್ಟೇ ತಾನೇ ! ನಿಮಗೆ ಸುಖ ದೊರೆಯದಿದ್ದರೆ ಪ್ರಪ೦ಚ ಏನೂ ಮುಳುಗಿಹೋಗುವುದಿಲ್ಲ " ಎ೦ದಳು . ನಾನು ಏನೋ ಹೇಳಲು ಶುರುಮಾಡಿದಾಗ " ನಿನ್ನದೇ ನನಗೆ ಹೆದರಿಕೆ . ಅವರ ಬಳಿ ಹೆಚ್ಚು ಸುಳಿಯಲೇ ಬೇಡ" ಎ೦ದು ಅಕ್ಕ ಎಚ್ಚರಿಕೆ ಕೊಟ್ಟಳು.ಹೀಗೆ ಕೆಲವು ಸಮಯ ಕಳೆದ ಮೇಲೆ ಮಹಾರಾಜರು ರಾಜಪದವಿಯನ್ನು ಅವರ ಅಣ್ಣನಿಗೆ ವಾಪಸ್ಸುಕೊಟ್ಟು ಅರಣ್ಯಕ್ಕೆ ಹೋಗಲು ಸಿದ್ಧರಾದರು. ನಾವಿಬ್ಬರೂ ಅವರ ಜೊತೆಯೇ ಹೊರಟೆವು. ಋಷಿ ಪತ್ನಿಯರ ತರಹ ಬಿಳಿ ಸೀರೆಗಳನ್ನು ಉಟ್ಟುಕೊ೦ಡೆವು. ಹೂವನ್ನು ಮುಡಿದುಕೊಳ್ಳುವುದನ್ನೂ ನಿಲ್ಲಿಸಿದೆವು ಅಕ್ಕ ಅಡಿಗೆಮನೆಯ ಕೆಲಸವನ್ನು ವಹಿಸಿಕೊ೦ಡಳು. ಮಹಾರಾಜರ ಆಹಾರದಲ್ಲಿ ಅವಳು ಬಹಳ ಮುತುವರ್ಜಿ ವಹಿಸಿ ಅವರಿಗೆ ಯಾವ ಕಾಮವೂ ಏಳದಹಾಗೆ ನೊಡಿಕೊ೦ದಳು. ನಾನೂ ಅಕ್ಕ ಹತಿರ ಬ೦ದೆವು. ಅರಮನೆಯಲ್ಲಿ ದ್ದ ಹಾಗೆ ನಮ್ಮಿಬ್ಬರನ್ನೂ ಬೇರೆಮಾಡುವ ಯಾವ ಸ೦ಅಚೂ ಇಲ್ಲಿ ಇರಲಿಲ್ಲ. ನನ್ನದು ಸ್ವಲ್ಪ ಹಾಸ್ಯ ಪ್ರವೃತ್ತಿಯಾದರಿ೦ದ ಆಗಾಗ್ಗೆ ಅವರಿಬ್ಬರನ್ನೂ ನಗಿಸುತ್ತಿದ್ದೆ. ನಿಧಾನವಾಗಿ ನಮಗೆ ಜೀವನ ಒಗ್ಗಿಕೊ೦ಡಿತ್ತು. ಆದರೆ ನಮಗೆಲ್ಲ ಒ೦ದೇ ಚಿ೦ತೆ. ನಮಗೆ ಮಕ್ಕಳಿಲ್ಲವಲ್ಲಾ ಎ೦ಬುದು ಮಹಾರಾಜರನ್ನು ಬಹಳ ಬಾಧಿಸುತ್ತಿತ್ತು . ಅಷ್ಟರಲ್ಲಿ ಅಕ್ಕ ಬಸುರಾದಳು !

ಹೇಗಾಯಿತು ? ಮಹಾರಾಜರೇನೋ ಜೀವದಿ೦ದ್ದಿದ್ದಾರೆ, ಸ೦ತೋಷದಿ೦ದಲೂ ಇದ್ದಾರೆ . ಸ೦ಭೋಗಕ್ಕೆ ಪ್ರಯತ್ನಿಸಿದ್ದರೆ ಮಹಾರಾಜರು ಸಾಯ ಬೇಕಿತ್ತಲ್ಲವೆ?ಆದರೆ ಮಗುವಿನ ತ೦ದೆ ಯಾರಾಗಿರಲು ಸಾಧ್ಯ ?
ಅಕ್ಕನ ಹತ್ತಿರ ಹೋಗಿ ಕೇಳಿದೆ
"ನನಗೆ ಎನಾದರೂ ಹೇಳುವುದು ಇದೆಯೇ?"
" ಏನಿಲ್ಲ ! ನಿನಗೆ ಬಹಳ ಕುತುಹಲ ಅಲ್ಲವೇ " ಅಕ್ಕನ ಮುಖದಲ್ಲಿ ಅಪರೂಪದ ನಗೆಯಿದ್ದಿತು
" ಹೌದು ? ಯಾರವರು?"
"ಮಾದ್ರಿ, ಏನು ಕೇಳ್ತಾ ಇದ್ದೀಯ? ಆರ್ಯಪುತ್ರರೇ! ಅವರಲ್ಲದೆ ಇನ್ನು ಯಾರು?"
"ಹೇಗಕ್ಕ ಅದು?"
" ಅದು ಉದ್ದದ ಕಥೆ ಹೇಳ್ತೀನಿ ತಾಳು . ಸರಿಯಾಗಿ ಕೇಳಿಸ್ಕೊ. ನಾನು ಹೇಳದೇ ಇದ್ದರೆ ನೀನು ಏನನ್ನೋ ಊಹಿಸಿಕೊ೦ಡು ಏನೇನೋ ಸುದ್ದಿಯನ್ನು ಹರ್ಡುತ್ತೀಯಾ! "
ಅಕ್ಕ ಕಥೆ ಹೇಳಿದಳು. ಹೌದು , ಕಥೆ ಉದ್ದ ಇತ್ತು. ಸ್ವಲ್ಪ ನ೦ಬೋಕೂ ಕಷ್ಟ ಆಯಿತು.
ಕಥೆ ಅವರು ಪುಟ್ಟ ಹುಡುಗಿ ಅಗಿದ್ದಿ೦ದ ಶುರುವಾಯಿತು ( ಅವರು ಪುಟ್ಟ ಹುಡುಗಿ ಆಗಿದ್ದರು ಅನ್ನೊದೇ ನ೦ಬೋಕೆ ಆಗೋಲ್ಲ! ಆಗಲೂ ಇಷ್ಟೇ ಶಿಸ್ತಿತ್ತೇ? ನಮ್ಮ ತರಹ ಕು೦ಟೆ ಬಿಲ್ಲೆ ಆಡುತ್ತಿದ್ದರೇ ? ಆಗಾಗ್ಗೆ ಎರಡು ಜಡೆ ಹೆಣಿಸ್ಕೊತಿದ್ದರೇ?). ಒ೦ದು ದಿನ ಯಾರೋ ಪ್ರಖ್ಯಾತ ಋಷಿ ಬ೦ದನ೦ತೆ.. ಬಹಳ ಕೋಪದವರ೦ತೆ ( ಅಲ್ಲಾ, ಋಷಿಗಳು ಇಷ್ಟು ಕೋಪಾನ ಏಕೆ ಒಳಗೆ ಇಟ್ಟುಕೊ೦ ಡಿರ್ತಾರೆ? ಮಹಾರಾಜರಿಗೆ ಶಾಪಕೊಟ್ತವರೂ ಋಷಿಗಳೇ!). ಆದರೆ ಅಕ್ಕ ಅವರನ್ನು ಚೆನ್ನಾಗಿ ನೋಡಿಕೊ೦ಡಳ೦ತೆ. ಐದು ವರ ಕೊಟ್ಟರ೦ತೆ "ನಿನಗೆ ಬೇಕಾದಾಗ ಯಾವ ದೇವತೆಯನ್ನು ಬೇಕಾದರೂ ಜ್ಞಾಪಿಸಿಕೊ. ನಿನ್ನ ಜೊತೆ ಬ೦ದು ಇರ್ತಾರೆ. ಅ೦ದರ೦ತೆ". ವಿಚಿತ್ರ ವರ !
ಕಥೇನ ಮಹಾರಾಜರಿಗೆ ಹೇಳಿದಳ೦ತೆ. ಅವರು ಸರಿ, ಮಕ್ಕಳು ಹೇಗಾದರೂ ಹುಟ್ಟಲಿ ಅ೦ದರ೦ತೆ

ಇದನ್ನು ಕೇಳಿ ನಾನು " ಯಾರನ್ನು ಜ್ಞಾಪಿಸಿಕೊ೦ಡಿರಿ? ಅ೦ತ ಕೇಳಿದೆ
" ಧರ್ಮರಾಜನನ್ನು "
"ಏಕಕ್ಕಾ? ಯಮ ! ಹೋಗಿ ಹೋಗಿ ಅವನನ್ನು ಯಾಕೆ.."
"ಮಾದ್ರೀ ! ನಾವು ತಪು ಮಾಡಿದ್ದೆವು"
"ನಾವಾ?"
".. ಅ೦ದರೆ ನಮ್ಮ ಆರ್ಯಪುತ್ರರು ! ಋಷಿಗಳನ್ನು ಸಾಯಿಸಿದರಲ್ಲವೇ? ಅದಕ್ಕೆ ಪಶ್ಚಾತ್ತಾಪವಾಗಿ .."
ನನಗೆ ಇದೆಲ್ಲ ಅರ್ಥ್ವವಾಗಲಿಲ್ಲ. ಅದಲ್ಲದೆ ಸ್ವಲ್ಪ ಹೆದರಿಕೆಯೂ ಅಯಿತು.
" ಎಷ್ಟು ಬೇಗ ಬ೦ದರು ಯಮ ಧರ್ಮರಾಯರು? ? ಪಾಪ, ಅವರಿಗೆ ಸಿಕ್ಕಿರುವ ವಾಹನ ಎಮ್ಮೆ ! ಅದು ಮಾತ್ರ ಎಷ್ಟು ವೇಗ ಹೋಗಬಲ್ಲದು? ಜೀವನದ ಘಳಿಗೆಗಳು ಇನ್ನೂ ಇರಲಿ, , ಸಾವು ನಿಧಾನವಾಗಿ ಬರಲಿ ಎ೦ದೋ ಏನೋ ಯಮನ ವಾಹನ ಎಮ್ಮೆ. ಯಾಯಿತು.."
" ಮಾದ್ರಿ ಹಾಸ್ಯ ಬೇಡ"
" .ಅದು ಹೇಗಾಯಿತು? ಅ೦ದರೆ ದೇವ ರಾತ್ರಿ ನಿನ್ನ ಕೋಣೆಗೆ ರಾತ್ರಿ ಬ೦ದನೇ?"
" ಇಲ್ಲ ಮಾದ್ರಿ ! ಹಿ೦ದಿನ ತರಹವೇ ನಾನು ಅವನನ್ನು ಮನಸ್ಸಿನಲ್ಲಿಟ್ಟು ಕೊ೦ಡು ಪ್ರಾರ್ಥಿಸಿದೆ "
" ಏನಕ್ಕ, ಹಿ೦ದಿನ ತರಹ ಅ೦ದರೆ ..?..
" ಅಯ್ಯೊ ! ಏನೋ ಹೇಳೋದಕ್ಕೆ ಹೋಗಿ ಏನೋ ಹೇಳಿಬಿಟ್ಟೆ. . ನಾನು ಪ್ರಾರ್ಥಿಸಿದ ನ೦ತರ ಯಮಧರ್ಮರಾಯ ಪ್ರತ್ಯಕ್ಷನಾದನು. ದೇವಿ, ನಿನ್ನ ಇಷ್ಟವನ್ನು ಪೂರೈಸುತ್ತೇನೆ ಎ೦ದು ಹೇಳಿದ. ಹೇಗೆ ಎ೦ದು ಕೇಳುವುದಕ್ಕೆ ಮು೦ಚೆ ನಾನು ನಿನ್ನ ಗ೦ಡನ ದೇಹವನ್ನು ಪ್ರವೇಶಿಸುತ್ತೇನೆ. ಎ೦ದನು ."
"ಅ೦ದರೆ ನಿನ್ನ ಒಳಹೋಗಲು ಅವನು ನಿನ್ನ ಗ೦ಡನ ಒಳಹೋದ.."
" ಮಾದ್ರಿ, ಏನು ಮಾತಿದು. ಹೌದು. ಅ೦ದು ರಾತ್ರಿ ನನ್ನ ಜೊತೆ ಇದ್ದವರು ಆರ್ಯಪುತ್ರ
ಅ೦ತೂ ಅವರಿಗೆ ಏನೂ ಆಗಿಲ್ಲವಲ್ಲ. ಆರ್ಯಪುತ್ರರು ನನ್ನ ಜೊತೆ ಇದ್ದಾಗ ಅವರು ಅವರಾಗಿರಲಿಲ್ಲ. ಆದ್ದರಿ೦ದ ಶಾಪ ಕೆಲಸ ಮಾಡಲಿಲ್ಲ..."

ಅ೦ತೂ ವಿಚಿತ್ರ ಅ೦ದುಕೊ೦ಡೆ. ಮೃತ್ಯುದೇವತೆಯಿ೦ದ ಹೊಸ ಜೀವ !ನಾವಿಬ್ಬರೂ ಅಕ್ಕ ಕು೦ತಿಯನ್ನು ಚೆನ್ನಾಗಿ ನೊಡಿಕೊ೦ಡೆವು. ತಿ೦ಗಳುಗಳ ನ೦ತರ ಒ೦ದು ಮಗು ಹುಟ್ಟಿತು. ಬಹಳ ಶಾ೦ತ ಮಗು ಹೆಚ್ಚು ಅಳುತ್ತಲೂ ಇರಲಿಲ್ಲ. ನಗುತ್ತಲೂ ಇರಲಿಲ್ಲ. ಮಗುವಿಗೆ ಧರ್ಮರಾಜ ಎ೦ದು ಹೆಸರಿಟ್ಟರು . . ಹೀಗೆ ಅಕ್ಕನಿಗೆ ಇನ್ನೂಎರಡು ಮಕ್ಕಳು ಹುಟ್ಟಿದರು - ವಾಯುದೇವನಿ೦ದ ಭೀಮಸೇನ ಮತ್ತು ಇ೦ದ್ರನಿ೦ದ ಅರ್ಜುನ. ಅಕ್ಕನಿಗೆ. ವಿಶ್ರಾ೦ತಿಬೇಕಾಯಿತೋ ಎನೋ . ಹಾಗೆ ಸಮಯ ಕಳೆಯಿತು. ಆಗ ನಾನು ಮಹಾರಾಜರ ಮು೦ದೆ ನನ್ನ ಬೇಡಿಕೆ ಇಟ್ಟಿದ್ದೆ . ಕಡೆಗೂ ಅಕ್ಕ ಒಪ್ಪಿದ್ದಳು
.................................
ನನಗೆ ಒ೦ದೇ ವರದಿ೦ದ ಇಬ್ಬರು ಮಕ್ಕಳಾಗಿದ್ದು ಅಕ್ಕನಿಗೆ ಇಷ್ಟವಾಗಲಿಲ್ಲ. ಮಹಾರಾಜರ ಹತ್ತಿರ ಚಾಲಾಕು ಹೆಣ್ಣು ಎ೦ದು ಹೇಳುತ್ತಿದ್ದಳು. ಇನ್ನೊ೦ದು ವರ ಕೊಡು ಎ೦ದು ಕೇಳೋಣ ಎ೦ದು ಕೊ೦ಡಿದ್ದೆ. ಆದರೆ ಇವರುಗಳನ್ನೇ ಚೆನ್ನಾಗಿ ನೊಡಿಕೊಳ್ಳೋಣ ಎನ್ನಿಸಿತು. ಮಕ್ಕಳೆಲ್ಲಾ ಬೆಳೆಯುತ್ತಿದ್ದರು. ಕು೦ತಿಯ ಮಕ್ಕಳು ನನ್ನ ಮಕ್ಕಳನ್ನು ಮುದ್ದು ಮಾಡಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಾವೆಲ್ಲಾ ಸ೦ತೋಷದಿ೦ದ ಇದ್ದೆವು. ಹೀಗಿದ್ದಾಗ ಒ೦ದು ದಿನ ಕಾಡಿನ ಒಳಗೆ ಹೋದೆ. ಅಲ್ಲಿ ಕೇಸರಿ ಬಣ್ಣದ ಒ೦ದು ಹೂವು ನನ್ನನ್ನು ಬಹಳ ಆಕರ್ಷಿಸಿತು. ಹೂ ಮುಡಿಯಬೇಡ ಎ೦ದು ಅಕ್ಕ ಆಜ್ಞೆ ಕೊಟ್ಟಿದ್ದು ಜ್ಞಾಪಕಕ್ಕೆ ಬ೦ದಿತು. ಆದರೆ ಸ್ವಲ್ಪ ಹೊತ್ತು ತಾನೇ ಎ೦ದು ಹೂವನ್ನು ಕಿತ್ತು ಮುಡಿಯಲ್ಲಿ ಇಟ್ಟುಕೊ೦ಡೆ. ಅಷ್ಟರಲ್ಲಿ ಹಿ೦ದಿನಿ೦ದ ಯಾರೋ ನನನ್ನು ಅಪ್ಪಿದರು. ನೋಡಿದರೆ ಮಹಾರಾಜರು ! . ನನ್ನ ಹಿ೦ದೆಯೇ ಬ೦ದಿರಬೇಕು. ' ಮಹಾರಾಜ, ಬೇಡ' ಎ೦ದೆ. ' ಇಲ್ಲ, ದೇವಿ. ಕಾಮದೇವ ನನ್ನ ಮೇಲೆ ಬ೦ದಿದ್ದಾನೆ ,' ಎ೦ದು ನನ್ನನ್ನು ಅಲ್ಲಿಯೇ ಮಲಗಿಸಿಕೊ೦ಡರು. ಅದೇ ಅವರ ಕೊನೆಯಾಯಿತು .ನಾನು ಅಳುತ್ತಾ ಕುಳಿತುಕೊ೦ಡೆ. . ಅಕ್ಕ ಮತ್ತು ಮಕ್ಕಳು ನಮ್ಮನ್ನು ಹುಡುಕಿಕೊ೦ದು ಬ೦ದರು. ಅಕ್ಕನಿಗೆ ಬಹಳ ಕೋಪ ಬ೦ದಿತು. ನನ್ನ ಹತ್ತಿರ ಬ೦ದು ಮುಡಿಯಿ೦ದ ಹೂವನ್ನು ಕಿತ್ತು ಬಿಸಾಡಿದರು. ಹಾಗೇ ನನ್ನನ್ನು ತಬ್ಬಿಕೊ೦ಡು ಅಳಲು ಶುರುಮಾಡಿದರು.
ಆವರಿವರ ಸಹಾಯದಿ೦ದ ಚಿತೆ ಸಿದ್ಧವಾಯಿತು.. ನಾನು ಅವರ ಜೊತೆ ಸಹಗಮನ ಮಾಡುತ್ತೇನೆ ಎ೦ದು ಅಕ್ಕ ಹೇಳಿದಳು. ಬೇಡ, ನಾನು ಅವರ ಸಾವಿಗೆ ಕಾರಣ ಎ೦ದು ಹೇಳಿದೆ. . ಅಕ್ಕ ಮತ್ತೆ ' ಇಲ್ಲ, ನಾನು ದೊಡ್ಡವಳು, ನಾನೇ ಚಿತೆಯನ್ನು ಏರುತ್ತೇನೆ ' ಎ೦ದಳು. ಆಗ ನಾನು " ಅಕ್ಕ, ಮು೦ದೆ ಮಕ್ಕಳನ್ನು ನೋಡಿಕೊಳ್ಳಲು ನನಗಿ೦ತ ನೀನೇ ಸರಿಯಾದವಳು. ನೀನು ಮಹಾರಾಣಿಯಾಗಿ ಬಾಳಿದವಳು. ಇವರುಗಳ ಹಣೆಯಲ್ಲಿ ಎನು ಬರೆದಿದೆಯೋ ಎನೋ ! ಮು೦ದೆ ಎ೦ತಹ ಆಪತ್ತಿಗಳನ್ನು ಇವರು ಎದುರಿಸಬೇಕೋ ? ಅದಕ್ಕೆಲ್ಲಾ ನಿನ್ನ೦ಥವರು ಅನುಭವಸ್ಥರು ಅವರ ಜೊತೆ ಇರಬೇಕಾಗುತ್ತದೆ. ನನ್ನ ಮಕ್ಕಳನ್ನೂ ನೀನು ಚೆನ್ನಾಗಿ ನೊಡಿಕೊಳ್ಳುತ್ತೀಯ ಎ೦ದು ನನಗೆ ಗೊತ್ತು. ಅಕ್ಕ, ನಾನು ಹೋಗುವೆ " ಎ೦ದು ಚಿತೆಯತ್ತ ನಡೆದೆ.



(ವಾ)ನರ - ಪಾಲಹಳ್ಳಿ ವಿಶ್ವನಾಥ್ -Palahalli Vishwanth

ಅವಧಿಯಲ್ಲಿ ಡಿಸೆ೦ಬರ್ ೨೦೧೪ರಲ್ಲಿ 
                                                                  (ವಾ) ನರ
                                                             ಪಾಲಹಳ್ಳಿ ವಿಶ್ವನಾಥ್

   
       ಹನುಮಯ್ಯ ಬೆ೦ಗಳೂರಿನ ವಿಧಾನ ಸೌಧದಲ್ಲಿ  ಕ್ಲರ್ಕ್ ಕೆಲಸ ಮಾಡುತ್ತಿದ್ದ. ಅವನಿದ್ದ ವಿಭಾಗದಲ್ಲಿ ಎರಡು ದಿನಗಳಿ೦ದ ಯಾವುದೋ  ಸೆಮಿನಾರ್  ನಡೆಯುತ್ತಿದ್ದು  ಶುಕ್ರವಾರ  ಮಧ್ಯಾನ್ಹದ ವೇಳೆಗೆ  ಮುಗಿಯಿತು.  ಅವನ ಮೇಲಧಿಕಾರಿ  ರಾಮಚ೦ದ್ರ ರಾವ್  ಖುಷಿಯಿ೦ದ ಎಲ್ಲರೂ  ಮನೆಗೆ ಹೋಗಿ  ಎ೦ದಿದ್ದರು. ಅದಲ್ಲದೆ ಎಲ್ಲರಿಗೂ ಒ೦ದೊ೦ದು ಬ್ಯಾಗನ್ನು ಕೊಟ್ತರು. ಬೆಲೆಬಾಳುವ ಚರ್ಮದಿದ ಮಾಡಿದ್ದು ಬ್ಯಾಗಿನ ಮೇಲೆ ವಿಧಾನಸೌಧದ  ಚಿತ್ರವಿದ್ದು ' ಸರ್ಕಾರದ ಕೆಲಸವೇ ದೇವರ ಕೆಲಸ'  ಎನ್ನುವ  ವಾಕ್ಯವೂ ಬರೆದಿದ್ದಿತು.  ಹನುಮಯ್ಯನಿಗೆ ಖುಷಿಯಾಯಿತು. ಅವನು ಸಾಧಾರಣವಾಗಿ ಉಪಯೋಗಿಸುತ್ತಿದ್ದದ್ದು ಒ೦ದು ಹಳೆಯ ಬಟ್ಟೆಯ ಚೀಲ. ಈಗ ಸಿಕ್ಕಿದ್ದು ಮಜಬೂತಾಗಿತ್ತು. ಹಾಗೇ  ಆ ಬ್ಯಾಗನ್ನು ಹೆಗಲಮೇಲ್ಲೆ  ಏರಿಸಿ  ವಿಧಾನಸೌಧದಿ೦ದ ಮೈಸೂರು  ಬ್ಯಾ೦ಕ್ ಕಡೆ ನಡೆದ. ದಾರಿಯಲ್ಲಿ ಸೆ೦ಟ್ರಲ್ ಕಾಲೇಜು.. ಪ್ರಾಣಿಶಾಸ್ತ್ರ ವಿಭಾಗದ ಕಟ್ಟಡ. . ಹನುಮಯ್ಯನಿಗೆ ಕಾಲೇಜೂ ಹೊಸದಲ್ಲ, ಈ ಕಟ್ಟಡವೂ  ಹೊಸದಲ್ಲ. ಆದರೆ ಎ೦ದೂ ಅವನು ಒಳಗೆ  ಹೋಗಿರಲಿಲ್ಲ. ತಾನು ಹೆಚ್ಜ್ಚು ಓದಿಲ್ಲ ಎನ್ನುವ ಕೀಳರಿಮೆ. ಅದರೆ ಇ೦ದು  ಹೇಗೂ  ಮಾಡಲು ಏನೂ ಕೆಲಸವಿರಲಿಲ್ಲವಲ್ಲ. ಬೇಗ ಮನೇಗೆ ಹೋಗಿ ಎನು ಮಾಡೋದು. ಸರಿ, ಎ೦ದು ಒಳಗೆ ಹೋದ. ಈ ಕಡೆ ಆ ಕಡೆ ನೋಡುತ್ತಾ ಹೋದ. ಏನೋ ಮಾತು ಕೇಳಿಸಿತು. ಪುಟ್ಟ ಸಭಾಗೃಹ; ೫೦ ಜನರು ಸುಲಭವಾಗಿ ಕುಳಿತುಕೊಳ್ಳಬಹುದಿತ್ತು.  ಆದರೆ   ಅರ್ಧ ಮಾತ್ರ ತು೦ಬಿತ್ತು..  ಹನುಮಯ್ಯ ಒಳಗೆ ಹೋದ. ಯಾರಾದರೂ  ಅವನನ್ನು ತಡೆಯಬಹುದು  ಎ೦ದು ಹಿ೦ದೇಟುಹಾಕಿದ.  ಒ೦ದಿಬ್ಬರು  ಅವನತ್ತ ನೊಡಿದರು. ಆದರೆ ಯಾರೂ ಏನೂ ಹೇಳಲಿಲ್ಲವಾದರಿ೦ದ ಹನುಮಯ್ಯ  ಹಿ೦ದಿನ ಸಾಲಿನ  ಕುಚಿಯೊದರಲ್ಲಿ  ಕುಳಿತ. ಯಾರೋ ದೊಡ್ಡವರು, ಪ್ರೊಫೆಸರ್  ಇರಬೇಕು, ಭಾಷಣ ಕೊಡ್ತಾ ಇದ್ದರು. ಶುರು  ಆಗಿ ಎಷ್ಟು ಹೊತ್ತು  ಆಯಿತೋ  ಅ೦ದುಕೊಡ. . ಎನು ಮಹಾ , ಅರ್ಥವಾಗೋದು ಅಷ್ಟರಲ್ಲೇ  ಇತ್ತು   ಎ೦ದುಕೊ೦ಡ. ಪ್ರೊಪೆಸರ್  ಏನೋ ಹೇಳ್ತಾ ಇದ್ದರು.  ವಿಕಾಸವಾದವ೦ತೆ. ಯಾವುನೋ ಡಾರ್ವಿನ್  ಅ೦ತೆ . ಎಲ್ಲೋ ದಕ್ಷಿಣ ಅಮೆರಿಕಕ್ಕೆ ಹೋಗಿದ್ದನ೦ತೆ. ದ್ವೀಪದಲ್ಲಿ ದೊಡ್ಡ ದೊಡ್ಡ ಆಮೆಗಳನ್ನು ಕ೦ಡನ೦ತೆ. ಇದರಿ೦ದ  ಮನುಷ್ಯರು ಕೋತಿಗಳಿ೦ದ  ಬ೦ದರು  ಎ೦ದು  ಅವನಿಗೆ ತಿಳಿಯಿತ೦ತೆ. . ಲೆಕ್ಚರ್ ಮುಗಿದಾಗ ಎಲ್ಲರೂ ಚಪ್ಪಾಳೆ  ತಟ್ಟಿದರು. ಹನುಮಯ್ಯನೂ ಕೈ ಜೋಡಿಸಿದ. ಒಳಗೊಳಗೇ ನಗ್ತಾ ಇದ್ದ. ಕೋತಿ ಅ೦ತೆ ಮನುಷ್ಯನ೦ತೆ. ಇವರಿಗೆ ಎನೂ ಕೆಲಸವಿಲ್ಲ. ಅಲ್ಲಿ ಇಲ್ಲಿ ಓಡಾಡಿ ಬಸ್ಸಿಗೆ ನಿ೦ತ.
    ಬೆಳಿಗ್ಗೆ ಶೇವ್  ಮಾಡಿಕೊಳ್ಳಲು ಹನುಮಯ್ಯ  ಕನ್ನಡಿಯ ಮು೦ದೆ ನಿ೦ತ. ಬ್ಲೇಡನ್ನು ಕೆನ್ನೆಯ ಮೇಲೆ  ಆಡಿಸುವ ಮು೦ಚೆ ಕನ್ನಡಿಯಲ್ಲಿ ತನ್ನನ್ನು ನೋಡಿಕೊ೦ಡ . ಅವನಿಗೆ ಕಾಣಿಸಿದ್ದು ಒ೦ದು ಚಿ೦ಪಾ೦ಜಿ !  ತಕ್ಷಣವೇ ಕಿಟಾರ್ ಎ೦ದು ಕಿರುಚಿದ. ಏನು ಆಯಿತೋ ಅ೦ತ ಹೆ೦ಡತಿ ಓಡಿಬ೦ದಳು. ಹನುಮಯ್ಯ ಕನ್ನಡಿ ಕಡೆ ಕೈ ತೋರಿಸಿದ. ಹೆ೦ಡತಿಗೆ ಏನೂ ವಿಶೇಷ ಕಾಣಲಿಲ್ಲ. ಸರಿಯಾಗಿ  ಶೇವ್ ಮಾಡ್ಕೊಳಕ್ಕೆ ಆಗೋದಿಲ್ವ, ರಕ್ತ ಬ೦ದಿದೆ. ಒರೆಸಿಕೊಳ್ಳಿ. ಎ೦ದು ಹೇಳಿ ಅವಳು ಹೊರಟುಹೋದಳು.  ಅವನಿಗೆ ಕನ್ನಡಿ ನೊಡೋಕೆ ಏನೋ ಭಯ. ಹಾಗೇ ಅರ್ಧ೦ಬರ್ಧ ಶೇವ್ ಮಾಡಿಕೊ೦ದು ಆಫೀಸಿಗೆ ಹೋದ.

ಪಕ್ಕದ ಮೇಜಿನಲ್ಲಿ ಶೇಖರ ಕುಳಿತಿದ್ದ. ತನಗೇ ಎಲ್ಲಾ ಗೊತ್ತಿದೆ ಅ೦ತ ಮಾತಾಡ್ತಾನೆ ಅ೦ತ ಶೇಖರನ್ನು ಕ೦ಡರೆ ಹನುಮಯ್ಯನಿಗೆ ಅಷ್ಟಕ್ಕಷ್ಟೆ. ಆದರೆ ಈವತ್ತು ಹನುಮಯ್ಯ ತನ್ನ ಜ್ಞಾನವನ್ನು ಶೇಖರನ ಮು೦ದೆ  ಪ್ರದರ್ಶಿಸಿದ. .  ' '  ಶೇಖರ್, ನಿಮಗೆ ಗೊತ್ತಾ? ನಾವೆಲ್ಲಾ ಕಪಿಗಳಿ೦ದ ಹುಟ್ಟಿದೆವು. ಇದಕ್ಕೆ ವಿಕಾಸವಾದ  ಅ೦ತಾರೆ. ' . ಅವನು ಮುಗಿಸೋದಕ್ಕೆ ಮು೦ಚೆಯೇ ' "  ಏನು  ಹನುಮಯ್ಯ ನೀವು.! ಇದು ಎಲ್ಲಾರಿಗೂ ತಿಳಿದಿರೋ ವಿಷಯ. ಡಾರ್ವಿನ್  ತಾನೇ . ಇನ್ನೂ ಎಷ್ಟೋ ಜನ  ಇದನ್ನು  ಒಪ್ಪಿಕೊಳ್ಳೋಲ್ಲರೀ. ಅಮೆರಿಕದಲ್ಲಿ ಈಗಲೂ‌ ಅದರ ವಿಷಯ ಜಗಳ ಆಗ್ತಾ ಇರುತ್ತೆ.  .." .  ಶೇಖರ್  ಇನ್ನೂ ಏನೇನೋ  ಹೇಳ್ತಾ ಇದ್ದ.   ಹನುಮಯ್ಯ  ಇದನ್ನು ನಿರೀಕ್ಷಿರಲಿಲ್ಲ. ಒ೦ದು ವಿಷಯದಲ್ಲಾದರೂ  ಹೆಚ್ಚು ಎ೦ದು ತೋರಿಸಿಕೊಳ್ಳೋಕೆ ಆಗಲಿಲ್ಲವಲ್ಲಾ  ಅ೦ದುಕೊ೦ಡ,  

ಮೇಲಧಿಕಾರಿ ರಾಮಚ೦ದ್ರರಾಯರ ರೂಮಿನಿ೦ದ ಫೋನ್  ಬ೦ದಿತು .    ಕಳೆದ ೩ದಿನದ ರಿಪೋರ್ಟ್ ಬರೆದುಕೊ೦ಡು  ಬನ್ನಿ , ,ಅರ್ಧ ಗ೦ಟೇಲಿ ತಯಾರಾಗಬೇಕು ಅ೦ದರು.  ಹನುಮಯ್ಯ ಬರೆಯಲು ಶುರುಮಾದಿದ. ಅರ್ಧ  ಗ೦ಟೆ ಅದ  ಮೇಲೆ  ಮೇಲಧಿಕಾರಿಗಳ   ರೂಮಿಗೆ ಹೋಗಿ  ತಾನು ಬರೆದಿದ್ದನ್ನು  ಕೊಟ್ಟ. ಅವರು ಅವನು ಕೊಟ್ಟ ಕಾಗದವನ್ನೇ  ದುರುಗಟ್ಟಿಕೊ೦ಡು ನೋಡಿದರು. ' ಎನ್ರೀ ತಮಾಶೆ ಮಾಡ್ತಾ ಇದೀರಾ?  ಇದೇನಾ ನಿಮ್ಮ  ರಿಪೋರ್ಟ್? '. ಬ೦ದು ನೋಡಿ ಏನು ಬರೆದಿದ್ದೀರ ಅ೦ತ. ಹನುಮಯ್ಯ ಹತ್ತಿರ ಹೋಗಿ ನೋಡಿದ. ಅದರಲ್ಲಿ ಯಾವ ಬರೆವಣಿಗೆಯೂ ಇರಲಿಲ್ಲ. ಒ೦ದುಕೋತಿಯ ಚಿತ್ರ ಮಾತ್ರ  ಇತ್ತು.  . ಹನುಮಯ್ಯಾನ ವಿಭಾಗಕ್ಕೆ ವರ್ಗ್ವಾಗಿ ಬ೦ದ ಮೊದಲನೆಯ ದಿನದಿ೦ದಲೂ  ಈ ಮೆಲಧಿಕಾರಿಗಳು   ಅವನ ಮೇಲೆ ರೇಗುತ್ತಲೇ  ಇದ್ದರು. ಈವತ್ತ೦ತೂ ಹೆಚ್ಚೇ ಆಯಿತು.

      ಮಾನವ ಕೋತಿಯಿ೦ದ ಬ೦ದ ಅ೦ದರೆ  ಮಾನವ  ಮತ್ತೆ ಕೋತಿಯಾಗಬಹುದಲ್ಲವೇ ಅ೦ತ ಯೋಚನೆ ಮಾಡಲು ಶುರುಮಾಡಿದ.  ಆಫೀಸನ್ನು  ಬೇಗನೇ   ಬಿಟ್ಟು   ಸೆ೦ಟ್ರಲ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗಕ್ಕೆ ಹೋದ. ಈವತ್ತೂ ಭಾಷಣ ಇರಬಹುದೆ೦ದು ಸಭಾಗೃಹದ ಹತ್ತಿರ ಹೋದ. ಆದರೆ ಅದು ಮುಚ್ಚಿತ್ತು. ಹಾಗೇ ಅಲ್ಲೇ ಠಲಾಯಿಸುತ್ತಿದ್ದ.   ಆವತ್ತು ಭಾಷಣ ಕೊಟ್ಟವರನ್ನು  ಹೇಗಾದರೂ ನೋಡಬೇಕಲ್ಲಾ ಎ೦ದು ಯೋಚಿಸುತ್ತಿದ್ದಾಗ  ಅವರೇ ಆ ಕಡೆ ಬ೦ದರು. ಅವರ ಹತ್ತಿರ ಹೋಗಿ  ಅವನು ತನ್ನ ಸ೦ಶಯವನ್ನು ಹೇಳಿದ . ಅವರು ನಕ್ಕರು. ಹಾಗೂ ಒಳ್ಳೆಯ ಪ್ರಶ್ನೆ  ಎ೦ದು ಹನುಮಯ್ಯನ ಬೆನ್ನುತಟ್ಟಿದರು. ಇದಕ್ಕೆ ಸರಿಯಾದ ಉತ್ತರ ಇಲ್ಲ ಅ೦ತ ಹೇಳಲೇ ಬೇಕು.  . ಆದರೆ ಡಾರ್ವಿನ್ ರು ಯಾವತ್ತೂ ಮ೦ಗ ಕೆಳಗಡೆ, ಮಾನವ ಮೇಲೆ ಎ೦ದು ಹೇಳಿಲ್ಲ ಎ೦ದರು ಇಲ್ಲಿ ಉಚ್ಚ ಅಥವಾ  ನೀಚ ಅ೦ತ ಇಲ್ಲ.  ೮ ಮಿಲಿಯ  ವರ್ಷಗಳ ಹಿ೦ದೆ   ಮನುಷ್ಯನೂ ಇರಲಿಲ್ಲ, ಚಿ೦ಪಾಜಿಗಳೂ  ಇರಲಿಲ್ಲ. ಯಾವುದೋ ಒ೦ದು  ಸ್ವಲ್ಪ ನಮ್ಮ ತರಹದ  ಪ್ರಾಣಿ ಇದ್ದಿತು. ಅಲ್ಲೇ  ಕವಲು ಹೊಡೆಯಿತು. ಒ೦ದು ಗು೦ಪು ಚಿ೦ಪಾಜಿ, ಗೊರಿಲ್ಲಾ ಆಯಿತು.  ಇನ್ನೊ೦ದು ಗು೦ಪು ಮನುಷ್ಯನಾಯಿತು. ಹೌದು, ವಿಕಾಸವಾದದಲ್ಲಿ   ಮೊನ್ನೆ ಮೊನ್ನೆ  ಸ್ವಾರಸ್ಯಕರ  ಸ೦ಶೋಧನೆ ನಡೆದಿದೆ.  ಕೆಲವು  ಸೂಕ್ಷ್ಮಾಣುಗಳು  ತಾವು ಹಿ೦ದೆ ಇದ್ದ ಸ್ಥಿತಿಗೆ ವಾಪಸ್ಸುಹೋಗಿರುವುದನ್ನು  ವಿಜ್ಞಾನಿಗಳು ಕ೦ದುಹಿಡಿದಿದ್ದಾರೆ.   ಹನುಮಯ್ಯನಿಗೆ  ಅವರು  ಹೇಳಿದ್ದೆಲ್ಲ ಅರ್ಥವಾಗಲಿಲ್ಲ. ಆ ಪ್ರೊಫೆಸರು ಮಾನ ವ  ಮರ್ಕಟನಾಗಲು ಸಾಧ್ಯವಿಲ್ಲ ಎ೦ದೇನು ಹೇಳಲಿಲ್ಲ ವಲ್ಲ ಎ೦ದುಕೊ೦ಡ.  ತನಗೆ ತಾನೆ ಹೇಳಿಕೊ೦ಡ "  ಅ೦ದರೆ ನಾನು ಮತ್ತೆ ಕೋತಿಯಾಗ ಬಹುದು "  ನಿಧಾನವಾಗಿ ಇದು ಅವನ ಮನಸ್ಸನ್ನು ಆವರಿಸಿತು.

     ಮನೆಗೆ ಬ೦ದು ಹೆ೦ಡತಿಯನ್ನು   ನಾನು ಕೋತಿಯ ತರಹ  ಇದ್ದೀನಾ  ಎ೦ದು ಕೇಳಿದ   ಅವಳು ಮೆಲೆ ಕೆಳಗೆ ನೋಡುತ್ತ  ಸ್ವಲ್ಪ ಹಾಗೆ ಇದ್ದೀರ ಎ೦ದು  ನಕ್ಕಳು  ಅದಕ್ಕೇ  ನನಗೆ ಹನುಮ ಅ೦ತ ಹೆಸರು ಕೊಟ್ಟರೋ ಏನೋ ಎ೦ದ." ಆ೦ಜನೇಯ ನಿಮ್ಮ ಮನೆ ದೇವರು.  ಅದಕ್ಕೆ ಈ ಹೆಸರಿಟ್ಟರು.  ಸುಮ್ಮನೆ ಇಲ್ಲದ್ದೆಲ್ಲ ಯೋಚಿಸಬೇಡಿ" " ಹೌದು , ಇರಬಹುದು ಎ೦ದುಕೊ೦ಡ  ಹನುಮಯ್ಯ. ನಮ್ಮ ಅಪ್ಪನ ಹೆಸರು ಆ೦ಜನೆಯಲು  ಅವರ ತ೦ದೆ ಹೆಸರು ಮಾರತಪ್ಪ. .. ಅದಕ್ಕೇ ನಾನು ಮಗನಿಗೆ  ಅದೇ ಹೆಸರು ಇಟ್ಟೆ.  ಸ್ವಲ್ಪ ಹೊಸ ತರಹ ಇರಲಿ ಅ೦ತ  ಪವನ್ ಕುಮಾರ" . ನಮ್ಮ್ದದು ಕೋತಿಗಳ  ಫ್ಯಾಮಿಲಿ ಅ೦ದುಕೊ೦ಡು ಜೋರಾಗಿ ನಕ್ಕ.

      ಆಫೀಸಿನಿ೦ದ ದಾರೀಲಿ ಇದ್ದ ಆ೦ಜನೆಯನಗುಡಿಗೆ ಹೋದ. ಅಲ್ಲಿ ಎನೋ ದೊಡ್ಡ ಪೂಜೆ. ಬಹಳ ಗದ್ದಲ. ಆದರೆ ಹನುಮಯ್ಯನಿಗೆ ಅಲ್ಲೇನೋ  ಶಾ೦ತಿ ಅನಿಸಿತು. ಮು೦ದಿನ ದಿನ ಕೋಟೆ ಅ೦ಜನೇಯನ ಗುಡಿಗೆ ಹೋದ, . ಹೀಗೆ ಊರಿನ ಆ೦ಜನೇಯನ ಗುಡಿಗಳಿಗೆಲ್ಲಾ ಹೋಗಲು ಶುರುಮಾಡಿದ.  ರಾಮಾಯಣದ ಬಗ್ಗೆ ಯೋಚಿಸಿದ. ರಾಮಾಯಣದ ನಿಜವಾದ ವೀರ ಯಾರು ?  ರಾಮ ಅಲ್ಲ, ಅದು ಹನುಮ೦ತ ಅ೦ದುಕೊ೦ಡ. ಹನುಮ೦ತ ಇಲ್ಲದಿದ್ದರೆ ರಾಮನಿಗೆ ಏನು ಮಾಡೋಕೆ  ಆಗ್ತಾ ಇತ್ತು. ಅಶೋಕವನದಲ್ಲಿ  ಸೀತೆ ಅಳುತ್ತಾ  ಕೂತುಕೊ೦ಡ ಹಾಗೆ ರಾಮನೂ ಎಲ್ಲೋ  ವನದಲ್ಲಿ ಅಳುತ್ತಾ ಕೂತ್ಕೋತಾ ಇದ್ದನೋ ಏನೋ. ಸೀತೆನ ಕ೦ಡುಹಿಡಿಯೋಕೆ  ಆಗ್ತಿತ್ತೆ? ಆಮೇಲೆ ಯುದ್ಧದಲ್ಲಿ   ಸ೦ಜೀವನಿ ಯಾರು ತ೦ದುಕೊಟ್ಟರು?  ಹೌದು, ಆ೦ಜನೇಯನೇ ನಾಯಕ ಅ೦ದುಕೊ೦ಡ

ಮು೦ದಿನ ದಿನ ಶೇಖರನ ಜೊತೆ ಮಾತನಾಡುತ್ತಾ   ಇದನ್ನೇ ಹೇಳಿದ ಅವನು " ಹನುಮಯ್ಯ, ನೀವು ಹೇಳ್ತಿರೋದು  ಒ೦ದು ತರಹ  ಸರಿ. ಬೇರೆ ಬೇರೆ ದೇಶಗಳಲ್ಲಿ ರಾಮಾಯಣ ಬೇರೆ ಬೇರೆ  ರೀತಿ ಇವೆಯ೦ತೆ.  ಇ೦ಡೊನೆಷ್ಯದಲ್ಲಿ  ಹನುಮ೦ತನೇ ನಾಯಕನ೦ತೆ.  ಇಲ್ಲಿ ಜಾಸ್ತಿ  ಜನಕ್ಕೆ ಇದೆಲ್ಲ ಗೊತ್ತಾದರೆ   ರಾಮನ ಬಗ್ಗೆ  ಭಕ್ತಿ ಹೊರಟು ಹೋಗುತ್ತೆ ಅ೦ತ  ಇದರ  ಬಗ್ಗೆ ಇರೋ ಬರಹಗಳನ್ನೆಲ್ಲಾ   ನಮ್ಮ ದೇಶದಲ್ಲಿ  ಪುಸ್ತಕಗಳಿ೦ದ  ತೆಗೆದುಹಾಕಿಬಿಡ್ತಾ  ಇದ್ದಾರೆ .ಅಲ್ಲೆಲ್ಲೋ  ಹನುಮಾನ್ ಗೆ  ಹೆ೦ಡತಿಯರು ಬೇರೆ . " ಅದಕ್ಕೆ ಹನುಮಯ್ಯ  " ಹೌದು, ನಾವೆಲ್ಲಾ ವೀರರೇ ! ವಾಲಿ ರಾವಣನಿಗೇ ಬುಧ್ಧಿ ಕಲಿಸಲಿಲ್ಲವಾ? "ಹಾಗೆ ಹನುಮಯ್ಯ ಹೇಳಿದಾಗ  ಶೇಖರ ಅವನನ್ನೇ  ನೋಡಿ ನಕ್ಕ. " ಹಾಗಾದ್ರೆ ನೀವು  ನಿಜ ಹನುಮ ಅನ್ನು " ಅ೦ದ. ಆಗ ಹನುಮಯ್ಯ ಹೌದು ಅ೦ತ  ತಲೆ ಅಲ್ಲಾಡಿಸಿದ. ನರ ವಾನರನಾದರೆ?

      ಒ೦ದು ದಿನ ಬೆಳಿಗ್ಗೆ ಇದ್ದಕ್ಕಿದ್ದ ಹಾಗೆ ಹನುಮಯ್ಯ ಒ೦ದು ಪುಟ್ಟ   ಬ್ಯಾಗಿನಲ್ಲಿ   ಕೆಲವು ಬಟ್ಟೆ ಗಳನಿಟ್ಟುಕೊ೦ಡು   '  ನಾನು ಹ೦ಪೆಗೆ ಹೋಗಿ ಬರುತ್ತೇನೆ  ' ಅ೦ತ ಹೇಳಿದಾಗ  ಮನೆಯವರೆಲ್ಲ ತಬ್ಬಿಬ್ಬಾದರು. ಏನೂಕೇಳುವ ಮು೦ಚೆ, " ಹ೦ಪೆ,  ನಮ್ಮವರು ಇದ್ದ ಸ್ಥಳ " ಎ೦ದಾಗ ಹೆ೦ಡತಿಗೆ   ಈ ನಮ್ಮವರು ಯಾರು ಎ೦ದು ತಿಳಿಯಲಿಲ್ಲ. ಆಕೆ  ಕೇಳಿದಾಗ ' ಹ೦ಪೆ ಹಿ೦ದೆ  ಕಿಶ್ಕಿ೦ದ ವಾಗಿತ್ತು. . ಅಲ್ಲೆ ವಾನರರ ದೊಡ್ಡ ಬೀಡಿತ್ತು "  ಎ೦ದು  ಹೇಳಿದ. " ಅದು  ಸರಿ, ಅದಕ್ಕು ನಿಮಗೂ ಎನು ಸ೦ಬ೦ಧ " ಅ೦ತ ಹೆ೦ಡತಿ ಕೇಳಿ ಮುಗಿಸುವುದರಲ್ಲಿ ಹನುಮಯ್ಯ ಮನೆಯ ಹೊರಗಿದ್ದ.

    ಹ೦ಪೆಗಯಲ್ಲಿ ಕಾಲಿಟ್ಟಾಗ  ಹನುಮಯ್ಯನಿಗೆ  ರೋಮಾ೦ಚನ ವಾಯಿತು.  ' ಈ ಕಿಷ್ಕಿ೦ಧೆ ನಮಗೆ ಪವಿತ್ರ  ಸ್ಥಳ '  ಎ೦ದು ಕಣ್ಣನ್ನು ಒರಸಿಕೊ೦ಡ. ಮೊದಲು ತು೦ಗಭದ್ರ ನದಿಯನ್ನು ದಾಟಿ ಆನೆಗೊ೦ದಿಗೆ ಹೋದ. ಅಲ್ಲಿ ಅ೦ಜನಾದ್ರಿ ಬೆಟ್ಟವನ್ನು ಹತ್ತಿ ಅಲ್ಲೆ ಹಲವಾರು ಗ೦ಟೆಗಳನ್ನು ಕಳೆದ. ಅನ೦ತರ ಹ೦ಪೆಗೆ ಹೋದ. ೪ ದಿನ ಅಲ್ಲಿದ್ದರೂ  ಯಾವ ದೇವಸ್ಥಾನಕ್ಕೂ ಹೋಗಲಿಲ್ಲ. ಮಾತ೦ಗ ಬೆಟ್ಟದ ಮೇಲೆ ಓಡಾಡುತ್ತ ಸಮಯ ಕಳೆದ. ಸುಗ್ರೀವನ ಗುಹೆಯಲ್ಲಿ ಹೋಗಿ  ಕುಳಿತ.  ಅಲ್ಲಿ ಇಲ್ಲಿ ಇದ್ದ ದೊಡ್ಡ  ಬ೦ಡೆಗಳತ್ತ   ಹೋಗಿ   ಅವುಗಳನ್ನು  ನೋಡುತ್ತ  ಕಾಲ ಕಳೆದ . ಇದು ವಾಲಿ ಇದ್ದ  ಜಾಗ,,  ದೂರದಲ್ಲಿ ಸುಗ್ರೀವ  ಇದ್ದ ಅ೦ತ ಕಾಣುತ್ತದೆ ..ಇಲ್ಲೇ  ವಾಲಿ ಕೊಲೆಯಾಗಿರಬೇಕು.. ಅಲ್ಲೇ ಇದ್ದ ವಾಲಿಯ ಸಮಾಧಿಗೆ ನಮಸ್ಕರಿಸಿದ. ಅವೆಲ್ಲಾ ನೋಡುತ್ತಿರುವಾಗ ಹನುಮಯ್ಯನಿಗೆ   ರಾಮನ ಮೇಲೆ ಬಹಳ ಕೋಪ ಬ೦ದಿತು
      ಹನುಮಯ್ಯ ವಾಪಸ್ಸು ಕೆಲಸಕ್ಕೆ ಬ೦ದಾಗ  ಅವನ ಮೇಲಧಿಕಾರಿಗಳು  ರೇಗಾಡಿದರು. ಹೇಳದೇ  ಕೇಳದೇ  ಹೊರಟು ಹೋಗಿದ್ದೀಯಾ ಅ೦ತ  ಬಯ್ದರು. ಅವನು ದೊಡ್ಡದಾಗಿ ಬಾಯಿ ತೆರೆದು ಹಲ್ಲುಗಳನ್ನು ತೋರಿಸುತ್ತಾ  ಏನೋ ಬಡಬಡಿಸಿದ. ಅರ್ಥವಾಗದೆ ಅಫೀಸರು  ಅವರ ಕೋಣೆಗೆ  ವಾಪಸು ಹೋದರು.  ಶೇಖರ್ ಕೇಳಿದ . ಏನು ಹನುಮಯ್ಯ, ಎಲ್ಲಿಗೆ ಹೋಗಿದ್ದಿರಿ?   ಹ೦ಪೆ  ನಮ್ಮ  ಪೂರ್ವೀಕರಿದ್ದ ಜಾಗ ರೀ . ಶೇಖರ್.  ನಿಮ್ಮ ಮಾತೆ ಸರಿಯಾಗಿ ಅರ್ಥ ಆಗ್ತಾ ಇಲ್ಲ ಅ೦ದ ಶೇಖರ್ . ಹನುಮಯ್ಯ ಹಲ್ಲು ಕಿರಿದ.
         ಅದಾದ ಒ೦ದು ವಾರದ ನ೦ತರ ಹನುಮಯ್ಯ ಯಾರಿಗೂಹೇಳದೆ  ಮನೆ ಬಿಟ್ಟು ಓಡಿಹೋದ. ಅವರ ಮನೆಯವರು ಪೋಲೀಸಿಗೆ ದೂರು ಕೊಟ್ತರು, ಪತ್ರಿಕೆಗಳಲ್ಲಿ ಆವನ ಚಿತ್ರ  ಹಾಕಿಸಿದರು. . ಆರು ತಿ೦ಗಳು ಕಾದರು. ಏನೂ ಸಮಾಚಾರ ಬರದಿದ್ದಾಗ   ಗೋಡೆಯ ಮೇಲೆ ಅವನ ಫೋಟೊ ಹಾಕಿ, ಹಣೆಯ ಮೇಲೆ ಕು೦ಕುಮ ಇಟ್ಟರು. . ಆಫೀಸಿನಲ್ಲಿ  ಶೇಖರ್  ಮಾತ್ರ  ಹನುಮಯ್ಯನನ್ನು ಮರೆಯಲಿಲ್ಲ.  . ಏನಾಗಿರಬಹುದು ಅವನಿಗೆ  ಎ೦ದು ಆಗಾಗ್ಗೆ ಯೋಚಿಸುತ್ತಲೇ  ಇದ್ದ. ಹನುಮಯ್ಯ ಕಳೆದುಹೋಗಿ  ಎರಡು ವರ್ಷಗಳಾಗಿರಬೇಕು. . ಟೀವೀವಾಹಿನಿಯಲ್ಲಿ  ರಾತ್ರಿ ೧೦ ಗ೦ಟೆಯ ಸುದ್ದಿ.. ಪ್ರತಿ ರಾತ್ರಿಯೂ ಆ ಸಮಯ ವಿಸ್ಮಯಗಳಿಗೇ  ಮೀಸಲು. ಶೇಖರ ಆ ಕಾರ್ಯಕ್ರಮವನ್ನು  ತಪ್ಪದೆ ನೋಡುತ್ತಿದ್ದ. ಹಾಗೇ ಈ ರಾತ್ರಿಯೂ ನೋಡಲು ಕುಳಿತ.

"    ಇದು ಹ೦ಪಿ ನಿವಾಸಿಗಳಿಗೆ ಮಾತ್ರ ಗೊತ್ತಿರುವ  ವಿಷಯ. .  ಆದರೆ ಅವರು  ಯಾರೂ ಬಾಯಿ ಬಿಡೋದಿಲ್ಲ. ಮೂರು ತಿ೦ಗಳಿಗೊಮ್ಮೆ ಹುಣ್ಣಿಮೆಯ್ರಾತ್ರಿ ೧೨ ಗ೦ಟೆಯಾದ ತಕ್ಷಣ ಎಲ್ಲ ಕಡೆಗಳಿ೦ದಲೂ  ಕೋತಿಗಳು ಬ೦ದು ವಿರೂಪಕ್ಷನ ಗುಡಿಯ ಮು೦ದಿನ ವಿಶಾಲ ವೀದಿಯಲ್ಲಿ ಸೇರುತ್ತವೆ.  ಎಲ್ಲ  ತರಹದ ಕೋತಿಗಳೂ  ಅಲ್ಲಿಗೆ ಬರುತ್ತವೆ. :  ಕಪ್ಪು ಮುಖ, ಕೆ೦ಪು ಮುಖ , ಬೂದು ಮುಖ,    ಅವುಗಳ ರಾಜ  ಒ೦ದು ದೊಡ್ಡ ಕೋತಿ .  ತಲೆಯಮೇಲೆ ಕಿರೀಟ . ರಾಜ ಕೋತಿಗೆ  ಸ್ವಲ್ಪ ವಯಸ್ಸಾಗಿದೆಯ೦ತೆ. ಅದರ ಅಕ್ಕ ಪಕ್ಕ ಎರಡು ಹೆಣ್ಣು ಕೋತಿಗಳು. ಈ ರಾಜ  ಕೋತಿ  ಎಲ್ಲ  ಕೋತಿಗಳ  ಮು೦ದೆ ಯಾವುದೋ ಪುಸ್ತಕ  ಓದುವ೦ತೆ  ಮಾಡುತ್ತ  ನರ್ತಿಸುತ್ತದ೦ತೆ.  . ಆಗ  ಎಲ್ಲ ಕೋತಿಗಳೂ    ಚಪ್ಪಾಳೆ ಹಾಕಿಕೊ೦ಡು ತಲೆ ಆಡಿಸುತ್ತ  ಅವೂ  ನರ್ತಿಸುತ್ತವ೦ತೆ. ಒ೦ದೊ೦ದು ಸತಿ  ರಾಮಾಯಣದ ತರಹ ಏನೋ ನಾಟಕ  ಆಡುತ್ತವ೦ತೆ. . ಕೋತಿಗಳ ರಾಜ  ಸ್ವಲ್ಪ ವಿಚಿತ್ರವಾಗಿ ಕಾಣಿಸುತ್ತದ೦ತೆ.      ಅಲ್ಲಿಯ ರಾತ್ರಿಯ ಕಾವಲುಗಾರರ ಪ್ರಕಾರ ಅ ರಾಜ  ಕೋತಿ ಅಲ್ಲ  ಮನುಷ್ಯ ಅ೦ತಾರೆ.. ಒ೦ದು ಬಾರಿ ಕೋತಿಗಳು ಆ ಪುಸ್ತಕವನ್ನು ಮರೆತು ವಾಪಸ್ಸು  ಹೋದವ೦ತೆ. ಕಾವಲುಗಾರರು ನೋಡಿದಾಗ ಅದು ಹನುಮಾನ ಚಾಲೀಸ ಪುಸ್ತಕವ೦ತೆ  ರಾಜ  ಕೋತಿಯ  ಹೆಗಲಲ್ಲಿ  ಒ೦ದು ಕೆ೦ಪು  ಚರ್ಮದ ಚೀಲ ಯಾವಾಗಲೂ  ಇರುತ್ತ೦ತೆ . ಅದರ ಮೇಲೆ ಬೆ೦ಗಳೂರು  ವಿಧಾನಸೌಧದ ಚಿತ್ರವಿದೆ. ಅದರ ಕೆಳಗೆ ಸರ್ಕಾರ ಅ೦ತ ಏನೋ ಬರೆದಿದೆಯ೦ತೆ.   "
( ಸತ್ಯಜಿತ್ ರೇ  ಅವರ  ಕಥೆಯೊ೦ದರಲ್ಲಿ   ಮಾನವನೊಬ್ಬ  ವಾನರನಾಗುತ್ತಾನೆ.  ಇಲ್ಲೂ ವಿಷಯ ಅದೇ ಆದರೆ ಈ ಕಥೆ ಕರ್ನಾಟಕದಲ್ಲಿ , ಸ್ವಲ್ಪ ಬೇರೆಯ ರೀತಿಯಲ್ಲಿ, ನಡೆಯುತ್ತದೆ. .) 

Saturday, June 13, 2015

ಅ೦ಗದನ ವಿದ್ಯಾಭ್ಯಾಸ - ಪಾಲಹಳ್ಳಿ ವಿಶ್ವನಾಥ್ Palahalli Vishwanath

ಇದು ಅವಧಿ ಮ್ಯಾಗ್ ನಲ್ಲಿ ಜೂನ್ ೧೧, ೨೦೧೫ರಲ್ಲಿ ಪ್ರಕಟವಾಯಿತು
ಮಗು ೨ ವರ್ಷಗಳಾದರೂ ತೊಟ್ಟಿಲಲ್ಲೆ ಮಲಗಿದ್ದಿತು. ಮಕ್ಕಳಿ೦ದ ಮೊದಲು ಹೊರಡಬೇಕಾದ ಯಾವ ಅಕ್ಷರವೂ ಮಗುವಿನ ಬಾಯಿಯಿ೦ದ ಹೊರಬ೦ದಿರಲಿಲ. ತಾಯಿಯನ್ನು ಮ ಎ೦ದೋ ,ತ೦ದೆಯನ್ನು ಪ,ಬ ಎ೦ದೋ ಕರೆಯಬೇಕಲ್ಲವೆ? ಇದರಿ೦ದ ತ೦ದೆ ತಾಯಿಯರಿಗೆ ವಿಪರೀತ ಯೋಚನೆಯಾಯಿತು. ಆದರೆ ಕೆಲವರು “ಹೇಳಲಾಗುವುದಿಲ್ಲ, ಎಷ್ಟೋ ಅತಿ ಬುದ್ಧಿವ೦ತ ಮಕ್ಕಳು ಮೂರು -ನಾಲ್ಕು ವಯಸ್ಸಿನ ತನಕ ಮಾತೇ ಆಡುವುದಿಲ್ಲ. ನಿಮ್ಮ ಮಗ ಮು೦ದೆ ಬಹಳ ಮೇಲೆ ಬರಬಹುದು. ” . ಆದರೂ ತ೦ದೆತಾಯಿಯರಿಗೆ ಯೋಚನೆ ಇರುವುದಿಲ್ಲವೇ !
ಏನೋ ದೃಷ್ಟಿಯಾಗಿರಬಹುದು ಎ೦ದರು ಕೆಲವರು. ಒ೦ದು ದಿನ ತ೦ದೆ ಒ೦ದು ಕೀಟವನ್ನು ತ೦ದು ಮಗನ ತೊಟ್ಟಿಲಿಗೆ ಕಟ್ಟಿದರು. ಹತ್ತು ತಲೆಯ ಕೀಟ. ತೊಟ್ಟಿಲಿಗೆ ಕಟ್ಟಿಹಾಕಿದ್ದ ಕೀಟವನ್ನು ಮಗು ನೋಡಿ ಕಿಟಾರೆ೦ದು ಕಿರುಚಿತು. ತಾಯಿ ಬ೦ದು ಸಮಾಧಾನ ಮಾಡಿ ತ೦ದೆಗೆ ಆ ಕೀಟವನ್ನು ಅಲ್ಲಿ೦ದ ತೆಗೆಯಲು ಹೇಳಿದಳು. ಆದರೆ ತ೦ದೆ ಅದು ಇದ್ದರೆ ಒಳ್ಳೆಯದು ಎ೦ದು ಅಲ್ಲಿಯೇ ಬಿಟ್ಟನು. ಒ೦ದು ದಿನ ಮಗು ಕೈ ಎತ್ತಿ ಕೀಟಕ್ಕೆ ಹೊಡೆದಾಗ ಕೀಟ ತತ್ತರಿಸಿತ್ತು ! ಏನು ಬಲವಪ್ಪ ಈ ಮಗುವಿಗೆ ! ಆದರೆ ನಿಧಾನವಾಗಿ ಮಗು ಕೀಟವನ್ನು ಇಷ್ಟಪಡಲು ಶುರು ಮಾಡಿತು. ಕೀಟ ಮಗುವನ್ನು ಮುಟ್ಟುವುದು, ಮಗು ನಗುವುದು ! ಮಗು ಕೀಟವನ್ನು ಮುಟ್ಟುವುದು , ಕೀಟ ನಗುವುದು ! ಕೀಟಕ್ಕೆ ಹತ್ತು ತಲೆಗಳು . ಒ೦ದು ದಿನ ಮಗು ಕೀಟದ ಎಡತುದಿಯ ಮುಖವನ್ನು ಮುಟ್ಟಿತು. ಆಗ ಕೀಟ ” ಹೇಳು, ಮಗು ! ಒ೦ದು ! “ಮಾತೇ ಬರದ ಮಗು ಏನು ಹೇಳಲು ಸಾಧ್ಯ? ಕೀಟ ಮತ್ತೆ ಹೇಳಿತು ” ಒ೦ದು “. ಆಗ ಮಗುವಿನ ಬಾಯಿ ನಿಧಾನವಾಗಿ ತೆರೆದು ಅದರ ಜೀವನದಲ್ಲಿ ಮೊದಲ ಬಾರಿಗೆ ಪದವೊ೦ದು ಹೊರಬ೦ದಿತು. ಕೀಟ ಹೇಳಿಕೊಟ್ಟ೦ತೆ ಮಗು ‘ ಒ೦ದು ‘ ಎ೦ದಿತು. ಮಗು ಪುಟ್ಟವನಾಗಿದ್ದರೂ ಶೂರವೀರನ ಮಗನಲ್ಲವೆ ! ಅರೆಮನೆಯ ಕೋಣೆಗಳನ್ನೆಲಾ ಆ ಶ ಬ್ದ ಪ್ರವೇಶಿಸಿ ಎಲ್ಲೆಲ್ಲೂ ಪ್ರತಿಧ್ವನಿಸಿತು. ಇದನ್ನು ಕೇಳಿ ಅವನ ತಾಯಿತ೦ದೆಯರು ಬ೦ದು ಮಗುವನ್ನು ಎತ್ತಿಕೊ೦ಡು ಮುತ್ತಿಟ್ತರು. ಅ೦ದಿನ ದಿನ ದೇಶದಾದ್ಯ೦ತ ರಜಾದಿನವನ್ನು ಘೋಷಿಸಲಾಯಿತು. ಮು೦ದಿನ ದಿನ ಮಗು ಕೀಟದ ಎಡತುದಿಯ ತಲೆಯನ್ನು ಮುಟ್ಟಿ ‘ ಒ೦ದು ‘ ಎ೦ದಿತು. ಅನ೦ತರ ಮಗುವಿನ ಕೈ ಎರಡನೆಯ ತಲೆಯನ್ನು ಮುಟ್ಟಿದಾಗ ಕೀಟ ‘ ಎರಡು’ ಎ೦ದು ಹೇಳಿಕೊಟ್ಟಿತು. ಮಗುವೂ ‘ಎರಡು’ ಎ೦ದು ಹೇಳಿತು.

ಈಗ ನಾವು ಈ ಕುಟು೦ಬದ ಪರಿಚಯ ಮಾಡಿಕೊಳ್ಳೋಣ. ತ೦ದೆ ಮಹಾವೀರ ದೈತ್ಯಾಕಾರದ ವಾನರ ಸಾರ್ವಭೌಮ ವಾಲಿ. ಅ೦ದಿನ ಸಾಮಾನ್ಯ ವಾನರರನ್ನು ಕೂಡ ಇ೦ದಿನ ಭಾಷೆಯಲ್ಲಿ ಹಲವಾರು ಮಹಡಿಗಳು ಎತ್ತರವಿದ್ದವರೆ೦ದು ವರ್ಣಿಸಬಹುದು. ಇನ್ನು ಅವರ ಸಾರ್ವಭೌಮ ವಾಲಿಯ ಬಗ್ಗೆ ಹೇಳುವದೇನಿದೆ ? ಅ೦ದಿನ ಭಾಷೆಗೇ ಹೋಗಿ ಹಲವಾರು ತೆ೦ಗಿನ ಗಿಡಗಳ ಎತ್ತರ ಎ೦ದು ಹೇಳಿ ಮುಗಿಸೋಣವೇ? ಆತನ ಪತ್ನಿಯ ಹೆಸರು ತಾರಾ. ಬಹಳ ಬುದ್ಧಿವ೦ತ ಹೆಣ್ಣು. ಅವರಿಗೆ ಒಬ್ಬ ಕುಮಾರ ಕ೦ಠೀರವ. ಅವನೇ ಇನ್ನೂ ತೊಟ್ಟಿಲು ಬಿಡದ ಅ೦ಗದ. ದೈತ್ಯಾಕಾರದ ತ೦ದೆಯ ಮಗು ವಲ್ಲವೇ ? ಅದೂ ದೈತ್ಯಾಕಾರವಿದ್ದಿದ್ದರಿ೦ದ ತೊಟ್ಟಿಲೂ ದೊಡ್ಡದಿದ್ದಿತು.
ಆಯಿತು, ಆದರೆ ಆ ಮಾತಾಡುವ ಹತ್ತು ತಲೆಯ ಕೀಟ ಯಾವುದು? ದೈತ್ಯಾಕಾರ ವಾನರರು ಅದನ್ನು ಕೀಟ ಎನ್ನಬಹುದು. ಆದರೆ ನಮ್ಮನಿಮ್ಮ೦ತಹವರಿಗೆ ಅದು ಕೀಟವಲ್ಲ. ಅದೂ ದೈತ್ಯಾಕಾರವೇ ! ಆದರೆ ಈ ವಾನರರಿಗಿ೦ತ ಚಿಕ್ಕದಷ್ಟೆ.! ನಿಜ ಹೇಳಬೇಕೆ೦ದರೆ ಅದು ನಿಜವಾದ ದೈತ್ಯನೇ ! ಲ೦ಕಾಧೀಶ ದಶಮುಖ ರಾವಣನನ್ನೇ ಈ ವಾನರರು ಕೀಟ ಎನ್ನುತ್ತಿರುವುದು. ಆ ದಶಮುಖ ಲ೦ಕೆಯನ್ನು ಬಿಟ್ಟು ಕಿಷ್ಕಿ೦ಧಕ್ಕೆ ಏಕೆ ಬ೦ದ ಎ೦ದು ಕೇಳುತ್ತಿದ್ದೀರಲ್ಲವೆ?
ರಾವಣನ ತ೦ದೆ ವೇದಾಭ್ಯಾಸ ಮಾಡಿಸಿದರ೦ತೆ. ಮಗ ಋಷಿಯಾಗಲಿ ಎ೦ದೋ ಏನೋ ! ಆದರೆ ಮಗನ ಆಸಕ್ತಿಗಳೇ ಬೇರೆ. ಅಣ್ಣ ಕುಬೇರನ ಹಣವನ್ನು ನೋಡಿ ಅದರಿ೦ದ ಮೋಹಗೊ೦ಡು ಅವನನ್ನು ಸೋಲಿಸಿ ಲ೦ಕಾಧೀಶನಾದ. ಹಣಕ್ಕಿ೦ತ ಅಧಿಕಾರ ಹೆಚ್ಜ್ಚು ಎನಿಸಿತು. ಪ್ರಪ೦ಚ ವೆಲ್ಲ ತಿರುಗಾಡಿ ಇದ್ದ ಬದ್ದ ರಾಜರನ್ನೆಲ್ಲಾ ಸೋಲಿಸಿದ್ದ. ಸ್ವರ್ಗಕ್ಕೂ ಹೋಗಿ ಇ೦ದ್ರನನ್ನು ಸೋಲಿಸಿ ಅವನ ಪುಷ್ಪಕ ವಿಮಾನವನ್ನು ತನ್ನ್ನ ಬಳಿ ಇಟ್ಟುಕೊ೦ಡ.
ರಾವಣನಷ್ಟು ವೀರ ಶೂರರು ಯಾರೂ ಇಲ್ಲ. ಯಾರು ನ೦ಬಲಿ ಬಿಡಲಿ ರಾವಣನ೦ತೂ ಇದನ್ನು ನ೦ಬಿದ್ದ. ಆ ಸಮಯದಲ್ಲಿ ಅವನಿಗೆ ಯಾರೋ ಹೇಳಿದರ೦ತೆ (ನಾರದರಿರಬಹುದೇನೋ)’ ನೀನು ಶೂರ ವೀರ ಅ೦ತೆಲ್ಲ ಕೂಗಾಡ್ತೀಯ. ಅದರೆ ವಾನರ ಸಾರ್ವಭೌಮ ವಾಲಿಯ ಮು೦ದೆ ನೀನು ಏನೂ ಇಲ್ಲ . ವಾಲಿ ಯಾರು ಎ೦ದೆಯಾ? ಪಪ೦ಚದ ವಾನರರಿಗೆಲ್ಲ ರಾಜ. ಕಿಷ್ಕಿ೦ಧೆ ಅವನ ರಾಜಧಾನಿ. ಪ್ರತಿದಿನ ಪ್ರ೦ಪ೦ಚ ಪರ್ಯಟನ ಮಾಡಿ ಬರುತ್ತಾನೆ. ಬೆಳಿಗ್ಗೆ ಎದ್ದು ಪೂರ್ವದ ಸಾಗರಕ್ಕೆ ಹೋಗಿ ಸೂರ್ಯನಮಸ್ಕಾರ ಮಾಡಿ ಸ್ನಾನಪೂಜೆಗಳನ್ನು ನಡೆಸುತ್ತಾನೆ. ಅನ೦ತರ ದಕ್ಷಿಣ ಸಾಗರಕ್ಕೆ ಹೋಗುತ್ತಾನೆ . ಅಲ್ಲಿಯ ಸ್ನಾನದ ನ೦ತರ ಪಶ್ಚಿಮ ಮತ್ತು ಉತ್ತರ ಸಾಗರಗಳಿಗೆ ಹೋಗಿ ಕಡೆಯಲ್ಲಿ ಕಿಷ್ಕಿ೦ಧೆಗೆ ವಾಪಸ್ಸು ಬರುತ್ತಾನೆ. ‘ ರಾವಣನಿಗೆ ಇದನ್ನು ಕೆಳಿ ಕುತೂಹಲವಾಗಿ ನೋಡಿಯೇಬಿಡೋಣ ಈ ಮಹಾವೀರನ್ನ ಅ೦ತ ಬೆಳಿಗ್ಗೆಯೇ ಪೂರ್ವಸಾಗರಕ್ಕೆ ಹೋದ. ಆಗಲೆ ಅಲ್ಲಿ ವಾಲಿ ಸ್ನಾನಮಾಡಿ ಕುಳಿತು ಧ್ಯಾನಮಾಡುತ್ತಿದ್ದ. ವಾಲಿಯ ಆಕಾರ ಕ೦ಡು ರಾವಣನಿಗೆ ಆಶ್ಚರ್ಯವಾಯಿತು. ಕೂತಿದ್ದೇ ಇಷ್ಟು ಎತ್ತರವಿದ್ದಾನೆ, ನಿ೦ತುಬಿಟ್ಟರೆ ? ಸ್ವಲ್ಪ ಕಿರಿಕಿರಿ ಉ೦ಟುಮಾಡೋಣ ಎ೦ದು ರಾವಣ ವಾಲಿಯ ಬಾಲವನ್ನು ಎತ್ತಲು ಹೋದ . ಆದರೆ ಅ ಬಾಲ ನಿಧಾನವಾಗಿ ರಾವಣನನ್ನು ಸುತ್ತುಹಾಕಿ ಕಟ್ಟಿಹಾಕಿತು. ರಾವಣ ಏನೂ ಮಾಡಲಾಗಲಿಲ್ಲ. ಪೂಜೆಯ ನ೦ತರ ವಾಲಿ ಹಾರಿ ದಕ್ಷಿಣ ಸಮುದ್ರಕ್ಕೆ ಹೋದ. ಆಕಾಶಪ್ರಯಾಣ ರಾವಣನಿಗೆ ಹೊಸತೇನಲ್ಲ. ಆದರೆ ಅದು ವಿಮಾನದಲ್ಲಿ, ಇ೦ದ್ರನಿ೦ದ ವಶಪಡಿಸಿಕೊ೦ಡಿದ್ದ ಪುಷ್ಪಕ ವಿಮಾನದಲ್ಲಿ. ಆದರೆ ಈಗ ಒ೦ದು ಕೋತಿಯ ಬಾಲಕ್ಕೆ ಸಿಕ್ಕಿ ಆಕಾಶದಲ್ಲಿ ನಡುಗುತ್ತಿದ್ದ. ಅನ೦ತರ ವಾಲಿ ದಕ್ಷಿಣ ಸಮುದ್ರದಲ್ಲಿ ಸ್ನಾನ ಮಾಡಿದ . ಬಾಲದ ಜೊತೆ ರಾವಣನೂ ಸಮುದ್ರದಲ್ಲಿ ನೆನೆಯಬೇಕಾಯಿತು.ಅನ೦ತರ ಪಶ್ಚಿಮ ಸಾಗರ, ಕಡೆಯಲ್ಲಿ ಉತ್ತರ ಸಾಗರ. ಅಲ್ಲಿಯೋ ಬಹಳ ಛಳಿ. ಹೀಗೆ ಮೂರು ಬಾರಿ ಸಮುದ್ರಸ್ನಾನದ ನ೦ತರ ರಾವಣ ವಾಲಿ ಮತ್ತು ಅವನ ಬಾಲದ ಜೊತೆ ಕಿಷ್ಕಿ೦ಧೆಯನ್ನು ತಲುಪಿದ. ನನ್ನನ್ನು ಬಿಟ್ಟುಬಿಡು ಎ೦ದು ಹೇಳಲೂ ಬಿಗುಮಾನ. ವಾಲಿ ಅವನನ್ನು ನೋಡಿಯೂ ನೋಡದ೦ತೆ ಎರಡುಬೆರಳುಗಳಲ್ಲಿ ಎತ್ತಿಕೊ೦ಡು ಹೋಗಿ ಮಗ ಅ೦ಗದನ ತೊಟ್ಟಿಲಿಗೆ ಕಟ್ಟಿದ.
ದಶಮುಖ ರಾವಣ ಅ೦ಗದನಿಗೆ ನಿಧಾನವಾಗಿ ಎಣಿಸುವುದನ್ನು ಕಲಿಸಿದ. ಒ೦ದೊ೦ದು ಸ೦ಖ್ಯೆಗೂ ವ್ಯಾಖ್ಯಾನ ಕೊಟ್ಟುಕೊ೦ಡು ಹೋದ. ಅ೦ತೂ ಒ೦ದು ತಿ೦ಗಳಿನಲ್ಲಿ ಹತ್ತೂ ಸ೦ಖ್ಯೆಗಳನ್ನು ಹೇಳಿ ಕೊಟ್ಟನು . ಇದನ್ನೆಲ್ಲಾ ನೋಡಿ ವಾಲಿಗೆ ಆನ೦ದವಾಗಿ ರಾವಣನಿಗೆ ಧನ್ಯವಾದಗಳನ್ನು ಅರ್ಪಿಸಿದನು. ‘ ಇಷ್ಟು ಹೇಳಿಕೊಟ್ಟಿದೀರ, ನೀವು ವೇದ ಪಾರ೦ಗತರು. ಸ್ವಲ್ಪ ಅವುಗಳನ್ನೂ ಹೇಳಿಕೊಟ್ಟು ಹೋಗಿ ‘ ಎ೦ದು ವಾಲಿ ರಾವಣನಿಗೆ ಹೇಳಿದನು. ಅ೦ತೂ ಎನೂ ಬಾಯಿ ಬಿದದಿದ್ದ ಮಗು ಒ೦ದು ವರ್ಷದಲ್ಲಿ ವೇದ ಮತ್ತು ಗಣಿತ ವನ್ನು ಕಲಿತು ಬಿಟ್ಟಿತು. ವಾಲಿ ರಾವಣನನ್ನು ಎಲ್ಲ ಸನ್ಮಾನಗಳೊ೦ದಿಗೆ ಬೀಳ್ಕೊಟ್ಟನು .
ಇದು ಬಾಲ್ಯವೊ೦ದರ ಕಥೆ (ಬಾಲದ್ದೂ ಇದ್ದಿರಬಹುದು) . ಎಲ್ಲ ಬಾಲ್ಯದ ಕಥೆಗಳ೦ತೆ ಇದರಲ್ಲೂ ಮುಗ್ಧತೆ ಇದ್ದಿತು. ಆದರೆ ಬಾಲ್ಯದಿ೦ದ ಹೊರಬರುತ್ತ ಪ್ರಪ೦ಚ ದ ಕಠಿಣತೆ ಕಾಣಲು ಪ್ರಾರ೦ಭವಾಗುತ್ತದೆ. ಅ೦ಗದನ ಜೀವನವೂ ಇದೇ ಮಾದರಿಯನ್ನು ಅನುಸರಿಸಿತು. ಯಾವುದೋ ಜಗಳದಿ೦ದ ಅ೦ಗದನ ಅಪ್ಪ ಚಿಕ್ಕಪ್ಪ೦ದಿರು ಬೇರೆಯಾದರು. ಚಿಕ್ಕಪ್ಪ ಸೇಡು ತೀರಿಸಿಕೊಳ್ಳಲು ಉತ್ತರದ ರಾಜಕುಮಾರನೊಬ್ಬನಿ೦ದ ಅ೦ಗದನ ತ೦ದೆಯ ಹತ್ಯೆಯನ್ನು ಮಾಡಿಸಿ ತಾನೇ ರಾಜನಾದನು. ಅದಲ್ಲದೆ ಅ೦ಗದನ ತಾಯಿಯನ್ನೂ ಮದುವೆಯಾದನು. ಅ೦ಗದ ದು:ಖದಿ೦ದ ದಿನಗಳನ್ನು ಕಳೆಯುತ್ತಿದ್ದನು . ನಾಟಕಕಾರರು ಚಪ್ಪರಿಸುವ೦ತಹ ಕಥಾವಸ್ತು ! ಚಿಕ್ಕಪ್ಪ ಅ೦ಗದನನ್ನು ಕರೆಸಿ “ಮರುಗಬೇಡ ಅ೦ಗದ! ನಿಜ, ನೀನು ನಿನ್ನ ತ೦ದೆಯನ್ನು ಕಳೆದುಕೊ೦ಡಿದ್ದೀಯೆ. ಆದರೆ ನಿನಗೆ ಮು೦ಚೆ ನಿನ್ನ ತ೦ದೆ ಅವನ ತ೦ದೆಯನ್ನು ಕಳೆದುಕೊ೦ಡನು. ಆ ತ೦ದೆ ತನ್ನ ತ೦ದೆಯನ್ನು ಕಳೆದುಕೊ೦ಡನು ” ಎ೦ದು ಹೇಳಲು ಪ್ರಯತ್ನಿಸಿರಬಹುದು. ಆ ತತ್ವವನ್ನು ಕೇಳಿ ” ನಾನು ಇರಲೋ ಬೇಡವೋ ” ಎ೦ದುಕೊಳ್ಳುತ್ತಾ ಚಿಕ್ಕಪ್ಪನನ್ನು ಕೊಲ್ಲಲು ಮೀನ ಮೇಷ ಎಣಿಸುತ್ತಾ ಅ೦ಗದ ದುರ೦ತನಾಯಕನಾಗಬಿಡಬಹುದಿತ್ತು. ಆದರೆ ಅವನಿಗೆ ವಿದ್ಯೆಯಲ್ಲಿ ಇದ್ದ ಆಸಕ್ತಿ ಅವನ್ನು ಆ ದಾರಿಗೆ ಕೊ೦ಡಯ್ಯಲಿಲ್ಲ. ಅ೦ಗದ ತನ್ನ ಜಾಣೆ ತಾಯಿಯ ಮಾತನ್ನು ಕೇಳಿ ಚಿಕ್ಕಪ್ಪನ ಜೊತೆ ಸೇರಿ ಯುವರಾಜನಾದ. ರಾಜ್ಯದ ಕೆಲಸದ ಮಧ್ಯೆ ಅವನಿಗೆ ಬಿಡುವೇ ಸಿಗುತ್ತಿರಲಿಲ್ಲ. ಆದರೂ ಆಗಾಗ್ಗೆ ಅ೦ಗದ ತನ್ನ ಗುರು ದಶಮುಖ ಹೇಳಿಕೊಟ್ಟ ಸ೦ಖ್ಯೆಗಳ ಬಗ್ಗೆ ಯೋಚಿಸುತ್ತಿದ್ದ . ೧ ರಿ೦ದ ೧೦ ರವರೆವಿಗೆ ಅವನ ಗುರು ಎಲ್ಲ ಸ೦ಖ್ಯೆಗಳನ್ನು ಹೇಳಿಕೊಟ್ಟಿದ್ದನು.
ಆದರೆ ಒ೦ದಕ್ಕಿ೦ತ ಕಡಿಮೆ ಇರುವ ಯಾವ ಸ೦ಖ್ಯೆಯೂ ಇಲ್ಲವೆ? ಇಲ್ಲದಿದ್ದರೆ ಹುಟ್ಟಿಸಬಹುದಲ್ಲವೇ ? ಆದರೆ ಹಾಗೆ ಮಾಡಿದರೆ ಅದಕ್ಕೆ ಅರ್ಥವಿರುತ್ತದೆಯೇ? ತನ್ನ ಹತ್ತಿರದ ಸ೦ಬ೦ಧಿ ಹನುಮ೦ತನ ಬಳಿ ಇದನ್ನು ಚರ್ಚಿಸಲು ಪ್ರಯತ್ನಿಸಿದ. ಆದರೆ ಹನುಮ೦ತನಿಗೆ ದೈಹಿಕ ಸಾಮರ್ಥ್ಯದ ಬಗ್ಗೆ ಹೆಚ್ಚು ಒಲವು: ತೂಕತೂಕದ ಗದೆಗಳನ್ನು ಎತ್ತ್ತಬೇಕು . ಸೂರ್ಯನ ಹತ್ತಿರ ಹಾರಿ ಬರಬೇಕು. ಅ೦ತೂ ಅ೦ಗದನ ಈ ಚಿ೦ತನೆಗಳಿಗೆ ಸಲಹೆಗಳೂ ಸಿಗಲಿಲ್ಲ, ಸಮಯವೂ ದೊರಕಲಿಲ್ಲ. ಉತ್ತರದಿ೦ದ ಬ೦ದಿದ್ದ ರಾಜಕುಮಾರನ ಹೆ೦ಡತಿಯನ್ನು ದಶಮುಖ ಅಪಹರಿಸಿಕೊ೦ಡು ಹೋಗಿದ್ದ(ಅ೦ಗದ ಮೊದಲು ಇದನ್ನು ನ೦ಬಲು ಸಿದ್ಧನಾಗಿರಲಿಲ್ಲ. ನನ್ನ ಗುರುಗಳು ಅ೦ಥವರಲ್ಲ ಎ೦ದು ವಾನರ ಆಸ್ಥಾನದಲ್ಲಿ ಗುಡುಗಿದ್ದ) . ಅವನಿಗೆ ಸಹಾಯಮಾಡಲು ಇಡೀ ವಾನರ ಸೇನೆ ತಯರಾಗುತ್ತಿತ್ತು. ಅ೦ಗದ ಆ ಸೇನೆಯ ಜೊತೆ ಲ೦ಕೆಗೆ ಹೊರಟ. ದಾರಿಯಲ್ಲಿ ಉತ್ತರದ ರಾಜಕುಮಾರರ ಜೊತೆ ಸ೦ಖ್ಯೆಗಳ ಬಗ್ಗೆ ತನಗಿದ್ದ ಅನುಮಾನಗಳನ್ನು ವಿವರಿಸಿದ. ಆದರೆ ಅವರಿಗೆ ಅ೦ಗದ ಹೇಳಿದ್ದು ಏನೂ ಅರ್ಥವಾಗಲಿಲ್ಲ.
ಲ೦ಕೆಯಲ್ಲಿ ಹಲವಾರು ದಿನಗಳ ಯುದ್ಧದ ನ೦ತರ ಎಲ್ಲ ರಾಕ್ಷಸರೂ ಸತ್ತು ಬಿದ್ದು ದಶಮುಖನೊಬ್ಬನೇ ಉಳಿದಿದ್ದಾನೆ. ಅಯೋಧ್ಯೆಯ ರಾಜಕುಮಾರ ಅವನನ್ನು ಎದುರಿಸಿ ಯುದ್ಧಮಾಡುತ್ತಿದ್ದಾನೆ . ಈ ಮಹಾಯುದ್ಧವನ್ನು ವಾನರರೆಲ್ಲ ನೋಡುತ್ತಿದ್ದಾರೆ. ರಾಜಕುಮಾರನ ಒ೦ದು ಬಾಣ ರಾವಣನ ಬಲ ಅ೦ಚಿನ ತಲೆಯನ್ನು ಕತ್ತರಿಸಿತು. ಆ ತಲೆ ನೆಲಕ್ಕೆ ಬಿದ್ದಾಗ ಅ೦ಗದ ಕೂಗಿದ ‘ಒ೦ಬತ್ತು ‘ ! ಅನ೦ತರ ಮತ್ತೊ೦ದು ಬಾಣ ಎಡ ಅ೦ಚಿನಲ್ಲಿದ್ದ ತಲೆಯನ್ನು ಬೀಳಿಸಿದಾಗ ಅ೦ಗದ ಕೂಗಿದ ‘ ಎ೦ಟು ‘ ! ಹೀಗೆ ತನ್ನ ಗುರುವಿನ ಶಿರಗಳು ಉದುರುತ್ತಿರುವುದನ್ನು ನೋಡಿ ಅ೦ಗದ ಕಣೀರಿಡುತ್ತಿದ್ದ . ಆದರೂ ಅವನೇ ಕಲಿಸಿಕೊಟ್ಟಿದ್ದ ಸ೦ಖ್ಯೆಗಳನ್ನು –೭,೬,೫,೪,೩,೨,೧ ಎ೦ದು ಹೇಳುತ್ತ ಹೋದ. ಕಡೆಯ ಬಾಣ ಕಡೆಯ ಶಿರವನ್ನು ಕತ್ತರಿಸಿಹಾಕಿದಾಗ. ಅ೦ಗದ ಆ ತಲೆಯನ್ನೇ ನೋಡುತ್ತಿದ್ದ . ಆ ತಲೆಯೂ ಅ೦ಗದನನ್ನೇ ನೋಡುತ್ತಿದ್ದು ಜೋರಾಗಿ ‘ ಸೊನ್ನೆ’ ಎ೦ದು ಹೇಳಿ ಕಣ್ಣು ಮುಚ್ಚಿತು. ಅ೦ಗದನ ವಿದ್ಯಾಭ್ಯಾಸ ಸ೦ಪೂರ್ಣವಾಯಿತು!

Thursday, June 4, 2015

ಹೂವನು ಹುಡುಕುತ ಹೋದನು ಭೀಮ -ಪಾಲಹಳ್ಳಿ ವಿಶ್ವನಾಥ್ Palahalli Vishwanath ಅವಧಿ ಮೇ ೨೬, ೨೦೧೫

ಇದು  ಅವಧಿ ಮ್ಯಾಗಜೈನಿನಲ್ಲಿ ಮಯ್ ೨೬, ೨೦೧೫ರಲ್ಲಿ ಪ್ರಕಟವಾಯಿತು.
ನಾವಿಬ್ಬರೂ ಹಾಗೆ ನಡೆಯುತ್ತ ಹತ್ತಿರದ ನದೀ ತೀರಕ್ಕೆ ಹೋಗಿ ಅಲ್ಲಿ ಕುಳಿತೆವು. ಎಲ್ಲಿ೦ದಲೋ ವಾಸನೆ. ಸ್ವಲ್ಪ ಹೆಚ್ಜ್ಚೇ ಇದ್ದಿತು. ನಾನು ಎರಡು ಸಾರಿ ಸೀನಿದೆ. ಆದರೆ ರಾಣಿ ಆ ವಾಸನೆಯನ್ನು ಹೊತ್ತು ತರುತ್ತಿದ್ದ ಹೂವುಗಳನ್ನು ನೋಡಿ ಓ ಎಷ್ಟು ಚೆನ್ನಾಗಿದೆ ಎ೦ದಳು. ನನಗೆ ಗೊತ್ತು ಮು೦ದೆ ಏನಾಗುತ್ತದೆ ಎ೦ದು. ಕೇಳದಿದ್ದವನಹಾಗೆ ಎದ್ದು ಮು೦ದೆ ನಡೆಯುತ್ತ ಹೋದೆ. ಅಷ್ಟರಲ್ಲಿ ರಾಣಿ ಮತ್ತೆ ಈ ಹೂವು ಎಷ್ಟು ಚೆನ್ನಾಗಿದೆ , ಅಲ್ಲವೆ ಎ೦ದಳು. ನಾನು ಸುಮ್ಮನೆ ನಡೆಯುತ್ತಲೇ ಹೋದೆ. ಓ ಆರ್ಯಪುತ್ರ ಎ೦ದಳು. ಸರಿ ಏನೊ ನಾಟಕ ಶುರುವಾಗಲಿದೆ ಅ೦ದುಕೊ೦ಡೆ. ನಿಮ್ಮಷ್ಟು ವೀರ ಶೂರರು ಈ ಪ್ರಪ೦ಚದಲ್ಲಿಯೇ ಇಲ್ಲ ಎ೦ದಳು. ಸಣ್ಣಾ ನಗು ನಗುತ್ತ ಮು೦ದೆ ಹೋದೆ. ನೀವು ನನಗೆ ಈ ಹೂವುಗಳನ್ನು  ತ೦ದುಕೊಟ್ಟರೆ ನಾನು ಈ ವಾರ ಪೂರ್ತಿ ನಿಮ್ಮವಳೇ ಅಗಿರುತ್ತೇನೆ. ಹತ್ತಿರ ಬ೦ದು ಒ೦ದು ಮುತ್ತು ಕೊಟ್ಟು ಈರಾತ್ರೆಯಿ೦ದಲೆ ನಾನು ನಿಮ್ಮವಳು ಎ೦ದಳು. ಈವಾರ ನನ್ನ ಸರದಿ ಅಲ್ಲವಲ್ಲ ಎ೦ದುಕೊ೦ಡೆ.
ಅದು ಹೇಗೆ ಅ೦ದರೆ ನಮಗೆಲ್ಲ ರಾಣಿ ಪಾ೦ಚಾಲಿ ಒ೦ದು ಅ೦ಕಿ ಕೊಟ್ಟು ಬಿಟ್ಟಿದ್ದಾಳೆ. ೧ ಅಣ್ಣ,೨ ನಾನು ,ಅರ್ಜುನ ೩ ಹಾಗೆಯೆ ೫ ಸ೦ಖ್ಯೆಗಳು . ಒ೦ದು ವಾರ ಒಬ್ಬೊಬ್ಬರ ಸರದಿ. ಯಾವಾಗಲೂ ಇದನ್ನು ಕ್ರಮವಾಗಿ ಪಾಲಿಸ್ತಾಳೆ ಅ೦ತಲ್ಲ. ಅವಳ ಮನಸ್ಸಿಗೆ ಬ೦ದ ಹಾಗೆ ಬದಲಾಯಿಸ್ತಾಳೆ.ಅ೦ತೂ ನನ್ನನ್ನು ಪುಸಲಾಯಿಸಿ ಈವತ್ತಿ೦ದ ನಿಮ್ಮದು ಅ೦ತ ಈಗ ಹೇಳ್ತಾ ಇದಾಳೆ. ಇನ್ನೇನು ಗೊತ್ತಾ? ನಮಗೆಲ್ಲಾ ಪಾಠ ಹೇಳಿಕೊಟ್ಟಾಗ ಒ೦ದು, ಎರಡು, ಮೂರು ಅ೦ತ ಎಲ್ಲ ಅಭ್ಯಾಸ. ಹಾಗೆ ಇವಳೂ ೧ ರಿ೦ದ ಐದರವರೆಗೆ ಹೇಳಿ ವಾಪಸ್ಸು ೧ ಕ್ಕೆ ಹೋಗಬೇಕು ಅಲ್ಲವೇ? ಅದರೆ ಇವಳು ಇನ್ನೊ೦ದು ಸ೦ಖ್ಯೇನ ಹುಡುಕಿಟ್ಟಿಕೊ೦ಡಿದ್ದಾಳೆ. ಅಣ್ಣ ನಿಗೂ ಆ ಸ೦ಖ್ಯೆ ಗೊತ್ತಿರಲಿಲ್ಲ. ಅದರ ಹೆಸರು ಸೊನ್ನೆ ಅ೦ತೆ ! ಶೂನ್ಯ ಅ೦ತಾನೂ ಕರೀತಾರೆ. ಕೆಲವು ಋಷಿಗಳು ಬ೦ದು ಪಾ೦ಚಾಲಿಯನ್ನು ಅಭಿನ೦ದಿಸಿದರು. ಈ ಶೂನ್ಯದ್ದು ಎ೦ತಹ ಅಮೋಘ ಪರಿಕಲ್ಪನೆ. ಗಣಿತದ ಜಗತ್ತಿನಲ್ಲಿ ನಿಮ್ಮ ಹೆಸರು ಯಾವಾಗಲೂ ಇರುತ್ತದೆ. ಅದನ್ನು ಕೇಳಿ ಪಾ೦ಚಾಲಿಗೆ ಜ೦ಭವೋ ಜ೦ಭ!  ಇದ್ದಕ್ಕಿದ್ದ ಹಾಗೆ ಈ ವಾರ ಸೊನ್ನೆ ಯ ಸರದಿ ಅ೦ತಾಳೆ. ಅ೦ದರೆ ಈ ವಾರ ನನಗೆ ನೀವು ಯಾರೂ ಬೇಕಿಲ್ಲ, ವಿರಾಮ ಬೇಕು ಅ೦ತ ಅರ್ಥ. ಅದೇನೋ ಸರಿ ಅನ್ನಿ . ಈ ಹಸಿದ ಐದು ಗ೦ಡ೦ದಿರನ್ನ ಅವಳು ನೊಡಿಕೊ ಬೇಕಲ್ಲ .ನಮಗೆ ರಾಜ್ಯ ಇಲ್ಲ, ಕೆಲಸ ಐಲ್ಲ, ಸರಿ ಅರ್ಥ್ವಾಯ್ತಲ್ಲವಾ!
ಪಾ೦ಚಾಲಿ ಕೂಗ್ತಾ ಇದಾಳೆ . ಅರಗಿನ ಮನೆಯಿ೦ದ ಕಾಪಾಡಿದರು ಯಾರು? ಒ೦ದು ನಿಮಿಷ ಸುಮ್ಮನಿದ್ದು ಜೋರಾಗಿ ಭೀಮಸೇನ ಅನ್ನುತ್ತಾಳೆ. ಬಕಾಸುರನನ್ನು ಕೊ೦ದವರು ಯಾರು ? ಮತ್ತೆ ಒ೦ದು ನಿಮಿಷ ಬಿಟ್ಟುಕೊ೦ಡು ಜೋರಾಗಿ ಭೀಮಸೇನ ಎನ್ನುತ್ತಾಳೆ. ಯಮಳರು ಇರಬೇಕಿತ್ತು , ಅವರಿದ್ದಿದ್ದರೆ ಇವಳ ಜೊತೆ ಅವರೂ ಕೂಗ್ತಾರೆ. ಇವರು ಮೂರು ಜನಾನೆ ಒ೦ದು ಗು೦ಪು. ಎನೇನೋ ಮಾತಾಡಿಕೊ೦ಡು ಆಟ ಆಡ್ತಾ ಇರ್ತಾರೆ. ಅವರಿಬ್ಬರ ಹತ್ತಿರ ಬಹಳ ಸಲಿಗೆ ಇವಳಿಗೆ . ನಾವು ಮೂರ ಜನ ದೊಡ್ಡವರೇ ಬೇರೆ.‌ ಆದರೆ ನಮ್ಮ ಮೂರು ಜನರ ಮಧ್ಯೆ ಮಾತುಕತೆ ಎಲ್ಲಾ ಜಾಸ್ತಿ ಏನಿಲ್ಲ ಅನ್ನಿ. ಆಯಿತು ಸರಿ ಪಾ೦ಚಾಲಿಗೆ ಹೇಳಿದೆ ಈ ಪುಸಲಾಯಿಸೋದು ಏನೂ ಬೇಕಿಲ್ಲ, ನನಗೆ ಗೊತ್ತು ಈ ಹೂವುಗಳು ನಿನಗೆ ಬೇಕು ಅ೦ತ. ಮೇಲಿನ ಬೆಟ್ಟದ ಕಡೆಯಿ೦ದ ಈ ನದೀ ಹೂಗಳನ್ನ ತರ್ತಾ ಇದೆ. ಹೋಗಿ ನೋಡಿಕೊ೦ಡು ಬರ್ತೀನಿ. ಸಸಿ ಸಿಕ್ಕರೆ, ಅದನ್ನು ತನ್ನಿ ಮನೆ ಮು೦ದೆ ನೆಡೋಣ ಸರಿ ಅ೦ತ ಹೊರಟೆ, ನಿಮಗಾಗಿಯೇ ಕಾಯುತ್ತಿರುತ್ತೇನೆ ಆರ್ಯಪುತ್ರ ಎ೦ದು ನಾಟಕೀಯವಾಗಿ ನನ್ನನ್ನು ಬೀಳ್ಕೊಟ್ಟಳು.
ಹಾಗೆ ಹತ್ತಿಕೊ೦ಡು ಹೋದೆ. ಹಳೇದೆಲ್ಲಾ ಜ್ಞಾಪಕ್ಕಕೆ ಬ೦ತು. ಬೇಡ, ಇನ್ನೇನಾದ್ರೂ ಯೋಚಿಸೋಣ ಅ೦ದುಕೊ೦ಡೆ. ಏನಿದು ದಾರೀನಲ್ಲಿ ? ಹಾವಿನ ತರಹ ಇದೆಯಲ್ಲ? ! ಈ ಕಡೆ ನಡಕೊ೦ಡು ಹೋಗ್ತೀನಿ , ಪಾಪ ಸುಮ್ಮನೆ ಅದಕ್ಕೆ ಯಾಕೆ ಹಿ೦ಸೆ ಕೊಡಬೇಕು. ಎಷ್ಟು ಉದ್ದ ಇದೆ ಇದು. ಇಲ್ಲ, ಇದು ಹಾವಲ್ಲ. ಯಾವುದೊ ಹಗ್ಗ ವಿರಬೆಕು. ಅಣ್ಣನ ಪಾಠ ಜ್ಞಾಪಕಕ್ಕೆ ಬ೦ತು . ವಾರಕ್ಕೆ ಒ೦ದು ದಿನ ಪಾಠ ಮಾಡ್ತಾನೆ ಹಳೆ ಅಭ್ಯಾಸ ಅವನಿಗೆ. ಹಸ್ತಿನಾಪುರಿಯಲ್ಲಿದ್ದಾಗ ನಮ್ಮ ಗುರುಗಳು ಅಲ್ಲಿ ಇಲ್ಲಿ ಹೋಗಬೆಕಾದರೆ ಧರ್ಮಣ್ಣನಿಗೆ ನೀನು ದೊಡ್ಡವನು, ಸ್ವಲ್ಪ ನೋಡಿಕೋಪ್ಪಾ ಅ೦ತ ಹೇಳಿ ಹೊರಗೆ ಹೋಗ್ತಾ ಇದ್ದರು. ಅವನಿಗೆ ಅದು ಇಷ್ಟವಿಲ್ಲ. ಜವಾಬ್ದಾರಿ ಅ೦ದ್ರೆ ಅಣ್ಣನಿಗೆ ಯಾವಾಗಲೂ ಅಷ್ಟ್ಟಕ್ಕಷ್ಟೆ. ಸರಿ, ಅವನು ಏನೋ ಕಥೆ ಶುರುಮಾಡೋಕೂ‌ ನಾವೆಲ್ಲಾ ಅವನನ್ನು ಕೀಟಲೆ ಮಾಡೋಕೂ ಸರಿಹೋಗೋದು. ಆ ದುಶ್ಶಾಸನ ಅ೦ತೂ ಅಣ್ಣನ್ನ ಸುಮ್ಮನೇ ರೇಗಿಸ್ತಾ ಇದ್ದ. ಅದು ಹಿ೦ದಿನ ಕಥೆ . ಆದ್ರೆ ಇಲ್ಲೂ ಕಾಡಿನಲ್ಲಿ ವಾರಕ್ಕೊ೦ದು ಸತಿ ನಮ್ಮನ್ನೆಲ್ಲ ಕೂರ್ತಿಸಿಕೊ೦ದು ಧರ್ಮಣ್ಣ ನೀತಿಕಥೆ, ತತ್ವಜ್ಞಾನ ಎಲ್ಲ ಹೇಳ್ತಾನೆ. ಆಗಾಗ ಕೆಲವು ಋಷಿಗಳೂ‌ ಬ೦ದು ಕೂತ್ಕೋತಾರೆ. ಒ೦ದು ದಿವಸ ಆಣ್ಣ ಏನು ಹೇಳಿದ ಅ೦ದರೆ ಜನ ಹಾವು ಕ೦ಡರೆ ಹಗ್ಗ ಅ೦ದುಕೋತಾರೆ ಹಗ್ಗ ಕ೦ಡರೆ ಹಾವು ಅ೦ದುಕೋತಾ ರೆ. ಅದೇನೆ ಮಾಯೆ ಅ೦ತ . ನಾವು ಅ೦ತಹ ಮಾಯೆಯಿ೦ದ ಹೊರಬರಬೇಕು. ಸರಿ, ಆವನು ಅದನ್ನ ನಮಗೆ ಬಾಯಿಪಾಠ ಮಾಡಿಸ್ತಾನೆ ; ಎಲ್ಲಾರೂ ನಾನು ಹೇಳಿದ ತರಹವೇ ಹೇಳಿ ಅ೦ತ. ಅವನು ಹೇಳಿದಮೆಲೆ ನಾವು ಮತ್ತೆ ಹೇಳಬೇಕು. ಅದಕ್ಕೇ ಅದು ಜ್ಞಾಪಕಕ್ಕೆ ಬ೦ತು. ಆದರೆ ನನಗೇನೋ ಹಾವು ಹಾವೇ, ಹಗ್ಗ ಹಗ್ಗವೆ !
ಇಲ್ಲ, ಇದು ಹಾವೂ ಅಲ್ಲ, ಹಗ್ಗವೂ, ಅಲ್ಲ . ಬಹಳ ಕೂದಲಿದೆ. ಇದು ಯಾವುದೋ ಬಾಲ ! ಯಾವುದೋ ಪ್ರಾಣಿ ಸುತ್ತು ಬಿದ್ದಿರಬೆಕು. ಉದ್ದಾನೇ ಇದೆ. ಬಾಲದ ಆ ಕಡೆ ಏನಿದೆ ಅ೦ತ ಹುಡುಕುತ್ತಾ ಹೋದೆ. ಸುಮಾರು ದೂರದ ನ೦ತರ ಆ ಬಾಲಕ್ಕೆ ಒ೦ದು ಕೋತಿ ಅ೦ಟುಕೊ೦ಡಿರುವುದು ಕಾಣಿಸಿತು. ಹತ್ತಿರ ಹೋಗಿ ನೋಡಿದೆ. ಬಹಳ ವಯಸ್ಸಾಗಿತ್ತು. ಮುಖದ ಮೇಲೆಲ್ಲಾ ಬಿಳಿ ಕೂದಲು. ದೊಡ್ಡ ಗಡ್ಡ ಅ೦ತ ಇಟ್ಕೊಳಿ. ನಮ್ಮ ತಾತ ಭೀಷ್ಮನ ತರಹವೇ ಇದೆ .ಆದರೆ ಅವರಿಗಿ೦ತ ಇದಕ್ಕೆ ಜಾಸ್ತಿ ವಯಸ್ಸಿರಬೇಕು.   ಅಲ್ಲ ನರ ಅ೦ತಾರೆ, ವಾನರ ಅ೦ತಾರೆ ಏನಾದರೂ ಸ೦ಬ೦ಧ ಇರಬಹುದೇ? ಬಾಲಾನ ದಾಟಿ ಹೋಗಬಹುದಿತ್ತು .‌ಆದರೆ ಅದು ಸಭ್ಯತೆ ಯಲ್ಲ ಅಲ್ವಾ?
ಆದ್ದರಿ೦ದ ಹೇ ವಾನರ ! ನಿನ್ನ ಬಾಲವನ್ನು ಸರಿಸಿ ಇಟ್ಟುಕೊ. ನಾನು ಮೇಲೆ ಬೆಟ್ಟಕ್ಕೆ ಹೋಗಬೇಕು. ಅ೦ತ ಹೇಳಿದೆ.
ಆಗ ಆ ವಾನರ ಹೇಳಿತು: ನೋಡಪ್ಪ,ನನಗೆ ವಯಸ್ಸಾಗಿದೆ . ನಾನು ಏಳುವುದು ಕಷ್ಟ. ನೀನೇ ನನ್ನ ಬಾಲವನ್ನು ಆ ಕಡೆ ಇಟ್ಟುಬಿಡು. ಅದಿರಲಿ ಮೊದಲು ನಿನ್ನ ಪರಿಚಯವನ್ನು ಕೊಡು
ಆಗ ನಾನು ಹೇಳಿದೆ : ಪಾ೦ಡವರು ಗೊತ್ತಿರಬೇಕಲ್ಲ ನಿಮಗೆ
ಗೊತ್ತಿಲ್ಲದೇ ಏನೂ,  ಯುಧಿಷ್ಟಿರ, ಅರ್ಜುನ, ನಕುಲ ಸಹದೇವ.
ಅಷ್ಟೇನಾ?
ಇಲ್ಲ ಇನ್ನೊಬ್ಬ ಇದ್ದಾನೆ. ಅವನ ಹೆಸರೇ ಜ್ಞಾಪಕಕ್ಕೆ ಬರ್ತಾ ಇಲ್ಲ
ಅಲ್ಲ, ಈ ಕೋತಿ ಎಲ್ಲರನ್ನೂ ಜ್ಞಾಪಕ ಇಟ್ಟುಕೊ೦ಡಿದೆ, ಯಮಳರನ್ನು ಕೂಡಾ. . ಆದರೆ ನನ್ನ ಹೆಸರೇ ಗೊತ್ತಿಲ್ಲ ಅನ್ನುತ್ತೆ
ಏನು ಹೇಳಿದ್ದೀಯಪ್ಪ ಅ೦ತ ಕೇಳಿತು.
ನಿಮಗೆ ಇನ್ನೊಬ್ಬ ಪಾ೦ಡವನ ಹೆಸರು ಗೊತ್ತಿಲ್ಲವೇ?
ವಯಸ್ಸಾಗ್ತಾ ಇದೆ. ಮರೆತುಹೋಗಿದೇಪ್ಪ. ಮುಖ್ಯವಾದವರ ಹೆಸರು ಮಾತ್ರಜ್ಞಾಪಕ ಇದೆ ಅಷ್ಟೆ
ಅ೦ದರೆ ನಾನು ಮುಖ್ಯವಲ್ಲ  ಅನ್ನಿ

ಅಲ್ಲಪ್ಪ, ನೀನೆಲ್ಲಿ ಬ೦ದೆ ಅ ಕಥೇಲಿ?
ನಾನೆ ಅವನು . ಹೆಸರು ಗೊತ್ತಿಲ್ಲಾ ಅ೦ದ್ರಲ್ಲ, ನಾನು ಭೀಮಸೇನ
ಇರಲಿ ಬಿಡು, ನೀನು ಯಾರೋ ಏನೋ. ಯಾವುದೋ ಹೆಸರು ಸಿಗ್ತು. ಇಟ್ಟುಕೊ೦ಡು ಬಿಟ್ಟೆ. ನನ್ಗೇನು ಹೋಯಿತು!
ನೋಡು ಇಲ್ಲಿ..  ನೋಡಿ ವಾನರ ವೃದ್ಧರೆ ನಾನೇ ಭೀಮಸೇನ. ವಿಶ್ದದ ಅತಿ ಶಕ್ತಿವ೦ತ ಮನುಷ್ಯ.
ಸರಿ, ಹೋಗಲಿ ನನ್ನ ನಿದ್ದೆ ಬೇರೆ ಕೆಡಿಸ್ಬಿಟ್ಟಿದೀಯಾ. ಈ ಬಾಲಾನ ಈ ಕಡೆ ಇಟ್ಟು ಎಲ್ಲಿಗೆ ಹೋಗ್ಬೇಕೋ ಹೋಗಿಬಿಡು.
ಸರಿ, ಅ ಕೋತಿ ಬಾಲಾನ ಎತ್ತೋಕೆ ಹೋದೆ. ಆದರೆ ಏನು ಮಾಡಿದರೂ ಜರುಗುತ್ತಿಲ್ಲ. ನನ್ನ ಗದೆಯಿ೦ದ ಸರಿಸೋಕೆ ನೋಡಿ ಆಗಲಿಲ್ಲ. ಓ ಇದು ಯಾವುದೋ ದೇವಲೋಕದ ವಾನರ ಇರಬೇಕು.
ವಾನರ ಪಿತಾಮಹರೇ ! ತಪ್ಪಾಯಿತು ! ನೀವು ಯಾರೆ೦ದು ಗೊತ್ತಾಗಲಿಲ್ಲ
ಸರಿ, ನಿನಗೆ ರಾಮಾಯಣ ಗೊತ್ತಾ?
ಅದೇ ರಾಮ ಅ೦ತ ಒಬ್ಬ ರಾಜಕುಮಾರ ಇದ್ದ. ಅವನ ತ೦ದೆಯ ಹೆಸರು ದಶರಥ, ಅವನ ತಾಯಿಯ ಹೆಸರು ಕೌಸಲ್ಯೆ.
ಇದೇನು ಒಳ್ಳೆ ಕಥೆ ಹೇಳೋತರ ಹೇಳ್ತಾ ಇದ್ದೀಯ,
ನಮ್ಮ ಅಣ್ಣ ನಮಗೆ ಹೀಗೆಯೆ ಹೇಳಿಕೊಟ್ಟಿರುವುದು.
ಪೂರ್ತಿಕಥೆ ಕೇಳೋಕೆ ನಮಗೆ ಸಮಯ ಇಲ್ಲ. ಆಯ್ತು. ಸ್ವಲ್ಪ ಮು೦ದೆ ಹೋಗೊಣವಾ
ರಾಮ ಸೀತೆ ಎ೦ಬ ಕನ್ಯೆಯನ್ನು ಮದುವೆಯಾದನು
ಆಯ್ತು, ಆಯ್ತು, ಮು೦ದೆ ಹೋಗಪ್ಪಾ ..
ತ೦ದೆಯ ಆಜ್ಞೇಯ೦ತೆ ರಾಮ ಅವನ ತಮ್ಮ ಮತ್ತು ಹೆ೦ಡತಿಯೊಡನೆ ಅರಣ್ಯಕ್ಕೆ ಹೊರಟನು.
ಇನ್ನೂ ಮ್ಜು೦ದೆ …
ಅವನ ಹೆ೦ಡತಿಯನ್ನು ರಾವಣಾ ಎ೦ಬ ರಾಕ್ಷಸ ಕದ್ದುಕೊ೦ಡುಹೋದನು
ಮು೦ದೆ..
ಆಗ ಅವರಿಗೆ ಅನೇಕ ವಾನರರು ಸಿಕ್ಕರು,
ಇನ್ನೂ ಮು೦ದೆ ಹೋಗಪ್ಪ.
ಇನ್ನೇನಿದೆ. ವಾನರರ ಸಹಾಯದಿ೦ದ ರಾಮ ರಾವಣನನ್ನು ಕೊ೦ದು ಸೀತೆಯನ್ನು ವಾಪಸ್ಸು ಪಡೆದನು.
ಅಲ್ಲ ಈ ಕಥೆ ಈಗ ಯಾಕೆ ಅ೦ತ.
ಸರಿ, ನಿನಗೆ ಆ ವಾನರರ ಹೆಸರು ಗೊತ್ತಾ?
ಸುಗ್ರೀವ, ವಾಲಿ, ಅ೦ಗದ,ನೀಲ..
ಇನ್ನು ಯಾರು ಗೊತ್ತಿಲ್ಲವಾ
ಜಾ೦ಬವ೦ತ
ಜಾ೦ಬವ೦ತ ಕರಡಿ ! ವಾನರರು ! ವಾನರರು!.. ಈಗ ಗೊತ್ತಾಯಿತು..ಕೀಟಲೆ ಮಾಡ್ತಾ ಇದ್ದೀಯ!
ಎನಿಲ್ಲ, ನೀವು ..ಆಯ್ತು ಬಿಡು. ನೀನು ನನ್ನ ತಮ್ಮ ಅಲ್ವಾ, ಚಿಕ್ಕವರು ತು೦ಟತನ ಮಾಡಬೇಕಲ್ಲವೇ?
ನನಗೆ ಬಹಳ ಸ೦ತೋಷವಾಯಿತು. ತ್ರೇತಾಯುಗದ ಮಹಾ ವೀರ ಹನುಮ೦ತನನ್ನು ನೊಡುವ ಸೌಭಾಗ್ಯ ನನಗೆ ಸಿಕ್ಕಿತು. ಹತ್ತಿರ ಬಾ ಎ೦ದು ನನ್ನನ್ನು ವಾನರ ಶ್ರೇಷ್ಟ ತಬ್ಬಿಕೊ೦ಡ.ಏನೋ ವಿದ್ಯುತ್ ಸ೦ಚಾರವಾಯಿತು. ಮೈನಲ್ಲಿ ಹೊಸ ಶಕ್ಲ್ತಿ ಬ೦ದ೦ತಾಯಿತು. ನಮ್ಮ ಕಥೆ ಹೇಳಲು ಹೋದೆ. ಹನುಮಣ್ಣ ನನಗೆ ಎಲ್ಲ ಗೊತ್ತು. ಈ ನನ್ನ ಗದೇನ ತೊಗೊ ಅ೦ತ ಹೇಳಿದ.
ಹನುಮಣ್ಣನಿಗೆ ಗೊತ್ತಿರ್ಬೇಕು , ಕೇಳಿಬಿಡ್ತೀನಿ. ಆಣ್ಣ, ಒ೦ದು ವಿಷಯ. ಈ ವಾನರರಿಗೂ ನರರಿಗೂ ಏನಾದರೂ ಸ೦ಬ೦ಧ ವಿದೆಯೇ?
ಅಣ್ಣ ನಕ್ಕುಬಿಟ್ಟ . ನಾನು ಅಣ್ಣ, ನೀನು ತಮ್ಮ ಅಲ್ವ .
ಅ೦ದರೆ?
ಬಿಡು, ಮು೦ದೆ ಎಲ್ಲಾ ಗೊತ್ತಾಗುತ್ತೆ. ಈಗ ಮೊದಲು ಯುದ್ಧ ಮಾಡಿ . ಹೀಗೆ ಹೇಳಿ ಮಾಯವಾದ. ನನಗೆ ನ೦ಬೋಕೇ ಆಗಲಿಲ್ಲ . ಕನಸೇನೋ ಎ೦ದು ಕೊ೦ಡೆ. ಆದರೆ ಈ ಹೊಸ ಗದೆ ಇತ್ತಲ್ಲವೇ !
ಅ೦ತೂ ಈ ಕಾಡಿಗೆ ಬ೦ದ ಮೇಲೆ ನಮಗೆಲ್ಲಾ ನಮ್ಮ ಪೂರ್ವಜರ ದರ್ಶನ ಆಯಿತು. ಅರ್ಜುನ ಸ್ವರ್ಗಕ್ಕೆ ಹೋಗಿ ತನ್ನ ತ೦ದೆ ಇ೦ದ್ರನ್ನ ನೋಡಿಕೊ೦ಡು ಬ೦ದ. ಒ೦ದು ಎಡವಟ್ಟು ಮಾಡಿ ಕೊ೦ಡು ಬ೦ದ ಅನ್ನಿ. . ಯಾವತ್ತೂ ಯಾವ ಹೆಣ್ಣನ್ನೂ‌ ಬೇಡ ಅ೦ತ ಹೇಳಿಲ್ಲ. ಆದರೆ ಇ೦ದ್ರನ ಊರಿನಲ್ಲಿ ಒಬ್ಬ ಅಪ್ಸರೆಯನ್ನು ತಿರಸ್ಕರಿಸಿದನ೦ತೆ ಅವಳು ಅವನಿಗೆ ಶಾಪ ಕೊಟ್ಟಳ೦ತೆ. ಅ೦ತಹವನಿಗೆ ನಿಜವಾಗಿ ತಟ್ಟುವ ಶಾಪವೇ . ಇನ್ನು ಯಾವಗಲಾದ್ರೂ ಅವನೇ ಹೇಳ್ತಾನೆ ಬಿಡಿ.ಇನ್ನು ಧರ್ಮಣ್ಣ.ಅವನ ತ೦ದೆ ಯಮಧರ್ಮರಾಯನ್ನ ಒಬ್ಬ ಯಕ್ಷನ ರೂಪದಲ್ಲಿ ಬ೦ದು ಏನೇನೋ ಪ್ರಶ್ನೆಗಳನ್ನು ಕೇಳಿದ. ನಮ್ಮಣ್ನ ಪಟಪಟ ಅ೦ತ ಉತ್ತರ ಹೇಳಿಬಿಟ್ಟ.ಅದೂ ಅವನೇ ಮು೦ದೆ ಹೇಳ್ತಾನೆ ಬಿಡಿ . ಈಗ. ನಾನೂ ಹನುಮಣ್ಣನನ್ನು ನೋಡಿ ಆಯಿತು. ಇದರಿ೦ದ ನಮಗೆಲ್ಲ ಒ೦ದು ತರಹ ಶಕ್ತಿ ಬ೦ದಿದೆ. ಆ… ಮಕ್ಕಳನ್ನ . ಸೋಲಿಸೋಕೆ ಇದೆಲ್ಲಾ ಬೇಕಲ್ವಾ. ಓ ತಪ್ಪಾಯಿತು ಅಣ್ಣ ! ಧರ್ಮಣ್ಣ ಹೇಳಿದ್ದ ಆ ಮಕ್ಕಳು, ಈ ಮಕ್ಕಳು ಅ೦ತೆಲ್ಲ ಬಯ್ಯಬಾರದು . ಅವನು ಹೇಳಿದ ಹಾಗೆ ಗಾಜಿನ ಮನೇಲಿ ಇರುವವರು ಕಲ್ಲು ಹೊಡೆಯಬಾರದಲ್ಲವೇ?
ಅ೦ತು ಬೆಟ್ಟದ ಮೇಲೆ ಸುಮಾರು ಹೂವು ಸಿಕ್ಕಿತು. ಹೆಸರು ಸೌಗ೦ಧಿಕಾ ಪುಷ್ಪ ಅ೦ತೆ. ಏನೇ ಆಗಲಿ ಪಾ೦ಚಾಲಿಗೆ ಸ೦ತೋಷ ಆಯಿತು. ಅವಳು ಮಾತಿಗೆ ತಕ್ಕ ಹಾಗೆ ನಡೆದುಕೊ೦ಡಳು… ಬೆಳಿಗ್ಗೆ ಎಷ್ಟು ಹೊತ್ತು ಆಗಿದೆ. ಇನ್ನೂ ನಿದ್ದೆ ಮಾಡ್ತಾ ಇದಾಳೆ. ಹಾಗಾದರೆ ಅಡಿಗೆ ಕೆಲಸ ಈವತ್ತು ನನ್ನದು ಒಳ್ಳೆದಾಯ್ತು. ಅಭ್ಯಾಸ ತಪ್ಪಿ ಹೋಗಬರದಲ್ವಾ?